ದಕ್ಷಿಣ ಕನ್ನಡ ಜಿಲ್ಲೆಗೆ ಚಿತ್ಪಾವನ ವಲಸೆ

ದಕ್ಷಿಣ ಕನ್ನಡದ ಚಿತ್ಪಾವನರು
-1-
ಭಾಷಿಕ ಮತ್ತು ಜನಾಂಗೀಯ ಅಧ್ಯಯನದ ದೃಷ್ಟಿಯಿಂದ ಕರ್ನಾಟಕದ ಕರಾವಳಿ ಅದರಲ್ಲೂ ದಕ್ಷಿಣ ಕನ್ನಡ (ಕಾಸರಗೋಡು ಸಹಿತ) ತುಂಬ ವಿಶಿಷ್ಟವಾಗಿದ್ದು ಹಲವಾರು ಮಹತ್ವದ ವಿದ್ಯಮಾನಗಳಿಂದ ಕೂಡಿದೆ. ಬಹುಭಾಷಾ ಪ್ರಾಚುರ್ಯದ ದೃಷ್ಟಿಯಲ್ಲಿ ಆಧುನಿಕ ಮಹಾನಗರಗಳನ್ನು ಬಿಟ್ಟರೆ, ದೇಶದಲ್ಲೇ ಇದೊಂದು ಸಮೃದ್ಧ ಪ್ರದೇಶ, ಒಂದು ಮಾದರಿ ಪ್ರದೇಶವೂ ಹೌದು. ದಕ್ಷಿಣಕನ್ನಡವೆಂಬ ಹೆಸರನ್ನೂ, ಕನ್ನಡ ಸಾಹಿತ್ಯ ಪರಂಪರೆ, ಕನ್ನಡದ ಕೆಲಸಗಳಲ್ಲಿ ಹಿರಿದಾದ ಸ್ಥಾನವನ್ನು ಹೊಂದಿದ್ದರೂ, ಈ ಪ್ರದೇಶದ ಬಹು ಸಂಖ್ಯಾತ ಭಾಷೆ ಕನ್ನಡವಲ್ಲ ಎಂಬುದು ಕೌತುಕದ ಸಂಗತಿ. ಈ ನೆಲೆಯಲ್ಲಿ ಗಣಿಸಿದಾಗ, ಕನ್ನಡದ ಸಾಹಿತ್ಯ ಸಂಸ್ಕೃತಿಗಳಿಗೆ ಈ ಪ್ರದೇಶದ ಕೊಡುಗೆ ಒಂದು ಅದ್ಭುತವಾಗಿಯೇ ಕಾಣುತ್ತದೆ. ದೇಶದ ಹಲವೆಡೆ ಇಲ್ಲದ 'ಜಾತಿಗೊಂದು ಭಾಷೆ' ಎಂಬ ನಿಯಮ (ಎಲ್ಲ ಅಲ್ಲವಾದರೂ) ಬಹಳ ಸಂದರ್ಭಗಳಿಗೆ ಅನ್ವಯವಾಗುತ್ತದೆ. ಬಹು ಜನಾಂಗೀಯತೆ, ಬಹು ಭಾಷಿಕತೆಗಳು ನಮ್ಮೀ ಪ್ರದೇಶಕ್ಕೆ ಸಮಸ್ಯೆಗಳಾಗಲೇ ಇಲ್ಲ. ಅವು ಜೀವನದ ಅತ್ಯಂತ ಸಹಜವಾದ ಅಂಶಗಳು ಎಂಬಂತೆ ಅಂಗೀಕೃತವಾಗಿವೆ. ನಾಲ್ಕಾರು ಭಾಷೆಗಳು ಮುಖ್ಯವಾಗಿ ವ್ಯವಹಾರದಲ್ಲಿದ್ದರೂ ಭಾಷಾವೈಷಮ್ಯ, ಘರ್ಷಣೆಗಳ ದಾಖಲೆಯೇ ಈ ಪ್ರದೇಶಕ್ಕಿಲ್ಲ ಎಂಬುದು ಮಹತ್ವದ ಸಂಗತಿ. ಬಹುಭಾಷಾ ಪದ್ಧತಿಯನ್ನು ಇಲ್ಲಿಯ ಜನ ಸಹಜವಾಗಿ, ಸರಳವಾಗಿ ಅಂಗೀಕರಿಸಿ ಆಚರಿಸುವ ಒಂದು ಕ್ರಮ ಮಾದರಿಯಾಗಬಲ್ಲ ಸಂಗತಿ. ಈ ಪ್ರದೇಶದ ಭಾಷಾ ಸಾಮರಸ್ಯ, ಭಾಷಿಕ-ರಾಜಕೀಯ ವೈಷಮ್ಯ, ವಿರೋಧಗಳ ಒಟ್ಟು ರಾಷ್ಟ್ರೀಯ ಸಂದರ್ಭಕ್ಕೆ ಒಂದು ಪರಿಹಾರವನ್ನು ದಿಗ್ದರ್ಶನ ಮಾಡುವಂತಿದೆ. ವಿಭಿನ್ನ ಭಾಷೆಗಳನ್ನಾಡುವ ಜನ, ಕನ್ನಡವನ್ನು ಮುಖ್ಯ ಭಾಷೆಯಾಗಿ ಅಂಗೀಕರಿಸಿ, ಆ ಪ್ರದೇಶದ ಜೀವನ, ಸಂಸ್ಕೃತಿಗಳನ್ನು ಶತಮಾನಗಳ ಕಾಲಕಾಪಾಡಿಕೊ ಡು ವನ, ಸಂಸ್ಕೃತಿಗಳನ್ನು ಶತಮಾನಗಳ ಕಾಲ ರೂಪಿಸುತ್ತ ಬಂದಿದ್ದಾರೆ. ಇದರಿಂದ ಇಲ್ಲಿಯ ಬದುಕು, ಸಾಹಿತ್ಯ, ಸಾಮಾಜಿಕ ಜೀವನ, ರೀತಿನೀತಿಗಳು, ಚಾರಿತ್ರಿಕ ಘಟನಾವಳಿಗಳು, ಉಡುಪು-ತೊಡುಪು, ಪಾಕಪದ್ಧತಿ, ಕಲಾಪ್ರಕಾರಗಳು ಮುಂತಾದ ಎಲ್ಲ ಸಂಗತಿಗಳಿಗೆ ಅನ್ಯತ್ರ ದುರ್ಲಭವಾದ ಸಂಕೀರ್ಣತೆ, ಸೊಬಗು, ಆಳ, ಹರಹುಗಳು ಒದಗಿ ಬಂದಿವೆ. ಹಾಗೆಯೇ ಇಲ್ಲಿಯ ಜನಜೀವನದಲ್ಲಿ ಕಂಡು ಬರುವ ಪರಿಶ್ರಮ, ಸಾಹಸ ಪ್ರವೃತ್ತಿ, ಚುರುಕು ವಿದ್ಯಾಪ್ರೇಮಗಳಿಗೂ ಕಾರಣವಾಗಿದೆ. ಬಹುಭಾಷಾ ಸಮುದಾಯದ ಜೀವನ, ವ್ಯಕ್ತಿಯ ಬೆಳವಣಿಗೆಗೆ ಎಷ್ಟೊಂದು ಪೋಷಕವೆಂಬ ವಿಚಾರಕ್ಕೆ ಇಲ್ಲಿಯ ಜನಜೀವನ ವಿಪುಲ ದೃಷ್ಟಾಂತಗಳನ್ನು ಒದಗಿಸುತ್ತದೆ. ಬಹುಭಾಷಿಕ ಜೀವನ, ವ್ಯಕ್ತಿಯ ಅನುಭವದ ಪ್ರಪಂಚವನ್ನು ಹಿಗ್ಗಿಸಿ ಅವನ ಗ್ರಹಣಶಕ್ತಿ, ಚಾತುರ್ಯ ಸಾಮರ್ಥ್ಯಗಳನ್ನು ಪೋಷಿಸುವುದಲ್ಲದೆ ವನ, ಸಂಸ್ಕೃತಿಗಳನ್ನು ಶತಮಾನಗಳ ಕಾಲ ರೂಪಿಸುತ್ತ ಬಂದಿದ್ದಾರೆ. ಇದರಿಂದ ಇಲ್ಲಿಯ ಬದುಕು, ಸಾಹಿತ್ಯ, ಸಾಮಾಜಿಕ ಜೀವನ, ರೀತಿನೀತಿಗಳು, ಚಾರಿತ್ರಿಕ ಘಟನಾವಳಿಗಳು, ಉಡುಪು-ತೊಡುಪು, ಪಾಕಪದ್ಧತಿ, ಕಲಾಪ್ರಕಾರಗಳು ಮುಂತಾದ ಎಲ್ಲ ಸಂಗತಿಗಳಿಗೆ ಅನ್ಯತ್ರ ದುರ್ಲಭವಾದ ಸಂಕೀರ್ಣತೆ, ಸೊಬಗು, ಆಳ, ಹರಹುಗಳು ಒದಗಿ ಬಂದಿವೆ. ಹಾಗೆಯೇ ಇಲ್ಲಿಯ ಜನಜೀವನದಲ್ಲಿ ಕಂಡು ಬರುವ ಪರಿಶ್ರಮ, ಸಾಹಸ ಪ್ರವೃತ್ತಿ, ಚುರುಕು ವಿದ್ಯಾಪ್ರೇಮಗಳಿಗೂ ಕಾರಣವಾಗಿದೆ. ಬಹುಭಾಷಾ ಸಮುದಾಯದ ಜೀವನ, ವ್ಯಕ್ತಿಯ ಬೆಳವಣಿಗೆಗೆ ಎಷ್ಟೊಂದು ಪೋಷಕವೆಂಬ ವಿಚಾರಕ್ಕೆ ಇಲ್ಲಿಯ ಜನಜೀವನ ವಿಪುಲ ದೃಷ್ಟಾಂತಗಳನ್ನು ಒದಗಿಸುತ್ತದೆ. ಬಹುಭಾಷಿಕ ಜೀವನ, ವ್ಯಕ್ತಿಯ ಅನುಭವದ ಪ್ರಪಂಚವನ್ನು ಹಿಗ್ಗಿಸಿ ಅವನ ಗ್ರಹಣಶಕ್ತಿ, ಚಾತುರ್ಯ ಸಾಮರ್ಥ್ಯಗಳನ್ನು ಪೋಷಿಸುವುದಲ್ಲದೆ, ಹೊಂದಾಣಿಕೆ, ಸಹನೆಗಳನ್ನೂ ಸಹ ಕಲಿಸುತ್ತದೆ. ಈ ನಿಟ್ಟಿನಲ್ಲಿ ಈ ಪ್ರದೇಶದ ಜನ ತುಂಬ ಭಾಗ್ಯಶಾಲಿಗಳು.
