ಶ್ರೀ ಹರಿಹರೇಶ್ವರ ದೇವಸ್ಥಾನ ದುರ್ಗ,ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ – 574121
ಮುರಪುರಹರ ಲಕ್ಷ್ಮೀಪಾರ್ವತೀ ಕೇಲಿಲೋಲಮ್ | ಸ್ಫುರದಸಿತಸಿತಾಂಗ ಶಂಖಚಕ್ರ ತ್ರಿಶೂಲ |
ಪರತರಗುರುಮೂರ್ತೇ ಪಾವನಾಪಾರಕೀರ್ತೇ | ಹರಿಹರತವಪಾದಾಂಭೋಜಯುಗ್ಮಂ ನತೋಸ್ಮಿ ||
ಶ್ರೀ ಮನ್ಮಹಾವಿಷ್ಣುವಿನ ಆರನೆಯ ಅವತಾರವಾದ ಭಗವಾನ್ ಶ್ರೀ ಪರಶುರಾಮನ ನೂತನ ಸೃಷ್ಟಿಯ ಭಾಗವಾದ ಉಡುಪಿ ಜಿಲ್ಲೆಯ (ಹಿಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ) ಕಾರ್ಕಳ ತಾಲೂಕಿನ ದುರ್ಗ ಗ್ರಾಮವು ಕಾರ್ಕಳ ಪೇಟೆಯಿಂದ ಏಳು ಕಿ.ಮೀ. ದೂರದಲ್ಲಿದೆ. ಜೀವ ವೈವಿಧ್ಯಕ್ಕೆ ಹೆಸರಾದ ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ಈ ಪುಟ್ಟ ಗ್ರಾಮವು ಸುತ್ತಲೂ ವನರಾಜಿಯಿಂದ ಕಂಗೊಳಿಸುತ್ತಿದ್ದು, ಅಲ್ಲಲ್ಲಿ ತಲೆ ಎತ್ತಿ ನಿಂತಿರುವ ಗುಡ್ಡಬೆಟ್ಟಗಳ ನಡುವೆ ಶೋಭಾಯಮಾನವಾಗಿದೆ. ಅಡಿಕೆ, ತೆಂಗು, ಬಾಳೆ ಮತ್ತು ಇತ್ತೀಚಿನ ದಿನಗಳಲ್ಲಿ ತಲೆಯೆತ್ತಿ ನಿಂತ ರಬ್ಬರ್ ತೋಟಗಳ ಪ್ರಶಾಂತ ವಾತಾವರಣದಿಂದ ಕೂಡಿದ ಈ ಪ್ರದೇಶವು ಮಲೆಬೆಟ್ಟು, ದುರ್ಗ, ತೆಳ್ಳಾರು ಎಂಬ ಮೂರು ವಿಭಾಗಗಳನ್ನು ಹೊಂದಿದೆ. ಒಂದು ವಿಭಾಗದಿಂದ ಮತ್ತೊಂದು ವಿಭಾಗದ ನಡುವೆ ಅರಣ್ಯ ಆವರಿಸಿಕೊಂಡಿದೆ. ಈ ಹಿಂದೆ ಈ ಪ್ರದೇಶಕ್ಕೆ ಮಲೆಬೆಟ್ಟು ಗ್ರಾಮವೆಂಬ ಹೆಸರಿದ್ದುದು ಶಾಸನಗಳಿಂದ ತಿಳಿದು ಬರುತ್ತದೆ. ಜೈನ ಅರಸರು ಕಟ್ಟಿಸಿದ ಕೋಟೆ ಹಾಗೂ ಗುಡ್ಡ ಬೆಟ್ಟಗಳಿಂದ ಆವೃತವಾದ ದುರ್ಗಮ ಪ್ರದೇಶದಿಂದಾಗಿ ಈ ಗ್ರಾಮಕ್ಕೆ ‘ದುರ್ಗ’ವೆಂಬ ಹೆಸರು ಬಂದಿರಬಹುದೆಂಬ ಅಭಿಮತವಿದೆ.
