ಮಹದೇವ ಭಟ್ ಡೋಂಗ್ರೆ, ಮರಸಣಿಗೆ ಸಾಹಿತ್ಯ

ಕರ್ನಾಟಕದ ಚಿತ್ಪಾವನರ ವಲಸೆಯ ಜಾಡನ್ನು ಅರಸುತ್ತ ಹೋದಂತೆ ಅನೇಕ ಕೌತುಕಮಯ ಸಂಗತಿಗಳು ಮತ್ತು ಅನೇಕ ಜನ ಎಲೆಮರೆಯ ಸಾಧಕರ ಪರಿಚಯ ನಮಗಾಗುತ್ತದೆ. ಮರಸಣಿಗೆಯೆಂಬುದು ಕಳಸ ಕೊಟ್ಟಿಗೆಹಾರ ರಸ್ತೆಯಲ್ಲಿರುವ ಮಲೆನಾಡಿನ ಒಂದು ಪುಟ್ಟಹಳ್ಳಿ. ಸುಮಾರು ನೂರೈವತ್ತು ಇನ್ನೂರು ವರ್ಷಗಳ ಹಿಂದೆ ಮರಸಣಿಗೆಯ ಕಾಚಿನತೋಟ ಎಂಬಲ್ಲಿ ಗೋವಿಂದ ಭಟ್ ಅನ್ನುವವರು ಒಂದಷ್ಟು ಜಮೀನನ್ನು ಹೊಂದಿ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕೃಷಿಕಾರ್ಯದಲ್ಲಿ ತೊಡಗಿದ್ದ ಅವರಿಗೆ ಮಣ್ಣನ್ನು ಅಗೆಯುವಾಗ ಗಣಪತಿ ವಿಗ್ರಹವೊಂದು ದೊರೆಯಿತು. ವೈದಿಕರೂ. ಮಾಂತ್ರಿಕರೂ ಆಗಿದ್ದ ಅವರು ಆ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಲಾರಂಭಿಸಿದರು. ಅವರಿಗೆ ಗಂಡು ಸಂತತಿಯಿಲ್ಲದ ಕಾರಣ ತಮ್ಮ ಆಸ್ಥಿಯನ್ನು ಅಳಿಯನಿಗೆ ಬಿಟ್ಟಕೊಟ್ಟರೂ ಕಾಲವಶಾತ್ ಅಳಿಯನ ನಿಧನವಾಯಿತು. ಆ ಅಳಿಯನ ತಮ್ಮನೇ ಗಣಪತಿ ವೆಂಕಟೇಶ ಡೋಂಗ್ರೆಎನ್ನುವುದು ತಿಳಿದು ಬರುತ್ತದೆ. ಈ ಗಣಪತಿ ಡೋಂಗ್ರಯವರ ತಂದೆ ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಕೋಗಿಲೆ ಎಂಬ ಊರಲ್ಲಿ ಏಳು ಎಕರೆ ಜಮೀನನ್ನು ಹೊಂದಿ ಕೃಷಿಕರಾಗಿದ್ದರು. ಸದ್ರಿ ವೆಂಕಟೇಶ ಡೋಂಗ್ರೆಯವರ ಪುತ್ರ ಗಣಪತಿ ಡೋಂಗ್ರೆಯವರ ಹಿರಿಯ ಪುತ್ರ ಮಹದೇವ ಡೋಂಗ್ರೆಯವರೇ ಮರಸಣಿಗೆ ಕುಟುಂಬದ ಈ ಹಿಂದಿನ ಮೂರನೇ ತಲೆಮಾರಿನವರು. ಅಭಿಜಾತ ಕಲಾವಿದ, ಕೃಷಿಕ ಮಹದೇವ ಗಣಪತಿ ಡೋಂಗ್ರೆಯವರು ಮಾರ್ಚ್ ೫ ೧೯೩೦ರಲ್ಲಿ ಜನಿಸಿದರು. ಇವರ ಪತ್ನಿ ದ.ಕ.ಜಿಲ್ಲಾ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಪಟವರ್ಧನ್ ಕುಟುಂಬದ ವೆಂಕಟೇಶ ಪಟವರ್ಧನ್ ಅನ್ನುವವರ ಮಗಳು ಗಿರಿಜಾ. ನಾಲ್ಕು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳನ್ನು ಪಡೆದ ಮಹದೇವ ಡೋಂಗ್ರೆಯವರು ಋಜು ಮಾರ್ಗದಲ್ಲಿ ಬದುಕನ್ನು ಸಾಗಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆಗೈದು 83 ವರ್ಷಗಳ ಸಾರ್ಥಕ ಬದುಕನ್ನು ಬಾಳಿ ಏಪ್ರಿಲ್ 17, 2013ರಲ್ಲಿ ಕಾಲವಾದರು. ೧೯೧೧ರಲ್ಲಿ ಕಾರ್ಕಳ ತಾಲೂಕು ಮಾಳ ಗ್ರಾಮದ ಶ್ರೀ ಪರಶುರಾಮ ದೇವಾಲಯದ ಆವರಣದಲ್ಲಿ ನಡೆದ ಪ್ರಪ್ರಥಮ ಅಖಿಲ ಕರ್ನಾಟಕ ಡೋಂಗ್ರೆ ಸಮ್ಮೇಳನದಲ್ಲಿ ಇವರ ಸಾಹಿತ್ಯಿಕ ಸಾಧನೆಗಾಗಿ ಇವರನ್ನು ಸನ್ಮಾನಿಸಲಾಗಿತ್ತು.