ಇಂತಹ ಒಂದು ಸ್ಥಿತಿಗೆ ಕೆಲವು ಐತಿಹಾಸಿಕ ಕಾರಣಗಳಿವೆ. ಇವುಗಳಲ್ಲಿ ಮುಖ್ಯವಾದುದು; ಈ ಪ್ರದೇಶಕ್ಕೆ 15ರಿಂದ 18ನೆಯ ಶತಮಾನಗಳ ನಡುವೆ ನಡೆದ ಬೃಹತ್ಪ್ರಮಾಣದ ವಿವಿಧ ಜನಾಂಗಗಳ ವಲಸೆ, ಜತೆಗೆ ಇಲ್ಲಿಯ ಬಹು ಸಂಖ್ಯಾತರ ಆಡುನುಡಿಯಾದ ತುಳು ಭಾಷೆಯ ಅಸ್ತಿತ್ವದ ವಿಶಿಷ್ಟ ಸಂದರ್ಭ ಇನ್ನೊಂದು. ಬ್ರಿಟಿಷ್ ಆಳ್ವಿಕೆಯಿಂದ ಬಹುಕಾಲ ಮದ್ರಾಸು ಪ್ರಾಂತ್ಯದ ಅಂಗವಾಗಿದ್ದರಿಂದಲೂ, ಸಂಗೀತ ನೃತ್ಯಕಲೆಗಳ ಸಂಪರ್ಕ ಮತ್ತು ಹೋಟೆಲ್ ಉದ್ಯಮ ಸಂಪರ್ಕದಿಂದಲೂ ಇಲ್ಲಿ ತಮಿಳು ಬಲ್ಲವರು ಸಾಕಷ್ಟಿರುವರು. ನೆರೆ ಪ್ರಾಂತ್ಯವಾದ ಕೇರಳದ ಸಂಪರ್ಕ, ಜಿಲ್ಲೆಯಾದ್ಯಂತ ಹರಡಿರುವ ಮಲಯಾಳಿ ಮುಸ್ಲಿಂ ಜನಾಂಗದ ವಸತಿಗಳು, ಮಲೆಯಾಳ ಮನೆಮಾತಿನ ಗಾಣಿಗ, ಬಿಲ್ಲವ, ನೇಕಾರ, ಬೋವಿ ಮುಂತಾದ ಜನವರ್ಗಗಳು ಇಲ್ಲಿ ನೆಲೆಯಾದುದು, ಈ ಕಾರಣಗಳಿಂದಾಗಿ 'ಮಲೆಯಾಳಿ-ಕನ್ನಡಿಗ'ರೆನ್ನಬಹುದಾದವರ ಸಂಖ್ಯೆಯು ಗಣನೀಯವಾಗಿದೆ. ಈ ಪ್ರದೇಶಕ್ಕೆ ಪೂರ್ವದಿಂದ ಬಂದ ವಲಸೆಗಳು ತೀರ ಕಡಿಮೆ ಎಂಬುದು ಗಮನಾರ್ಹ. ಇಲ್ಲಿಗೆ ವಲಸೆ ಬಂದ ಜನವರ್ಗಗಳಲ್ಲಿ ಬಹುದೊಡ್ಡ ಪಾಲು ಉತ್ತರ ಕೊಂಕಣದಿಂದ ಬಂದ ಜನರದು. ಗೋವಾ ಮತ್ತು ಅದರ ಉತ್ತರ ಕರಾವಳಿಯಿಂದ ವಲಸೆ ಬಂದ ಸಾರಸ್ವತ, ಕುಡುಬಿ, ಗೌಡ (ಗಾವಡೇ), ರಾಜಾಪುರ ಸಾರಸ್ವತ, ಪೆಡ್ಮೀಕರ, ಕುಡಾಲ ದೇಶಕರ, ರಾಣವೆ, ದೈವಜ್ಞ, ವಾರಾವಲೀಕರ, ಖಾರ್ವಿ, ಮರಾಟಿನಾಯಕ, ಚಿತ್ಪಾವನ, ಕರಾಡೆ, ಪದ್ಯೆ, ರೋಮನ್ ಕೆಥೊಲಿಕ್, ವೈಶ್ಯವಾಣಿ ಮುಂತಾದ ಸಮುದಾಯಗಳು ಇಲ್ಲಿ ಗಣನೀಯ ಪ್ರಮಾಣದಲ್ಲಿದ್ದು, ಇಂದಿಗೂ ತಮ್ಮ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿದ್ದಾರೆ. ಕೆಲವೆಡೆ ತುಳು ಭಾಷೆಯನ್ನು ಅಂಗೀಕರಿಸಿರುವ ಮರಾಠಿ ನಾಯಕರಂತಹ ಒಂದೆರಡು ಉದಾಹರಣೆಗಳನ್ನು ಬಿಟ್ಟು, ಮೇಲೆ ಹೇಳಿದ ಎಲ್ಲ ಸಮುದಾಯಗಳವರೂ ಮರಾಠಿ ಮತ್ತು ಕೊಂಕಣಿ ಭಾಷೆಗಳ ವಿವಿಧ ರೂಪಗಳನ್ನು ಮನೆಮಾತಾಗಿ ಉಳಿಸಿಕೊಂಡು ಬಂದಿದ್ದಾರೆ. ಇಂತಹ ವರ್ಗಗಳ ಪೈಕಿ 'ಚಿತ್ಪಾವನ ಬ್ರಾಹ್ಮಣ' ವರ್ಗವೂ ಒಂದು.
-2-
- ಚಿತ್ಪಾವನ ಶಬ್ದದ ವ್ಯುತ್ಪತ್ತಿ ಮತ್ತು ಈ ಜನಾಂಗದ ಜನಾಂಗೀಯ ಮೂಲ, ಇವು ತುಂಬಾ ವಿವಾದಾಸ್ಪದ ಸಂಗತಿಗಳು. 'ಚಿತ್ಪಾವನ' ಶಬ್ದಕ್ಕೆ ಹಲವು ವ್ಯಾಖ್ಯೆಗಳನ್ನು ಊಹಿಸಲಾಗಿದ್ದು (1) ಅವು ಚಿತ್ಪಾವನರ ಮೂಲವನ್ನು ಇಸ್ರೇಲಿನಿಂದ ಚಿತ್ತಗಾಂಗ್ ವರೆಗೆ ಒಯ್ಯುತ್ತವೆ (2) ಈ ಶಬ್ದದ ವ್ಯುತ್ಪತ್ತಿ ಊಹೆಗಳಲ್ಲಿ ಇವು ಕೆಲವು:
- (ಅ) ಚಿತಾಸ್ಥಾನದಲ್ಲಿದ್ದ ಮೃತದೇಹಗಳಿಗೆ ಪರಶುರಾಮನು ಜೀವವಿತ್ತು ಬ್ರಾಹ್ಮಣರನ್ನಾಗಿಸಿದ ಜನಾಂಗ. ಚಿತಾ+ಪಾವನ= ಚಿತ್ಪಾವನ (ಇದು ಸಹ್ಯಾದ್ರಿ ಖಂಡದ ಹೇಳಿಕೆ)
- (ಆ) ಯಜ್ಞಕರ್ಮಗಳಿಗೆ ಸಂಬಂಧಿಸಿದ ಪಾವನಕರ್ಮಗಳಿಂದ ಚಿತಿ+ಪಾವನ = ಚಿತ್ಪಾವನ
- (ಇ) ಇಜಿಪ್ತ ದೇಶದಿಂದ ಬಂದವರು. ಜಿಪ್ತವಾನ್-ಜಿಪ್ತವಾನ್-ಚಿಪ್ತವಾನ್-ಚಿತ್ಪಾವನ
- (ಈ) 'ಕ್ಷಿತಿ'(ಭೂಮಿ)ಯನ್ನು 'ಪೋಳಣೆ'ಮಾಡಿ (ಪೋಳಣೆ=ಮರಾಠಿಯಲ್ಲಿ ಸುಡು ಎಂಬ ಅರ್ಥವಿದೆ) ಕ್ಷಿತಿ ಪೋಳಣೆ-ಚಿಪ್ಪೊಳಣೆ-ಚಿತ್ಪಾವನ
- (ಉ) ಚಿತ್ತಪಾವನ. ಪಾವನ ಚಿತ್ತರು ಎಂಬ ಅರ್ಥದಲ್ಲಿ ಚಿತ್ಪಾವನ (3)
- (ಊ) ಅನ್, ಮನ್, ಷನ್ ಎಂಬ ಕೊನೆಯುಳ್ಳ ಹೆಸರುಗಳು ಇರಾನಿ(ಪರ್ಷಿಯನ್) ಸ್ವಭಾವವನ್ನು ಸೂಚಿಸುವಂತಹವು. ಚಿತ್ಪಾವನ್ ಎಂಬುದೂ ಮೂಲತಃ
- ಆ ಕಡೆಯಿಂದ ಬಂದ ನಾಮಧೇಯ ಇರಬಹುದೇ ಎಂಬ ಒಂದು ತರ್ಕ (4)
ಈ ಎಲ್ಲಾ ಊಹೆಗಳನ್ನು, ಭಾಷಾಶಾಸ್ತ್ರೀಯವಾದ ಪುರಾವೆಗಳಾಗಲಿ, ಪರಂಪರೆಯಿಂದ ಬಂದ ಕಥಾನಕಗಳಾಗಲಿ, ಇತರ ಆಧಾರಗಳಾಗಲಿ ಇಲ್ಲದಿರುವಾಗ ಸ್ವೀಕರಿಸುವುದು ಕಷ್ಟ. 'ಸಹ್ಯಾದ್ರಿಖಂಡ' ತುಂಬ ಗೊಂದಲಗಳ ಕಂತೆ. ಅದರಲ್ಲಿ ಐತಿಹಾಸಿಕ ಅಂಶ ತೀರಾ ಕಡಿಮೆ. 'ಚಿತ್ಪಾವನ' ಈ ಶಬ್ದವು ಸ್ಥಳನಾಮ ಸಂಬಂಧಿಯಾಗಿರುವ ಸಾಧ್ಯತೆಯೇ ಹೆಚ್ಚು. ಹೆಚ್ಚಿನ ಬ್ರಾಹ್ಮಣ ವರ್ಗಗಳ ಹೆಸರು ದೇಶವಾಚಿ. ಉದಾ: ಶಿವಳ್ಳಿ, ಕೋಟ, ಹವೀಕ (ಹೈಗ-ಹೈವೆಸೀಮೆ-ಹೈಗನಾಡು) ಕರ್ಹಾಡೆ, ಕಾಶ್ಮೀರಿ, ಗೌಡ, ಕರ್ನಾಟಕ, ಆಂಧ್ರ ಮುಂತಾದ ಬ್ರಾಹ್ಮಣ ವರ್ಗಗಳ ಹೆಸರುಗಳನ್ನು ನೋಡಬಹುದು. (ನಂಬೂದರಿ, ಅಯ್ಯಂಗಾರ ಮುಂತಾದ ಅಪವಾದಗಳೂ ಇವೆ) 'ಚಿತ್ಪಾವನ' ಎಂಬುದು ದೇಶವಾಚಿ ಇರಬಹುದೇ? ಹಾಗಾದರೆ ಚಿತ್ಪಾವನಕ್ಕೆ ಸಂಬಂಧಿಸಿದ ಸ್ಥಳನಾಮ ಯಾವುದು? ಕೊಂಕಣದಲ್ಲಿ ಚಿತ್ಪಾವನರ ಮೂಲಸ್ಥಾನ ರತ್ನಾಗಿರಿ ಜಿಲ್ಲೆಯ ಚಿಪಳೂಣ ತಾಲ್ಲೂಕು. ಚಿತ್ಪಾವನರ ಬಹ್ವಂಶ ಕುಲದೇವಾಲಯಗಳು ಚಿಪಳೂಣ ಹಾಗೂ ಬಳಿಯ ಗುಹಾಗರಗಳಲ್ಲಿವೆ. ಚಿಪಳೂಣದ ಹಿಂದಿನ ಹೆಸರು ಚಿತಪೋಳಣ(5) ಚಿತ್ಪಾವನರು ತಮ್ಮನ್ನು, ತಮ್ಮೊಳಗೆ 'ಚಿಪ್ಪೊಳ್ಣೆ', 'ಚಿಪ್ಪಣ್ಣೆ', 'ಚಿಪ್ಪೆ' ಎಂಬುದಾಗಿ ಕರೆದುಕೊಳ್ಳುವುದಿದೆ. ಇದು 'ಚಿತಪೋಳಣೆ', ಚಿತಪೋಳಣದವರು ಎಂಬುದರ ಪರಿವರ್ತಿತ ರೂಪ. 