ಭಾರತವೇ ಚಿತ್ಪಾವನ ಕೋಕಣಸ್ಥ ಬ್ರಾಹ್ಮಣರ ಮೂಲ
ಚಿತ್ಪಾವನ ಕೋಕಣಸ್ಥ ಬ್ರಾಹ್ಮಣರು ಮೂಲತಃ ಭಾರತದವರಲ್ಲ, ಅವರು ಇರಾಣ ಅಥವಾ ಏಷ್ಯಾ ಖಂಡದ ದೇಶಗಳಿಂದ ವಲಸೆ ಬಂದು ಇಲ್ಲಿ ನೆಲೆಸಿದವರು ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯವಾದರೆ ಚಿತ್ಪಾವನ ಬ್ರಾಹ್ಮಣ ಸಮುದಾಯ ಯುರೋಪ್ ಖಂಡದ ಮಧ್ಯಭಾಗ ಅಥವಾ ಗ್ರೀಸ್ ದೇಶ ಅಥವಾ ಯುರೋಪ್ ಖಂಡದ ಯಾವುದಾದರೊಂದು ಭಾಗದಿಂದ ಭಾರತಕ್ಕೆ ಬಂದು ನೆಲೆಸಿದವರು ಎಂಬುದು ಇನ್ನು ಕೆಲವರ ವಾದ. ಈ ಎರಡು ವಾದಗಳಿಗೂ ಖಚಿತ ಸಮರ್ಥನೆಯನ್ನು ನೀಡುವಂತಹ ಯಾವ ಪುರಾವೆಗಳೂ ಇಲ್ಲ.ನನ್ನ ಹೇಳಿಕೆ ಹೀಗಿದೆ, ಚಿತ್ಪಾವನ ಕೋಕಣಸ್ಥ ಬ್ರಾಹ್ಮಣರು ಮೂಲತಃ ಭಾರತದವರಾಗಿದ್ದು ಅವರು ಪರಶುರಾಮನೊಂದಿಗೆ ಬಂದು ಅವನಿಂದ ನಿರ್ಮಿತವಾದ ಕೋಕಣಭೂಮಿಯ ಸ್ಥಾಪನೆಯಲ್ಲಿ ಸಹಭಾಗಿಗಳಾದವರು. ಕೋಕಣಭೂಮಿಯ ಸೃಷ್ಟಿ ಪರಶುರಾಮರಿಂದ ಆಯಿತೆನ್ನುವುದನ್ನು ನಮಗೆ ಮಹಾಭಾರತಾದಿ ಪುರಾಣಗಳು ತಿಳಿಸುತ್ತವೆಯಾದರೂ, ಪರಶುರಾಮಾವತಾರದಲ್ಲಿ ಪವಾಡ ಸದೃಶ ಘಟನೆಗಳು ಯಾವುದೇ ಇಲ್ಲದಿರುವುದರಿಂದ ಅದು ಪರಶುರಾಮರೊಬ್ಬರಿಂದಲೇ ಸ್ಥಾಪಿತವಾದುದಲ್ಲ, ಅವರ ಜತೆಯಲ್ಲಿದ್ದ ಸಾವಿರಾರು ಮಂದಿ ಈ ಮಹಾನ್ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರಬೇಕು. ಈ ಕಾರ್ಯದಲ್ಲಿ ಚಿತ್ಪಾವನ ಬ್ರಾಹ್ಮಣ ಸಮುದಾಯವೂ ಇದ್ದಿರಬಹುದು.