ಇಂತಹ ದುರ್ಗಮ ಪ್ರದೇಶದಲ್ಲಿ ಮಹಾರಾಷ್ಟ್ರದ ರತ್ನಾಗಿರಿ, ಚಿಪ್ಳೂಣ್ ಮುಂತಾದ ಕೊಂಕಣ ಪಟ್ಟಿಯ ಪ್ರದೇಶದಿಂದ ವಲಸೆ ಬಂದು ಅಡಿಕೆ ಕೃಷಿಯನ್ನು ಅವಲಂಬಿಸಿ ನೆಲೆನಿಂತ ಚಿತ್ಪಾವನರು (ಕೋಕಣಸ್ಥರು) ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಅವಶ್ಯಕತೆಗಳಿಗಾಗಿ ಹುಟ್ಟು ಹಾಕಿದ ಶ್ರದ್ಧಾ ಕೇಂದ್ರವೇ ಶ್ರೀ ಹರಿಹರೇಶ್ವರ ದೇವಸ್ಥಾನ. ಸುಮಾರು 300 ವರ್ಷಗಳ ಹಿಂದೆ ಸ್ಥಾಪನೆಯಾದ ಈ ದೇವಸ್ಥಾನವು ಚಿತ್ಪಾವನ ಜನಸಮುದಾಯದ ದೇವಸ್ಥಾನಗಳಲ್ಲೇ ಪ್ರಪ್ರಥಮವಾಗಿ ಸ್ಥಾಪಿಸಲ್ಪಟ್ಟದ್ದಾಗಿದೆ. ಇಲ್ಲಿ ಹರಿಹರರನ್ನು ಆರಾಧಿಸಿಕೊಂಡು ಬಂದಿರುವುದರಿಂದ ದ್ವೈತಾದ್ವೈತ ಸಂಘರ್ಷಗಳಾಗಲೀ, ಹರಿಹರರಲ್ಲಿ ಭೇದ ಮುಂತಾದ ಕಲಹಗಳಿಗೆ ಆಸ್ಪದವೀಯದೆ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಂತಿರುವ ಶ್ರೀ ಹರಿಹರೇಶ್ವರನು ಭಕ್ತರ ಕಾಮಧೇನುವಾಗಿ ನೆಲೆನಿಂತಿದ್ದಾನೆ. ಕರ್ಣಾಕರ್ಣಯಾಗಿ ತಿಳಿದುಬರುವಂತೆ, ಹಿಂದೆ ಟಿಪ್ಪುಸುಲ್ತಾನನು ದುರ್ಗ ಗ್ರಾಮವನ್ನು ಹೈಪಾಜೆ ಮರಾಠೆ ಕೃಷ್ಣಭಟ್ಟರಿಗೆ (ಆ ಮೇಲೆ 1ನೇ ಕೃಷ್ಣಭಟ್ಟನೆಂದು ಪ್ರಸಿದ್ಧರಾದವರು) ಆಳ್ವಿಕೆಗಾಗಿ ತಾಮ್ರಶಾಸನ ಸಹಿತ ನೀಡಿದ್ದನೆಂದು ಊರಿನ ಹಿರಿಯರು ತಿಳಿಸುತ್ತಾರೆ. ಈ ಹೈಪಾಜೆ ಮರಾಠೆ ವಂಶದ 2ನೇಯ ಕೃಷ್ಣಭಟ್ಟರು ತಮ್ಮ ಹೆಸರಿನಲ್ಲಿರುವ ದುರ್ಗಗ್ರಾಮದ ಭೂ ಒಡೆತನದ ಖಾತೆಯನ್ನು ಶ್ರೀ ಹರಿಹರೇಶ್ವರ ದೇವರ ಚರಣಾರವಿಂದಗಳಿಗೆ ಸಮರ್ಪಿಸಿದ್ದು ಜನಜನಿತವಾಗಿದೆ.
ಶ್ರೀ ಹರಿಹರೇಶ್ವರ ದೇವಾಲಯವು ವೇದೋಕ್ತ ವಿಧಾನ ರೀತ್ಯಾ ಸ್ಥಾಪನೆಗೊಂಡು ವೈದಿಕ ಸಂಪ್ರದಾಯದ ತ್ರಿಕಾಲ ಪೂಜಾ ಪದ್ಧತಿ ಹಾಗೂ ಉತ್ಸವಾದಿಗಳನ್ನು ನಡೆಸಿಕೊಂಡು ಬರುತ್ತಿದೆ. ಪ್ರಾತಃಕಾಲದಲ್ಲಿ ಕವಾಟೋದ್ಘಾಟನ, ನಿರ್ಮಾಲ್ಯ ವಿಸರ್ಜನ ಹಾಗೂ ಅಭಿಷೇಕಗಳು, ಮಧ್ಯಾಹ್ನ ಅಥರ್ವಶೀರ್ಷ, ಶ್ರೀಸೂಕ್ತ, ಪುರುಷಸೂಕ್ತ, ಶ್ರೀ ರುದ್ರಾಧ್ಯಾಯಗಳೊಡನೆ ಷೋಡಶೋಪಚಾರ ಪೂಜೆ ಮತ್ತು ರಾತ್ರಿ ಪೂಜೆಯು ಷೋಡಶೋಪಚಾರ ಪುರಸ್ಸರ ನಡೆಯುತ್ತದೆ. ಈ ದೇವಸ್ಥಾನದ ನೈಋತ್ಯ ಭಾಗದ ನೂತನ ಗುಡಿಯಲ್ಲಿ ಶತಮಾನದಷ್ಟು ಹಳೆಯದಾದ ಬಲಮುರಿ ಶ್ರೀ ಗಣಪತಿ ದೇವರ ಪ್ರತಿಷ್ಟೆಯನ್ನು ಪಾರ್ಥಿವ ಸಂ|ರದ ಜ್ಯೇಷ್ಠ ಶು|| ಚತುರ್ಥಿಯಂದು (ಜೂನ್ 11, 2005) ನಡೆಸಲಾಯಿತು. ಇಲ್ಲಿ ಗಣಪತಿಯು ಶ್ರೀ ಹರಿಹರೇಶ್ವರನೊಂದಿಗೆ ಭಕ್ತಾಭೀಷ್ಟಪ್ರದನಾಗಿ ಅರ್ಚಿಸಲ್ಪಡುತ್ತಿದ್ದಾನೆ. ಶ್ರೀ ದೇವಳದ ಹೊರ ಪ್ರಾಕಾರದಲ್ಲಿ ಆಗ್ನೇಯ ದಿಕ್ಕಿಗೆ ಉತ್ತರಾಭಿಮುಖವಾಗಿ ಶ್ರೀ ರಕ್ತೇಶ್ವರಿ ಗುಡಿಯಿದೆ. ಇಲ್ಲಿ ಇಷ್ಟದೇವತೆ, ಶ್ರೀ ನಂದಿಗೋಣ, ಶ್ರೀ ರಕ್ತೇಶ್ವರಿ, ಶ್ರೀ ಕೊಡಮಂತಾಯ ಹಾಗೂ ವ್ಯಾಘ್ರಚಾಮುಂಡಿ ದೈವಗಳು ಆರಾಧನೆಗೊಳ್ಳುತ್ತಿವೆ. ಶ್ರೀ ದೇವಳದ ಸಮೀಪ ಗೋಕುಲಕ್ಕೆ ಹೋಗುವ ದಾರಿಯ ಬದಿಯ ದೈವಸ್ಥಾನದಲ್ಲಿ ಕರ್ಲುಟ್ಟಿ, ಕಲ್ಕುಡ, ಕಾಳಮ್ಮ ಎಂಬ ದೈವಗಳು (ಇರ್ಲುಭೂತಗಳು=ರಾತ್ರಿ ದೈವಗಳು) ಆರಾಧನೆಗೊಳ್ಳುತ್ತಿವೆ. ಶ್ರೀ ದೇವಳದ ಸಮೀಪವಿರುವ ಠೊಸರಂಡ ಎಂಬ ಆಸ್ತಿಯು ಶ್ರೀ ದೇವಳಕ್ಕೆ ಸಮರ್ಪಣೆಗೊಂಡ ನಂತರ ಈ ಸ್ಥಳದಲ್ಲಿರುವ ಒರ್ತೆ, ಪಂಜುರ್ಲಿ ಹಾಗೂ ಠೊಸರ ಪಂಜುರ್ಲಿ ದೈವಗಳು ಆರಾಧನೆಗೊಳ್ಳುತ್ತಿವೆ.
ಶ್ರೀ ದೇವಳದ ಪೂರ್ವಭಾಗದಲ್ಲಿರುವ ವನಭೋಜನ ಎಂಬ ಪ್ರದೇಶದ ಅಶ್ವತ್ಥಕಟ್ಟೆಯಲ್ಲಿ ದೇವಳಕ್ಕೆ ಸಂಬಂಧಿಸಿದ ನಾಗಸನ್ನಿಧಿಯಿದ್ದು ಇಲ್ಲಿ ದುರ್ಗದ ಕೋಟೆಯಿಂದ ತರಿಸಲಾದ ನಾಗಮೂರ್ತಿಯು ಇತರ ನಾಗಗಳೊಡನೆ ಆರಾಧನೆಗೊಳ್ಳುತ್ತಿದೆ. ಠೊಸರ ಆಸ್ತಿಯ ನಾಗಝರಿ ಬಳಿ ಇರುವ ನಾಗಸನ್ನಿಧಿಯಲ್ಲಿಯೂ ನಾಗಾರಾಧನೆ ನಡೆಯುತ್ತಿದೆ. ಹೀಗೆ ಪರಿವಾರ ಸಹಿತನಾದ ಶ್ರೀ ಹರಿಹರೇಶ್ವರ ಮಹಾಸ್ವಾಮಿಯು ನೆಲೆನಿಂತು ಭಕ್ತರಿಂದ ಪೂಜಿತನಾಗಿ ಶೈವ-ವೈಷ್ಣವ ಸೌಹಾರ್ದತೆಯ ದ್ಯೋತಕನಾಗಿ ಭಕ್ತಾಭೀಷ್ಟಪ್ರದನಾಗಿದ್ದಾನೆ.