ಶರನ್ನವರಾತ್ರಿ ಶ್ರೀ ಚಂಡಿಕಾ ಹೋಮದ ದಶಮಾನೋತ್ಸವಶ್ರೀ ಚಂದ್ರಶೇಖರಭಾರತೀ ಕಲ್ಯಾಣ ಮಂಟಪ, ಶಂಕರಪುರಂ, ಬೆಂಗಳೂರು
ಬೆಂಗಳೂರು ಚಿತ್ಪಾವನ ಸಮಾಜವು ಕಳೆದ ಒಂಭತ್ತು ವರ್ಷಗಳಿಂದ ಚಿತ್ಪಾವನ ಸಮುದಾಯದ ಪುರೋಭಿವೃದ್ಧಿ ಮತ್ತು ಲೋಕಕಲ್ಯಾಣಾರ್ಥವಾಗಿ ನಡೆಸಿಕೊಂಡು ಬರುತ್ತಿರುವ 'ಶರನ್ನವರಾತ್ರಿಯ ಶ್ರೀ ಚಂಡಿಕಾ ಹೋಮ'ದ ದಶಮಾನೋತ್ಸವ'ವು ಶ್ರೀ ಮನ್ಮಥನಾಮ ಸಂ||ರದ ಆಶ್ವಯುಜ ಶು|| ಚತುರ್ಥಿ, ಶನಿವಾರ ತಾ. 17-10-2015 ಮತ್ತು ಪಂಚಮಿ, ಭಾನುವಾರ ತಾ. 18-10-2015ರಂದು ಬೆಂಗಳೂರು ಶಂಕರಪುರಂನಲ್ಲಿರುವ ಶ್ರೀ ಚಂದ್ರಶೇಖರಭಾರತೀ ಕಲ್ಯಾಣ ಮಂಟಪ ಮತ್ತು ವಿದ್ಯಾವಿಹಾರಗಳ ಆವರಣದಲ್ಲಿ ಚಿತ್ಪಾವನ ಬಂಧುಗಳ ಸಕ್ರಿಯ ತೊಡಗಿಕೊಳ್ಳುವಿಕೆ ಮತ್ತು ತನು-ಮನ-ಧನಗಳ ಸಹಕಾರದಿಂದ ವೈಭವೋಪೇತವಾಗಿ ಸಂಪನ್ನಗೊಂಡಿತು.ಈ ಧಾರ್ಮಿಕ ಕಾರ್ಯಕ್ರಮದ ಆಚಾರ್ಯತ್ವವನ್ನು ಉಡುಪಿ ಜಿಲ್ಲಾ ಕಾರ್ಕಳ ತಾಲೂಕಿನ ದುರ್ಗ ಗ್ರಾಮದವರಾಗಿದ್ದು, ಕಟೀಲಿನ ಶ್ರೀ ದುರ್ಗಾ ಸಂಸ್ಕೃತಕಾಲೇಜಿನ ಪ್ರಾಂಶುಪಾಲರಾಗಿರುವ ವೇ|ಮೂ| ಶ್ರೀ ಪದ್ಮನಾಭ ಮರಾಠೆಯವರು ವಹಿಸಿಕೊಂಡು ಋತ್ವಿಜರಾಗಿ ವೇ| ಮೂ| ಗಳಾದ ಶ್ರೀ ಶ್ರೀಪಾದ ದಾಮ್ಲೆ, ಶ್ರೀ ಉಮೇಶ ಡೋಂಗ್ರೆ, ಶ್ರೀ ಹೃಷೀಕೇಶ ಲೋಂಢೆ, ಶ್ರೀ ಹರಿಪ್ರಸಾದ ದಾತೆಯವರ ಸಹಕಾರದೊಂದಿಗೆ ಧಾರ್ಮಿಕ ವಿಧಿ ವಿಧಾನಗಳಿಗೆ ಚ್ಯುತಿ ಬರದಂತೆ ನಿರ್ವಹಿಸಿದರು. ಈ ಕಾರ್ಯಕ್ರಮದ ಯಜಮಾನತ್ವವನ್ನು ಶ್ರೀಮತಿ ಗೀತಾ ಮತ್ತು ಶ್ರೀ ಅಂಬರೀಶ ಚಿಪಳೂಣ್ಕರ್ ಅವರು ನಿರ್ವಹಿಸಿದರು.