'ಚಿಪಳೂಣಕರ' ಎಂಬುದು ಚಿತ್ಪಾವನರಲ್ಲಿರುವ ಕುಲನಾಮ (ಅಡ್ಡಹೆಸರು) ಗಳಲ್ಲಿ ಒಂದು. ಇದು ದಕ್ಷಿಣಕನ್ನಡದಲ್ಲಿ 'ಚಿಪ್ಪಣ್ಕಾರ್' ಎಂಬ ಪ್ರಾಕೃತ ರೂಪದಲ್ಲೇ ರೂಢಿಯಲ್ಲಿದೆ. ಆದುದರಿಂದ ಚಿತಪೋಳಣ ಎಂಬ ಸ್ಥಳನಾಮದ ಪ್ರಾಕೃತರೂಪ ಚಿಪ್ಪಣ್ ಎಂದು ಇರುವುದೂ ಸಾಧ್ಯ. 'ಚಿತಪಾವನಸ್ಥ' ಎಂಬ ಉಲ್ಲೇಖ ಚಿತ್ಪಾವನ ಶಬ್ದವು ದೇಶವಾಚಿ ಎಂಬುದಕ್ಕೆ ಸ್ಪಷ್ಟ ಸಾಕ್ಷಿ (6) 'ಹರಿಹರೇಶ್ವರ ಮಹಾತ್ಮ್ಯ'ದ ಒಂದು ಶ್ಲೋಕದಲ್ಲಿ ಹೀಗಿದೆ : ಅಧುನಾಮ ಚಿತ್ತಸ್ಯ ಪಾವನಂ ಕ್ಷೇತ್ರಮಸ್ತು ತತ್....| ತಚ್ಚಿತ್ತಪಾವನಂ ಕ್ಷೇತ್ರಂ ಲೋಕೇ ಖ್ಯಾತಿಮಗಾತ್ ತದಾ....|| ಗುಹಾಗರ ಮಹಾತ್ಮ್ಯದಲ್ಲಿ ಚಿತ್ಪಾವನರಿಗೆ 'ಚಿತ್ತಪೂರ್ಣ'ರೆಂಬ ಹೆಸರಿದೆ(7) 'ಅತ್ಯಲ್ಪದಾನ ಸಂತುಷ್ಟಾಃ ಚಿತ್ತಪೂರ್ಣ ಇತಿ ಸ್ಮೃತಾಃ ' (ಅತ್ಯಲ್ಪ ದಾನ ಸಂತುಷ್ಟರಾಗಿದ್ದು ಚಿತ್ತಪೂರ್ಣರೆಂಬ ಹೆಸರುಳ್ಳವರು) ಚಿಪಳೂಣ್ ಬಳಿ ಚಿತ್ಪೂಲ ಎಂಬ ಒಂದು ಊರು ಇದೆ. ಇದರಿಂದ ಚಿತ್ಪಾವನ ಎಂಬ ಪದವು ಮೌಲಿಕ ಅಥವಾ ಸಂಸ್ಕೃತೀಕೃತ ಸ್ಥಳನಾಮಕ್ಕೆ ಸಂಬಂಧಿಸಿರಬೇಕೆಂದು ತೋರುತ್ತದೆ. 'ಚಿತ್ಪಾವನ' ಗ್ರಂಥಕರ್ತ ದಿ|| ನಾ. ಗೋ. ಚಾಫೇಕರರು ಇದೇ ನಿಷ್ಕರ್ಷಕ್ಕೆ ಬಂದಿದ್ದಾರೆ.
ಚಿತ್ಪಾವನರಿಗೆ ಮಹಾರಾಷ್ಟ್ರದಲ್ಲಿ ಕೋಕಣಸ್ಥ ಎಂಬ ಇನ್ನೊಂದು ಹೆಸರೂ ಇದೆ. ಇದು ಪೇಶ್ವೆ ರಾಜ್ಯದಲ್ಲಿ ಚಿತ್ಪಾವನರು ಕೊಂಕಣದಿಂದ ಪುಣೆಗೆ ಹೋಗಿ ನೆಲೆಯಾದಾಗ ಬಂದ ಹೆಸರು. ಕೊಂಕಣದವರು ಎಂಬ ಅರ್ಥದಲ್ಲಿ ಮಹಾರಾಷ್ಟ್ರದಲ್ಲಿ ಘಟ್ಟದ ಮೇಲೆ, ಘಟ್ಟದ ಕೆಳಗೆ ಎಂಬುದಕ್ಕೆ 'ದೇಶ' ಮತ್ತು 'ಕೊಂಕಣ' ಎಂಬ ಪದಗಳ ಬಳಕೆ ಇದೆ. ದೇಶ ಎಂದರೆ ಕರ್ಹಾಡದ ಬಳಿಯ ಒಂದು ಪ್ರದೇಶ. ವ್ಯಾಪಕವಾದ ಅರ್ಥದಲ್ಲಿ 'ದೇಶ' ಎಂದರೆ ಘಟ್ಟದ ಮೇಲಣ ಪ್ರಸ್ಥಭೂಮಿ ಎಂದರ್ಥ. ಕೊಂಕಣದಿಂದ ದೇಶಕ್ಕೆ ಜೀವನೋಪಾಯಕ್ಕಾಗಿ ಜನ ಹೋದಾಗ 'ದೇಶಾವರ ಜಾಣೇ' (ದೇಶಕ್ಕೆ ಹೋಗುವುದು) ಎಂಬುದಾಗಿ ಬಂದಿರಬಹುದು. (ಕನ್ನಡ 'ದೇಶಾವರಿ'ಯೂ ಇದರಿಂದ ವ್ಯುತ್ಪನ್ನವಾಗಿರಬಹುದು) 'ದೇಶ'ದಲ್ಲಿದ್ದ ಬ್ರಾಹ್ಮಣರು ದೇಶಸ್ಥರು, 'ಕೊಂಕಣ'ದಿಂದ ಬಂದವರು ಕೋಕಣಸ್ಥರು. ಈ ಹೆಸರು ದಕ್ಷಿಣಕನ್ನಡದ ಚಿತ್ಪಾವನರಿಗೆ ಬಳಕೆ ಇಲ್ಲ. ಕಾರಣ, ಮಹಾರಾಷ್ರದಲ್ಲಿ ಈ ಪದ ಪ್ರಯೋಗ ಬಳಕೆಯಲ್ಲಿ ಬರುವ ಮೊದಲೇ ಚಿತ್ಪಾವನರು ಈ ಕಡೆ ವಲಸೆ ಬಂದಿದ್ದರು.
-3-
ಚಿತ್ಪಾವನರ ಜನಾಂಗೀಯ ಮೂಲದ ಬಗೆಗೆ ಹಲವು ಊಹೆಗಳನ್ನು ಮುಂದಿಡಲಾಗಿದೆ. ಚಿತ್ಪಾವನರಲ್ಲಿ ಎದ್ದು ತೋರುವ ಕೆಲವು ಶಾರೀರಿಕ ವೈಲಕ್ಷಣಗಳಿವೆ. ವಿಶಿಷ್ಟವೆನ್ನಬಹುದಾದ ಹಳದಿಮಿಶ್ರಿತ ಬಿಳಿಬಣ್ಣ, ಕೆಂಚುಕೂದಲು, ಕಾಚು-ಕೆಂಚು ಕಣ್ಣುಗಳು. ಇವುಗಳಿಂದಾಗಿ ಪರ್ಷಿಯನ್ ನಾರ್ಡಿಕ್ ಸಂಬಂಧವನ್ನು ಊಹಿಸಿದ್ದಾರೆ.(8) ದಕ್ಷಿಣಕನ್ನಡದ ಚಿತ್ಪಾವನರಲ್ಲೂ. ಮಹಾರಾಷ್ಟ್ರದ ಚಿತ್ಪಾವನರಲ್ಲೂ ಈ ಲಕ್ಷಣಗಳು ಒಂದೇ ತೆರನಾಗಿ ಇವೆ. ನಾರ್ಡಿಕ್ ಸಂಬಂಧವನ್ನು ಹೊಂದಿಸಲು ಇರುವ ತೊಡಕೆಂದರೆ ಚಿತ್ಪಾವನರ ಆಳುತನ ಎತ್ತರವಿಲ್ಲದಿರುವುದು. ಐದುಮುಕ್ಕಾಲು ಅಡಿಗಿಂತ ಎತ್ತರವುಳ್ಳ ಚಿತ್ಪಾವನರು ಬಹಳ ಕಡಿಮೆ. ಆದರೆ ಈ ಅಂಶ, ಬಹುಕಾಲದ ನಂತರ ಆಹಾರ, ಪ್ರಾದೇಶಿಕ ಕಾರಣಗಳಿಂದಾಗಿ ಬಂದುದೆಂದು ಊಹಿಸಬಹುದು. ಮೂಗಿನ ರಚನೆಯಲ್ಲಿ ಪರ್ಷಿಯನ್, ಯಹೂದಿ ಸಾಮ್ಯವನ್ನು ಹೇಳಲಾಗುತ್ತದೆ.(9)
ಚಿತ್ಪಾವನ ಜನಾಂಗಕ್ಕೂ ಪರಶುರಾಮನೆಂಬ ಪೌರಾಣಿಕ ವ್ಯಕ್ತಿಗೂ ವಿಶೇಷ ಸಂಬಂಧವಿದ್ದಂತೆ ಕಾಣುತ್ತದೆ. ಪಶ್ಚಿಮ ಕರಾವಳಿಯ ಉದ್ದಕ್ಕೂ ಹಲವು ಜನಾಂಗಗಳು, ವಿಶೇಷತಃ ಬ್ರಾಹ್ಮಣವರ್ಗಗಳು ಪರಶುರಾಮನು ತಮ್ಮನ್ನು ಇಲ್ಲಿಗೆ ತಂದುದಾಗಿ ಹೇಳುತ್ತವೆ ನಿಜ. ಆದರೆ ಪರಶುರಾಮನು ಚಿತ್ಪಾವನ ಸಮುದಾಯಕ್ಕೆ ಪ್ರಮುಖ ಆರಾಧ್ಯ ದೈವವಾಗಿರುವಂತೆ ಉಳಿದವರಿಗಿಲ್ಲ. ಚಿತ್ಪಾವನರ ಪ್ರಮುಖ ವಸತಿ ತಾಣಗಳಲೆಲ್ಲ ಪರಶುರಾಮ ದೇವಸ್ಥಾನಗಳಿವೆ. ಪರಶುರಾಮ ಸೃಷ್ಟಿಯ ಕಥೆ, ಕರಾವಳಿಯಲ್ಲಿ ಇರುವ ಪರಂಪರಾಗತ ಜನಶ್ರುತಿಗಳೆಲ್ಲ ಪರಶುರಾಮನೆಂಬವನು ಕರಾವಳಿಗೆ ಬಂದ ಆದ್ಯ ವಲಸೆಗಾರರ ನಾಯಕನಾಗಿರಬೇಕೆಂಬ ಅಂಶಗಳನ್ನು ಸೂಚಿಸುತ್ತವೆ. ಈ ಪರಶುರಾಮನಿಗೂ, ಪರ್ಸಿಯಾದಲ್ಲಿ ಇತ್ತೆನ್ನಲಾದ 'ಪರ್ಶು' ಎಂಬ ಜನಾಂಗಕ್ಕೂ ಸಂಬಂಧ ಸೂಚಿಸುವ ಊಹೆಗಳಿವೆ (10) ಚಿತ್ಪಾವನರ ಜನಶ್ರುತಿಗಳಲ್ಲಿ, ಪರಶುರಾಮನು ತಾವು ಕೊಂಕಣಕ್ಕೆ ಬರುವಾಗ ಇಲ್ಲಿ ಮೊದಲೇ ಇದ್ದವನೆಂಬುದರ ಹೊರತು ತಮ್ಮೊಂದಿಗೆ ಬಂದುದಾಗಿ ಕಥೆಯಿಲ್ಲ.
