ಬಿ. ರಾಮಚಂದ್ರ ಭಟ್ ತಾಮನ್ಕರ್ ಸಾಹಿತ್ಯ

ಅಪ್ಪನು ಮಾಡಿದ ಚೌತಿಯ ಪ್ರತಿಮೆಗೆ
ಆನೆಯ ಸೊಂಡಿಲ ಮೊಗವಿತ್ತು
ಇಲಿಯನ್ನೇರಿದ ಯಾರಿವನೆಂದೆನು
ಈಶ್ವರ ಸುತನೆಂದನು ಅಪ್ಪ
ಉಮಾ ಕುಮಾರನ ಚೆಲು ಹಬ್ಬದ ದಿನ
ಊಟಕೆ ಬಂದರು ಅತಿಥಿಗಳು
ಎಲೆಗಳನಿರಿಸಿ ಅನ್ನವನಿಕ್ಕಲು
ಏಕಾಗ್ರತೆಯಲಿ ಜನರುಣಲು
ಐದು ಬಗೆಯ ಸಿಹಿ ಭಕ್ಷಗಳಿದ್ದುವು
ಒಗ್ಗರಣೆಯ ಹುಳಿ ಮೊಸರಿತ್ತು
ಓಡುವ ತಿಳಿ ಪಾಯಸ ತಿನ್ನುತ
ಔತಣದೂಟವ ಹೊಗಳಿದರು
ಅಂಮನು ತಂದಾ ಅಡಿಕೆಲೆ ವೀಳ್ಯವ
ಅಃ ಎಂದರು ಜನ ಸವಿಯುತಲಿ
ಬಹುಶಃ ಹಿಂದಿನ ತಲೆಮಾರಿನ ಕನ್ನಡಿಗರಿಗೆ ಈ ಶಿಶು ಗೀತೆಯನ್ನು ಓದಿದಾಗ ಇದರ ಕರ್ತೃ ಯಾರೆಂಬುದು ನೆನಪಾಗದೆ ಇರದು. ಇದು ಬೆಳ್ತಂಗಡಿ ತಾಲೂಕಿನ ಶಿಶುಗೀತೆಗಳ ಪ್ರಥಮ ಕವಿ ಬಿ. ರಾಮಚಂದ್ರ ಭಟ್ಟರ ಒಂದು ಕವಿತೆ. ಸ್ವರಮಾಲೆಯಲ್ಲಿ ರಚಿತವಾದ ಚೌತಿ ಹಬ್ಬದ ಸಂಭ್ರಮವನ್ನು ವಿವರಿಸುವ ಈ ಗೀತೆಯನ್ನು ಯಾರು ತಾನೆ ಮರೆಯಲು ಸಾಧ್ಯ? 'ತಮ್ಮನ ಕವಿತೆಗಳು' (1952), 'ಶಿಶು ವಿಹಾರ' (1953), 'ಪುಟ್ಟನ ಪಿಟಿಲು'(1954),''ಪೀಪಿ',ವಿಕಾಸ ವಾಣಿ ಮತ್ತು ಇತರ ಹಾಡುಗಳು'(1955), ಗಾನ ಗೌರಿ' (1960), 'ಮಕ್ಕಳ ಗೀತ ರಾಮಾಯಣ'(1977), 'ರಾಮಣ್ಣನ ರಗಳೆಗಳು' - ಅಪ್ರಕಟಿತ) ಮುಂತಾದ ಶಿಶು ಗೀತೆಗಳ ಜೊತೆಗೆ ಪ್ರೌಢರಿಗೂ ಕೂಡ ನೀತಿಯನ್ನು ಸಾರುವ ಕವಿತೆಗಳ ಕರ್ತೃ ಬಿ. ರಾಮಚಂದ್ರ ಭಟ್ಟ (ಬತ್ರಬೈಲ್ ರಾಮಚಂದ್ರ ಭಟ್ಟ ತಾಮ್ಹನ್ಕರ್)
ಮುಂಡಾಜೆಯ ತಾಮ್ಹನ್ಕರ್ ಕುಟುಂಬವೆಂದರೆ ಅದು ಕವಿತ್ವ, ಸಂಗೀತ, ನಾಟಕ ಮುಂತಾದುವುಗಳಿಗೆ ಹಸೆರು ವಾಸಿಯಾದ ಮನೆತನ. ಅಂತಹ ಒಂದು ಪರಂಪರೆಯನ್ನು ಮುಂದುವರಿಸುವ ಈ ಕುಟುಂಬದ ಸದಸ್ಯರು ಈಗಲೂ ಸಾಹಿತ್ಯ, ಸಂಗೀತ, ಪುಸ್ತಕ ಸಂಗ್ರಹ ಮುಂತಾದ ವಿಶೇಷ ಆಸಕ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಿದ್ದಾರೆ.