೧೯೫೪ರಿಂದ ೧೯೬೨ರ ವರೆಗಿನ ಅವಧಿಯ ಎಂಟು ವರ್ಷಗಳಲ್ಲಿ ಬಲಿಗೆ ಸುಂಕಸಾಲೆಯ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಹಾಗೂ ತಲಗೂರು ಅರಮನೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಕೃಷಿಕರಾಗಿದ್ದುಕೊಂಡು, ಪೌರೋಹಿತ್ಯ ಮತ್ತು ಜ್ಯೋತಿಷ್ಯಶಾಸ್ತ್ರವನ್ನು ತಿಳಿದಿದ್ದರು. ಮಹದೇವ ಡೋಂಗ್ರೆಯವರು 'ಮಂಜುಗೋಷಾ ಪರಿಣಯ' ಎಂಬ ಯಕ್ಷಗಾನ ಪ್ರಸಂಗಕರ್ತರೂ ಹೌದು. ರಮಾಧವ ಅಥವಾ ಉರುಳಲ್ಲಿ ಎಂಬ ಅಪ್ರಕಟಿತ ಕಾದಂಬರಿಯ ಕರ್ತೃವೂ ಹೌದು. ಛಂಧೋಬದ್ಧವಾಗಿ ಕಾವ್ಯ ನಿರ್ಮಿತಿಯಯನ್ನು ಬಲ್ಲವರಾಗಿದ್ದ ಇವರು 'ಭಕ್ತಿ ಶತಕ' ಮತ್ತು 'ಪ್ರಕೃತಿ' ಎಂಬ ಕಾವ್ಯ ಸಂಗ್ರಹದ ಕವಿಯೂ ಹೌದು. ಇವರು ಯಕ್ಷಗಾನದಲ್ಲಿ ಭಾಗವತರಾಗಿಯೂ ಸೇವೆ ಸಲ್ಲಿಸಿದವರು. ಇವರ ಛಂದೋಬದ್ಧ ಭಕ್ತಿರಚನೆಯಲ್ಲಿನ ಗಣೇಶ ಸ್ತುತಿಯೊಂದು ಹೀಗಿದೆ :
ಕವಿ, ಕೃಷಿಕ, ಶ್ರಮಜೀವಿ ಮಹದೇವ ಡೋಂಗ್ರೆಯವರ ಕಾವ್ಯ ನಿರ್ಮಿತಿಗಳು ಪ್ರಕಟವಾಗದೇ ಉಳಿದುದು ಬಹಳ ಖೇದಯುತವಾದ ಸಂಗತಿ. ಬಹುಶಃ ಆತ್ಮಸಂತೋಷಕ್ಕಾಗಿ ಬರೆಯುವ ನಮ್ಮ ಹಿಂದಿನ ತಲೆಮಾರು ತಮ್ಮ ಸಾಧನೆಗಳ ಪ್ರಚಾರದಿಂದ ದೂರ ಉಳಿದುದೆ ಇದರ ಪ್ರಮುಖ ಕಾರಣವಾಗಿರಬಹುದು.