ಇದಕ್ಕೆ ಸಂವಾದಿಯಾಗಿರುವ, ಐತಿಹಾಸಿಕ ದೃಷ್ಟಿಯಿಂದ ಮಹತ್ವದ ಒಂದು ಆಖ್ಯಾಯಿಕೆ 'ಬ್ರಾಹ್ಮಣೋತ್ಪತ್ತಿ ಮಾರ್ತಾಂಡ'ವೆಂಬ ವಿವಿಧ ಬ್ರಾಹ್ಮಣ ವರ್ಗಗಳ ಉತ್ಪತ್ತಿಯನ್ನು ತಿಳಿಸುವ ಗ್ರಂಥದಲ್ಲಿದೆ.(11) ಅದರಂತೆ ಸಹ್ಯಾದ್ರಿಯ ಪಶ್ಚಿಮಕ್ಕೆ ವಾಸಿಸುತ್ತಿದ್ದ ಹದಿನಾಲ್ಕು ಮಂದಿ ಬ್ರಾಹ್ಮಣರನ್ನು ಬರ್ಬರಾದಿ ಮ್ಲೇಚ್ಛರು ಕೊಂಡೊಯ್ದರು.(ಚಿತ್ಪಾವನರಲ್ಲಿ ಹದಿನಾಲ್ಕು ಗೋತ್ರಗಳಿವೆ) ಬಹುಕಾಲ ಮ್ಲೇಚ್ಛರ ಬಳಿಯಿದ್ದು ಅನಂತರ ಹಿಂದಿರುಗಿದ ಅವರನ್ನು ಪರಶುರಾಮನು ಶುದ್ಧೀಕರಿಸಿ ಆಶ್ರಯ ನೀಡಿದನು. (ಏವಂ ನಿವಾಸಂ ಕುರ್ವತ್ಸು ಅಕಸ್ಮಾತ್ ದೈವಯೋಗತಃ | ನೀತ್ವಾ ಸಾಗರ ಮಧ್ಯಸ್ಥೈಃ ಮ್ಲೇಚ್ಛೈ ಬರ್ಬರಕಾದಿಭಿಃ) ಇಲ್ಲಿ ಚಿತ್ಪಾವನರ ಸಂಬಂಧ ಬರ್ಬರ ದೇಶದೊಂದಿಗೆ ಬರುತ್ತದೆ. ಆ ಬರ್ಬರಕ ಜನರು ನಾರ್ಡಿಕ್ ಜನಾಂಗ ಶಾಖೆಯವರೆನ್ನಲಾಗಿದೆ.(12) ಉಳಿದ ಬ್ರಾಹ್ಮಣ ವರ್ಗಗಳಿಂತ ಭಿನ್ನವಾಗಿರುವ ಚಿತ್ಪಾವನರ ದೈಹಿಕ ಲಕ್ಷಣಗಳಿಗೆ-ಕೂದಲ ಬಣ್ಣ, ಮೈಬಣ್ಣ, ಕಾರಣ ಅವರು ಉಳಿದ ಆರ್ಯವರ್ಗಗಳು ಈ ಕಡೆಗೆ ಬಂದ ನೂರಾರು ವರ್ಷಗಳ ಬಳಿಕ ಇರಾಣದ ಕಡೆಯಿಂದ ಬಂದುದು ಕಾರಣವಿರಬೇಕೆಂದು ಶ್ರೀ ಬಸ್ತಿ ಪುಂಡಲೀಕ ಶೆಣೈ ವಾದಿಸುತ್ತಾರೆ(13)
ಕೊಂಕಣದ ಚಿಪಳೂಣಕ್ಕೆ ಬರುವ ಮೊದಲು ಚಿತ್ಪಾವನರ ತಾಣ ಯಾವುದು ಎಂಬುದನ್ನು ಊಹಿಸಲು ಸಹಾಯಕವಾಗುವ ಇನ್ನೊಂದು ಅಂಶವನ್ನು ದಿ. ನಾ.ಗೋ. ಚಾಫೇಕರರು ಸೂಚಿಸಿದ್ದಾರೆ. ಸಹ್ಯಾದ್ರಿ ಖಂಡದಲ್ಲಿರುವ ಒಂದು ಶ್ಲೋಕ ಹೀಗಿದೆ (14) ಅಲ್ಪದಾನೇನ ಸಂತುಷ್ಟಾಃ ಚಿತ್ತಪೂತ ಇತಿಶ್ರುತಾಃ | ಆರ್ಯಾವರ್ತಾ ಇತಿಖ್ಯಾತಾಃ ಆಯಾವರ್ತಾದುಪಾಗತಃ || ಇದರಲ್ಲಿ 'ಚಿತ್ಪಾವನ'(ಚಿತ್ತಪೂತ) ಎಂಬ ಹೆಸರಲ್ಲದೆ, ಆರ್ಯಾವರ್ತರೆಂಬ ಇನ್ನೊಂದು ಹೆಸರು ಈ ವರ್ಗಕ್ಕೆ ಇದ್ದುದು ಗಮನಾರ್ಹವಾಗಿದೆ. ಚಿತ್ಪಾವನರಿಗೆ ಸಂಬಂಧಿಸಿರುವ ಆಖ್ಯಾಯಿಕೆ, ದಂತಕಥಗಳಲ್ಲೆಲ್ಲ ಹಡಗಿನ, ಸಮುದ್ರದ ಉಲ್ಲೇಖ ಇದ್ದೇ ಇದೆ. ಸಮುದ್ರ ಮಾರ್ಗವಾಗಿ ಇವರು ಬಂದವರೆಂದರೂ, ಮೊದಲು ಎಲ್ಲಿಗೆ ಬಂದರು? ಕೊಂಕಣಕ್ಕೋ ಅಥವಾ ಉತ್ತರದ ಗುಜರಾತ್ ಕಡೆಗೋ ಎಂಬ ಪ್ರಶ್ನೆ ಮುಖ್ಯವಾದುದು. ಏಕೆಂದರೆ ಮೇಲಿನ ಶ್ಲೋಕದಲ್ಲಿ 'ಆರ್ಯಾವರ್ತ'ರೆನಿಸಿದ ಇವರು ಆರ್ಯಾವರ್ತದಿಂದ ಬಂದರೆಂದಿದೆ. ಆರ್ಯಾವರ್ತವೆಂದರೆ ವಿಂಧ್ಯ ಹಿಮಾಲಯಗಳ ನಡುವಿನ ಪ್ರದೇಶ. ಕೊಂಕಣವು ಅದರ ಭಾಗವಲ್ಲ. ಹಾಗಾದರೆ ಆರ್ಯಾವರ್ತದ ಕರಾವಳಿ ಅಂದರೆ ಗುಜರಾತ, ಕಚ್ಛ ಭಾಗಕ್ಕೆ ಬಂದಿರಬಹುದೆ? ಅಲ್ಲಿಂದ ಎರಡನೆಯ ವಲಸೆಯಾಗಿ ಕೊಂಕಣಕ್ಕೆ ಬಂದರೆ? ಎಂಬೊಂದು ಊಹೆಗೆ ಅವಕಾಶವಿದೆ. ಚಿತ್ಪಾವನರಿಗೂ ಗುಜರಾತದ ಉದೀಚ್ಯ ಬ್ರಾಹ್ಮಣರು, ನಾಗರ ಬ್ರಾಹ್ಮಣರಿಗೂ ದೇಹಲಕ್ಷಣದಲ್ಲಿ ಸಾಮ್ಯವಿದೆ ಎನ್ನಲಾಗಿದೆ.(15) ಸೌರಾಷ್ಟ್ರದ ಸೋಮನಾಥದಲ್ಲಿರುವ ತುರ್ಕಿ ಬ್ರಾಹ್ಮಣರಿಗೂ ಹಾಗೆಯೇ (16) ಗುಜರಾತದ ಭಾಗ್ವ (ಪರಶುರಾಮ?), ನಾಗರ, ಉದೀಚ್ಯ, ತುರ್ಕಿ ಬ್ರಾಹ್ಮಣರು ಚಿತ್ಪಾವನರ ಜ್ಞಾತಿ ಜಾತಿಗಳಿರಲು ಸಾಧ್ಯ.