ಆಶ್ವಯುಜ ಶು|| ಚತುರ್ಥಿ, ಶನಿವಾರ ತಾ. 17-10-2015ರಂದು ಪ್ರಾತಃಕಾಲದಲ್ಲಿ ಗಣಪತಿ ಪೂಜನ, ಪುಣ್ಯಾಹ, ನಾಂದಿ, ಋತ್ವಿಕ್ವರಣ, ಮಧುಪರ್ಕ ಪೂಜೆ, ಪ್ರಧಾನ ದೇವತಾ ಸ್ಥಾಪನೆ, ಸಪ್ತಶತಿ ಪಾರಾಯಣಗಳೊಂದಿಗೆ ಕಾರ್ಯಕ್ರಮದ ಶುಭಾರಂಭವಾಯಿತು. ಸಾಯಂಕಾಲ ಪ್ರದೋಷ ಪೂಜೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಮಾಹಾ ಪ್ರಸಾದ ವಿತರಣೆ ನಡೆಯಿತು.ಆಶ್ವಯುಜ ಪಂಚಮಿ, ಭಾನುವಾರ ತಾ. 18-10-2015ರಂದುಪ್ರಾತಃಕಾಲದಲ್ಲಿ ಯಾಗಶಾಲಾ ಪ್ರವೇಶ, ನವಗ್ರಹ ಹೋಮ, ಶ್ರೀ ಚಂಡಿಕಾ ಹೋಮಗಳು ನಡೆದು 11 ಗಂಟೆಗೆ ಸರಿಯಾಗಿ ಶ್ರೀ ಚಂಡಿಕಾ ಹೋಮದ ಪೂರ್ಣಾಹುತಿಯನ್ನು ಸಮಾಜ ಬಾಂಧವರು ಶ್ರದ್ಧಾಭಕ್ತಿಗಳಿಂದ ವೀಕ್ಷಿಸಿ ಶ್ರೀ ಚಂಡಿಕೆಯ ಕೃಪೆಗೆ ಪಾತ್ರರಾದರು. ಪೂರ್ಣಾಹುತಿಯ ನಂತರ ಕನ್ನಿಕಾ ಪೂಜನ, ಸುವಾಸಿನಿ ಪೂಜನ ಮತ್ತು ದಂಪತಿ ಪೂಜನಗಳು ವಿಧಿವತ್ತಾಗಿ ನಡೆದವು. ಪ್ರಧಾನ ಆಚಾರ್ಯ ಶ್ರೀ ಮರಾಠೆಯವರ ವಿನಂತಿಯ ಮೇರೆಗೆ ಹಲವು ಯುವಕರು ಗಾಯತ್ರೀ ಜಪಾನುಷ್ಟಾನದಲ್ಲಿ ಭಾಗವಹಿಸಿ ವೈದಿಕ ಪರಂಪರೆಯ ಕುರಿತಂತೆ ತಮಗಿರುವ ಶ್ರದ್ಧಾಭಾವವನ್ನು ಪ್ರಕಟಿಸಿದರು. ವೇ|ಮೂ| ಮರಾಠೆಯವರು ತಮ್ಮ ಆಶೀರ್ವಚನದಲ್ಲಿ ದೇವರ ಮೇಲೆ ನಂಬಿಕೆಯಿರುವವನಿಗೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತಿಳಿಸಿ ಶ್ರೀ ಚಂಡಿಕಾದೇವಿಯ ಈ ಆರಾಧನೆಯು ಚಿತ್ಪಾವನ ಸಮುದಾಯದ ಪುರೋಭಿವೃದ್ಧಿ ಮತ್ತು ಲೋಕಕಲ್ಯಾಣಗಳಿಗೆ ಕಾರಣವಾಗುವದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಬಸವನ ಗುಡಿಯ ಶಾಸಕ ಶ್ರೀ ರವಿಸುಬ್ರಹ್ಮಣ್ಯ ಅವರು ಉಪಸ್ಥಿತರಿದ್ದು ಚಿತ್ಪಾವನ ಬ್ರಾಹ್ಮಣ ಸಮುದಾಯದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ತನಗೆ ಅತೀವ ಸಂತಸವನ್ನುಂಟುಮಾಡಿದೆಯೆಂದು ತಿಳಿಸಿದರು. ಕಳೆದ ವರ್ಷಗಳಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಋತ್ವಿಜರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಮಹಿಳೆಯರಿಂದ ಲಲಿತಾ ಸಹಸ್ರನಾಮ ಪಠಣ, ಶ್ರೀ ಲಲಿತಾ ಪೂಜನ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಶೋಭೆಯನ್ನು ನೀಡಿದವು. ಮಕ್ಕಳಿಗಾಗಿ ಚಿತ್ರ ರಚನಾ ಸ್ಪರ್ಧೆ, ಮಹಿಳೆಯರಿಗಾಗಿ ಆರತಿ ತಟ್ಟೆ ಶೃಂಗಾರ ಮತ್ತು ಕರಕುಶಲ ವಸ್ತು ಪ್ರದರ್ಶನ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪುಟ್ಟ ಮಕ್ಕಳಿಗೆ 'ಅಕ್ಷರಾಭ್ಯಾಸ' ಕಾರ್ಯಕ್ರಮವು ಪುರೋಹಿತರ ಮಾರ್ಗದರ್ಶನದಲ್ಲಿ ನಡೆಯಿತು. ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆಯ ಬಳಿಕ ಮಹಾ ಪ್ರಸಾದವನ್ನು ಸ್ವೀಕರಿಸಲಾಯಿತು.
