ಜಾಲತಾಣ ಕುರಿತಂತೆ
www.karnatakachithpavans.org
ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಮುದಾಯ ಜಾಲತಾಣ
ಚಿತ್ತ ಪಾವನ - ವಿಚಾರ ನವೀನ
ಸರಿ ಸುಮಾರು ಐದು ಶತಮಾನಗಳ ಹಿಂದೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಲಸೆ ಬಂದ ನಾವು, ಚಿತ್ಪಾವನ ಬ್ರಾಹ್ಮಣರು ನಮ್ಮ ಬದುಕಿಗಾಗಿ ಕೃಷಿ-ವಾಣಿಜ್ಯ-ಕೈಗಾರಿಕೆ-ನೌಕರಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ನಮ್ಮನ್ನು ತೊಡಗಿಸಿಕೊಂಡು ಕರ್ನಾಟಕದ ಉದ್ದಗಲಕ್ಕೂ ನೆಲೆ ನಿಂತಿದ್ದೇವೆ. ಮೂಲತಃ ಮರಾಠಿ ಭಾಷಿಕರಾದ ನಾವು ಕನ್ನಡ ಭಾಷೆಯನ್ನು ಕಲಿತು ಈ ನೆಲದ ರೀತಿ ರಿವಾಜುಗಳನ್ನು ನಮ್ಮದಾಗಿಸಿಕೊಂಡು ಶಿಕ್ಷಣ, ಕಲೆ, ಸಾಹಿತ್ಯ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈದು ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದೇವೆ, ಕನ್ನಡಿಗರೇ ಆಗಿದ್ದೇವೆ. ಒಬ್ಬ ವ್ಯಕ್ತಿಯ ಸಾಧನೆಯಿಂದಲೇ ಒಂದು ಸಮುದಾಯ ಗುರುತಿಸಲ್ಪಡುವುದಾದರೆ ಅಂತಹ ಅನೇಕ ಸಾಧಕರು ಬಾಳಿ ಬೆಳಗಿ ಚಿತ್ಪಾವನ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಇನ್ನು ಹಲವು ಮಂದಿ ಚಿತ್ಪ್ರಭೆಗಳಾಗಿ ನಮ್ಮೊಡನಿದ್ದಾರೆ. ಇಷ್ಟೆಲ್ಲ ಸಿದ್ಧಿ ಸಾಧನೆಗಳ ಪರಂಪರೆ ನಮ್ಮದಾಗಿದ್ದರೂ ಕರ್ನಾಟಕದ ಜನಸಮುದಾಯ ‘ಚಿತ್ಪಾವನ ಬ್ರಾಹ್ಮಣರೇ’, ಹಾಗೆಂದರೆ ಯಾರವರು? ಎಂದು ಕೇಳುವಂತಾದರೆ, ನಮ್ಮನ್ನು ನಾವು ಸಮರ್ಥ ರೀತಿಯಲ್ಲಿ ಕನ್ನಡಿಗರಿಗೆ ಪರಿಚಯಿಸಿಕೊಳ್ಳಲಿಲ್ಲವೆಂದೇ ಅರ್ಥ. ‘ವರ್ತಮಾನ’ವೊಂದು ನೆಲೆಗೊಳ್ಳುವುದು ಇತಿಹಾಸದ ಪ್ರೇರಣೆಯಿಂದ ಮತ್ತು ‘ಭವ್ಯ ಭವಿಷ್ಯ’ವೊಂದು ರೂಪಿತವಾಗುವುದು ‘ಕ್ರಿಯಾಶೀಲ’ ವರ್ತಮಾನದಿಂದ ಅನ್ನುವುದು ವಾಸ್ತವವಾದರೆ ಅಂತಹ ಇತಿಹಾಸ, ವರ್ತಮಾನಗಳ ದಾಖಲೆಗಳನ್ನು ಅಕ್ಷರ ರೂಪದಲ್ಲಿ ಜಾಲತಾಣವೊಂದರಲ್ಲಿ ದಾಖಲಿಸುವ ಪ್ರಯತ್ನ ಇಲ್ಲಿದೆ. ದೂರದ ಮಹಾರಾಷ್ಟ್ರದಿಂದ ವಲಸೆ ಬಂದು ಗ್ರಾಮೀಣ-ನಗರ ಪ್ರದೇಶಗಳಲ್ಲಿ ನೆಲೆನಿಂತು ತಮ್ಮ ಬದುಕನ್ನು ಕಟ್ಟಿಕೊಂಡ ಚಿತ್ಪಾವನ ಬ್ರಾಹ್ಮಣ ಸಮುದಾಯದ ಸಾಂಪ್ರದಾಯಿಕ-ಧಾರ್ಮಿಕ-ಸಾಮಾಜಿಕ ಜೀವನ ಕ್ರಮ, ವಿವಿಧ ಕ್ಷೇತ್ರಗಳಲ್ಲಿನ ಸಿದ್ಧಿ- ಸಾಧನೆಗಳ ಸಮಗ್ರ ವಿವರಗಳನ್ನು ನೀವಿಲ್ಲಿ ಪಡೆಯಬಹುದಾಗಿದೆ.
