ಮುದ್ರಾ ವಿಜ್ಞಾನಿ ಸುಮನ್ ಚಿಪ್ಲೂಣ್ಕರ್ ವಿಶಿಷ್ಠ ಸಾಧನೆ

ನಾವು ಕರ್ನಾಟಕದಲ್ಲಿ ವಾಸಿಸುವ ಚಿತ್ಪಾವನ ಬ್ರಾಹ್ಮಣರು ಮೂಲತಃ ಮಹಾರಾಷ್ಟ್ರದಿಂದ ವಲಸೆ ಬಂದವರು. ಕನ್ನಡದ ಈ ಮಣ್ಣಿನಲ್ಲಿ ನೆಲೆ ನಿಂತು ಇಲ್ಲಿಯ ಜನಸಮುದಾಯದೊಂದಿಗೆ ಬೆರೆತು ಇಲ್ಲಿನ ಭಾಷೆ, ಸಂಸ್ಕೃತಿಗಳನ್ನು ನಮ್ಮದಾಗಿಸಿಕೊಂಡವರು. ಕನ್ನಡಿಗರೇ ಆದವರು. ಜ್ಞಾನಪೀಠ ಪ್ರಶಸ್ತಿ ವಿಜೇತ ಬೇಂದ್ರೆಯವರಿಂದ ಮೊದಲ್ಗೊಂಡು ಸಾಹಿತ್ಯ, ಸಂಗೀತ, ನಾಟಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕರ್ನಾಟಕದಲ್ಲಿನ ಚಿತ್ಪಾವನರ ಪಟ್ಟಿ ಬಹಳ ದೊಡ್ಡದಿದೆ.
ಅಂತೆಯೇ 50- 60ರ ದಶಕದಲ್ಲಿ ಉದ್ಯೋಗವನ್ನರಸುತ್ತ ಮಹಾರಾಷ್ಟ್ರದ ಮುಂಬೈ ನಗರಕ್ಕೆ ತೆರಳಿ ಅಲ್ಲಿ ನೆಲೆ ನಿಂತವರು ಬಹಳಷ್ಟು ಕನ್ನಡಿಗರು. ಅಂತಹ ಕನ್ನಡಿಗರಲ್ಲಿ ಕರ್ನಾಟಕದಲ್ಲಿ ನೆಲೆ ನಿಂತ ಕನ್ನಡವನ್ನು ಬಲ್ಲ ಚಿತ್ಪಾವನರು ಮುಂಬೈನಲ್ಲಿ ವಾಸವಾಗಿದ್ದವರು. ತಮ್ಮ ಕರ್ತೃತ್ವ ಶಕ್ತಿ, ಕ್ರಿಯಾಶೀಲತೆ, ಸಿದ್ಧಿ ಸಾಧನೆಗಳಿಂದ ಮಹಾರಾಷ್ಟ್ರೀಯರ ಮನಗೆದ್ದು ಅವರ ಜನ ಮಾನಸದಲ್ಲಿ ನೆಲೆ ನಿಂತವರು.