ತಾ. 17-10-2015ರ ಶನಿವಾರ ಬೆಳಿಗ್ಗೆ ನಡೆದ 'ಸಂವಾದ' ಕಾರ್ಯಕ್ರಮದಲ್ಲಿ ಶ್ರೀ ಮನೋಹರ ಗೋಖಲೆಯವರು ಪ್ರಸ್ತುತ ಪಡಿಸಿದ 'ಸ್ಮೃತಿ ಚಿತ್ರ' ಕಾರ್ಯಕ್ರಮ ಪ್ರಧಾನ ಆಕರ್ಷಣೆಯಾಗಿ, ಕಾರ್ಯಕ್ರಮದ ನಡುವೆ ಚಿತ್ಪಾವನ ಸಂಘಟನೆಯ ಕುರಿತಂತೆ ಸಂವಾದ ಕಾರ್ಯಕ್ರಮವೂ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಹರೀಶ್ ಹೆಬ್ಬಾರ್ ತುಳುಪುಳೆಯವರು ತಮ್ಮ ಹಿಂದೂಸ್ತಾನೀ ಗಾಯನದಿಂದ ಶ್ರೋತೃಗಳನ್ನು ರಂಜಿಸಿದರು. ಅಪರಾಹ್ನ 3 ಗಂಟೆಗೆ ಸರಿಯಾಗಿ ಶ್ರೀ ಚಂಡಿಕಾ ಹೋಮದ ದಶಮಾನೋತ್ಸವ ಮತ್ತು ವಾರ್ಷಿಕ ಸ್ನೇಹ ಸಮ್ಮಿಲನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳಲ್ಲಿ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್, ಡಾ|| ಎಂ. ಪದ್ಮನಾಭ ಮರಾಠೆ, ಸನ್ಮಾನಿತ ಶೃಂಗೇರಿಯ ವೇ|ಮೂ| ಶ್ರೀ ಪ್ರಭಾಕರ ಭಟ್ ದೇವಧರ್, ಬೆಂಗಳೂರು ಚಿತ್ಪಾವನ ಸಮಾಜದ ಅಧ್ಯಕ್ಷ ಶ್ರೀ ದಿವಾಕರ ಡೋಂಗ್ರೆ, ಕಾರ್ಯದರ್ಶಿ ಶ್ರೀ ಗಜಾನನ ಎಂ. ಗೋಖಲೆ, ಗೌ|| ಅಧ್ಯಕ್ಷ ಶ್ರೀ ಡಿ. ವಿಷ್ಣುಭಟ್ ಡೋಂಗ್ರೆ, ಗೌ|| ಸಲಹೆಗಾರ ಶ್ರೀ ಗಣಪತಿ ಜೋಶಿ, ಪರಶುರಾಮ ವಿದ್ಯಾನಿಧಿ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಅರುಣ ಮರಾಠೆಯವರು ಉಪಸ್ಥಿತರಿದ್ದರು.