ಚಿತ್ಪಾವನ ಬ್ರಾಹ್ಮಣರ ಮೂಲ ಭಾರತವೇ ಎಂಬುದನ್ನು ಸಮರ್ಥಿಸಿಕೊಳ್ಳುವಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸೋಣ :
೧) ಚಿತ್ಪಾವನ ಬ್ರಾಹ್ಮಣರು ಮೂಲತಃ ಮಾಂಸಾಹಾರಿಗಳಲ್ಲ, ಅವರು ಶುದ್ಧ ಬ ಶಾಖಾಹಾರಿಗಳು. ಅವರು ಪಶ್ಚಿಮ ಏಷ್ಯಾ ಅಥವಾ ಯುರೋಪ್ ಖಂಡದಿಂದ ವಲಸೆ ಬಂದವರಾಗಿದ್ದರೆ ಮಾಂಸಾಹಾರವನ್ನೇ ಪ್ರಧಾನವಾದ ಆಹಾರವಾಗಿರಿಸಿಕೊಳ್ಳುತ್ತಿದ್ದರು. ಕೋಕಣ ಪಟ್ಟಿಯಲ್ಲಿರುವ ಸಾರಸ್ವತ ಬ್ರಾಹ್ಮಣರು ಮಾಂಸಾಹಾರಿಗಳು. ಸರಸ್ವತಿ ನದಿ ತೀರದಲ್ಲಿ ವಾಸಿಸುತ್ತಿದ್ದ ಈ ಸಮುದಾಯದ ಮೂಲ ಜನಾಂಗ ಕ್ಷಾಮಡಾಮರಗಳನ್ನೆದುರಿಸಲು ಮಾಂಸ ಭಕ್ಷಣ ಮಾಡಬೇಕಾಯಿತೆನ್ನುವ ಒಂದು ಅಭಿಪ್ರಾಯವಿದೆ. ಒಂದು ಸಮುದಾಯದ ಆಹಾರ ಪದ್ಧತಿ ನೂರಾರು ವರ್ಷಗಳಾದರೂ ಬದಲಾಗುವುದಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಆಹಾರ ಪದ್ಧತಿಯನ್ನು ಮಾನದಂಡವಾಗಿರಿಸಿಕೊಂಡು ಹೇಳುವುದಾದರೆ ಚಿತ್ಪಾವನ ಬ್ರಾಹ್ಮಣರು ಮೂಲತಃ ಭಾರತೀಯರೇ ಎನ್ನುವುದರಲ್ಲಿ ಸಂದೇಹವಿಲ್ಲ.
೨) ನಡೆ-ನುಡಿ, ಆಚಾರ-ವಿಚಾರ, ನೈರ್ಮಲ್ಯ, ಸ್ವಚ್ಛತೆಗಳನ್ನು ಗಮನಿಸಿದಾಗಲೂ ಚಿತ್ಪಾವನ ಬ್ರಾಹ್ಮಣರಲ್ಲಿ ಭಾರತೀಯ ಜೀವನ ಶೈಲಿಯೇ ಎದ್ದು ಕಾಣುತ್ತಿದೆ.
೩) ಚಿತ್ಪಾವನ ಬ್ರಾಹ್ಮಣರು ಹೋಳಿ ಹುಣ್ಣಿಮೆಯ ನಂತರದ ಫಾಲ್ಗುಣ ಬಹುಳ ಪ್ರತಿಪದೆಯಂದು ದೇವ ಪಿತೃಗಳಿಗೆ ವಿಶೇಷವಾದ ಪೂಜಾದಿಗಳನ್ನು ನೆರವೇರಿಸುತ್ತಾರೆ. ಋಗ್ವೇದೀಯ ಕಾಲಮಾನಕ್ಕಿಂತಲೂ ಮೊದಲು ಫಾಲ್ಗುಣ ಬಹುಳ ಪ್ರತಿಪದೆಯಂದು ನೂತನ ಸಂವತ್ಸರದಾಚರಣೆಯಿತ್ತು. 