ಅಂತಹ ಸಾಧಕರ ಪೈಕಿ ಮೊದಲಿಗರಾಗಿ ನಿಲ್ಲುವವರು ಸುಮನ್ ಕೇಶವ ಚಿಪಳೂಣ್ಕರ್. ಕಾರ್ಕಳ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು. ಕಾರ್ಕಳದಲ್ಲಿ ವಕೀಲ ದುರ್ಗ ವೆಂಕಟೇಶ ಭಟ್ಟರೆಂದರೆ ಬಡವರ ವಕೀಲರೆಂದೇ ಚಿರಪರಿಚಿತರು. ಮೃದು ಭಾಷಿ, ಸ್ನೇಹಮಯಿ. ಖಾದಿಯ ಬಿಳಿಯ ಪಂಚೆ, ಮೇಲೊಂದು ಬಿಳಿಯ ಜುಬ್ಬಾ, ವಕೀಲರು ಧರಿಸುವ ಕರಿಕೋಟು. ಹೊರಗೆ ಹೊರಟರೆಂದರೆ ಗೌರವದಿಂದ ವಂದಿಸುವ ಮಂದಿ. ಇವರ ಪತ್ನಿ ಪದ್ಮಾವತಿ ಸಂಗೀತಜ್ಞೆ, ದೈವ ಭಕ್ತೆ, ಆತಿಥ್ಯಕ್ಕೆ ಇನ್ನೊಂದು ಹೆಸರು. ಕನ್ನಡ, ಮರಾಠಿ, ಹಿಂದಿ ಮತ್ತು ಸಂಸ್ಕೃತ ಹೀಗೆ ನಾಲ್ಕು ಭಾಷೆಗಳಲ್ಲಿ ಬರೆಯಬಲ್ಲ ಕವಯಿತ್ರಿ ಹರಿಕಥೆಯನ್ನು ಮಾಡುತ್ತಿದ್ದರು. ಇಂತಹ ಸುಸಂಸ್ಕೃತ ದಂಪತಿಗಳ ಮೂರನೆಯ ಮಗಳಾಗಿ ಸೆಪ್ಟೆಂಬರ್ 6, 1940ರಲ್ಲಿ ಜನಿಸಿದವರು ಸರೋಜಾ (ತವರು ಮನೆಯ ಹೆಸರು)ಯಾನೆ ಸುಮನ್ ಚಿಪ್ಲೂಣ್ಕರ್.
ಎಸ್.ಎಸ್.ಎಲ್.ಸಿ. ವರೆಗಿನ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಆಗ ಮುಂಬೈನಲ್ಲಿ Navel dockyardನಲ್ಲಿ ಉದ್ಯೋಗದಲ್ಲಿದ್ದ ಕಾರ್ಕಳ ತಾಲೂಕು ಮಾಳಗ್ರಾಮದ ಪ್ರಸಿದ್ಧ ಹೇಕುಂಜೆ ಚಿಪ್ಳೂಣ್ಕರ್ ಮನೆತನದ ಶ್ರೀ ಕೇಶವರಾವ್ ಚಿಪಳೂಣ್ಕರ್ ಅವರೊಂದಿಗೆ ವಿವಾಹ. ಮುಂಬೈಗೆ ಪಯಣ. ವಿವಾಹದ ನಂತರ ಮೊದಲ ಹನ್ನೆರಡು ವರ್ಷಗಳಲ್ಲಿ ಗೃಹಿಣಿಯಾಗಿ ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ ಪೋಷಣೆಗಳಲ್ಲಿ ತೊಡಗಿ ನಂತರ ಮಕ್ಕಳು ಬೆಳೆದು ದೊಡ್ಡವರಾದಂತೆ ಮತ್ತೆ ಶಿಕ್ಷಣದತ್ತ ಮನಸ್ಸು ಮಾಡಿದರು ಸುಮನ್ ಚಿಪ್ಳೂಣ್ಕರ್. ಮೊದಲು ಸೋಮಯ್ಯ ಕಾಲೇಜಿನಲ್ಲಿ ಎರಡು ವರ್ಷದ ಡಿ.ಎಡ್. ಕೋರ್ಸನ್ನು ಮುಗಿಸಿ ಭಾಂಡೂಪ್ ನ ಹಿಂದಿ ಶಾಲೆ ಮತ್ತು ಮುನ್ಸಿಪಲ್ ಕನ್ನಡ ಶಾಲೆಯಲ್ಲಿ ಅಧ್ಯಾಪಕಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಅಧ್ಯಾಪಕಿಯಾಗಿ ವೃತ್ತಿಯಲ್ಲಿರುವಾಗಲೇ ಮುಂಬೈನ ವಿಶ್ವ ವಿದ್ಯಾಲಯದಿಂದ Inter Arts ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದಳು. ನಂತರ B.A.(ಪ್ರಥಮ ದರ್ಜೆ) B.Ed., M.A. M.Ed.ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ನಂತರ ತೆಲುಗು ಭಾಷೆಯಲ್ಲಿ ಮೆಟ್ರಿಕ್ ಲೆವೆಲ್ ನ ಪರೀಕ್ಷೆಯಲ್ಲಿ ತೇರ್ಗಡೆಯಾದರು. ನಂತರ ಸಹ ಅಧ್ಯಾಪಕಿ, ಅಧ್ಯಾಪಕಿ, ಮುಖ್ಯ ಅಧ್ಯಾಪಕಿ, ನಿರೀಕ್ಷಕಿ, ಅಧೀಕ್ಷಕಿಯಾಗಿ 27 ವರ್ಷಗಳ ಸಾರ್ಥಕ ಅಧ್ಯಾಪನ ಸೇವೆಯನ್ನು ಸಲ್ಲಿಸಿದವರು ಸುಮನ್ ಚಿಪಳೂಣ್ಕರ್..