ರಾಮಚಂದ್ರ ಭಟ್ಟರ ವೃತ್ತಿಯಲ್ಲಿ ಅಧ್ಯಾಪಕರು, ಪ್ರವೃತ್ತಿಯಲ್ಲಿ ಸಾಹಿತ್ಯಾರಾಧಕರು, ಕವಿ. ವಿದ್ಯಾರ್ಥಿಗಳಿಗೆ ಬಿಳಿಯ ಟೋಪಿಯನ್ನು ತೊಡುವುದನ್ನು ಕಡ್ಡಾಯ ಮಾಡಿದ, ಆಗೊಮ್ಮೆ ಈಗೊಮ್ಮೆ ಬೆತ್ತದ ರುಚಿಯನ್ನು ತೋರಿಸುತ್ತಿದ್ದ ಶಿಸ್ತಿನ ಅಧ್ಯಾಪಕ. ಸರಳತೆ, ಆದರಶ ನಡೆ -ನುಡಿ, ಆಚಾರ ವಿಚಾರ ಸಂಪ್ರದಾಯಗಳ ಅನುಸರಣೆ, ನಯ ವಿನಯ ನಿರಂಹಕಾರ ಸಹನೆಗಳಿಗೆ ಇನ್ನೊಂದು ಹೆಸರೆ ರಾಮಚಂದ್ರ ಭಟ್ಟರು. ಬದುಕಿನಲ್ಲಿ ಅಲ್ಪ ತೃಪ್ತರು. ಮುಂಡಾಜೆಯಲ್ಲಿ 'ತಮ್ಮನ ಸಾಹಿತ್ಯ ಮಾಲೆ' ಎಂಬ ಪ್ರಕಾಶನವನ್ನು ಸ್ಥಾಪಿಸಿ ತಮ್ಮ ಕೃತಿಗಳನ್ನು ಮುದ್ರಿಸಿ ಹಳ್ಳಿಯ ಪ್ರತಿಯೊಂದು ಶಾಲೆಗಳಿಗೂ ಭೇಟಿಯಿತ್ತು ತಮ್ಮ ಪದ್ಯಗಳನ್ನು ಮಕ್ಕಳಿಗೆ ಓದಿ ಹೇಳಿ, ರಂಜಿಸಿ ಮಾರಾಟ ಮಾಡಿ ತಮ್ಮ ಸಾಹಿತ್ಯದ ಪ್ರಚಾರಕ್ಕೆ ಸ್ವತಃ ಚಾಲನೆಯಿತ್ತವರು.
'ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನ..' ಎಂಬ ಗೀತೆಯ ಉಕ್ತಿಯಂತೆ ರಾಮಚಂದ್ರ ಭಟ್ಟರು ಪ್ರಶಸ್ತಿ, ಗೌರವ, ಮಾಮ ಸನ್ಮಾನಗಳಿಗೆ ಎಂದೂ ಹಾತೊರೆದವರಲ್ಲ. ಎಲೆ ಮರೆಯ ಮಲ್ಲಿಗೆಯು ಯಾರ ಕಣ್ಣಿಗೂ ಬೀಳದೆ ಸುಗಂಧವನ್ನು ಹರಡುವಂತೆ ತಮ್ಮ ಅಧ್ಯಾಪನ ವೃತ್ತಿಯ ಜೊತೆಯಲ್ಲಿ ಶಿಶು ಗೀತೆಗಳನ್ನು ರಚಿಸಿದವರು. ಭಟ್ಟರಿ 1955ರಲ್ಲಿ ಮೈಸೂರು ಆಕಾಶವಾಣಿಯಲ್ಲಿ ತಮ್ಮ ಕವಿತೆಗಳನ್ನು ಮೊತ್ತ ಮೊದಲು ಹಾಡಿದರು. ಅವರ ಸಾಹಿತ್ಯ ರಚನೆಗಾಗಿ ಮದರಾಸು ಸರಕಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು.1987ರಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಜರುಗಿದ ಅಖಿಲ ಕರ್ನಾಟಕ ಮಕ್ಕಳ ಸಮ್ಮೇಳನದಲ್ಲಿ ಇವರ ಬಾಲ ಸಾಹಿತ್ಯ ರಚನೆಗಳಿಗಾಗಿ ಪ್ರಶಸ್ತಿ ಪತ್ರವನ್ನಿತ್ತು ಇವರನ್ನು ಗೌರವಿಸಲಾಗಿತ್ತು. 