ಇಂದು ಪ್ರತಿಯೊಂದು ಜನಸಮುದಾಯವು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತನ್ನ ಸಮುದಾಯ ಸಂಘಟನೆಗೆ ತನ್ನದೇ ಆದ ಜಾಲತಾಣವನ್ನು ಹೊಂದಿದೆ. ನಾವು ಚಿತ್ಪಾವನರು ಪರಸ್ಪರ ನಮ್ಮ ಸಿದ್ಧಿಸಾಧನೆಗಳನ್ನು ಅರಿತುಕೊಂಡು ಸಂಘಟಿತರಾಗುವುದರೊಂದಿಗೆ ಚಿತ್ಪಾವನೇತರ ಜನಸಮುದಾಯಕ್ಕೂ ನಮ್ಮನ್ನು ಸಮರ್ಥವಾಗಿ ಪರಿಚಯಿಸುವಲ್ಲಿ ಈ ಜಾಲತಾಣ
ನೆರವಾಗಲಿದೆ. ಇದರ ಅಗಾಧತೆ, ಮಾಹಿತಿಗಳ ಕ್ರೋಢೀಕರಣ, ದಾಖಲಾತಿಗಳಿಗೆ ತಗಲಬಹುದಾದ ಸಮಯದ ಅರಿವಿನೊಂದಿಗೆ ಇದನ್ನೊಂದು ಸವಾಲನ್ನಾಗಿ ಸ್ವೀಕರಿಸಿ ಇದರ ನಿರ್ಮಾಣವನ್ನು ಪ್ರಾರಂಭಿಸಿದ್ದೇವೆ. ಇದೊಂದು ನಿರಂತರ ನಡೆಯಬೇಕಾದ ಪ್ರಕ್ರಿಯೆ. ರಾಜ್ಯದಲ್ಲಿರುವ 23 ಚಿತ್ಪಾವನ ಸಂಘಟನೆಗಳ ಕುರಿತಾದಂತಹ ಎಲ್ಲ ಮಾಹಿತಿಗಳನ್ನು ಇಲ್ಲಿ ಪಡೆಯಬಹುದಾಗಿದೆ. ರಾಜ್ಯ ಮಟ್ಟದಲ್ಲಿ ಚಿತ್ಪಾವನ ಸಂಘಟನೆಯನ್ನು ಬಲಪಡಿಸುವಲ್ಲಿ ಇದು ಸಹಾಯಕವಾಗಬೇಕೆಂಬುದು ನಮ್ಮ ಆಶಯ. ಈ ದಿಸೆಯಲ್ಲಿ ಕರ್ನಾಟಕದಲ್ಲಿರುವ ಎಲ್ಲ ಚಿತ್ಪಾವನ ಸಂಘಟನೆಗಳು ತಮ್ಮ ಕುರಿತಾದ ವಿವರಗಳನ್ನು ನೀಡಿ ಸಹಕರಿಸಬೇಕೆಂದು ವಿನಂತಿಸುತ್ತೇವೆ. ಈ ಜಾಲತಾಣವನ್ನು ಮಾಹಿತಿಪೂರ್ಣಗೊಳಿಸುವಲ್ಲಿ ಚಿತ್ಪಾವನ ಇತಿಹಾಸಕ್ಕೆ ಸಂಬಂಧಿಸಿದ ದಾಖಲೆಗಳು, ವಿವಿಧ ಕ್ಷೇತ್ರಗಳ ಸಾಧಕರ ಪರಿಚಯ, ಚಿತ್ಪಾವನ ಜಾನಪದ, ಉಡುಗೆ ತೊಡುಗೆ, ಕುಲಗುರು ಪರಶುರಾಮ ದೇವಾಲಯಗಳ ಮಾಹಿತಿ, ಚಿತ್ಪಾವನರ ಆಹಾರ ಪದ್ಧತಿ, ಚಿತ್ಪಾವನೀ ಭಾಷೆಯ ಕುರಿತಂತೆ ಲೇಖನಗಳನ್ನು ನೀಡಿ ಈ ಜಾಲತಾಣವನ್ನು