ಇದಕ್ಕೆಲ್ಲ ಪೂರಕವಾಗಿ, ಅಪೂರ್ಣವಾಗಿದ್ದರೂ, ಅಮುಖ್ಯವಲ್ಲದ ಒಂದು ಪುರಾವೆ ಚಿತ್ಪಾವನಿ ಭಾಷೆಯಲ್ಲಿದೆ. ಚಿತ್ಪಾವನಿ ಭಾಷೆ ಒಂದು ಬಗೆಯ ಹಳೆ ಮರಾಠಿ ಅಥವಾ ಮಹಾರಾಷ್ಟ್ರೀ ಪ್ರಾಕೃತ ಪ್ರಭೇದ. ಇದು ಚಿತ್ಪಾವನರು ಕೊಂಕಣಕ್ಕೆ ಬಂದ ಕಾಲಕ್ಕೆ ಇದ್ದ ಭಾಷೆಯನ್ನು ಸ್ವೀಕರಿಸಿದ ಮೇಲಿನ ಸಂಗತಿಯಷ್ಟೇ. ಆ ಮೊದಲು ಅವರ ಭಾಷೆ ಗುಜರಾತಿಯ ಒಂದು ಪ್ರಭೇದವಾಗಿರಲೂ ಸಾಧ್ಯವಿದೆ ಎಂಬುದಕ್ಕೆ ಒಂದೆರಡು ಸೂಚನೆಗಳಿವೆ. ಚಿತ್ಪಾವನಿಯ ಒಂದು ಕ್ರಿಯಾ ಪದ 'ತ್ಸೆ' (ಆಗಿದೆ, ಆಗಿ) ಎಂಬುದು ಗುಜರಾತಿಯ 'ಛೆ' ಎಂಬುದರ ಸ್ಪಷ್ಟ ಸಮಾನ ಪದ. ಹಾಗೆಯೇ ಚಿತ್ಪಾವನಿಯ 'ಕೇ' (ಎಲ್ಲಿ) ಗುಜರಾತಿಯ 'ಕೇಂ'(ಎಲ್ಲಿ), ಚಿತ್ಪಾವನಿಯ 'ತ್ಯಾಹಾಂ' (ಅಲ್ಲಿ) ಗುಜರಾತಿಯ 'ತ್ಯಾಂ'(ಅಲ್ಲಿ) ಕೂಡ. ಇವು ಚಿತ್ಪಾವನಿ ಭಾಷೆಯಲ್ಲಿ ಉಳಿದುಕೊಂಡಿರುವ ಗುಜರಾತಿಯ ತುಣುಕುಗಳಿರಬಹುದೇ? ಎಂಬುದು ನನ್ನ ಊಹೆ. ಈ ಊಹೆಯನ್ನು ತಾನೂ ಕೂಡ ಕಲ್ಪಿಸಿದ್ದಾಗಿ ಹಿರಿಯ ಮರಾಠಿ ವಿದ್ವಾಂಸ ಮರಾಠಿ 'ಸಂಸ್ಕೃತಿ ಕೋಶ'ದ ಸಂಪಾದಕ, ಪುಣೆಯ ಪಂಡಿತ ಮಹಾದೇವಶಾಸ್ತ್ರಿ ಜೋಶಿಯವರು ತಿಳಿಸಿದ್ದಾರೆ.(17)
ಮೇಲಿನ ಅಂಶಗಳನ್ನು, ದಂತಕಥೆಗಳನ್ನು ಒಟ್ಟಾಗಿ ಪರಿಶೀಲಿಸಿ ಹೀಗೊಂದು ಮಬ್ಬಾದ ಚಿತ್ರಣವನ್ನು ಕಲ್ಪಿಸಬಹುದು. ಚಿತ್ಪಾವನರು ಪರ್ಷಿಯಾದಿಂದಲೋ, ಬರ್ಬರದಿಂದಲೋ ಗುಜರಾತದ ಆಸುಪಾಸಿನ ಕರಾವಳಿಗೆ ಬಂದು ಅಲ್ಲಿ ನೆಲೆಯಾದರು. ಇವರ ಒಳ ಪಂಗಡಗಳು ನಾಗರ, ತುರ್ಕಿ. ಉದೀಚ್ಯ ಬ್ರಾಹ್ಮಣರು. ಅಲ್ಲಿಂದ ಒಂದು ಗುಂಪು ಸಮುದ್ರಮಾರ್ಗವಾಗಿ ಕೊಂಕಣದ ಗುಹಾಗರ, ಚಿಪಳೂಣಗಳಿಗೆ ಬಂದು 'ಆರ್ಯಾವರ್ತ'ರೆನಿಸಿದರು. (ಆರ್ಯಾವರ್ತಾ ಇತಿಖ್ಯಾತಾ| ಆರ್ಯಾವರ್ತಾದುಪಾಗತಃ). ಚಿಪಳೂಣದಲ್ಲಿ ನೆಲೆಸಿ - ಚಿಪಳೋಣೆ - ಚಿತ್ಪಾವನರೆನಿಸಿಕೊಂಡರು. ಪ್ರಾಕೃತ ಮಹಾರಾಷ್ಟ್ರೀ ಭಾಷೆಯನ್ನು ಅಂಗೀಕರಿಸಿ, ಚಿತ್ಪಾವನಿ ಭಾಷೆ ರೂಪುಗೊಂಡಿತು. ಈ ಒಂದು ತಾತ್ಕಾಲಿಕ ಪೂರ್ವಪಕ್ಷವನ್ನು ಹಿಡಿದು ಗುಜರಾತಿ-ಚಿತ್ಪಾವನಿ ಭಾಷೆಗಳನ್ನು ಗುಜರಾತಿನ ಬ್ರಾಹ್ಮಣ ಮತ್ತು ಚಿತ್ಪಾವನರ ಶಾರೀರಿಕ ಲಕ್ಷಣ ಪದ್ಧತಿಗಳು, ಆಚಾರಕ್ರಮಗಳು, ಪಾರಂಪರಿಕ ದಂತಕಥೆಗಳನ್ನು ಹೋಲಿಸಿ ಸಿದ್ಧಾಂತಕ್ಕೆ ಬರಲು ಸಾಧ್ಯವಿದೆ. ಇಲ್ಲಿ ಮಾಡಿರುವುದು ತೀರ ಮಿತವಾದ ಒಂದು ಊಹಾ ಪ್ರಪಂಚ ಮಾತ್ರ.
ಕೊಂಕಣದಲ್ಲಿ ನೆಲೆಗೊಂಡು ಬಹುಕಾಲ, ಬಡತನದ ಜೀವನ, ಮಾಮೂಲು ಬ್ರಾಹ್ಮಣವರ್ಗದ ಜೀವನ ಮಾರ್ಗಗಳಲ್ಲಿ ವ್ಯಕ್ತವಾಗಿದ್ದ ಈ ಜನಾಂಗ 17ನೆಯ ಶತಮಾನದ ನಂತರ ಫಕ್ಕನೆ ಮಿಂಚಿ, ಆಸ್ಫೋಟಿಸಿ ರಾಜಕೀಯ, ಸಾಹಿತ್ಯ, ಕಲೆ, ಸಾಮಾಜಿಕ ರಂಗಗಳಲ್ಲಿ ನೀಡಿದ ಕೊಡುಗೆ ಅದ್ಭುತವೆನ್ನಬಹುದಾದದ್ದು. ಪುಣೆಯಲ್ಲಿ ಪೇಶ್ವೆ ರಾಜ್ಯ ಸ್ಥಾಪನೆಯಾದುದು ಚಿತ್ಪಾವನರ ಉತ್ಕರ್ಷಕ್ಕೆ ಮುಖ್ಯ ಕಾರಣ. ಆದರೆ ಶತಮಾನಗಳ ಕಾಲ ಈ ಜನಾಂಗದ ಪ್ರತಿಭೆ, ಸಾಮರ್ಥ್ಯ, ಹೇಗೆ ಸುಪ್ತವಾಗಿತ್ತು ಎಂಬುದು ಸಂಶೋಧನೆಗೆ ವಸ್ತುವಾಗಬಲ್ಲ ವಿಷಯ. ಅವರು ನೆಲೆಸಿದ ಉತ್ತರ ಕೋಕಣದಲ್ಲಿ ಸಮೃದ್ಧಿಯಾಗಲಿ, ಅವಕಾಶಗಳಾಗಲಿ ಇರಲಿಲ್ಲ. ಮಹತ್ವವೆನಿಸುವ ರಾಜಸತ್ತೆಯೂ ಇರಲಿಲ್ಲ. ಜೀವನ ಕಷ್ಟಕರವಾಗಿತ್ತು. ಇಂದಿಗೂ ರತ್ನಾಗಿರಿ ಪ್ರದೇಶ ಸಮೃದ್ಧವಾದುದಲ್ಲ. ಈ ಕಾರಣದಿಂದಾಗಿ ಚಿತ್ಪಾವನರ ಸಾಮರ್ಥ್ಯ ಪ್ರಕಟವಾಗಲಿಲ್ಲ ಎನ್ನಬಹುದಾದರೂ17ನೆಯ ಶತಮಾನದ ಬಳಿಕ ಇಂದಿನವರೆಗೆ ಬಾಳಿ ಬೆಳಗಿದ ಚಿತ್ಪಾವನರ ಪ್ರಚಂಡ ಬಹುಮುಖ ಮುನ್ನಡೆಯ ನೆಲೆಯಿಂದ ಈ ಸಮಾಧಾನ ಅಪೂರ್ಣವೆನಿಸದಿರದು.
ಉತ್ತರ ಕೊಂಕಣದಿಂದ ಈ ಜನಾಂಗ ದಕ್ಷಿಣ ಕನ್ನಡಕ್ಕೆ ಯಾವಾಗ ಮತ್ತು ಯಾಕಾಗಿ ಬಂದಿರಬಹುದು ಎಂಬುದನ್ನು ಈಗ ಪರಿಶೀಲಿಸೋಣ.
-4-
ದಕ್ಷಿಣಕನ್ನಡಕ್ಕೆ ಚಿತ್ಪಾವನರ ಆಗಮನಕ್ಕೆ ಕಾರಣ ಮತ್ತು ಕಾಲಗಳ ಬಗೆಗಿನ ಹೇಳಿಕೆ, ಆಖ್ಯಾಯಿಕೆ, ಊಹೆಗಳಲ್ಲಿ ಗೊಂದಲವಿದ್ದು ಖಚಿತವಾದ ನಿರ್ಣಯಕ್ಕೆ ಬರಲು ಸಾಕಷ್ಟು ಪ್ರಮಾಣಗಳು ಸಾಲವು. ಊಹೆ, ಪ್ರತೀತಿಗಳನ್ನು ಆಧರಿಸಿ ಹೀಗೆ ಸಂಗ್ರಹಿಸಬಹುದು.
1) ಗೋವಾದಲ್ಲಿ ಪೋರ್ಚುಗೀಸರು ನಡೆಸಿದ ಮತಾಂತರ. 2) ಉತ್ತರ ಕೊಂಕಣದಲ್ಲಿ ಮುಸಲ್ಮಾನರಿಂದ ಕಿರುಕುಳ.
3) ಬರಗಾಲ, ಮಿಡತೆಗಳ ಹಾವಳಿಯಂತಹ ಪ್ರಾಕೃತಿಕ ವಿಕೋಪ
4) ಗೋವಾ ಪ್ರದೇಶದಲ್ಲಿ ರಾಣೇ ಜನಾಂಗದಿಂದಾದ ತೊಂದರೆಗಳು.
5) ಜೀವನೋಪಾಯಕ್ಕಾಗಿ, ಅಂದರೆ ವಿಶಿಷ್ಟ ಕಾರಣಗಳಿಲ್ಲದೆ ಬಡತನದಿಂದಾಗಿ.
