ಕೇಶವ ಸೀತಾರಾಮ ಜೋಗಳೇಕರ್ ಧಾರ್ಮಿಕ ಕ್ಷೇತ್ರಧಾರ್ಮಿಕ ಕ್ಷೇತ್ರ

ಪೌರೋಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಜೋಗಳೇಕರ್ ಯಜ್ಞಾನುಷ್ಠಾನ ತತ್ಪರರಾಗಿ ದೇಶದಾದ್ಯಂತ ನಡೆದ ಅಗ್ನಿಷ್ಟೋಮವೇ ಮೊದಲಾದ ಸುಮಾರು ನಲವತ್ತಕ್ಕೂ ಮಿಕ್ಕಿ ಸೋಮ (ಶ್ರೌತ) ಯಾಗಗಳಲ್ಲಿ ಮುಖ್ಯ ಋತ್ವಿಜರಾಗಿ ಭಾಗವಹಿಸಿರುತ್ತಾರೆ. ಅಗಣಿತ ಸ್ಮಾರ್ತಯಜ್ಞಗಳಲ್ಲೂ ಭಾಗವಹಿಸಿ ಬ್ರಾಹ್ಮಣನ ಆದ್ಯ ಕರ್ತವ್ಯಗಳಲ್ಲಿ ಒಂದಾದ ಯಾಜನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿಭಾಜನರಿವರು. ವೇದಾಧ್ಯಯನ, ವೇದಸಂರಕ್ಷಣಗಳನ್ನು ಮಾಡುತ್ತಾ ಐವತ್ತಕ್ಕೂ ಮೀರಿದ ಸಂಖ್ಯೆಯ ವೇದ ವಿದ್ವಾಂಸರನ್ನು, ಕ್ರಮಪಾಠಿಗಳನ್ನು ಸಮಾಜಕ್ಕೆ ನೀಡಿ ಗುರುಪರಂಪರೆಯ ಜವಾಬ್ದಾರಿಯನ್ನು ನಿರ್ವಹಿಸಿದ ಸನಾತನ ಆರ್ಷ ಬದುಕು ಇವರದು. ಮರಾಠಿ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರೌಢಿಮೆಯನ್ನು ಹೊಂದಿದ್ದ ಇವರು ಭಾರತದಾದ್ಯಂತ ಸಂಚರಿಸಿ ವೇದಶಾಸ್ತ್ರ-ಪರಂಪರೆ-ಪುರಾಣ-ಆಚರಣೆ-ಲೋಕಾನುಭವಗಳ ಬಗೆಗೆ ಉಪನ್ಯಾಸ, ಪ್ರವಚನಗಳನ್ನು ನೀಡಿ ಸಮಾಜದಲ್ಲಿ ಧರ್ಮಜಾಗೃತಿಯನ್ನು ಉಂಟು ಮಾಡಿದ್ದಾರೆ. ತಮ್ಮ ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಸತ್ಯಭಾಮಾ ಅವರೊಡನೆ ಗೃಹಸ್ಥಾಶ್ರಮ ಸ್ವೀಕರಿಸಿದ ಶ್ರೀಯುತರು ಪುತ್ರವಂತರಾಗಿ ಗೃಹಸ್ಥಾಶ್ರಮ ಧರ್ಮ ಪರಿಪಾಲನೆಯಲ್ಲೂ ತಮ್ಮ ಕರ್ತವ್ಯಗಳನ್ನು ನೆರವೇರಿಸಿದ್ದಾರೆ.
ಸರಸ್ವತಿಬಾಯಿ ರಾಜವಾಡೆಸಾಹಿತ್ಯ

