ಕನ್ನಡದ ಕಟ್ಟಾಳು ವಿನಾಯಕರಾವ್ ಜೋಶಿ ಸಮಾಜ ಸೇವೆ

ಹಿಂದೆ ಓದಿ


 ಕನ್ನಡದ ಕಟ್ಟಾಳು ವಿನಾಯಕರಾವ್ ಜೋಶಿ

Don't just be there, do something, Exist....' ಫ್ರೆಂಚ್ ಅಸ್ಥಿತ್ವವಾದಿ, ಚಿಂತಕ ಸಾರ್ತ್ರೆಯ ಈ ಮಾತು ಕನ್ನಡದ ಕಟ್ಟಾಳು ವಿನಾಯಕರಾವ್ ಜೋಶಿಯವರಿಗೆ ಸಲ್ಲಬೇಕು.ವಿನಾಯಕರಾವ್ ಜೋಶಿಯವರ ಪೂರ್ವಜರು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲಾ ಗುಹಾಗರ್ ತಾಲೂಕಿನ ಪಾಲಶೇತ್ ಎಂಬಲ್ಲಿಯವರು. ಇದೇ ತಾಲ್ಲೂಕಿನ ಕೊಳಿಸರೆಯ ಲಕ್ಷ್ಮೀಕೇಶವ ಇವರ ಕುಲದೈವ. ಮೂಲದಲ್ಲಿ ಇವರದು ವೈದಿಕ ಮನೆತನ. ಆ ವೃತ್ತಿ ಸರಿಯಾಗಿ ನಡೆಯದೇ ಇದ್ದಾಗ ಇವರ ತಂದೆ ಬಾಬಜೀ ಜೋಶಿ ಒಂದು ರೂಪಾಯಿನ್ನು ಮುಷ್ಟಿಯಲ್ಲಿಟ್ಟುಕೊಂಡು ಕರ್ನಾಟಕದ ಧುಂಡಶಿಗೆ ಬಂದವರು. ಭತ್ತ ಮತ್ತು ಭತ್ತದ ಹುಲ್ಲಿನ ವ್ಯಾಪಾರವನ್ನು ಒಂದು ರೂಪಾಯಿ ಬಂಡವಾಳದಲ್ಲಿ ಪ್ರಾರಂಭಿಸಿ ವ್ಯವಹಾರದಲ್ಲಿ ನಿಷ್ಟೆ ಮತ್ತು ಪ್ರಾಮಾಣಿಕತೆಗಳನ್ನು ಮೆರೆದು ದುಂಢಶಿಯಲ್ಲೇ ಜಮೀನು ಖರೀದಿಸಿದರು. ಚಿಕ್ಕದೊಂದು ಮನೆಯನ್ನು ಕಟ್ಟಿದರು. ಈ ಧುಂಡಶಿಯಲ್ಲೇ 1961ರಲ್ಲಿ ವಿನಾಯಕರಾವ್ ಜೋಶಿಯವರ ಜನನವಾಯಿತು. ಮುಂದೆ ಕರ್ಜಗಿಯಲ್ಲಿ ಹಿರಿಯಣ್ಣ ನಾರಾಯಣರಾವ್ ಜೋಶಿಯವರ ಮನೆಯಲ್ಲಿದ್ದು ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಧಾರವಾಡ ಹೈಸ್ಕೂಲ್ (ಇಂದಿನ ವಿದ್ಯಾರಣ್ಯ ಹೈಸ್ಕೂಲ್)ನಲ್ಲಿ ಸಹಾಯಕ ಅಧ್ಯಾಪಕನೆಂದು ವೃತ್ತಿ ಜೀವನವನ್ನು ಆರಂಭಿಸಿ ಮುಂದೆ ಶಿಕ್ಷಣ ಇಲಾಖೆಯಲ್ಲಿ ಕಾರವಾರ, ವಿಜಾಪುರ, ಬೆಳಗಾವಿ ಜಿಲ್ಲೆಗಳಲ್ಲೂ ಸೇವೆ ಸಲ್ಲಿಸಿ 1908ರಿಂದ 1917ನೆ ಇಸವಿಯವರೆಗೆ ಧಾರವಾಡದ ಟ್ರೈನಿಂಗ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದರು. ಶಿಸ್ತು, ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಶಿಕ್ಷಣ ಸಂಸ್ಥೆಯಲ್ಲಿ ಜಾರಿಗೊಳಿಸಿ ಧಾರವಾಡದ ಟ್ರೈನಿಂಗ್ ಕಾಲೇಜ್ ಒಂದು ಮಾದರಿ ಶಿಕ್ಷಣ ಸಂಸ್ಥೆಯೆನ್ನುವಂತೆ ಮಾಡಿದ ಕೀರ್ತಿವಿನಾಯಕರಾವ್ ಜೋಶಿಯವರಿಗೆ ಸಲ್ಲಬೇಕು. ಇವರ ಕರ್ತವ್ಯ ನಿಷ್ಠೆಗಾಗಿ 1911ರಲ್ಲಿ ಸರಕಾರದಿಂದ ಬೆಳ್ಳಿ ಪದಕ ಪ್ರದಾನ. ತಮ್ಮ ವೃತ್ತಿಯ ಕೊನೆಯ ದಿನಗಳಲ್ಲಿ South regionನ Education inspector ಆಗಿ 1917ರಲ್ಲಿ ನಿವೃತ್ತಿ.

