ರಂಗನಾಥ ಸುಬ್ರಾಯ ಮರಾಠೆ ಉದ್ಯಮ

ರಂಗನಾಥ ಸುಬ್ರಾಯ ಮರಾಠೆ

ದುಂಡು ಮುಖ, ಗುಂಡುಮೈ. ಬೋಳು ತಲೆ, ಖಾದಿಟೋಪಿ. ಸರಳ ಸಾದಾ ಉಡುಪು, ಸದಾ ಹಸನ್ಮುಖಿ. ಮಾತಿಗೆ ತೊಡಗಿದರೆ ಇತಿಹಾಸ ದರ್ಶನ. ಸಂಬಂಧಗಳ ಬೆಸುಗೆಯತ್ತ ಇಣುಕು ನೋಟ, ಆತ್ಮೀಯಭಾವ. ನೇರ ನಡೆ-ನುಡಿ, ನಿಸ್ಪೃಹ ಪ್ರಾಮಾಣಿಕ ವ್ಯಕ್ತಿತ್ವ. ಇದು ನಮ್ಮ ಬೆಂಗಳೂರು ಚಿತ್ಪಾವನ ಸಮಾಜದ ಸ್ಥಾಪಕಾಧ್ಯಕ್ಷ, ಸಂಘಟನೆಯ ರೂವಾರಿ ದಿ|| ರಂಗನಾಥ ಸುಬ್ರಾಯ ಮರಾಠೆ ಅವರ ವ್ಯಕ್ತಿತ್ವ ದರ್ಶನ. ರಂಗನಾಥ ಮರಾಠೆಯವರ ಜನನ ಮೇ 3,1917ರಂದು. ಬಾಲ್ಯದಲ್ಲೇ ತಂದೆ ಸುಬ್ರಾಯ ಮರಾಠೆಯವರನ್ನು ಕಳೆದುಕೊಂಡ ಮೇಲೆ ತಾಯಿ-ಮಕ್ಕಳಿಬ್ಬರದು ದುಸ್ತರ ಬದುಕು. ಪರಿಚಿತರ, ಬಂಧುಗಳ ಮನೆಯಲ್ಲಿ ಅಡುಗೆ ವೃತ್ತಿ. ಮಕ್ಕಳನ್ನು ಸಾಕಿ ಸಲಹಿ ಯೋಗ್ಯರನ್ನಾಗಿ ರೂಪಿಸುವ ಧ್ಯೇಯವೊಂದೇ ಆ ಮಹಾಮಾತೆಗೆ.

ಮುಂದೆ ಓದಿ


ತಲಾರೆ ಗಣಪತಿ ಭಟ್ಸಮಾಜ ಸೇವೆ

ತಲಾರೆ ಗಣಪತಿ ಭಟ್

ಲೌಕಿಕ ಬದುಕಿಗೆ ಸರಕಾರಿ ವೃತ್ತಿ, ಜತೆಯಲ್ಲಿ ವೇದಾಧ್ಯಯನ, ತರ್ಕಶಾಸ್ತ್ರ, ನ್ಯಾಯಶಾಸ್ತ್ರಗಳಲ್ಲಿ ಆಳವಾದ ಅಧ್ಯಯನ, ಜ್ಯೋತಿಷ್ಯಶಾಸ್ತ್ರದಲ್ಲಿ 'ಇದಮಿತ್ಥಂ' ಎಂದು ಹೇಳಬಲ್ಲ ಪ್ರಗಲ್ಭ ಪಾಂಡಿತ್ಯ, ಸತ್ಯವನ್ನು ಪ್ರತಿಪಾದಿಸುವ ನಿರ್ಭೀತ ನಡೆ, ಪರೋಪಕಾರ ಪ್ರವೃತ್ತಿ, ಜೀವನ ಪ್ರೀತಿ ಇವುಗಳೆಲ್ಲ ಸಮ್ಮಿಳಿತಗೊಂಡ ಆದರ್ಶ ವ್ಯಕ್ತಿತ್ವ ದಿ. ತಲಾರೆ ಗಣಪತಿ ಭಟ್ಟರದು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣದ ತಲಾರೆಎಂಬಲ್ಲಿ ಇರುವ ಗೋವಿಂಡೆ ಮನೆತನದ ಶಂಕರ ಭಟ್ಟ ಮತ್ತು ಗೌರಿ ದಂಪತಿಗಳ ಎಂಟು ಮಕ್ಕಳಲ್ಲಿ ಐದನೆಯವರಾಗಿ ಗಣಪತಿ ಭಟ್ಟರು ಜನವರಿ2, 1942ರಲ್ಲಿ ಜನಿಸಿದರು.

ಮುಂದೆ ಓದಿ


ಸಮಾಜ ಪುಸ್ತಕಾಲಯದ ಭಾಲಚಂದ್ರ ಘಾಣೇಕರಉದ್ಯಮ

ಸಮಾಜ ಪುಸ್ತಕಾಲಯದ ಭಾಲಚಂದ್ರ ಘಾಣೇಕರ

ಬೆಟಗೇರಿ ಕೃಷ್ಣಶರ್ಮರವರು ಘಾಣೇಕರರನ್ನು ಕುರಿತು ಈ ರೀತಿ ಬರೆಯುತ್ತಾರೆ ' 'ಭವತಿ ಭಿಕ್ಷಾಂದೇಹಿ'ಯ ಈ ಬಾಲಕ ಭವಿಷ್ಯದಲ್ಲಿ ಇಂತಹದೊಂದು ಲೌಕಿಕ ಸ್ಥಾನದಲ್ಲಿ ನಿಲ್ಲಬಲ್ಲನೆಂಬ ಯಾವ ವಿಶೇ‍ಷ ಲಕ್ಷಣಗಳನ್ನು ನಾನು ಅವನ ವಿದ್ಯಾರ್ಥಿ ದೆಸೆಯಲ್ಲಿ ಕಂಡಿರಲಿಲ್ಲ. 'ಪುರುಷಸ್ಯ ಭಾಗ್ಯಂ ದೇವೋ ನ ಜಾನಾತಿ''! ವಿಷಮ ಆರ್ಥಿಕ ಪರಿಸ್ಥಿತಿಯಿಂದಾಗಿ ಹೈಸ್ಕೂಲು ಶಿಕ್ಷಣವನ್ನು ಮುಗಿಸಲಾಗದ ಘಾಣೇಕರರು ಗಳಿಸಿದ ಜೀವನಾನುಭವವೇ ಅವರನ್ನು ಒಬ್ಬ ಸಮರ್ಥ ಉದ್ಯಮಿಯಾಗಿ ರೂಪಿಸಿತು. ನಾಮಫಲಕಗಳನ್ನು ಬರೆಯುವುದು, ಬೇಕರಿ ಕೆಲಸ, ಫೋಟೊಗಳಿಗೆ ಫ್ರೇಮ್ ಹಾಕುವುದು, ಮುದ್ರಣ ಕಾಗದಗಳ ವ್ಯಾಪಾರ, ಸ್ವದೇಶಿ ವಸ್ತುಗಳ ಮಾರಾಟ, ಮನೆಯಲ್ಲೇ ಚಟ್ನಿಪುಡಿ, ಮಸಾಲೆ, ದಂತಮಂಜನಗಳನ್ನು ತಯಾರಿಸಿ ಮಾರುವುದು ಘಾಣೇಕರರು ಕೈಗೊಳ್ಳ್ದ ವೃತ್ತಿಯಿಲ್ಲ. ಇವೆಲ್ಲವುಗಳ ಮಧ್ಯೆ ಸ್ವಾತಂತ್ರ್ಯ ಚಳುವಳಿಯ ಹುಚ್ಚು, ತಿಂಗಳುಗಟ್ಟಲೆ ಕಾಲ ಸೆರೆಮನೆ ವಾಸ.

ಮುಂದೆ ಓದಿ


ಶ್ರೀನಾಥ ಮರಾಠೆಲಲಿತ ಕಲೆ

ಶ್ರೀನಾಥ ಮರಾಠೆ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿಯ ಒಂದು ಪುಟ್ಟ ಗ್ರಾಮ ಮಾಳ. ಅದು ಈ ನಾಡಿಗೆ ಅನೇಕ ಸಾಧಕರನ್ನು ನೀಡಿದೆ. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿನ ಬಹುಶ್ರುತ ಕಲಾವಿದ ದಿ. ಶ್ರೀನಾಥ ಮರಾಠೆಯವರು ಮಾಳಗ್ರಾಮದವರು. ಕಜೆ ಮಹಾದೇವ ಮರಾಠೆಯವರು ಐವತ್ತರ ದಶಕದಲ್ಲಿ ಮಾಳದಂತಹ ಕುಗ್ರಾಮಕ್ಕೆ ಸಾರಿಗೆ ಸೌಕರ್ಯವನ್ನು ಒದಗಿಸಿದರೆ ಅವರ ಪತ್ನಿ ಸೌ. ಅನ್ನಪೂರ್ಣಾ ಕೃಷಿ ಕ್ಷೇತ್ರ ಮತ್ತು ಮನೆವಾರ್ತೆಯ ದುಡಿಮೆಗೆ ಇನ್ನೊಂದು ಹೆಸರು. ಈ ಆದರ್ಶ ದಂಪತಿಗಳ 12 ಮಕ್ಕಳಲ್ಲಿ ದ್ವಿತೀಯರಾಗಿ 11-04-1944ರಲ್ಲಿ ಜನಿಸಿ ಹೈಸ್ಕೂಲು ಶಿಕ್ಷಣವನ್ನು ಮುಗಿಸದ ಶ್ರೀನಾಥ ಮರಾಠೆಯವರು ಅದ್ವಿತೀಯರಾದದ್ದು ಅವರಿಗಿದ್ದ ಅತೀವ ಸಂಗೀತಾಸಕ್ತಿ ಮತ್ತು ದೇವರು ಬಳುವಳಿಯಾಗಿ ನೀಡಿದ ಸ್ವರ ಸಂಪತ್ತಿನಿಂದ.

ಮುಂದೆ ಓದಿ


ಕೆ. ಎನ್. ಭಟ್ ಶಿರಾಡಿಪಾಲ್ ಸಾಹಿತ್ಯ

 ಕೆ. ಎನ್. ಭಟ್ ಶಿರಾಡಿಪಾಲ್

1947ರಲ್ಲಿ ತಮ್ಮ ಸ್ವಗ್ರಾಮಕ್ಕೆ ತೆರಳಿ ತಮ್ಮ ಅಲೆದಾಟವನ್ನು ಕೊನೆಗೊಳಿಸಿ ಶಿರಾಡಿಪಾಲರು ಕೃಷಿಕ್ಷೇತ್ರವೊಂದರಲ್ಲಿ ನೆಲೆ ನಿಂತರು. ಅನಸೂಯಾ ಎಂಬ ಕನ್ಯೆಯನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಿ ಅಡಿಕೆಸೋಗೆಗಳ ಮಾಡಿನ ಪುಟ್ಟ ಮನೆಯಲ್ಲಿ ಶಿರಾಡಿಪಾಲರು ದಾಂಪತ್ಯ ಜೀವನವನ್ನು ಪ್ರಾರಂಭಿಸಿದರು. ಆಗ ಅವರ ಊರೆಂದರೆ ಆಸ್ಪತ್ರೆ, ಶಾಲೆ, ಅಂಚೆ ಕಚೇರಿ, ವಿದ್ಯುತ್ಗಳನ್ನು ಕಾಣದ ಕುಗ್ರಾಮ. ಎಂಟು ಮಕ್ಕಳ ತುಂಬು ಸಂಸಾರ ಶಿರಾಡಿಪಾಲರದು. ಕೃಷಿಕ್ಷೇತ್ರದ ದುಡಿಮೆಯ ಜತೆಯಲ್ಲೇ ಸಾಹಿತ್ಯ ಕೃಷಿ ನಡೆಸಿದರು. ನಾಗರಿಕ ಸೌಲಭ್ಯಗಳನ್ನೇ ಕಾಣದ ಕಡಿರುದ್ಯಾವರ ಎಂಬ ಹಳ್ಳಿಯಲ್ಲಿ 'ವಿಚಾರ ಸಾಹಿತ್ಯಮಾಲೆ' ಎಂಬ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿದರು. ಕವಿಯಾದವನಿಗೆ ಬರಿ ಎರಡು ಕಣ್ಣಲ್ಲ. ಲೋಕಜ್ಞಾನವನ್ನು ಅರಿಯುವ ಮೂರನೇ ಕಣ್ಣೊಂದು ಆತನಿಗಿರಬೇಕು. ಶಿರಾಡಿಪಾಲರು 'ತ್ರಿನಯನ' ಎಂಬ ಕಾವ್ಯನಾಮದೊಂದಿಗೆ 'ಮಲೆನಾಡು', 'ರಾಷ್ಟ್ರಮತ', 'ಸಂಚಾರಿ', 'ಜನಪ್ರೇಮಿ', 'ನವಭಾರತ', 'ನವಯುಗ', 'ಸಂಧ್ಯಾದೀಪ', 'ಕರ್ಮವೀರ', 'ಪ್ರಭಾತ', 'ವಿಕ್ರಮ', 'ಯುಗಪುರುಷ', 'ಸುಧಾ', 'ತರಂಗ', 'ಉದಯವಾಣಿ', 'ಮಂಜುವಾಣಿ' ಮೊದಲಾದ ಪತ್ರಿಕೆಗಳಿಗೆ ತಮ್ಮ ಕತೆ, ಕವನ, ವೈಚಾರಿಕ ಲೇಖನಗಳನ್ನು ಬರೆದರು.

ಮುಂದೆ ಓದಿ