ಕನ್ನಡ ಸಾರಸ್ವತಲೋಕ ಕಂಡ ಆಧುನಿಕ ಚಿಂತನೆಯ ಈ ಬರಹಗಾರ್ತಿ ತನ್ನ ವಿವಾಹಾನಂತರ ಚಿತ್ಪಾವನಳು ಎಂಬುದು ನಾವು ಹೆಮ್ಮೆಪಡುವ ವಿಚಾರ.'ಗಿರಿಬಾಲೆ' ಕಾವ್ಯನಾಮದ ಸರಸ್ವತಿಬಾಯಿ ರಾಜವಾಡೆ ಜನಿಸಿದ್ದು ಅಕ್ಟೋಬರ್ 3, 1913.ತಾಯಿಯ ಹೊಟ್ಟೆಯಲ್ಲಿರುವಾಗಲೇ ಸಾಂಸಾರಿಕ ಕಾರಣಗಳಿಗಾಗಿ ಮನೆಬಿಟ್ಟ ತಂದೆ ನಾರಾಯಣರಾವ್ ಮತ್ತೆ ಮನೆಗೆ ಬಂದಿದ್ದು ಹೆಣವಾಗಿ. ಹೀಗಾಗಿ ತಾಯಿ ಕಮಲಾಬಾಯಿಗೆ ಮಗಳೆಂದರೆ ಪರಮ ದ್ವೇಷ. ಐದು ವರ್ಷದ ಮಗು ಹೊಟ್ಟೆಪಾಡಿಗಾಗಿ ಹೂ ಮಾರಿತು, ಅವರಿವರ ಮನೆಯ ಮುಸುರೆ ತೊಳೆಯಿತು. ರೂಪವಿದ್ದುದರಿಂದ ಕೆಲಕಾಲ ರಂಗಭೂಮಿ ಮತ್ತು ಮೂಕಿ ಸಿನೆಮಾಗಳಲ್ಲಿ ಬಾಲನಟಿಯಾಗಿ ದುಡಿಯಿತು. ಈ ಎಲ್ಲವೂ ಹಾಳು ಹೊಟ್ಟೆಪಾಡಿಗಾಗಿ. ವರುಷ ಹದಿನೈದಕ್ಕೆ 51ರ ವಿಧುರ ಅಂಬಿಕಾಪತಿ ರಾಯಶಾಸ್ತ್ರೀ ರಾಜವಾಡೆಯೊಂದಿಗೆ ಮದುವೆ. ರಾಜವಾಡೆ ಆಗರ್ಭ ಶ್ರೀಮಂತ. ಈ ಎಳೆಯ ಹೆಣ್ಣನ್ನು ಪಡೆಯುವುದಕ್ಕಾಗಿ ಆ ಕಾಲದಲ್ಲಿ ಆತ ಮದುವೆ ದಲ್ಲಾಳಿಗಳಿಗೆ ಕೊಟ್ಟದ್ದು ಹತ್ತುಸಾವಿರ ರೂಪಾಯಿಗಳು!
ಸಂತ ಗುರುದೇವ ರಾನಡೆಸಮಾಜ ಸೇವೆ

ಗುರುದೇವರು ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಹಾ ಮೇಧಾವಿ ವಿದ್ಯಾರ್ಥಿಯಾಗಿ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಅನೇಕ ವಿದ್ಯಾರ್ಥಿ ವೇತನಗಳನ್ನು ಮತ್ತು ಚಿನ್ನದ ಪದಕಗಳನ್ನು ಪಡೆದವರು.1914ರಲ್ಲಿ ತತ್ವಶಾಸ್ತ್ರದಲ್ಲಿ ಎಂ.ಎ.ಪದವಿಯನ್ನು ಕುಲಪತಿಗಳ ಚಿನ್ನದ ಪದಕದೊಂದಿಗೆ ಪಡೆದರು. ಮುಂದೆ ಪಾಶ್ಚಾತ್ಯ ಮತ್ತು ಪೌರ್ವಾತ್ಯ ತತ್ವಶಾಸ್ತ್ರಗಳ ಬಗೆಗೆ ವಿಶೇಷ ಅಧ್ಯಯನವನ್ನು ನಡೆಸಿ ಇಸವಿ 1914 ಮತ್ತು 1924 ರ ಅವಧಿಯಲ್ಲಿ ಪುಣೆಯ ಫರ್ಗುಸನ್ ಕಾಲೇಜು ಮತ್ತು ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜುಗಳಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಗುರುದೇವರಾನಡೆಯವರ ಅನಾರೋಗ್ಯ, ಸಾಂಸಾರಿಕ ಕಷ್ಟ ಕೋಟಲೆಗಳು ಅವರ ಆಧ್ಯಾತ್ಮ ಸಾಧನೆಯ ದಾರಿಯಲ್ಲಿ ಅವರ ಮನೋಸ್ಥೈರ್ಯವನ್ನು ಅಡಿಗಡಿಗೆ ಪರೀಕ್ಷಿಸುತ್ತಿದ್ದರೂ ಸದ್ಗುರುವಿನ ಪರಮ ಕೃಪೆಯಿಂದ ಅವರು ಇವೆಲ್ಲವನ್ನು ಲೀಲಾಜಾಲವಾಗಿ ಎದುರಿಸಿದರು.
ಎನ್.ಕೆ. ಜೋಗಳೇಕರ್ಸೇವಾ ಕ್ಷೇತ್ರ