ಸ್ವಾತಂತ್ರ್ಯಪೂರ್ವದ ದಿನಗಳವು. ಭಾರತದಲ್ಲಿ ಬ್ರಿಟಿಷ್ ಆಡಳಿತದ ಕುರಿತಂತೆ ಜನರಲ್ಲಿ ಅಸಹನೆ ಪ್ರಾರಂಭವಾಗಿದ್ದ ಕಾಲವದು. ಭಾರತೀಯ ಕಾಂಗ್ರೆಸ್ಸನ್ನು ಸೇರಿ 1921ರ ಅಸಹಕಾರ ಚಳುವಳಿಯಲ್ಲಿ ನೇರವಾಗಿ ಧುಮುಕಿದ ಜೋಶಿಯವರು ತಮ್ಮ 'ರಾವ್ ಬಹದ್ದೂರ್' ಪದವಿಯನ್ನೇ ಸರಕಾರಕ್ಕೆ ಹಿಂದಿರುಗಿಸಿದವರು. ಇವರು ರಾಜಕೀಯದಲ್ಲಿದ್ದರೂ ಎನ್ನುವ ಕಾರಣಕ್ಕಾಗಿ ಸರಕಾರದಿಂದ ಇವರ ಪಿಂಚಣಿಗೆ ಸಂಚಕಾರ. ಸ್ವಾತಂತ್ರ್ಯ ಹೋರಾಟದ ಆ ಸಮಯದಲ್ಲಿ ಧಾರವಾಡದ ಜಕಣುಬಾವಿ ಎದುರಿನ ಖಿಲಾಫತ್ ಮೈದಾನದಲ್ಲಿ ಕಾಂಗ್ರೆಸ್ ಏರ್ಪಡಿಸಿದ ಬೃಹತ್ ಸಭೆಯಲ್ಲಿ ಗೊಂದಲ, ಗಲಾಟೆಗಳಾಗಿ ಬ್ರಿಟಿಷ್ ಸರಕಾರ ಫಯರಿಂಗ್ ಮಾಡಿ ಕೆಲ ಸಾವುನೋವುಗಳಾದ ದುಃಖದ ಸಮಯವದು. ಆಗ ಧಾರವಾಡದಲ್ಲಿ ಕಲೆಕ್ಟರ್ ಆಗಿದ್ದವನು ಮಿ.ಪೇಂಟರ್ ಎನ್ನು ಇಂಗ್ಲಿಷ್ ಅಧಿಕಾರಿ. ಈಘಟನೆಯಿಂದ ರೋಸಿದ ವಿನಾಯಕರಾವ್ ಜೋಶಿ ಗವರ್ನರರಿಗ 'I charge Paintor with murder...' ಎಂಬ ತಂತಿಯನ್ನು ಕಳುಹಿಸಿದರು. ಇದು ಅವರ ಪಿಂಚಣಿ ತಡೆಹಿಡಿಯುವುದಕ್ಕಿದ್ದ ಕಾರಣ. 'I regret my telegram... ಎಂದು ಬರವಣಿಗೆಯಲ್ಲಿ ತಿಳಿಸಿ, ನಿಮ್ಮ ಪಿಂಚಣಿ ಪುನಃ ಪ್ರಾರಂಭಿಸುತ್ತೇವೆ ಎಂದಿತು ಸರಕಾರ. ಈ ಆಮಿಷಕ್ಕೆ ಬಲಿಬೀಳದ ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರಿವರು. ಸಮಯದಲ್ಲಿ 'Every sacrifice will strengthen the cause of Independence struggle...' ಇದು ಗಾಂದೀಜಿಯವರು ಜೋಶಿಯವರಿಗೆ ಬರೆದ ಪತ್ರದಲ್ಲಿದ್ದ ಸಾಲುಗಳು. 1937ರಲ್ಲಿ ಪಿಂಚಣಿ ಪುನಃ ಪ್ರಾರಂಭವಾದರೂ ಈ ಅವಧಿಯಲ್ಲಿ ಅವರು ಕಳೆದುಕೊಂಡ ಮೊತ್ತ ಆಗಿನ ಕಾಲಕ್ಕೆ 37,000 ರೂಪಾಯಿಗಳು. ಕಾಂಗ್ರೆಸ್ ಕಚೇರಿಯನ್ನು ಮಾಳಮಡ್ಡಿಯ ತಮ್ಮ ಮನೆಯಲ್ಲಿ ನಡೆಸುತ್ತಿದ್ದುದಕ್ಕಾಗಿ ಸರಕಾರ ಅವರ ಮನೆಗೆ ಬೀಗ ಹಾಕಿತು.ಧಾರವಾಡ - ಪುಣೆ ಹೆದ್ದಾರಿಯಲ್ಲಿ ಅಗ್ರಿಕಲ್ಚರಲ್ ಟ್ರೈನಿಂಗ್ ಗಾಗಿದ್ದ ಜಾಗವನ್ನು ಸರಕಾರ ಹರಾಜು ಹಾಕಿದಾಗ ವಿನಾಯಕರಾವ್ ಜೋಶಿಯವರು ಆ ಜಾಗವನ್ನು ಕೊಂಡು ಅಲ್ಲಿ ಮನೆ ಕಟ್ಟಿದರು. ಈಗಲೂ ಅದು ಧಾರವಾಡದವರಿಗೆ ಚಿರಪರಿಚಿತವಾದ 'ಜೋಶಿ ಫಾರ್ಮ್'. ಜೋಶಿ ಕುಟುಂಬಿಕರು ಈಗಲೂ ಅಲ್ಲಿ ವಾಸವಾಗಿದ್ದಾರೆ.