ಇವುಗಳಲ್ಲಿ ಪೋರ್ಚುಗೀಸ್ ಮತಾಂತರದ ಕಾರಣವನ್ನು ಇಲ್ಲಿಗೆ ಬಂದಿರುವ ಸಾರಸ್ವತ, ರಾಜಾಪುರ, ಪದ್ಯೆ, ಗೌಡ ಮುಂತಾದ ಹಲವು ಜನಾಂಗಗಳ ವಲಸೆ ಬಗೆಗೆ ಹೇಳಲಾಗಿದ್ದು, ರೋಮನ್ ಕೆಥೋಲಿಕರ ಒಂದು ಗುಂಪಿನ ವಲಸೆಗೂ, ತಮ್ಮ ಪ್ರಾಚೀನಾಚಾರಗಳನ್ನು ಮತಾಂತರದ ಅನಂತರವೂ ಅವರು ಬಿಡದಿದ್ದುದರಿಂದ ಒಂದು ಘರ್ಷಣೆಗೂ ಅದೇ ಕಾರಣ ಅನ್ವಯಮಾಡಲಾಗಿದೆ. ಈ ಪ್ರಸಿದ್ಧ ಕಾರಣವನ್ನು ಗತಾನುಗತಿತ ನ್ಯಾಯದಂತೆ ಚಿತ್ಪಾವನರ ಬಗೆಗೆ ಅನ್ವಯಿಸಲಾಯಿತೆ ಎಂಬ ಸಂದೇಹ ಮೂಡುತ್ತದೆ. ಏಕೆಂದರೆ ಚಿತ್ಪಾವನರಲ್ಲಿ ಪ್ರಚಲಿತವಿರುವ ಹೇಳಿಕೆಗಳಲ್ಲಿ ಪೋರ್ಚುಗೀಸ್ ಕಾರಣ ಪ್ರಚಲಿತವಿಲ್ಲ. ಹದಿನಾಲ್ಕನೆಯ ಶತಮಾನದ ಭಾರಿ ಬರಗಾಲ 'ದುರ್ಗಾದೇವಿಚಾ ದುಷ್ಕಾಳ' ಎನ್ನಲಾದ ಕ್ಷಾಮದ ಕಾರಣಕ್ಕೆ ಪುರಾವೆ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಚಿತ್ಪಾವನರಲ್ಲಿ12-14 ತಲೆಮಾರುಗಳಿಗಿಂತ ಹಿಂದಿನ ವಂಶಾವಳಿ ಸಿಗುವುದಿಲ್ಲವಾಗಿ, ವಲಸೆಯ ಕಾಲ ಹದಿನಾಲ್ಕನೆಯ ಶತಮಾನದಷ್ಟು ಹಿಂದಕ್ಕೆ ಹೋಗುವುದಿಲ್ಲ. ರೋಗ, ಬರಗಾಲ, ಸ್ಥಳಿಯ ಗಲಭೆಗಳು, ಮಿಡತೆ ಹಾವಳಿಯಂತಹ ಕಾರಣಗಳಿಂದಾಗಿ ವಲಸೆಗಳಾದುದು, ಇಡಿಯ ಊರೇ ಖಾಲಿಯಾದುದು ಹಲವೆಡೆ ಕೇಳಿ ಬರುವ ಸಂಗತಿ. ಗೋವಾದ ಸತ್ತರಿ ತಾಲೂಕಿನ ಬ್ರಹ್ಮಾಕರಾವಳಿ ಎಂಬ ಒಂದು ಊರು ಹೀಗೆ ನಿರ್ಜನವಾಗಿರುವ ಉದಾಹರಣೆ ಇಲ್ಲಿ ಪ್ರಸ್ತುತ. ಬರಗಾಲದಿಂದಾಗಿ ಚಿತ್ಪಾವನರು ಈ ಕಡೆ ಬಂದರು ಎಂಬುದು ಹಿರಿಯರ ಹೇಳಿಕೆಗಳ ಪೈಕಿ ಒಂದು.
ಚಿತ್ಪಾವನಿ ಭಾಷೆಯಲ್ಲಿ ಕೆಲವೊಂದು ವಸ್ತುಗಳಿಗೆ 'ಗೋವೆ' ಎಂಬ ವಿಶೇಷಣವಿದೆ. ಉದಾ: ಗೋವೆ ಆಂಬೆ(ಗೋವೆ ಮಾವು), ಗೋವೆ ದುಧ್ಯೊ(ಗೋವೆ ಚೀನಿಕಾಯಿ), ಗೋವೆ ಗಾಯಿ (ಗೋವೆ ದನ) ಇದನ್ನಾಧರಿಸಿ ಗೋವೆಯಿಂದ ಬಂದಿರಬಹುದು ಎಂದು ಓರ್ವರು ತಿಳಿಸಿದ್ದಾರೆ. (18) ಆದರೆ ಇವೇ ಉದಾಹರಣೆಗಳಿಂದ ನಾವು ಗೋವಾದಿಂದ ಒಂದಿಷ್ಟು ದೂರದಿಂದ ಬಂದಿರಬಹುದೆಂದು ಸಾಧಿಸಬಹುದು. ವಸ್ತುಗಳಿಗೆ ವಿಶೇಷಣ ಬರುವುದು ಅವು ಒಂದಿಷ್ಟು ದೂರದ, ಅಪರೂಪದ ವಸ್ತುಗಳಾದಾಗಲೇ. ಒಳ್ಳೆಯ ವಸ್ತುಗಳಿಗೆ ಜರ್ಮನ್, ವಿಲಾಯತಿ, ಪೋರೈನ್, ಬೊಂಬೈ ಈ ವಿಶೇಷಣ ಹಚ್ಚಿ ಹೇಳುವ ರೂಢಿ ಇದೆ. ಹೀಗೆ ನೋಡಿದರೆ 'ಗೋವೆ' ವಿಶೇಷಣವು ಚಿತ್ಪಾವನರು ಗೋವಾದಿಂದ ಒಂದಿಷ್ಟು ದೂರದ ಪ್ರದೇಶದಿಂದ ಬಂದಿರಬೇಕೆಂದು ಸೂಚಿಸುತ್ತದೆ. ಗೋವೆಯ ಚಿತ್ಪಾವನಿಯಲ್ಲಿ ಮಕ್ಕಳು ಎನ್ನುವುದಕ್ಕೆ 'ಬರ್ಗಿಂ' ಎನ್ನುವ ಪದವಿದ್ದು ಇದು ಗೋವಾನಿ ಕೊಂಕಣಿಯದು. ದಕ್ಷಿಣಕನ್ನಡ ಚಿತ್ಪಾವನಿಯಲ್ಲಿ ಮಕ್ಕಳಿಗೆ 'ಧಾಕ್ಕುಟಿಂ' ಎಂಬ ಪದವಿದೆ.
ಬೆಳ್ತಂಗಡಿಯ ಮುಂಡಾಜೆ ಎಂಬ ಊರಲ್ಲಿ 'ಓಣಿಚೆ ಗೋಖಲೆ' (ಓಣಿಯ ಗೋಖಲೆ) ಎಂಬ ಒಂದು ಮನೆತನವಿದೆ. ಅಲ್ಲಿ ಗೋಖಲೆ ಮನೆತನಕ್ಕೆ ಸಂಬಂಧಿಸಿದ ಯಾವುದೇ ಓಣಿ ಇಲ್ಲ. ರತ್ನಾಗಿರಿಯ ಚಿಪಳೂಣದ ಬಳಿ 'ಓಣೇ' ಎಂಬ ಊರಿದ್ದು ಚಿತ್ಪಾವನರ ವಸತಿಯೂ ಇದೆ. ಈ ಒಂದು ಅಂಶ ತುಂಬಾ ಸೂಚಕವಾಗಿದೆ.
-5-
ದಕ್ಷಿಣ ಕನ್ನಡದಲ್ಲಿ ಚಿತ್ಪಾವನರು ಅಸ್ತಿತ್ವದ ಬಗೆಗಿನ ಸ್ಪಷ್ಟವೆನ್ನಿಸಬಹುದಾದ ಕಾಲ ಸೂಚಕ ಪುರಾವೆಗಳಲ್ಲಿ ಮುಖ್ಯವಾದುವು ಇವು,
1) ಕಾರ್ಕಳ ತಾಲೂಕಿನ ದುರ್ಗ ಗ್ರಾಮದ ಮಲೆಬೆಟ್ಟು ಎಂಬಲ್ಲಿಯ ಗೋರೆ ಮನೆತನದಲ್ಲಿ ಸಿಗುವ 12ತಲೆಮಾರುಗಳ ವಂಶಾವಳಿ(19)
ಆ ಮನೆತನಕ್ಕೆ ಊರಿನ ಪಟೇಲಿಕೆ ಇತ್ತು. ಹೊರಗಿಂದ ಬಂದ ಜನಕ್ಕೆ ಇಲ್ಲಿ ಪಟೇಲಿಕೆ ಸಿಗಬೇಕಾದರೆ ಎರಡು ತಲೆಮಾರುಗಳಾದರೂ
ಸಂದಿರಬೇಕು. ಇದು ವಲಸೆಯ ಕಾಲವನ್ನು ಸುಮಾರು 420 ವರ್ಷಗಳಷ್ಟು ಹಿಂದೆ ಕೊಂಡುಹೋಗುತ್ತದೆ.
2) ಕಾರ್ಕಳ ತಾಲೂಕಿನ ಮಾಳ ಗ್ರಾಮದ ಹಳೆಯ ಪರಶುರಾಮ ಮೂರ್ತಿ. ಇದು ಹದಿನೇಳನೆಯ ಶತಮಾನದ್ದೆಂದು
ದಿ|| ಡಾ. ಪಿ. ವಾದಿರಾಜ ಭಟ್ಟರ ಮತ.(20)
3) ಮಾಳ ಗ್ರಾಮದ ಚಿತ್ಪಾವನರು ಪರಶುರಾಮ ದೇವಳದ ಸ್ಥಾಪನೆಗಿಂತ ಮೊದಲು, ಸುಮಾರು ಎಂಟು ಮೈಲು ದೂರದ ದುರ್ಗದಲ್ಲಿ
ಹರಿಹರೇಶ್ವರ ದೇವಾಲಯದ ಭಜಿತವರ್ಗವಾಗಿತ್ತು. ಒಂದು ಬಾರಿ ಮಾಳದಿಂದ ದುರ್ಗಕ್ಕೆ ದೇವಾಲಯದ ಸಮಾರಂಭಕ್ಕೆ ಹೋದಾಗ
ತಡವಾದುದರಿಂದ, ಮಾತು ಬೆಳೆದು ಮನಸ್ತಾಪ ಬಂದು, ಮಾಳದಲ್ಲಿ ಪರಶುರಾಮ ದೇವಸ್ಥಾನದ ಸ್ಥಾಪನೆಗೆ ಕಾರಣವಾಯಿತೆಂಬ
ಪರಂಪರೆಯ ಹೇಳಿಕೆ.(21) ಅಂದರೆ ಮಾಳದ ಪರಶುರಾಮ ದೇವಾಲಯಕ್ಕಿಂತ ದುರ್ಗದ ಹರಿಹರೇಶ್ವರ ದೇವಾಲಯ
ಪ್ರಾಚೀನವೆಂದಾಯಿತು.
4) ಬೆಳ್ತಂಗಡಿ ತಾಲೂಕಿನ ಸೂಳಬೆಟ್ಟು ಎಂಬಲ್ಲಿರುವ ಬರಯ ಗೋಪಾಲಕೃಷ್ಣ ದೇವಸ್ಥಾನದ ಸ್ಥಾಪಕರಾದ ಕೃಷ್ಣಭಟ್ಟರಿಗೆ ವೇಣೂರು ಅಜಿಲ
ರಾಜನು ಉಂಬಳಿ ನೀಡಿದ ದತ್ತಿ ಶಾಸನಗಳು(22) (ಇವುಗಳ ಕಾಲ 1714-1720)
5) ಮಾಳ ಪರಶುರಾಮ ದೇವಾಲಯಕ್ಕೆ ಅಂದಿನ ಶೃಂಗೇರಿ ಮಠದ ಸ್ವಾಮಿಗಳು ನೀಡಿದ್ದ ಭೇಟಿ ಬಗೆಗೆ ಮಠದಲ್ಲಿರುವ ದಾಖಲೆ (23) ತಲೆಮಾರುಗಳ ಲೆಕ್ಕಾಚಾರ, ದುರ್ಗದ ದೇವಾಲಯವು ಅಂದಾಜು ಮುನ್ನೂರೈವತ್ತು ವರ್ಷ ಹಳೆಯದೆಂಬ ಹಿರಿಯರ ಹೇಳಿಕೆಗಳು - ಇವಕ್ಕೆ ಐವತ್ತು ವರ್ಷ ಹಿಂದೆ ಚಿತ್ಪಾವನರು ಈ ಕಡೆ ಬಂದಿರಬಹುದೆಂದು ಊಹಿಸಿದರೆ400-450ವರ್ಷಗಳ ಹಿಂದಕ್ಕೆ ಹೋಗುತ್ತೇವೆ. - 6-
ದಕ್ಷಿಣ ಕನ್ನಡದಲ್ಲಿ ಚಿತ್ಪಾವನರ ವಸತಿಗಳು ಇರುವ ಪ್ರದೇಶಗಳು
1) ಕಾರ್ಕಳ ತಾಲೂಕಿನ ಮಾಳ, ಕೆರವಾಸೆ ಗ್ರಾಮಗಳು
2) ಕಾರ್ಕಳ ತಾಲೂಕಿನ ದುರ್ಗ, ತೆಳ್ಳಾರು, ಈದು, ಹೆಬ್ರಿ, ಗಂಗೆನೀರು
3) ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಶಿಶಿಲ, ಶಿಬಾಜೆ, ಹತ್ಯಡ್ಕ ಗ್ರಾಮಗಳು, ಬಂಗಾಡಿ, ನಿಡ್ಲೆ
4) ಬೆಳ್ತಂಗಡಿ ತಾಲೂಕಿನ ಸೂಳಬೆಟ್ಟು, ಅಳಂಬ, ಕುದ್ಯಾಡಿ ಎಂಬ ಚಿಕ್ಕ ಹಳ್ಳಿಗಳು.
