ಖರೆ ಗಣಪತಿ ಶಾಸ್ತ್ರಿಗಳು ಧಾರ್ಮಿಕ ಕ್ಷೇತ್ರ

ಖರೆ ಗಣಪತಿ ಶಾಸ್ತ್ರಿಗಳು ಕರ್ನಾಟಕದ ವೈದಿಕ ಪರಂಪರೆಯ ಧ್ರುವತಾರೆ. 1901, ಇಪ್ಪತ್ತನೆಯ ಶತಮಾನದ ಮೊದಲ ದಿನ. ತಂದೆ ವೈದಿಕ ವಾಙ್ಮಯ ವಿಶಾರದ ಅನಂತ ಭಟ್ಟ ಖರೆ, ತಾಯಿ ಗೃಹಿಣಿ ಗೌರಿ. ಬಾಲಕನ ಭವ್ಯ ಭವಿತವ್ಯಕ್ಕೋ ಎಂಬಂತೆ ಖರೆ ದಂಪತಿಗಳು ಕಾರಣಾಂತರದಿಂದ ಶ್ರೀ ಗೋಕರ್ಣ ಕ್ಷೇತ್ರಕ್ಕೆ ವಲಸೆ ಹೋಗಬೇಕಾಯಿತು. ಬ್ರಹ್ಮೋಪದೇಶದ ಬಳಿಕ ಬಾಲಕ ಗಣಪತಿ ಉದ್ದಾಮ ಪಂಡಿತ ವೇ|ಮೂ| ಪಾಂಡುರಂಗ ಭಟ್ಟ ದಾತೆಯವರ ಬಳಿ ಶಿಷ್ಯತ್ವ ಸ್ವೀಕರಿಸಿದರು. ಸ್ತ್ರೀಯರಿಗೆ ವೇದಾಧ್ಯಯನ ಸಲ್ಲದು ಎಂಬ ಕಾಲದಲ್ಲೇ ತಮ್ಮ ಪುತ್ರಿಯರಿಗೆ ವೇದಾಧ್ಯಯನ ಮಾಡಿಸಿದ ಪ್ರಗತಿಪರ ಚಿಂಕರು ಈ ದಾತೆಯವರು. ಇಂತಹ ಗುರುವಿನ ಗರಡಿಯಲ್ಲಿ ಪಳಗಿದ ಈ ವಾಮನ ಮೂರ್ತಿಯ ಖ್ಯಾತಿ ಮುಂದೆ ಅಖಂಡ ಭಾರತವನ್ನು ವ್ಯಾಪಿಸಿತು.
ಸಾಧಕನಿಗೆ ಸಂಸಾರವೆಂಬುದು ಒಂದು ಬಂಧನವೆಂಬ ಚಿಂತನೆಯಿಂದ ಮದುವೆಗೊಪ್ಪದ ಯುವಕ ಖರೆ ಗಣಪತಿ ಶಾಸ್ತ್ರಿಗಳು ಗುರು ಹಿರಿಯರ ಮಾತಿಗೆ ಬೆಲೆಯಿತ್ತು ತನ್ನ ಗುರು ಪುತ್ರಿಯನ್ನು ಕೈಹಿಡಿದು ಗೃಹಸ್ಥಾಶ್ರಮಿಯಾದರು. ಕರ್ಮಠರಾದ ಶಾಸ್ತ್ರಿಗಳದು ಸೋಮವಾರ ನಿರಾಹಾರ ಮತ್ತು ಮೌನಧಾರಣ. ಸತ್ಸಂತಾನವನ್ನು ಪಡೆದ ಬಳಿಕ ಅವರ ದಾಂಪತ್ಯ ಪರಮಹಂಸ ಶಾರದೆಯರಂತಿತ್ತು ಎನ್ನುವುದು ಹಿರಿಯರಾಡುವ ಮಾತು. ತನ್ನ ತಂದೆ ಅನಂತಭಟ್ಟರ ಸ್ಮರಣಾರ್ಥ ಶಾಸ್ತ್ರಿಗಳು ಗೋಕರ್ಣದಲ್ಲಿ ಸಂಸ್ಕೃತ ಮತ್ತು ವೇದಾಧ್ಯಯನಕ್ಕಾಗಿ 'ಅನಂತ ವಿದ್ಯಾದಾಯಿನೀ ಪಾಠಶಾಲೆ'ಯನ್ನು ಪ್ರಾರಂಭಿಸಿದರು. ಈ ಪಾಠಶಾಲೆ ಕರ್ನಾಟಕದ ವೈದಿಕ ಪರಂಪರೆಗೆ ಅನೇಕ ಪ್ರಕಾಂಡ ಪಂಡಿತರನ್ನು ನೀಡಿದೆ.