1988ರಲ್ಲಿ ಶ್ರೀ ಆದಿ ಚುಂಚನಗಿರಿ ಮಠದ ಸ್ವಾಮಿಗಳು ಇವರ ಸಾಹಿತ್ಯ ಕೈಂಕರ್ಯಕ್ಕಾಗಿ ಇವರನ್ನು ಸನ್ಮಾನಿಸಿ ಗೌರವಿಸಿದ್ದರು. ಬೆಂಗಳೂರಿನ ಚಿತ್ಪಾವನ ಸಮಾಜವು 1989ರ ಭಾದ್ರಪದ ಗಣೇಶ ಚತುರ್ಥಿಯಂದು ಇವರನ್ನು ಸನಮಾನಿಸಿತ್ತು. . 05-09-1972ರಲ್ಲಿ ಮುಂಡಾಜೆಯಲ್ಲಿ ಅವರ ಹಳೆಯಶಿಷ್ಯಂದಿರೆಲ್ಲ ಸೇರಿ ಅವರನ್ನು ಗೌರವಿಸಿ ಗುರು ಸ್ಮರಣೆಗೈದಿದ್ದರು. 1991ರಲ್ಲಿ ದಿ. ಬಿ. ರಾಮಚಂದ್ರ ಭಟ್ಟರ 'ಸಮಗ್ರ ಶಿಶು ಗೀತೆಗಳು' ಎನ್ನುವ ಹೆಸರಿನಲ್ಲಿ ಅವರ ಕೃತಿಗಳನ್ನು ಬೆಳ್ತಂಗಡಿ ತಾಲೂಕಿನ ಬರಹಗಾರರ ಬಳಗ ಪ್ರಕಟಿಸಿತ್ತು. 2009ರಲ್ಲಿ ಅವರ ಹೆಣ್ಣು ಮಕ್ಕಳು ಅಳಿಯಂದಿರು ಮತ್ತು ಬಂಧುವರ್ಗದವರು ಸೇರಿ ಬಿ.ರಾಮಚಂದ್ರ ಭಟ್ಟರ ಸಮಗ್ರಕೃತಿಗಳು' ಎಂಬ ಹೆಸರಿನಲ್ಲಿ ಅವರ ಕೃತಿಗಳನ್ನು ಪ್ರಕಟಿಸಿದರು. ಈ ಸಂಗ್ರಹದಲ್ಲಿ ಅವರು ಬರೆದು ಪ್ರಕಟವಾಗದೆ ಉಳಿದ 'ರಾಮಣ್ಣನ ರಗಳೆ'ಗಳು ಎಂಬ ಕೃತಿಯು ಸೇರಿದೆ.
ದೇವರು, ಗೋ ಸಂಪತ್ತು, ಔಷಧಗಳು, ಸಾಮಾಜಿಕ ಕುಂದು ಕೊರತೆಗಳುಗಂಡು ಹೆಣ್ಣು, ಸಂಸಾರ, ದಾಂಪತ್ಯ, ಕೃಷಿ, ನಂಬಿಕೆ, ಸಂಸ್ಕೃತಿ, ತತ್ತ್ವ, ನೈತಿಕತೆ, ಅನೈತಿಕತೆ ಹೀಗೆ ಹತ್ತು ಹಲವು ವಿಷಯಗಳು ಅವರ ಕಾವ್ಯ ವಸ್ತುವಾಗಿ ರಾಮಣ್ಣ ರಗಳೆಯಲ್ಲಿ ಬಿಂಬಿಸಲ್ಪಟ್ಟಿದೆ.ಆರು ಮಂದಿ ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರನನ್ನು ಪಡೆದಿದ್ದರೂ ಅವರ ಏಕಮಾತ್ರ ಪುತ್ರ (ಪ್ರಭಾಕರ ತಾಮ್ಹನ್ಕರ್) ಅಕಾಲ ಮರಣ ಅವರ ಕಾವ್ಯ ರಚನೆಯ ಶಕ್ತಿಯನ್ನೆ ಕಸಿದುಕೊಂಡಿತು ಅನ್ನಬಹುದು. 13-05-1972ರಲ್ಲಿ ನಿವೃತ್ತರಾದ ಮೇಲೆ ಮುಂಡಾಜೆಯಲ್ಲೊಂದು ಪುಟ್ಟ ಮನೆ ಮಾಡಿ ಅವರು ಜೀವಿಸುತ್ತಿದ್ದರು. ಸರಳ ಜೀವನ, ಸಾತ್ವಿಕತೆ, ತಾವು ನಂಬಿದ ಆದರ್ಶಗಳಿಗೆ ಬದ್ಧರಾಗಿ ಮಾನ ಸಮ್ಮಾನಗಳಿಗೆ ಹಾತೊರೆಯದೆ ೭೫ ವರ್ಷಗಳ ತುಂಬು ಜೀವನವನ್ನು ನಡೆಸಿ 24-01-1989ರಲ್ಲಿ ಬಿ. ರಾಮಚಂದ್ರ ಭಟ್ ತಾಮನ್ಕರ್ ಅವರು 'ಅಳಿವುದು ಕಾಯ ಉಳಿವುದು ಕೀರ್ತಿ' ಅನ್ನುವಂತೆ ಕೀರ್ತಿಶೇಷರಾದರು.