'ವಸಂತೇ ಬ್ರಾಹ್ಮಣೋಗ್ನಿಮಾದಧೀತ್.... ಮುಖಂ ವಾ ಏತತ್ ಋತೂನಾಮ್ | ಯದ್ ವಸಂತಃ | ನ ಪೂರ್ವಯೋ ಫಲ್ಗುನ್ಯೋರಗ್ನಿಮಾದಾಧೀತ್ | ಏಷಾ ವೈ ಜಘನ್ಯಾಃ ರಾತ್ರಿಃ ಸಂವತ್ಸರಸ್ಯ| ಯತ್ ಪೂರ್ವೇ ಫಲ್ಗುಣೀ.....| ಏಷಾ ವೈ ಪ್ರಥಮಾ ರಾತ್ರಿಃ ಸಂವತ್ಸರಸ್ಯ |ಯತ್ ಉತ್ತರೇ ಫಲ್ಗುನೀ | ಮುಖತ ಏವ ಸಂವತ್ಸರಸ್ಯಾಗ್ನಿಮಾದಾಯ || (ತೈತ್ತಿರೀಯ ಬ್ರಾಹ್ಮಣ ೧-೧-೨)
ಮೇಲ್ಕಂಡ ತೈತ್ತಿರೀಯ ಬ್ರಾಹ್ಮಣದ ವಚನದಂತೆ ವೇದಕಾಲದಲ್ಲಿ ಫಾಲ್ಗುಣ ಬಹುಳ ಪ್ರತಿಪದೆಯಂದು ವಸಂತ ಮಾಸವು ಪ್ರಾರಂಭವಾಗಿ ಆ ದಿನದಂದೇ ನೂತನ ಸಂವತ್ಸರಾರಂಭವೂ ಆಗುತ್ತಿತ್ತು. ಜ್ಯೋತಿರ್ಗಣಿತವು ಈ ಕಾಲಮಾನವನ್ನು ೨೫,೦೦೦ ವರ್ಷಗಳ ಹಿಂದೆಯೇ ಒಪ್ಪಿಕೊಂಡಿದೆ. ಹೀಗಿರುವಲ್ಲಿ ಇಂತಹ ಆಚರಣೆಯು ಚಿತ್ಪಾವನ ಬ್ರಾಹ್ಮಣರಲ್ಲಿದ್ದು ಚಿತ್ಪಾವನ ಬ್ರಾಹ್ಮಣರು ಭಾರತೀಯ ವೈದಿಕ ಪರಂಪರೆಗೆ ಸೇರಿದವರು ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಅವರು ಮೂಲತಃ ಭಾರತದವರೇ ಆಗಿದ್ದಾರೆ ಎನ್ನುವುದರಲ್ಲಿ ಸಂದೇಹವಿಲ್ಲ.
೪) ಬೋಡಣವೆಂಬ ದೇವಿ ಆರಾಧನೆ, ಜ್ಯೇಷ್ಠಗೌರಿ ವ್ರತಾಚರಣೆ, ಆಶ್ವಯುಜ ಮಾಸದ ದೇವಿ ನವರಾತ್ರಾಚರಣೆಗಳು ಭಾರತೀಯ ಧಾರ್ಮಿಕ ಪರಂಪರೆಯ ಆಚರಣೆಗಳಾಗಿದ್ದು ಇವುಗಳು ಚಿತ್ಪಾವನರ ಧಾರ್ಮಿಕ ಪರಂಪರೆಯಲ್ಲಿ ಕಂಡುಬರುತ್ತಿವೆ.
೫) ಚಿತ್ಪಾವನರು ಭಾರತೀಯ ಆರ್ಯ ಸಂಸ್ಕೃತಿಯನ್ನು ಹೊಂದಿದ್ದು ಬೌದ್ಧಿಕತೆ, ಸುಂದರ ಅಂಗಸೌಷ್ಠವ, ಕಠಿಣ ಪರಿಶ್ರಮ ಮೊದಲಾದ ಗುಣ ವಿಶೇಷಗಳನ್ನು ಹೊಂದಿದ್ದು ಅಹಿಂಸಾವಾದಿಗಳಾಗಿದ್ದಾರೆ.