1998ರಲ್ಲಿ ಸೇವಾ ನಿವೃತ್ತಿಯ ನಂತರ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆಯುವುದರ ಜತೆಗೆ ಡಾ|| ಲಲಿತಾರಾವ್ ಅವರಿಂದ ಮುದ್ರಾ ವಿಜ್ಞಾನವನ್ನು ಅಭ್ಯಾಸ ಮಾಡಿ ಅದನ್ನು ಕರಗತಗೊಳಿಸಿಕೊಂಡು ದೇಶ ವಿದೇಶಗಳಲ್ಲಿ ಮುದ್ರಾ ವಿಜ್ಞಾನದ 800ಕ್ಕೂ ಮಿಕ್ಕಿ ಪ್ರಾತ್ಯಕ್ಷಿಕತೆಗಳನ್ನು ನಡೆಸಿ ಅದರಿಂದ ಬಂದ ಗೌರವ ಧನವನ್ನು ಸಮಾಜ ಸೇವೆ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದಾನವಿತ್ತ ಕೊಡುಗೈ ದಾನಿ ಸುಮನ್ ಚಿಪಳೂಣ್ಕರ್. ಇವರು ಕನ್ನಡ, ಮರಾಠಿ ಮತ್ತು ಆಂಗ್ಲ ಭಾಷೆಗಳಲ್ಲಿ ಬರೆದ 'ಮುದ್ರಾ ವಿಜ್ಞಾನ'ವೆಂಬ ಕೃತಿ 56 ಬಾರಿ ಪುನರ್ ಮುದ್ರಣಗೊಂಡು 70,000 ಪ್ರತಿಗಳು ಮಾರಾಟವಾಗಿ ನೂತನ ದಾಖಲೆಯನ್ನು ನಿರ್ಮಿಸಿದೆ.2007ರಲ್ಲಿ ಸುಮನ್ ಚಿಪ್ಲೂಣ್ಕರ್ ಅವರು ಬರೆದ ಮುದ್ರಾ ವಿಜ್ಞಾನ ಕೃತಿಗೆ ಉಡುಪಿಯ ಅಕಲಂಕ ಪ್ರತಿಷ್ಠಾನ 'ಅಕಲಂಕ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಯಾದಗಿರಿಯ ವಡಗೇರಾದಿಂದ ಬಂದ ಡಾ|| ಮರಿಯಪ್ಪ ನಾಟೇಕರ್ ಅವರು ಮುಂಬೈನಲ್ಲಿ ತಾವು ನೆಲೆ ನಿಲ್ಲುವುದಕ್ಕೆ ಕಾರಣರಾದ ಸುಮನ್ ಚಿಪ್ಲೂಣ್ಕರ್ ಅವರ ಹೆಸರಲ್ಲಿ ತಮ್ಮ ಹುಟ್ಟೂರಾದ ಯಾದಗಿರಿಯ ವಡಗೇರಾದಲ್ಲಿ 2014ರಲ್ಲಿ 'ಸುಮನ್ ಟ್ರಸ್ಟ್' ಅನ್ನು ಸ್ಥಾಪಿಸಿ ಅದರ ಮೂಲಕ ಬಡ ಮಕ್ಕಳಿಗೆ ಶಿಕ್ಷಣಕ್ಕಾಗಿ ನೆರವನ್ನು ನೀಡುತ್ತ ಬಂದಿರುವುದು ಸುಮನ್ ಚಿಪಳೂಣ್ಕರ್ ಅವರು ಗೈದಿರುವ ಸಮಾಜ ಸೇವೆಯ ಸ್ಪೂರ್ತಿಯಿಂದ.
ಶಿಕ್ಷಣದ ವೇಳೆ 'ಉತ್ತಮ ವಿದ್ಯಾರ್ಥಿ', ಅಧ್ಯಾಪನದಲ್ಲಿ 'ಉತ್ತಮ ಶಿಕ್ಷಕಿ', 'ಶಿಕ್ಷಣ ತಜ್ಞೆ', ಮುಂಬೈನ ಗೋಕುಲ ಸಂಸ್ಥೆಯಲ್ಲಿ 'ಗೋಕುಲ ಕಲಾಶ್ರೀ' ಪರಮ ದೈವಭಕ್ತೆ, ಆದರ್ಶ ಗೃಹಿಣಿ, ಅತಿಥಿ ಸೇವಾ ಪರಾಯಣೆ, ವೃಕ್ಷಾರೋಪಣ ಕಾರ್ಯಕ್ರಮಗಳ ಮೂಲಕ ವೃಕ್ಷ ಪ್ರೀತಿಯನ್ನು ಹೊಂದು ಪ್ರಕೃತಿಯನ್ನು ಉಳಿಸುವಲ್ಲಿ ಸಾಧನೆಗೈದವರು. ಮುಂಬೈನ ಕನ್ನಡಿಗರ ಸಂಸ್ಥೆಯಾದ ಗೋಕುಲದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದ ಸುಮನ್ ಅವರು ಅದರ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆಯಾಗಿಯೂ ಸೇವೆ ಗೈದವರು.
ಮುದ್ರಾ ವಿಜ್ಞಾನದ ಪ್ರಯೋಜನ ಸಮಾಜದ ಜನರಿಗೆ ದೊರೆಯಬೇಕು ಎಂದು ಯಾರು ಕರೆದರೂ ಹೋಗಿ ನಾಲ್ಕು ಭಾಷೆಗಳಲ್ಲಿ ಮೂರು ಗಂಟೆಗಳ ಕಾಲ ಮುದ್ರಾ ವಿಜ್ಞಾನದ ಮಹತ್ವ, ಮುದ್ರೆಗಳ ಪ್ರಾತ್ಯಕ್ಷಿಕೆ ಮತ್ತು ಅವುಗಳ ಉಪಯೋಗದ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದರು. ಇಂತಹ ಕಾರ್ಯಕ್ರಮಗಳ ಸಂಖ್ಯೆ 175ನ್ನು ಮೀರಿದೆ. ಇಂತಹ ಕಾರ್ಯಕ್ರಮಕ್ಕಾಗಿ ಆಯೋಜಕರು ನೀಡಿದ ಗೌರವ ಧನವನ್ನು ತನ್ನ ಸ್ವಂತಕ್ಕಾಗಿ ಬಳಸದೆ ಅನಾಥಾಶ್ರಮ, ಶಾಲೆಗಳು ಮತ್ತು ದಾದರ್ ನಲ್ಲಿರುವ ಕೊಳಚೆಗೇರಿ ಶಾಲಾ ಮಕ್ಕಳ ಶಿಕ್ಷಣದ ಶುಲ್ಕವನ್ನು ಭರಿಸಲು ನೀಡಿದ ಸಹೃದಯಿ ಸುಮನ್ ಚಿಪಳೂಣ್ಕರ್. ಕನ್ನಡದ ಕಸ್ತೂರಿ ಚಾನಲ್ ಇವರ ಮುದ್ರಾ ವಿಜ್ಞಾನದ 19 ಎಪಿಸೋಡ್ ಗಳನ್ನು ಪ್ರಸಾರ ಮಾಡಿದೆ.