ಕೇವಲ ಪದವಿ ಪರೀಕ್ಷೆ ಪಾಸಾಗಿ ವೃತ್ತಿಜೀವನ ಪ್ರಾರಂಭಿಸಿದ ಜೋಶಿಯವರು ಮುಂಬೈನ ಎರಡು ವಿಶ್ವವಿದ್ಯಾಲಯಗಳಿಂದ ಬಿ.ಎ. ಪದವಿ ಮತ್ತು ಸ್ನಾತಕೋತ್ತರ ಎಂ.ಎ. ಪದವಿಗಳನ್ನು ಪಡೆದವರು. ಕನ್ನಡ ಪರೀಕ್ಷೆಗಳ ಎಕ್ಸಾಮಿನರ್ ಅಂತ ನಿಯುಕ್ತರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದವರು. ಧಾರವಾಡದ ಕರ್ನಾಟಕ ಸಂಘದ ಆಜೀವ ಸದಸ್ಯರಾಗಿ 1912ರಿಂದ 1915ರ ಅವಧಿಗೆ ಅದರ ಅಧ್ಯಕ್ಷರಾಗಿ ಕನ್ನಡದ ಸೇವೆಗೈದ ಕೀರ್ತಿ ಇವರ ಪಾಲಿನದು. ಬಡ ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಧಾರವಾಡದ ಕರಂದೀಕರ್ ಚಾರಿಟೆಬಲ್ ಟ್ರಸ್ಟ್ ನಲ್ಲಿ ಜೋಶಿಯವರು ಇಪ್ಪತ್ತೈದುಕ್ಕೂ ವರ್ಷಗಳ ಕಾಲ ಮ್ಯಾನೆಜಿಂಗ್ ಟ್ರಸ್ಟಿಯಾಗಿ ನಿಸ್ಪೃಹ ಸೇವೆ ಸಲ್ಲಿಸಿದ್ದಾರೆ. ನಿಷ್ಟೆ , ಪ್ರಾಮಾಣಿಕತೆ, ದೇಶ ಪ್ರೇಮ, ಕನ್ನಡಾಭಿಮಾನ ಇವುಗಳೆಲ್ಲ ಎರಕ ಹೋಯಿದಂತಿದ್ದ ಆದರ್ಶ ವ್ಯಕತ್ತಿತ್ವ ಅವರದು. ಅವರು ಗೊಡ್ಡು ಸಂಪ್ರದಾಯಗಳ ವಿರೋಧಿಯಾಗಿದ್ದವರು. ತಮ್ಮ ಮನೆಯಲ್ಲೊಮ್ಮೆ ಸಕೇಶಿ ವಿಧವೆಯೋರ್ವರು ಶ್ರಾದ್ಧದ ದಿನ ಅಡುಗೆ ಮಾಡಿದುದನ್ನು ಪುರೋಹಿತರು ವಿರೋಧಿಸಿದಾಗ 'ಶ್ರಾದ್ಧ ನಿಂತರೂ ಪರವಾಗಿಲ್ಲ, ಅಡಿಗೆ ಜಾನಕಿ ಬಾಯಿಯದೇ..' ಎಂದ ಪ್ರಗತಿಪರರಿವರು. 1942ನೇ ಇಸವಿಯ ದೀಪಾವಳಿಯ ಸಂದರ್ಭದಲ್ಲಿ ವಿನಾಯಕರಾವ್ ಜೋಶಿಯವರು ತಮ್ಮ 80 ವರ್ಷಗಳ ಸಾರ್ಥಕ ಬದುಕಿಗೆ ವಿದಾಯವನ್ನು ಹೇಳಿದರು.