೬) ಚಿತ್ಪಾವನ ಬ್ರಾಹ್ಮಣರು ದೇವನಾಗರಿ ಲಿಪಿಯ ಙ, ಞ, ಣ, ನ, ಮ ಮುಂತಾದ ಅನುನಾಸಿಕಗಳನ್ನು ಮತ್ತು ಅನುಸ್ವಾರಗಳನ್ನು ಸ್ಪಷ್ಠವಾಗಿ ಉಚ್ಚರಿಸುತ್ತಾರೆ. ಪಾಶ್ಚಿಮಾತ್ಯ ಜನಾಂಗವು ಇಂತಹ ಉಚ್ಚಾರಗಳನ್ನು ಸ್ಪಷ್ಠವಾಗಿ ಉಚ್ಚರಿಸುವುದಿಲ್ಲ. ಹಾಗಾಗಿ ಚಿತ್ಪಾವನರು ಪಾಶ್ಚಾತ್ಯ ಮೂಲದವರಾಗಿರದೆ ಸಂಸ್ಕೃತವನ್ನು ಬಲ್ಲ ಆರ್ಯವಂಶಜರೇ ಆಗಿದ್ದಾರೆ.
೭) ದೈಹಿಕ ಲಕ್ಷಣಗಳನ್ನು ಗಮನಿಸಿದಾಗಲೂ ಚಿತ್ಪಾವನ ಬ್ರಾಹ್ಮಣರಯ ಇರಾನ್ ಅಥವಾ ಯುರೊಪೀಯ ಜನಾಂಗದಂತೆ ಎತ್ತರ, ದಷ್ಟಪುಷ್ಟವಾಗಿರದೆ ಸಾಮಾನ್ಯ ಆಳ್ತನವನ್ನು ಹೊಂದಿದ ಜನಾಂಗವಾಗಿದೆ.
೮) ವೇದಪಠಣ ಮಾಡುವವರಿಗೆ ಸಂಸ್ಕೃತದ ಉಚ್ಚಾರ ಸ್ಪಷ್ಟವಾಗಿರಬೇಕು. ಭಾರತದ ಅನ್ಯ ಬ್ರಾಹ್ಮಣ ಸಮುದಾಯಗಳಿಗೆ ಹೋಲಿಸಿದಲ್ಲಿ ಚಿತ್ಪಾವನ ಬ್ರಾಹ್ಮಣ ಸಮುದಾಯವು ಸಂಸ್ಕೃತದ ಸ್ಪಷ್ಟ ಉಚ್ಚಾರ ಮತ್ತು ವೇದಮಂತ್ರ ಪಠಣದಲ್ಲಿ ಆರೋಹಣ ಮತ್ತು ಅವರೋಹಣಗಳನ್ನು ಸ್ಪಷ್ಠವಾಗಿ ಉಚ್ಚರಿಸುತ್ತದೆ. ಯಾಕೆಂದರೆ ಈ ಸಮುದಾಯ ಯಜನ-ಯಾಜನ, ಅಧ್ಯಯನ-ಅಧ್ಯಾಪನಗಳಿರುವ ವೈದಿಕ ಪರಂಪರೆಯಲ್ಲಿ ತನ್ನುನ್ನು ತೊಡಗಿಸಿಕೊಂಡಿತ್ತು. ಉತ್ತರ ಭಾರತೀಯ ಬ್ರಾಹ್ಮಣ ಸಮುದಾಯವು ಸ, ಷ, ಜ್ಞ, ಯ, ಳ, ಮೊದಲಾದುವುಗಳನ್ನು ಶುದ್ಧವಾಗಿ ಉಚ್ಚರಿಸುವುದಿಲ್ಲ. ಅವರು 'ಸ್ನಾನ'ವನ್ನು 'ಅಸ್ನಾನ'ವೆನ್ನುವುದಿದೆ. 'ಪುರುಷ' ಎನ್ನುವುದು 'ಪುರುಖ', 'ಶೀರ್ಷ'ವು 'ಶೀರ್ಖ'ವಾಗಿಯೂ, 'ಯಜ್ಞ'ವು 'ಯಗ್ಯ' ಅಥವಾ 'ಜಜ್ಞ'ವಾಗಿಯೂ ಅವರ ಉಚ್ಚಾರದಲ್ಲಿ ಮಾರ್ಪಾಡಾಗುತ್ತದೆ. ದಕ್ಷಿಣ ಭಾರತದ ಕೆಲವು ಬ್ರಾಹ್ಮಣ ಜನಾಂಗಕ್ಕೆ 'ತ' ಮತ್ತು 'ಥ' ಗಳ ಉಚ್ಚಾರದಲ್ಲಿ ಭೇದವಿಲ್ಲ. ಅವರು 'ತಿರು' ಎಂಬುದನ್ನು "ಥಿರು' ಎಂಬುದಾಗಿ ಉಚ್ಚರಿಸುತ್ತಾರೆ. 