ಖರೆ ಗಣಪತಿ ಶಾಸ್ತ್ರಿಗಳು ಭಾರತ ಸ್ವಾತಂತ್ರ್ಯಾಂದೋಲನದಲ್ಲಿ ಕೂಡ ಭಾಗವಹಿಸಿ ಜೈಲುವಾಸ ಅನುಭವಿಸಿದವರು. ತಾನು ಸ್ಥಾಪಿಸಿದ ವೇದಪಾಠಶಾಲೆಗೆ ಅಂದಿನ ಬ್ರಿಟೀಷ್ ಸರಕಾರದಿಂದ ಬರುತ್ತಿದ್ದ ಸಹಾಯಧನವನ್ನು ಕಳೆದಿಕೊಂಡದ್ದು ಅದಕ್ಕಾಗಿ ಅವರು ತೆತ್ತ ಬೆಲೆ. ಖರೆ ಶಾಸ್ತ್ರಿಗಳು ಸಂಸ್ಕೃತ ವಿದ್ಯಾವಿಶಾರದರಾದುದರಿಂದ ವೇದಗಳಲ್ಲಿ ಪ್ರಣೀತವಾದ ಯಜ್ಞಯಾಗಾದಿಗಳ ವಿಧಿವಿಧಾನಗಳನ್ನರಿತು ಭಾರತದ ಉದ್ದಗಲಕ್ಕೂ ಸಂಚರಿಸಿ ಅಸಂಖ್ಯ ಯಜ್ಞಯಾಗಗಳ ನೇತೃತ್ವವನ್ನು ವಹಿಸಿದವರು. 'ಯಾಗಗಳಲ್ಲಿ ಯಜುರ್ವೇದೀಯ ಸ್ವಾಹಾಕಾರ ನಿಷಿದ್ಧ 'ಎಂಬ ವಾದವನ್ನು ಅಲ್ಲಗಳೆದು ತಮ್ಮ ಅಗಾಧ ಪಾಂಡಿತ್ಯದಿಂದ ಯಜುರ್ವೇದೀಯ ಸ್ವಾಹಾಕರ ಅಶಾಸ್ತ್ರೀಯ ಮತ್ತು ನಿಷಿದ್ಧವಲ್ಲ ಎಂಬುದನ್ನು ವಿದ್ವಜ್ಜನರ ಸಭೆಯಲ್ಲಿ ವಾದಿಸಿ ತರ್ಕಬದ್ಧವಾಗಿ ನಿರೂಪಿಸಿದವರು. ಖರೆ ಶಾಸ್ತ್ರಿಯವರ ಈ ನಿಲುವಿನಿಂದಾಗಿ ವೈದಿಕ ಪರಂಪರೆಯಲ್ಲಿ ಹೊಸತೊಂದು ಅಧ್ಯಾಯ ಪ್ರಾರಂಭವಾಗಿ ಅವರ ನೇತೃತ್ವದಲ್ಲಿ ಗುಜರಾತ್, ಮಹಾರಾಷ್ಟ್ರ, ಆಂಧ್ರ, ಕರ್ನಾಟಕಗಳಲ್ಲಿ ಯಜುರ್ವೇದೀಯ ಸ್ವಾಹಾಕಾರ ಅನುಷ್ಠಾನಗಳು ನಡೆದವು. 1955ರಲ್ಲಿ ಪುಣೆಯಲ್ಲಿ ಶ್ರೌತಾಚಾರ್ಯ ಶಾಸ್ತ್ರೀ ದೀಕ್ಷಿತರು ನಡೆಸಿದ ಪಶುಹಿಂಸಾರಹಿತ ವಾಜಪೇಯ ಯಾಗದ ಅಧ್ವರ್ಯುವಾಗಿ ತಮ್ಮ ಪಾಂಡಿತ್ಯವನ್ನು ಮೆರೆದವರು ಖರೆ ಶಾಸ್ತ್ರಿಗಳು. ಈ ಯಾಗದ ಮಂತ್ರಗಳ ಧ್ವನಿಮುದ್ರಣ ಮತ್ತು ಚಿತ್ರೀಕರಣವನ್ನು ಭಾರತ ಮತ್ತು ಡೆನ್ಮಾರ್ಕ್ ಸರಕಾರಗಳ ವತಿಯಿಂದ ಮಾಡಲಾಗಿದೆ.ಖರೆ ಗಣಪತಿ ಶಾಸ್ತ್ರಿಗಳ ವಿದ್ವತ್ತನ್ನು ಗೌರವಿಸಿದವರಲ್ಲಿ ಮಹಾರಾಷ್ಟ್ರದ ರಾಜ್ಯಪಾಲೆ ವಿಜಯಲಕ್ಷ್ಮೀ ಪಂಡಿತ್, ಪಂಜಾಬಿನ ಆಗಿನ ರಾಜ್ಯಪಾಲ ವಿ.ಎನ್.ಗಾಡ್ಗೀಳ್ ಪ್ರಮುಖರು.ವೇದ, ಶಾಸ್ತ್ರ, ಪುರಾಣ, ಜ್ಯೋತಿಷ್ಯ, ಮೀಮಾಂಸಾ, ತರ್ಕಸಾಸ್ತ್ರಗಳಲ್ಲಿ ಅವರಿಗಿದ್ದ ಪಾಂಡಿತ್ಯವನ್ನು ಒಪ್ಪಿಕೊಂಡ ವಿದ್ವಜ್ಜನ ಸಮೂಹ ಅವರನ್ನು ಅಕ್ಕರೆಯಿಂದ 'ಖರೆಶಾಸ್ತ್ರೀ'ಗಳೆಂದು ಕರೆಯಿತು. ಪುತ್ರ ಸಂತಾನವಿಲ್ಲದೆ ಕೊರಗುವವರ ಬಾಳಿನಲ್ಲಿ ಪುತ್ರಕಾಮೇಷ್ಟಿ ಯಾಗಗಳನ್ನು ನಡೆಸಿ ಅವರ ಮಡಿಲನ್ನು ತುಂಬಿದವರು ಖರೆ ಶಾಸ್ತ್ರಿಗಳು.