ಜ್ಯೋತಿಷ್ಯಶಾಸ್ತ್ರದಲ್ಲಿ ಬಹುಮುಖ ಸೇವೆಯನ್ನು ಗೈದ ಶ್ರೀ ಎನ್.ಕೆ. ಜೋಗಳೇಕರ್ ಅವರ ಜನನ ಜೂನ್ 10, 1931ರಂದು ಧಾರವಾಡ ಜಿಲ್ಲೆಯ ಹಾವೇರಿ ತಾಲೂಕಿನ ಭರಡಿ ಗ್ರಾಮದಲ್ಲಿ. ತಂದೆ ಅಧ್ಯಾಪಕ ಮತ್ತು ಜ್ಯೋತಿಷಿ. ತಂದೆ ಕಲ್ಲೋಪಂತ ಜೋಗಳೇಕರ ಮತ್ತು ತಾಯಿ ಉಮಾಬಾಯಿ. ಈ ದಂಪತಿಗಳ ಒಂಭತ್ತು ಮಕ್ಕಳಲ್ಲಿ ಜೋಗಳೇಕರ್ ಐದನೆಯವರು. ಜೋಗಳೇಕರ್ ಬಾಲ್ಯದಲ್ಲಿ ಬಡತನದ ಬೇಗೆಯನ್ನು ಅನುಭವಿಸಿದವರು. ಶಿಕ್ಷಣದ ಸಮಯದಲ್ಲೇ ಮನೆಮನೆಗೆ ದಿನಪತ್ರಿಕೆಗಳನ್ನು ವಿತರಿಸುವ ಕೆಲಸ ಮಾಡಿಕೊಂಡು ಎಸ.ಎಸ್.ಎಲ್.ಸಿ.ಯವರೆಗೆ ಶಿಕ್ಷಣವನ್ನು ಪಡೆದರು. ಆಯುರ್ವೇದದಲ್ಲಿ ನಾಲ್ಕು ವರ್ಷಗಳ ಡಿಪ್ಲೊಮಾ ಕೋರ್ಸನ್ನು ಕಲಿತವರು. 1952ರಿಂದ 1957ರವರೆಗೆ ಪಿ.ಡಬ್ಲ್ಯು.ಡಿ. ಇಲಾಖೆಯಲ್ಲಿ ಸೇವೆಗೈದು ಜ್ಯೋತಿಷ್ಯದ ಬಗೆಗಿನ ತೀವ್ರವಾದ ಆಸಕ್ತಿಯಿಂದ ನೌಕರಿಯನ್ನು ತ್ಯಜಿಸಿದರು. 1961ರಲ್ಲಿ ಜ್ಯೋತಿಷ್ಯಶಾಸ್ತ್ರಕ್ಕೆ ಸಂಬಂಧಿಸಿದ 'ಜ್ಯೋತಿರ್ವಾಣಿ' ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರೂ ಜ್ಯೋತಿಶ್ಯಾಸ್ತ್ರಗಳ ಬಗೆಗೆ ಬರೆಯುವ ಲೇಖಕರ ಕೊರತೆಯಿಂದಾಗಿ ಅವರು ಪತ್ರಿಕೆಯನ್ನು ನಿಲ್ಲಿಸಬೇಕಾಯಿತು. ಜ್ಯೋತಿಶ್ಯಾಸ್ತ್ರಕ್ಕೆ ಸಂಬಂಧಿಸಿದಂತೆ ಜೋಗಳೇಕರ್ ಅವರ ವಿದ್ವತ್ಪೂರ್ಣ ಲೇಖನಗಳು ಕರ್ನಾಟಕದ ಪ್ರಖ್ಯಾತ ದೈನಿಕ, ಸಾಪ್ತಾಹಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ವೇ| ಮೂ| ಹರಿಕಥಾ ವಿದ್ವಾನ್ ಸೀತಾರಾಮ ಫಾಟಕ್ಧಾರ್ಮಿಕ ಕ್ಷೇತ್ರ

ಕರ್ನಾಟಕದಾದ್ಯಂತ ಸಂಚರಿಸಿ ಕನ್ನಡ, ಮರಾಠಿ, ತುಳು ಮತ್ತು ಕೊಂಕಣಿ ಭಾಷೆಗಳಲ್ಲಿ ಹರಿಕಥಾ ಕೀರ್ತನೆಗಳನ್ನು ಮಾಡಿದರು.60ರ ದಶಕದಲ್ಲಿ ಚಾತುರ್ಮಾಸ್ಯದ ಸಂದರ್ಭದಲ್ಲಿ ಕಾರ್ಕಳದ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿದಿನ ಹರಿಕೀರ್ತನೆಯನ್ನು ನಡೆಸಿದ ಹಿರಿಮೆ ಇವರದು. ಕೃಷಿ ಕ್ಷೇತ್ರದಲ್ಲಿ ಹೊಸತೇನನ್ನಾದರೂ ಸಾಧಿಸಬೇಕೆಂಬ ಹಂಬಲದಿಂದ ತಮ್ಮ ಕೃಷಿ ಕ್ಷೇತ್ರದಲ್ಲಿ 'ಲೆಮನ್ ಗ್ರಾಸ್' ನ ಕೃಷಿಯನ್ನು ಮಾಡಿದವರು. ತುಂಬು ಸಂಸಾರದ ನಿರ್ವಹಣೆಗೆ ಕೃಷಿಕ್ಷೇತ್ರದ ಆದಾಯ ಸಾಲದೆಂಬ ಅರಿವು ಮೂಡಿದಾಗ 1970ರಲ್ಲಿ ತನ್ನಲ್ಲಿರುವ ಪೌರೋಹಿತ್ಯ, ಜ್ಯೋತಿಷ್ಯ ಮತ್ತು ಕೀರ್ತನ ಕಲೆಯ ಬಂಡವಾಳದೊಂದಿಗೆ ತನ್ನ ನೂತನ ಕಾರ್ಯಕ್ಷೇತ್ರವನ್ನಾಗಿ ಬಯಲುಸೀಮೆಯ ಧಾರವಾಡವನ್ನು ಆಯ್ಕೆಮಾಡಿಕೊಂಡರು.