ಗೌ|| ಸಲಹೆಗಾರ ಶ್ರೀ ಗಣಪತಿ ಜೋಶಿಯವರು ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಗಜಾನನ ಗೋಖಲೆಯವರು ಕಳೆದ ಒಂಭತ್ತು ವರ್ಷಗಳಿಂದ ನಡೆಯುತ್ತಿರುವ ಶರನ್ನವರಾತ್ರಿಯ ಶ್ರೀ ಚಂಡಿಕಾ ಹೋಮ ಮತ್ತು ಸಂಘಟನೆಯ ಕುರಿತಂತೆ ವಿವರಗಳನ್ನು ನೀಡಿದರು. ವೇ|ಮೂ| ಶ್ರೀ ಪದ್ಮನಾಭ ಮರಾಠೆಯವರು ವೈದಿಕ ಪರಂಪರೆಯ ಮಹತ್ವನ್ನು ತಿಳಿಸಿ ವೈದಿಕ ಪರಂಪರೆಯಲ್ಲಿ ತಿಳಿಸಲ್ಪಟ್ಟ ಧರ್ಮಾಚರಣೆಯಿಂದ ಜೀವನದಲ್ಲಿ ನಾವು ಹೇಗೆ ನೆಮ್ಮದಿಯನ್ನು ಪಡೆಯಲು ಸಾಧ್ಯವೆಂದು ತಿಳಿಸಿದರು. ಮುಖ್ಯ ಅತಿಥಿ ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್ ಅವರು ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಾಗಿರದೆ ಸಮುದಾಯ, ಸಮಾಜ ನಿರ್ವಹಣೆಯಲ್ಲೂ ತನ್ನನ್ನು ತೊಡಗಿಸಿಕೊಳ್ಳಬೇಕೆಂದು ಕರೆಯಿತ್ತರು. ಗೌ|| ಅಧ್ಯಕ್ಷ ಶ್ರೀ ಡಿ. ವಿಷ್ಣುಭಟ್ ಡೋಂಗ್ರೆಯವರು ಶರನ್ನವರಾತ್ರಿಯ ದುರ್ಗೆಯ ಆರಾಧನೆಯ ವಿಶೇಷತೆಯನ್ನು ತಿಳಿಸಿ ದೇವಿಯ ಆರಾಧನೆಯನ್ನು ಸಾಮೂಹಿಕವಾಗಿ ನಡೆಸಿದಾಗ ಆಕೆಯ ಕೃಪಾಕಟಾಕ್ಷ ಸಮುದಾಯ ಮತ್ತು ಲೋಕದ ಜನರ ಮೇಲೆ ವಿಶೇಷವಾಗಿ ಇರುತ್ತದೆ ಎಂದು ತಿಳಿಸಿದರು. ಸಭಾಧ್ಯಕ್ಷತೆಯನ್ನು ಶ್ರೀ ದಿವಾಕರ ಡೋಂಗ್ರೆಯವರು ಸಂಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಾಗ ಮಾತ್ರ ಫಲಿತಾಂಶ ಲಭ್ಯ. ಯುವಶಕ್ತಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆಯಿತ್ತರು.
ನಂತರ ಚಿತ್ಪಾವನ ಸಮುದಾಯದ ವೈದಿಕ ಪರಂಪರೆಯ ಋಷಿತುಲ್ಯರಾದ ಹಿರಿಯ ವೈದಿಕರಾದ ಶೃಂಗೇರಿಯ ಶ್ರೀ ಪ್ರಭಾಕರ ಭಟ್ ದೇವಧರ್ ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ದೇವಧರ್ ಅವರು ಬೆಂಗಳೂರಿನ ಚಿತ್ಪಾವನ ಬಂಧುಗಳು ತನಗೆ ನೀಡಿದ ಈ ಸನ್ಮಾನ ನನ್ನ ಬದುಕಿನ ಅವಿಸ್ಮರಣೀಯ ಘಟನೆ ಎಂದು ತಿಳಿಸಿ, ಸಂಘಟನೆ ಹಾಗೂ ಚಿತ್ಪಾವನ ಸಮುದಾಯಕ್ಕೆ ಉತ್ತರೋತ್ತರ ಶ್ರೇಯಸ್ಸನ್ನು ಬಯಸಿ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ನಿವಾಸಿ ಶ್ರೀ ಶ್ರೀರಾಮ ಡೋಂಗ್ರೆಯವರು ಬರೆದು ಶುಭೋದಯ ಪ್ರಕಾಶನದವರು ಪ್ರಕಟಿಸಿದ ಚಿತ್ಪಾವನ ಗುರು ಪರಶುರಾಮರ 21 ದಿವ್ಯ ಸ್ತೋತ್ರಗಳನ್ನೊಳಗೊಂಡ 'ಭಾರ್ಗವ ಸ್ತೋತ್ರರತ್ನ ಮಾಲಿಕಾ' ಕೃತಿಯ ಲೋಕಾರ್ಪಣೆ ಮತ್ತು ಭಾರ್ಗವವಾಣಿಯ ಶರನ್ನವರಾತ್ರಿ ಶ್ರೀ ಚಂಡಿಕಾ ಹೋಮದ ವಿಶೇಷ ಸಂಚಿಕೆಯ ಬಿಡುಗಡೆಯೂ ನೆರವೇರಿತು. ಈ ಸಂದರ್ಭದಲ್ಲಿ ಪರಶುರಾಮ ವಿದ್ಯಾನಿಧಿ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಪುರಸ್ಕರಿಸಲಾಯಿತು. ಶ್ರೀ ರತ್ನಾಕರ ಮರಾಠೆಯವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಣೆಗೈದರು.