ಖರೆ ಗಣಪತಿ ಶಾಸ್ತ್ರಿಗಳುಧಾರ್ಮಿಕ ಕ್ಷೇತ್ರ

ಖರೆ ಗಣಪತಿ ಶಾಸ್ತ್ರಿಗಳು ಕರ್ನಾಟಕದ ವೈದಿಕ ಪರಂಪರೆಯ ಧ್ರುವತಾರೆ. 1901, ಇಪ್ಪತ್ತನೆಯ ಶತಮಾನದ ಮೊದಲ ದಿನ. ತಂದೆ ವೈದಿಕ ವಾಙ್ಮಯ ವಿಶಾರದ ಅನಂತ ಭಟ್ಟ ಖರೆ, ತಾಯಿ ಗೃಹಿಣಿ ಗೌರಿ. ಬಾಲಕನ ಭವ್ಯ ಭವಿತವ್ಯಕ್ಕೋ ಎಂಬಂತೆ ಖರೆ ದಂಪತಿಗಳು ಕಾರಣಾಂತರದಿಂದ ಶ್ರೀ ಗೋಕರ್ಣ ಕ್ಷೇತ್ರಕ್ಕೆ ವಲಸೆ ಹೋಗಬೇಕಾಯಿತು. ಬ್ರಹ್ಮೋಪದೇಶದ ಬಳಿಕ ಬಾಲಕ ಗಣಪತಿ ಉದ್ದಾಮ ಪಂಡಿತ ವೇ|ಮೂ| ಪಾಂಡುರಂಗ ಭಟ್ಟ ದಾತೆಯವರ ಬಳಿ ಶಿಷ್ಯತ್ವ ಸ್ವೀಕರಿಸಿದರು. ಸ್ತ್ರೀಯರಿಗೆ ವೇದಾಧ್ಯಯನ ಸಲ್ಲದು ಎಂಬ ಕಾಲದಲ್ಲೇ ತಮ್ಮ ಪುತ್ರಿಯರಿಗೆ ವೇದಾಧ್ಯಯನ ಮಾಡಿಸಿದ ಪ್ರಗತಿಪರ ಚಿಂಕರು ಈ ದಾತೆಯವರು. ಇಂತಹ ಗುರುವಿನ ಗರಡಿಯಲ್ಲಿ ಪಳಗಿದ ಈ ವಾಮನ ಮೂರ್ತಿಯ ಖ್ಯಾತಿ ಮುಂದೆ ಅಖಂಡ ಭಾರತವನ್ನು ವ್ಯಾಪಿಸಿತು.
ಕೇಶವ ಸೀತಾರಾಮ ಜೋಗಳೇಕರ್ ಧಾರ್ಮಿಕ ಕ್ಷೇತ್ರಧಾರ್ಮಿಕ ಕ್ಷೇತ್ರ

ಪೌರೋಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಜೋಗಳೇಕರ್ ಯಜ್ಞಾನುಷ್ಠಾನ ತತ್ಪರರಾಗಿ ದೇಶದಾದ್ಯಂತ ನಡೆದ ಅಗ್ನಿಷ್ಟೋಮವೇ ಮೊದಲಾದ ಸುಮಾರು ನಲವತ್ತಕ್ಕೂ ಮಿಕ್ಕಿ ಸೋಮ (ಶ್ರೌತ) ಯಾಗಗಳಲ್ಲಿ ಮುಖ್ಯ ಋತ್ವಿಜರಾಗಿ ಭಾಗವಹಿಸಿರುತ್ತಾರೆ. ಅಗಣಿತ ಸ್ಮಾರ್ತಯಜ್ಞಗಳಲ್ಲೂ ಭಾಗವಹಿಸಿ ಬ್ರಾಹ್ಮಣನ ಆದ್ಯ ಕರ್ತವ್ಯಗಳಲ್ಲಿ ಒಂದಾದ ಯಾಜನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿಭಾಜನರಿವರು. ವೇದಾಧ್ಯಯನ, ವೇದಸಂರಕ್ಷಣಗಳನ್ನು ಮಾಡುತ್ತಾ ಐವತ್ತಕ್ಕೂ ಮೀರಿದ ಸಂಖ್ಯೆಯ ವೇದ ವಿದ್ವಾಂಸರನ್ನು, ಕ್ರಮಪಾಠಿಗಳನ್ನು ಸಮಾಜಕ್ಕೆ ನೀಡಿ ಗುರುಪರಂಪರೆಯ ಜವಾಬ್ದಾರಿಯನ್ನು ನಿರ್ವಹಿಸಿದ ಸನಾತನ ಆರ್ಷ ಬದುಕು ಇವರದು. ಮರಾಠಿ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರೌಢಿಮೆಯನ್ನು ಹೊಂದಿದ್ದ ಇವರು ಭಾರತದಾದ್ಯಂತ ಸಂಚರಿಸಿ ವೇದಶಾಸ್ತ್ರ-ಪರಂಪರೆ-ಪುರಾಣ-ಆಚರಣೆ-ಲೋಕಾನುಭವಗಳ ಬಗೆಗೆ ಉಪನ್ಯಾಸ, ಪ್ರವಚನಗಳನ್ನು ನೀಡಿ ಸಮಾಜದಲ್ಲಿ ಧರ್ಮಜಾಗೃತಿಯನ್ನು ಉಂಟು ಮಾಡಿದ್ದಾರೆ. ತಮ್ಮ ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಸತ್ಯಭಾಮಾ ಅವರೊಡನೆ ಗೃಹಸ್ಥಾಶ್ರಮ ಸ್ವೀಕರಿಸಿದ ಶ್ರೀಯುತರು ಪುತ್ರವಂತರಾಗಿ ಗೃಹಸ್ಥಾಶ್ರಮ ಧರ್ಮ ಪರಿಪಾಲನೆಯಲ್ಲೂ ತಮ್ಮ ಕರ್ತವ್ಯಗಳನ್ನು ನೆರವೇರಿಸಿದ್ದಾರೆ.
ವೇ| ಮೂ| ಹರಿಕಥಾ ವಿದ್ವಾನ್ ಸೀತಾರಾಮ ಫಾಟಕ್ಧಾರ್ಮಿಕ ಕ್ಷೇತ್ರ

ಕರ್ನಾಟಕದಾದ್ಯಂತ ಸಂಚರಿಸಿ ಕನ್ನಡ, ಮರಾಠಿ, ತುಳು ಮತ್ತು ಕೊಂಕಣಿ ಭಾಷೆಗಳಲ್ಲಿ ಹರಿಕಥಾ ಕೀರ್ತನೆಗಳನ್ನು ಮಾಡಿದರು.60ರ ದಶಕದಲ್ಲಿ ಚಾತುರ್ಮಾಸ್ಯದ ಸಂದರ್ಭದಲ್ಲಿ ಕಾರ್ಕಳದ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿದಿನ ಹರಿಕೀರ್ತನೆಯನ್ನು ನಡೆಸಿದ ಹಿರಿಮೆ ಇವರದು. ಕೃಷಿ ಕ್ಷೇತ್ರದಲ್ಲಿ ಹೊಸತೇನನ್ನಾದರೂ ಸಾಧಿಸಬೇಕೆಂಬ ಹಂಬಲದಿಂದ ತಮ್ಮ ಕೃಷಿ ಕ್ಷೇತ್ರದಲ್ಲಿ 'ಲೆಮನ್ ಗ್ರಾಸ್' ನ ಕೃಷಿಯನ್ನು ಮಾಡಿದವರು. ತುಂಬು ಸಂಸಾರದ ನಿರ್ವಹಣೆಗೆ ಕೃಷಿಕ್ಷೇತ್ರದ ಆದಾಯ ಸಾಲದೆಂಬ ಅರಿವು ಮೂಡಿದಾಗ 1970ರಲ್ಲಿ ತನ್ನಲ್ಲಿರುವ ಪೌರೋಹಿತ್ಯ, ಜ್ಯೋತಿಷ್ಯ ಮತ್ತು ಕೀರ್ತನ ಕಲೆಯ ಬಂಡವಾಳದೊಂದಿಗೆ ತನ್ನ ನೂತನ ಕಾರ್ಯಕ್ಷೇತ್ರವನ್ನಾಗಿ ಬಯಲುಸೀಮೆಯ ಧಾರವಾಡವನ್ನು ಆಯ್ಕೆಮಾಡಿಕೊಂಡರು.