5) ಪುತ್ತೂರು ತಾಲೂಕಿನ ಕಡಬದ ಬಳಿಯ ಹೊಸಮಠ
6) ಕುಂದಾಪುರ ತಾಲೂಕಿನ ಹಾಲಾಡಿ
ಈ ಪ್ರದೇಶದಲ್ಲಿಯ ಚಿತ್ಪಾವನರ ಜನಸಂಖ್ಯೆ ಅಂದಾಜು ಆರು ಸಾವಿರವನ್ನು ಮೀರಿಲ್ಲ. ತಾಲೂಕು ಕೇಂದ್ರಗಳಲ್ಲಿ ಚದುರಿದಂತೆ ಇರುವ ಚಿತ್ಪಾವನರ ವಸತಿಗಳ ಹೊರತಾಗಿ ಉಳಿದಂತೆ ಈ ವಸತಿಗಳಿಗೆ 'ವಾಳ್ಯ'ಗಳೆಂದು ಸ್ಥಳೀಯ ರೂಢಿ. ಈ ವಸತಿಗಳಲ್ಲಿ ಮಾಳ, ದುರ್ಗ, ಶಿಶಿಲ, ಮುಂಡಾಜೆ ಇವು ದೊಡ್ಡ ವಸತಿಗಳು, ಅಂದರೆ ನೂರು ಅಥವಾ ಹೆಚ್ಚು ಮನೆಗಳಿರುವಂತಹವು. ಕಾಸರಗೋಡು ತಾಲೂಕಿನ ಬಾಯಾರು ಎಂಬಲ್ಲಿ ಹಿಂದಿನ ದಾಖಲೆಗಳಲ್ಲಿ .....ಚಿತ್ಪಾವನ ಬ್ರಾಹ್ಮಣ.....ಇಂತಹವರ ಮಗ" ಇತ್ಯಾದಿ ಉಲ್ಲೇಖಗಳಿವೆ ಎಂದು ಓರ್ವ ಗ್ರಾಮಲೆಕ್ಕಿಗರು ತಿಳಿಸಿದುದಾಗಿ ಶ್ರೀ ನರಹರಿ ಮೆಹೆಂದಳೆ ಇವರು ತಿಳಿಸುತ್ತಾರೆ. ಈಗ ಬಾಯಾರಿನಲ್ಲಿ ಚಿತ್ಪಾವನರ ಮನೆಗಳಿಲ್ಲ. ಅವು ಅಲ್ಲಿ ಬಹು ಸಂಖ್ಯೆಯಲ್ಲಿರುವ ಇನ್ನೊಂದು ಮಹಾರಾಷ್ಟ್ರೀಯ ಜನಾಂಗವಾದ ಪದ್ಯೆ ಕರ್ಹಾಡೆ ಬ್ರಾಹ್ಮಣ ವರ್ಗದಲ್ಲಿ ವಿಲೀನವಾಗಿರಬೇಕು. ಕಾಟುಕುಕ್ಕೆಯಲ್ಲಿಯ ಚಿತ್ಪಾವನರ ಮೂರು ಮನೆಗಳಿದ್ದು ಜಿಲ್ಲೆಯ ಉಳಿದ ಚಿತ್ಪಾವನರ ಜತೆ ಸಂಪರ್ಕವಿಲ್ಲ. ಭಾಷೆಯೂ ಚಿತ್ಪಾವನಿ -ಪದ್ಯೆ ಭಾಷೆಯ ಮಿಶ್ರಣವಾಗಿದೆ.
ಚಿತ್ಪಾವನರು ಈ ಜಿಲ್ಲೆಗೆ ಬಂದ ಬಗೆಗೆ ಸ್ವಾರಸ್ಯಕರ ಐತಿಹ್ಯಗಳಿವೆ. ಉತ್ತರ ಕೊಂಕಣದಿಂದ ಎರಡು ಗುಂಪುಗಳಲ್ಲಿ ಸಮುದ್ರಮಾರ್ಗವಾಗಿ ಬಂದು, ಒಂದು ಗುಂಪು ಮಲ್ಪೆ ಬಂದರಿನಲ್ಲೂ, ಇನ್ನೊಂದು ಮಂಗಳೂರಿನಲ್ಲೂ ಇಳಿದುವಂತೆ. ಉಡುಪಿಯ ಮಲ್ಪೆಗೆ ಬಂದ ತಂಡ ಅಲ್ಲಿಂದ ಹಿರಿಯಡ್ಕಕ್ಕೆ ಹೋಗಿ ನೆಲೆಸಿ ಕೆಲಕಾಲದ ನಂತರ ಎರಡು ಗುಂಪುಗಳಾಗಿ, ಒಂದು ಗುಂಪು ಕುಂದಾಪುರ ತಾಲೂಕಿನ ಹಾಲಾಡಿಗೂ, ಇನ್ನೊಂದು ಗುಂಪು ಮಾಳ, ದುರ್ಗಗಳಿಗೆ ಹೋದುವು. ಹಾಲಾಡಿಯಲ್ಲಿ ಒಂದೆರಡು ತಲೆಮಾರುಗಳ ಹಿಂದಿನವರೆಗೆ ಚಿತ್ಪಾವನರ ವಸತಿ ದೊಡ್ಡದಾಗಿತ್ತು. ಅನಂತರ ಅದು ಬೇರೆ ಊರುಗಳಿಗೆ ವಲಸೆಯಾಗಿ ಕರಗಿ ಹೋಗಿ ಈಗ ಮೂರು ನಾಲ್ಕು ಮನೆಗಳಿವೆ.
ಮಂಗಳೂರಿನಲ್ಲಿ ಇಳಿದ ತಂಡ ಬಂಟ್ವಾಳದಿಂದ ಪೂರ್ವಕ್ಕಿರುವ ಪುಂಜಾಲಕಟ್ಟೆಯಲ್ಲಿ ಠಾಣ್ಯ ಹೂಡಿತು. ಕೆಲಕಾಲ ಅಲ್ಲಿ ತಂಗಿದಾಗ ಇನ್ನೊಂದು ವಿಪತ್ತು ಕಾದಿತ್ತು. ಅದು ರಣಹದ್ದುಗಳ ಬಾಧೆ. ಈ ಭೀಕರ ದಾಳಿಗೆ ಕಂಗಾಲಾಗಿ, ಕೆಲವು ಜಾನುವಾರುಗಳನ್ನು, ಮಕ್ಕಳನ್ನೂ ಕಳೆದುಕೊಂಡ ಈ ಜನ ಅಲ್ಲಿಂದ ಹೊರಟು ಶಿಶಿಲ, ಹೊಸಮಠಗಳಿಗೆ ಹೋಗಿ ನೆಲೆಸಿತು ಎನ್ನುವವರಿದ್ದಾರೆ. ಬೆಳ್ತಂಗಡಿಯ ಮುಂಡಾಜೆ ಊರಿನ ಚಿತ್ಪಾವನರ 'ವಾಳ್ಯ'ಉಳಿದವುಗಳಿಗಿಂತ ಅರ್ವಾಚೀನ ಎನ್ನಲು ಆಧಾರಗಳಿವೆ. ಅಲ್ಲಿ ಹೆಚ್ಚಿನ ಮನೆತನಗಳು ಮಾಳ, ಶಿಶಿಲ, ಹಾಲಾಡಿ, ಹೊಸಮಠದ ತಾಣಗಳಿಂದ ಬಂದು ನೆಲೆಸಿದವರು ಎಂಬ ಹೇಳಿಕೆಗಳಿದ್ದು ಈಗಿರುವ ಅನೇಕರಿಗೆ ಇದರ ಬಗೆಗೆ ಸ್ಪಷ್ಟ ಮಾಹಿತಿಗಳಿವೆ. ಮುಂಡಾಜೆಯ ತೆಂಕಣ ಭಾಗದ ಕಡಂಬಳಿ ವಾಳ್ಯದ ಮನೆತನಗಳ ಬಗ್ಗೆ ಮಾಹಿತಿಗಳಿಲ್ಲವಾಗಿ, ಅವು ಮೂಲ ವಲಸೆಯ ಕಾಲಕ್ಕೆ ಬಂದವುಗಳಾಗಿರಬೇಕು. ಈ ಕಡಂಬಳ್ಳಿ ಅಥವಾ ಕಡಾಂಬಳ್ಳಿ ಎಂಬುದು ಕಡಂಬ ಹಳ್ಳಿ ಆಗಿರಬೇಕೆಂದು ಕಡಂಬರೆಂಬ ಜೈನರು ಚಿತ್ಪಾವನರಿಗೆ ಆಶ್ರಯಕ್ಕೆ ನೀಡಿದ ಹಳ್ಳಿ ಆಗಿರಬೇಕೆಂದೂ ಡಾ. ವಾಸುದೇವರಾವ್ ಕಾಕತ್ಕರರು ತಿಳಿಸಿದ್ದಾರೆ. (24) ಇದು ಸಂಭಾವ್ಯವಿದೆ.