ಅಮೆರಿಕಾದಲ್ಲಿನ ತನ್ನ ಮಗನ ಮನೆಯಲ್ಲಿ ಇರುವ ವೇಳೆ 12 ಸತ್ಸಂಗ ಕಾರ್ಯಕ್ರಮಗಳಲ್ಲಿ ಮುದ್ರಾ ವಿಜ್ಞಾನದ ಬಗ್ಗೆ ಹಿಂದಿ ಭಾಷೆಯಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. 2008ರಲ್ಲಿ ಪ್ರಕಟವಾದ ಇವರು ಬರೆದ ಮುದ್ರಾ ವಿಜ್ಞಾನದ ಇಂಗ್ಲಿಷ್ ಆವೃತ್ತಿಯ 30,000 ಪ್ರತಿಗಳು ಮಾರಾಟವಾಗಿವೆದರೆ ಅದು ಅವರ ಬರವಣಿಗೆಗೆ, ಮುದ್ರಾ ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಅವರು ಗೈದ ಸೇವೆಗೆ ಸಂದ ಗೌರವವೆಂದೇ ಹೇಳಬೇಕು.
ಸಾಧನೆಯ ಮೇರು ಶೃಂಗವನ್ನು ತಲುಪಿದರೂ ನಯ ವಿನಯ, ಸಮಯ ಪ್ರಜ್ಞೆಗಳನ್ನು ಹೊಂದಿದ ವ್ಯಕ್ತಿತ್ವದಿಂದಾಗಿ ಮುಂಬೈ ಕನ್ನಡಿಗರಿಗೆ ಆಕೆ ಸುಮನಕ್ಕ. ಬದುಕಿನ ಕೊನೆಯ ವರ್ಷಗಳಲ್ಲಿ ನಾಸಿಕ್ ನಲ್ಲಿ ತನ್ನ ಪತಿಯೊಂದಿಗೆ ವಾಸವಾಗಿದ್ದ ಸುಮನ್ ಚಿಪಳೂಣ್ಕರ ಅಲ್ಲಿಯೂ ತನ್ನ ಮುದ್ರಾ ವಿಜ್ಞಾನ ಮತ್ತು ಸಾಮಾಜಿಕ ಸೇವಾ ಕಾರ್ಯಗಳನ್ನು ಮುಂದುವರಿಸಿದರು. ಹೀಗೆ ಮುಲತಃ ಕನ್ನಡಿಗರಾಗಿ ಚಿತ್ಪಾವನರಾಗಿ ತನ್ನ ಕಾರ್ಯಕ್ಷೇತ್ರವಾದ ಮುಂಬೈನಲ್ಲಿ ಜನಾನುರಾಗಿಯಾಗಿ ತನ್ನ ಬದುಕನ್ನು ರೂಪಿಸಿಕೊಂಡು ಬದುಕಿದರೆ ಸುಮನಕ್ಕನಂತೆ ಬದುಕಬೇಕು ಎಂಬುದನ್ನು ಈ ಲೋಕಕ್ಕೆ ಸಾರಿ ೭೭ ವರ್ಷಗಳ ಸಾರ್ಥಕ ಬದುಕನ್ನು ಬಾಳಿ ಅಲ್ಪ ಕಾಲದ ಅನಾರೋಗ್ಯದಿಂದ ಮತ್ತೈದೆಯಾಗಿ ಫೆಬ್ರವರಿ 19, 2018ರಂದು ಅವರ ಆರಾಧ್ಯ ದೈವವಾದ ಗೋಪಾಲಕೃಷ್ಣನ ಪದತಲದಲ್ಲಿ ಐಕ್ಯರಾದರು.