ಪವಾಡ ಪುರುಷ ಶ್ರೀಧರ ಸ್ವಾಮಿಗಳು ಮತ್ತು ಖರೆಶಾಸ್ತ್ರಿಯವರ ನಡುವೆ ನಡೆದ ಘಟನೆಯೊಂದು ಹೀಗಿದೆ. ಪ್ರಪ್ರಥಮವಾಗಿ ಶ್ರೀಧರ ಸ್ವಾಮಿಗಳನ್ನು ಭೇಟಿ ಮಾಡಿದ ಖರೆ ಶಾಸ್ತ್ರಿಗಳು ಶ್ರೀಧರ ಸ್ವಾಮಿಗಳ ಪೂರ್ವಾಶ್ರಮದ ಬಗೆಗೆ ಕೇಳಿದರಂತೆ. ಶ್ರೀಧರ ಸ್ವಾಮಿಗಳು ಹೇಳಲಿಚ್ಛಿಸದೆ 'ಅದೆಲ್ಲ ನಿನಗೇಕೆ' ಅಂದರಂತೆ. ಖರೆ ಶಾಸ್ತ್ರಿಗಳು ಶ್ರೀಧರ ಸ್ವಾಮಿಗಳ ಜನನ ದಿನಾಂಕ ಮತ್ತು ಸಮಯವನ್ನು ತಿಳಿದುಕೊಂಡು ತಮ್ಮ ಯೋಗಶಕ್ತಿಯಿಂದ ಶ್ರೀಧರ ಸ್ವಾಮಿಗಳ ಪೂರ್ವಾಶ್ರಮದ ಬಗ್ಗೆ ಒಂದು ಕಾಗದದಲ್ಲಿ ಬರೆದಿಟ್ಟು ಸ್ವಾಮಿಗಳಿಗೆ ತೋರಿಸಿದರಂತೆ. ಈ ಅದ್ಭುತ ಯೋಗಶಕ್ತಿಯನ್ನು ಕಂಡುಕೊಂಡ ಸ್ವಾಮಿಗಳು ಖರೆ ಶಾಸ್ತ್ರಿಗಳು ಒಬ್ಬ ಯೋಗಪುರುಷರೆಂದು ಅರಿತುಕೊಂಡರಂತೆ.
ಇಂತಹ ಒಬ್ಬ ಶ್ರೇಷ್ಠ ವೈದಿಕ ಶಿಖಾಮಣಿ, ಯೋಗಪುರುಷನನ್ನು ತಮ್ಮ ಮನೆಯಲ್ಲಿರಿಸಿಕೊಂಡು, ಅವರ ಸೇವೆಗೈದು ಪುನೀತರಾದವರು ಮುಂಡಾಜೆಯ ಕೀರ್ತಿಶೇಷ ನಾರಾಯಣ ಭಿಡೆಯವರು. ಅವರ ನಿಧನಾನಂತರ ಅವರ ಪುತ್ರರಾದ ಶ್ರಿ. ಜಿ.ಎನ್. ಭಿಡೆ ಮತ್ತು ಕಮಲಾಬಾಯಿ ದಂಪತಿಗಳ ಮನೆಯಲ್ಲಿ ತಮ್ಮ ಬದುಕಿನ ಉತ್ತರಾರ್ಧವನ್ನು ಕಳೆದ ಖರೆ ಶಾಸ್ತ್ರಿಗಳು ಕೊನೆಯ ದಿನಗಳಲ್ಲಿ ಗೋಕರ್ಣದ ತಮ್ಮ ಸ್ವಗೃಹದಲ್ಲಿ 16-05-1982 ರಲ್ಲಿ ತಮ್ಮ ಭೌತಿಕ ಶರೀರವನ್ನು ತ್ಯಜಿಸಿದರು. ಅಖಂಡ ಭಾರತದ ವೈದಿಕ ಪರಂಪರೆಗೆ ಮುಕುಟ ಮಣಿಯಂತಿದ್ದ ಖರೆ ಗಣಪತಿ ಶಾಸ್ತ್ರಿಗಳು ಚಿರಶಾಂತಿಯನ್ನರಸಿ ವೇದಪುರುಷನಲ್ಲಿ ಲೀನವಾದರು.