ವಲಸೆಯ ಮುಖ್ಯ ಪ್ರವಾಹದಲ್ಲಿ ಬಾರದೆ, ಪ್ರತ್ಯೇಕವಾಗಿ ಬಂದು ನೆಲೆಯಾದ ಕುಟುಂಬಗಳೂ ಇವೆ. ಇವೆಲ್ಲ ಒಂಟಿ ಕುಟುಂಬಗಳ ವಲಸೆಗಳು. ಶಿಶಿಲದಲ್ಲಿ ಪುಣೇಕರವಾಡಿ ಎಂಬುದನ್ನು ಗಮನಿಸಿ. ಈ ಪುಣೇಕರರು ಅನಂತರ ಬಂದು ಸೇರಿ ಕೊಂಡವರು. ಹಾಗೆಯೇ ಶಿಶಿಲದ ದಾಮ್ಲೆ ಮನೆತನ ಈ ಕಡೆಗೆ ಸುಮಾರು ನೂರೈವತ್ತು ವರ್ಷಗಳ ಹಿಂದೆ ಬಂದ ಐವರು ದಾಮಲೆ ಸೋದರರ ಸಂತತಿ ಎನ್ನುವರು. ಈ ಐವರು ಇಲ್ಲಿಗೆ ರತ್ನಾಗಿರಿಯಿಂದ ಬಂದಾಗ ಚಿತ್ಪಾವನರ ವಸತಿಯನ್ನು ಕಂಡು ಇಲ್ಲಿ ನೆಲೆಯಾದರಂತೆ. (ಪವಾಡ ಪುರುಷರಾದ ಅಪ್ಪಾಭಟ್ ದಾಮ್ಲೆ ಇವರ ಪೈಕಿ ಒಬ್ಬರಂತೆ) ಮುಂಡಾಜೆಯ ಫಡಕೆ ಮನೆತನದಲ್ಲಿ ಒಂದು (ಫಡಕೆ ಎಂಬುದು ಕುಲನಾಮ) 1811ರಲ್ಲಿ 'ದೇಶ'ದಿಂದ (ಘಟ್ಟದ ಮೇಲಿಂದ) ಬಂದುದಾಗಿ ಆ ಮನೆತನದ ಭೂ ಸಂಬಂಧಿ ದಾಖಲೆಗಳಲ್ಲಿದೆ. ಹಾಗೆಯೇ ಮುಂಡಾಜೆಯ ಭಿಡೆ ಮನೆತನಗಳ ಪೈಕಿ ಒಂದು ಸತಾರಾ ಸಂಸ್ಥಾನದಲ್ಲಿ ದಿವಾನರಾಗಿದ್ದು ಸಂಸ್ಥಾನವು ಬಿದ್ದು ಹೋದ ಮೇಲೆ ಈ ಕಡೆಗೆ ಬಂದು ನೆಲೆಯಾದವರ ಸಂತತಿ. ಶಿಶಿಲದ ಕಂಬ್ಳಿ ಅಥವಾ ಕಾಂಬೋಳಿ ಎಂಬ ಸ್ಥಳದ ಖಾಡಿಲ್ಕರ್ ಮನೆತನವು ಕಾಶಿಯಿಂದ ಗೋಕರ್ಣಕ್ಕೆ ಬಂದು ಶಿಶಿಲಕ್ಕೆ ಬಂದುದಾಗಿ ಐತಿಹ್ಯ. ( ಈ 'ಕಾಂಬೋಳಿ' ಅಥವಾ 'ಕಂಬ್ಳಿ' ಎಂಬುದು ಜೈನರ ಕುಲನಾಮ, ಅವರಿಂದ ಪಡೆದ ಆಸ್ತಿ ಆಗಿರಬೇಕು). ಮಾಳದಲ್ಲಿರುವ ಜೋಶಿ ಮನೆತನಗಳ ಪೈಕಿ ಒಂದು ಶೃಂಗೇರಿಯಿಂದ ಬಂದುದು.
ದಕ್ಷಿಣಕನ್ನಡ ಚಿತ್ಪಾವನರ ವಸತಿಗಳ ಬಗೆಗಿನ ಒಂದು ವಿಶಿಷ್ಟತೆಯ ಬಗೆಗೆ ಡಾ|| ಕಾಕತ್ಕರರು ಗಮನ ಸೆಳೆದಿದ್ದಾರೆ. ವಸತಿಗಳಲ್ಲಿ ಒಂದಕ್ಕೊಂದು ತಾಗಿದ ಜಮೀನುಗಳು ಚಿತ್ಪಾವನರ ಸ್ವಾಮಿತ್ವದಲ್ಲಿವೆ. ಆದರೆ ವಸತಿಗಳು ಒಂದೇ ಕಡೆ ಇಲ್ಲದೆ, ಜಿಲ್ಲೆಯ ಹಲವು ಕಡೆ ಹರಡಿಕೊಂಡಿವೆ(25) ಈ ವಿದ್ಯಮಾನವು ಚಿತ್ಪಾವನರ ಇಲ್ಲಿಯ ಪೂರ್ವೇತಿಹಾಸದ ಬಗೆಗೆ ಬೆಳಕು ಚೆಲ್ಲಬಹುದು. ಏಕಕಾಲದಲ್ಲಿ ಬಂದು ಈ ವಸತಿಗಳನ್ನು ಮಾಡಿದ್ದಾಗಿದ್ದರೆ ಸಾಕಷ್ಟು ಸಂಖ್ಯೆಯಲ್ಲಿ ಬಂದಿರಬೇಕು ಮತ್ತು ಆಸ್ತಿಗಳನ್ನು ಕೊಳ್ಳುವ ಆರ್ಥಿಕ ಬಲವನ್ನು ಪಡೆದಿರಬೇಕೆಂಬುದು ಸ್ಪಷ್ಟ. ಚಿತ್ಪಾವನರ ಎಲ್ಲ ವಸತಿಗಳೂ ಪಶ್ಚಿಮಘಟ್ಟಕ್ಕೆ ತಗಲಿದ ಒಳ ಪ್ರದೇಶಗಳಲ್ಲೇ ಇರುವುದು ಏನನ್ನು ಸೂಚಿಸುತ್ತಿರಬಹುದು? ಹೆಚ್ಚು ಪ್ರಶಸ್ತವಾಗಿದ್ದ ಹೊರ ಪ್ರದೇಶಗಳಲ್ಲಿ ಜನವಸತಿ ಆಗಲೇ ಇದ್ದು, ಸಾಕಷ್ಟು ಸ್ಥಳ ಅಲಭ್ಯವಾಗಿದ್ದುದರಿಂದ, ಪರ್ವತ ಪ್ರದೇಶದತ್ತ ಹೋಗಿರಲೂಬಹುದೆಂದು ಊಹಿಸಲು ಸಾಧ್ಯ. ಇದು ವಲಸೆಯ ಕಾಲದ ನಿರ್ಣಯಕ್ಕೂ ಉಪಯುಕ್ತವಾಗಬಹುದು. ಮುಖ್ಯ ವಸತಿಗಳು ಕಾರ್ಕಳ, ಬೆಳ್ತಂಗಡಿ ತಾಲೂಕುಗಳಲ್ಲಿರುವುದು, ಎರಡು ಗುಂಪುಗಳಾಗಿ ಬಂದು ಬೇರೆ ಬೇರೆ ಕಡೆ ನೆಲೆಯಾದರೆಂಬ ಐತಿಹ್ಯಕ್ಕೆ ಪುಷ್ಟಿಯನ್ನೀಯುತ್ತದೆ.
-7-
ದಕ್ಷಿಣ ಕನ್ನಡದ ಚಿತ್ಪಾವನರ ಭಾಷೆ ಚಿತ್ಪಾವನಿ ಎಂಬ ಮರಾಠಿ ಪ್ರಾಕೃತ ಪ್ರಭೇದ. ಇಲ್ಲಿ ಇದು ಎಲ್ಲಾ ಚಿತ್ಪಾವನರ ಮನೆಮಾತು. ಗೋವಾದಲ್ಲಿ ಮತ್ತು ಅಲ್ಲಿಂದ ಉತ್ತರಕ್ಕೆ ಸಾವಂತವಾಡಿ ರಾಜಾಪುರದವರೆಗೆ ಈ ಭಾಷೆ ಇದೆ. ಅಲ್ಲಿಂದ ಉತ್ತರಕ್ಕೆ ಹಾಗೂ ಪುಣೆಯಲ್ಲಿ ಈ ಭಾಷೆ ಎಂದೊ ಮಾಯವಾಗಿ, ಚಿತ್ಪಾವನರು ಆಧುನಿಕ ಮರಾಠಿಯನ್ನೇ ಮಾತನಾಡುತ್ತಿದ್ದಾರೆ. ಉತ್ತರ ಕೊಂಕಣದಲ್ಲೂ ಕೆಲವು ಹಳ್ಳಿಗಳನ್ನು ಬಿಟ್ಟರೆ ಹೊಸತಲೆಮಾರಿಗೆ ಚಿತ್ಪಾವನಿ ಬಾರದು. ಗೋವಾದ ಸತ್ತರಿ ಪ್ರದೇಶದಲ್ಲಿ ಈ ಭಾಷೆ ಜೀವಂತವಾಗಿದೆ. ಅಲ್ಲೂ ಸತತವಾದ ಮರಾಠಿ ಕೊಂಕಣಿ ಪ್ರಭಾವಗಳಿಂದ ಹೆಚ್ಚು ಅರ್ವಾಚೀನವಾಗಿದೆ. ಈ ಕಡೆ ಅದು ನಿಧಾನವಾಗಿ ಮಾಯವಾಗುತ್ತಿರುವ ಭಾಷೆಯಾದರೆ ದಕ್ಷಿಣಕನ್ನಡದಲ್ಲಂತೂ ಅದಿನ್ನೂ ಜೀವಂತ ಭಾಷೆ. ಉತ್ತರ ಕೊಂಕಣಕ್ಕಿಂತ ಇಲ್ಲಿಯ ಚಿತ್ಪಾವನಿಯು ಹೆಚ್ಚು ಪ್ರಾಚೀನ ರೂಪದ್ದು. ಚಿತ್ಪಾವನಿ ಭಾಷೆಯು ಹನ್ನೆರಡನೆಯ ಶತಕದ ಯಾದವ ಕಾಲೀನ ಮಹಾರಾಷ್ಟ್ರೀ ಪ್ರಾಕೃತದ ಒಂದು ಕವಲೆಂದೂ, ವಿಕಾಸದಲ್ಲಿ ಅದು ಅಲ್ಲಿಂದ ಹೆಚ್ಚು ಮುಂದೆ ಹೋಗಿಲ್ಲವೆಂದೂ ಡಾ. ವಾಸುದೇವ ಕಾಕತ್ಕರ್ ತಿಳಿಸುತ್ತಾರೆ. (26)
ಚಿತ್ಪಾವನರ ಜನಪದ ಗೀತೆಗಳು (ಗಿತ್ತ), ಒಗಟುಗಳು (ಉಖ್ಖಾಣೆ) ವಾಗ್ರೂಢಿಗಳು, ಗಾದೆಗಳು (ಮ್ಹಣ್ಣಿ) ಇವುಗಳ ಸಂಗ್ರಹ, ಸವಿವರ ಅಭ್ಯಾಸ ಆಗಬೇಕಿದೆ. ಇವುಗಳಲ್ಲಿ ಒಂದು ದೊಡ್ಡ ಅಂಶ ನಷ್ಟವಾಗಿದ್ದರೂ ಉಳಿದಿರುವ ಅಂಶ ಗಣನೀಯ ಪ್ರಮಾಣದ್ದು. ಚಿತ್ಪಾವನರ ಭಾಷೆ, ವಿಚಾರಗಳು, ಮನೆವಾರ್ತೇ, ಕೃಷಿ, ಕುಲನಾಮಗಳು ಮೊದಲಾದ ಸಂಗತಿಗಳ ಅಧ್ಯಯನ ಪ್ರತ್ಯೇಕವಾಗಿ ಆಗಬೇಕಾಗಿದೆ.
ಲೇಖಕರು : ಡಾ|| ಎಂ. ಪ್ರಭಾಕರ ಜೋಶಿ, ಮಂಗಳೂರು ಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳು, ವಿಮರ್ಶಕರು ಮತ್ತು ಚಿಂತಕರು