'ಲ', 'ವ', 'ಳ' ಮತ್ತು 'ನ', 'ವ', 'ಣ'ಗಳನ್ನು ದೇಶಸ್ಥರು ಸರಿಯಾಗಿ ಉಚ್ಚರಿಸುವುದಿಲ್ಲ. ವೈದಿಕ ಪರಂಪರೆಯಿಂದ ಬಂದ ಚಿತ್ಪಾವನರದು ಶುದ್ಧ ವೈದಿಕವಾಣಿ (ವೇದ ಮಂತ್ರಗಳನ್ನು ಸ್ಪಷ್ಠವಾಗಿ ಉಚ್ಚರಿಸುವಿಕೆ)
೯) ಪರಶುರಾಮರು ಕೋಕಣಪಟ್ಟಿಗೆ ಬರುವಾಗ ಅವರ ಜತೆಯಲ್ಲಿದ್ದ ಹದಿನಾಲ್ಕು ಮಂದಿ ಬ್ರಾಹ್ಮಣರಿಂದ ಪ್ರಾರಂಭಗೊಂಡ ಹದಿನಾಲ್ಕು ಗೋತ್ರಗಳಲ್ಲಿ ಚಿತ್ಪಾವನರು ಗುರುತಿಸಲ್ಪಡುತ್ತಾರೆ. ಇದರ ಹೊರತಾಗಿ ಸಮುದ್ರದಲ್ಲಿ ತೇಲಿ ಬಂದ ಹದಿನಾಲ್ಕು ವಿದೇಶೀಯ ಶವಗಳನ್ನು ಚಿತೆಯ ಮೇಲಿಟ್ಟು ಅವುಗಳಿಗೆ ಜೀವವಿತ್ತು ಅವುಗಳಿಂದ ಚಿತ್ಪಾವನ ಬ್ರಾಹ್ಮಣರ ಉಗಮವಾಯಿತೆನ್ನುವ ಕಟ್ಟುಕಥೆಗಳನ್ನು ನಂಬಲಾಗುವುದಿಲ್ಲ. 'ಚಿತಿ ಪಾವನ' ಎನ್ನುವುದನ್ನು 'ಚಿತೆಯಿಂದ ಪಾವನಗೊಂಡವರು' ಎಂಬ ತಪ್ಪು ಭಾಷಾಂತರಗಳಿಂದ ವ್ಯಾಖ್ಯಾನಿಸಲಾಗಿದೆಯೇ ಹೊರತು ವಸ್ತುಸ್ಥಿತಿ ಹಾಗಲ್ಲ. 'ಚಿತ್' ಎಂಬುದು ಶರೀರ ಮತ್ತು ಶರೀರದ ಹೊರಗಡೆ ವ್ಯಾಪಿಸಿರುವ ಶಕ್ತಿ. ಇದನ್ನೇ ಪುರುಷ, ಪರಮಾತ್ಮ, ಪರಬ್ರಹ್ಮ, ಕೈವಲ್ಯ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಯಾವ ಜೀವನು ಈ ಮೇಲಿನ ಪರಮಾತ್ಮ ಸ್ವರೂಪವನ್ನು ತನ್ನೊಳಗೆ ಧಾರಣ ಮಾಡಿರುವನೋ ಅವನೇ ಚಿತ್ಪಾವನ. 'ಚಿತ್ತ' ಎಂಬುದಕ್ಕೆ ಮನ, ಬುದ್ಧಿ, ವಿಚಾರ, ಜ್ಞಾನ ಎಂಬ ಸಾಂದರ್ಭಿಕ ಅರ್ಥಗಳೂ ಇವೆ. ಯಾರ ಬುದ್ದಿ, ಮನಸ್ಸು, ವಿಚಾರ, ಜ್ಞಾನಗಳು ಪರಿಶುದ್ಧವಾಗಿವೆಯೊ ಅವರೆ ಚಿತ್ಪಾವನರು.