ಮಾಹಿತಿಪೂರ್ಣಗೊಳಿಸುವಲ್ಲಿ ಆಸಕ್ತರು ಸಹಕರಿಸಬಹುದು. ಪ್ರಾಯೋಜಕತ್ವ, ಸಹಭಾಗಿತ್ವ, ಮತ್ತು ಜಾಹೀರಾತುಗಳನ್ನು ನೀಡಿಯೂ ತಾವು ಈ ಜಾಲತಾಣದ ನಿರ್ಮಿತಿಯಲ್ಲಿ ನಮ್ಮೊಂದಿಗೆ ಸಹಕರಿಸಬಹುದಾಗಿದೆ.
ವಂದನೆಗಳೊಂದಿಗೆ,
ದಿವಾಕರ ಡೋಂಗ್ರೆ ಎಂ.
ಸಂಪಾದಕರು
www.karnatakachithpavans.org
ತಾವು ಚಿತ್ಪಾವನ ಜಾಲತಾಣಕ್ಕಾಗಿ ಲೇಖನಗಳನ್ನು, ಮಾಹಿತಿಗಳನ್ನು ಈ ಕೆಳಗಿನ ವಿಳಾಸಕ್ಕೆ
ಕಳುಹಿಸಬಹುದಾಗಿದೆ :
Post Box No. 1021, Rajajinagar H.O.
Rajajinagar, Bangalore - 560 010
ಅಥವಾ ಈ ಕೆಳಗಿನ ಮಿಂಚಂಚೆಗಳ ಮೂಲಕವೂ ಮಾಹಿತಿಗಳನ್ನು ಕಳುಹಿಸಬಹುದಾಗಿದೆ.
shubhodayaprakashana@gmail.com
divakara.dongre@gmail.com
ತಾವು ನೀಡುವ ದೇಣಿಗೆಯನ್ನು shubhodayaprakashanaದ ಹೆಸರಿನಲ್ಲಿ ಚೆಕ್ ಅಥವಾ ಡಿ.ಡಿ. ಮೂಲಕ
Post Box No. 1021, Rajajinagar H.O.
Rajajinagar, Bangalore - 560 010
ಇಲ್ಲಿಗೆ ಕಳುಹಿಸಬೇಕಾಗಿ ವಿನಂತಿ
ಪ್ರವರ್ತಕರು :
ಶುಭೋದಯ ಪ್ರಕಾಶನ
ನಂ.507, 65ನೇ ಅಡ್ಡ ರಸ್ತೆ, 5ನೇ ಬ್ಲಾಕ್, ರಾಜಾಜಿನಗರ,
ಬೆಂಗಳೂರು - 560 010
ಸಂಪರ್ಕ : 094489 45441