ಚಿತ್ಪಾವನ ಬ್ರಾಹ್ಮಣರು ಸಂಖ್ಯಾತ್ಮಕವಾಗಿ ಗಣನೀಯರಲ್ಲದಿದ್ದರೂ ಅವರ ಸಿದ್ಧಿ ಸಾಧನೆಗಳು ಅಗಣಿತ. ಹದಿನಾಲ್ಕು ಋಷಿ ಗೋತ್ರಗಳಿಂದ ಗುರುತಿಸ್ಪಡುವ ಚಿತ್ಪಾವನರಲ್ಲಿ ಒಂಭತ್ತು ಗೋತ್ರಗಳು ಋಗ್ವೇದಿಯ ಋಷಿಗಳಿಗೆ ಸಂಬಂಧಪಟ್ಟವುಗಳು. ಈ ವಿಚಾರವೊಂದೇ ಚಿತ್ಪಾವನರು ಭಾರತೀಯ ಮೂಲದವರು ಎಂದು ದೃಢಪಡಿಸುವುದು. ಇನ್ನು ರಾಷ್ಟ್ರಪ್ರೇಮದ, ರಾಷ್ಟ್ರಭಕ್ತಿಯ ವಿಚಾರ ಬಂದಾಗ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವರ್ಕರ, ಫಡಕೆ, ಠಿಳಕ, ಗೋಖಲೆ, ರಾನಡೆ ಮುಂತಾದ ಸಮರ್ಥ ಚಿತ್ಪಾವನ ಸ್ವಾತಂತ್ರ್ಯ ಹೋರಾಟಗಾರರು ಇತಿಹಾಸವನ್ನೇ ನಿರ್ಮಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿ, ವೈದಿಕಧರ್ಮ ಪರಿಪಾಲನೆ ಮೊದಲಾದ ವಿಷಯಗಳಲ್ಲಿ ಅಗ್ರೇಸರರಾಗಿ ನಿಂತ ಚಿತ್ಪಾವನರ ಮೂಲ ಭಾರತವೇ ಆಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ.
(೨೦೦೮ರ ಜಾಗತಿಕ ಚಿತ್ಪಾವನ ಸಮ್ಮೇಳನದ ಸ್ಮರಣ ಸಂಚಿಕೆ 'ಸ್ಮೃತಿ ಗಂಧ'ದಲ್ಲಿ ಪ್ರಕಟವಾದ ಡಾ|| ಪ.ವಿ.ವರ್ತಕ್ ಅವರ ಮರಾಠಿ ಲೇಖನ 'ಚಿತ್ಪಾವನ ಕೋಕಣಸ್ಥ ಬ್ರಾಹ್ಮಣಾಂಚೆ ಮೂಳ ಭಾರತಾತಚ್' ಎಂಬ ಮರಾಠಿ ಲೇಖನದ ಕನ್ನಡ ಭಾವಾನುವಾದ)