ಚಿತ್ಪಾವನಿ ಭಾಷೆ

ಚಿತ್ಪಾವನಿ ಮ್ಹಣ್ಯೊ (ಚಿತ್ಪಾವನಿ ನುಡಿಗಟ್ಟುಗಳು)

ಹಿಂದೆ ಓದಿ


                                                                  ಚಿತ್ಪಾವನರ ಭಾಷೆ 'ಚಿತ್ಪಾವನಿ' ಎಂಬುದು ಒಂದು ಬಗೆಯ ಮರಾಠಿ ಪ್ರಾಕೃತ. ಇದು ಹದಿನೆರಡನೆಯ ಶತಮಾನದ ಯಾದವಕಾಲೀನ ಮರಾಠಿ ಭಾಷೆಯ ಒಂದು ಕವಲಾಗಿರಬೇಕು. (ಡಾ|| ವಾಸುದೇವ ಕಾಕತ್ಕರ, ದೆಹಲಿ-ಇವರು ನೀಡಿರುವ ಮಾಹಿತಿ) ಈ ಭಾಷೆಯು ಮಹಾರಾಷ್ಟ್ರದ ಕರಾವಳಿಯ ಚಿಪಳೂಣ ಪ್ರದೇಶದಲ್ಲಿ ರೂಪುಗೊಂಡುದರಿಂದ, ಈ ಭಾಷೆಗೆ ಕೊಂಕಣಿ ಭಾಷೆಯ ಸ್ವಭಾವವೂ ಕೆಲಮಟ್ಟಿಗೆ ಇದೆ. ಸದ್ಯ ಈ ಭಾಷೆಯು ಕೊಂಕಣದ ರಾಜಾಪುರದಿಂದ ಉತ್ತರಕ್ಕೆ ಲುಪ್ತವಾಗಿದ್ದು, ಗೋವಾ- ಸಾವಂತವಾಡಿ ಪ್ರದೇಶಗಳಲ್ಲೂ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜೀವಂತವಾಗಿದೆ. ಒಂದು ಸತ್ಯವನ್ನು, ನೀತಿಯನ್ನು, ಅನುಭವವನ್ನು ಅಚ್ಚುಕಟ್ಟಾಗಿ, ಸಂಕ್ಷಿಪ್ತವಾಗಿ, ಕಾವ್ಯಾತ್ಮಕವಾದ ಮಾತಿನಲ್ಲಿ ಹೇಳುವಂತಹುದೆ 'ಗಾದೆ'. ಲೋಕೋಕ್ತಿ, ವಾಗ್ರೂಢಿ, ನಾಣ್ಣುಡಿ ಮೊದಲಾದುವು ಅದಕ್ಕೆ ಪರ್ಯಾಯಗಳು. ಗಾದೆಗಳಲ್ಲಿ ಒಂದು ಸಮುದಾಯದ ಜೀವನಾನುಭವ, ಜೀವನಕ್ರಮ, ನಂಬಿಕೆ, ಇತಿಹಾಸ, ನಡೆನುಡಿ, ಆಹಾರ-ವಿಹಾರ, ಮೌಲ್ಯ ಪರಿಕಲ್ಪನೆ ಮೊದಲಾದ ಸಂಗತಿಗಳು ಒಳಗೊಂಡಿರುತ್ತವೆ. ಗಾದೆಗಳನ್ನು ಹಲವು ದೃಷ್ಟಿಕೋನಗಳಿಂದ ಪರಿಶೀಲಿಸಿ ಅಧ್ಯಯನಗಳು ನಡೆದಿವೆ, ನಡೆಯುತ್ತಿವೆ. ಈ ಮಾತುಗಳನ್ನೇ ವಾಗ್ರೂಢಿ ನುಡಿಗಟ್ಟುಗಳ ಕುರಿತೂ ಹೇಳಬಹುದು. ಗಾದೆ, ನುಡಿಕಟ್ಟುಗಳು ಜೀವನದ, ಸಂಸ್ಕೃತಿಯ ಪರಿಪಾಕದಿಂದ ಹೊರಹೊಮ್ಮಿದ ಫಲಗಳೆನ್ನಬಹುದು.

ಸಂಕಲಿತವಾದ 'ಹೇಳಿಕೆ'ಗಳಲ್ಲಿ ಕೆಲವು ಗಾದೆಗಳು ಬೇರೆ ಭಾಷೆಗಳಿಂದ ಚಿತ್ಪಾವನಿ ಭಾಷೆಗೆ ಬಂದವುಗಳೂ ಇವೆ. ಭಾಷಿಕ, ಸಾಂಸ್ಕೃತಿಕ ಪ್ರಕಾರಗಳು, ಆಕೃತಿಗಳು ಒಂದು ಜನಾಂಗದಿಂದ ಇನ್ನೊಂದಕ್ಕೂ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೂ ವರ್ಗಾಣೆಗೊಳ್ಳುವುದು ಸಾಮಾನ್ಯ ವಿಚಾರ. ಕೆಲವು ಎರಡೂ ಭಾಷೆಗಳಲ್ಲಿ ಸಮಾನಾಂತರವಾಗಿ, ಸ್ವತಂತ್ರವಾಗಿ ಬೆಳೆದಿರುವುದೂ ಇರುತ್ತದೆ. ಆದರೆ ಕೆಲವು ಮಾತ್ರ ಸ್ಪಷ್ಟವಾಗಿ ಮೂಲವನ್ನು ತೋರ್ಪಡಿಸುತ್ತವೆ. ಕೆಳಗಿನ ಕೆಲವು ಗಾದೆಗಳು ಕನ್ನಡ ಮತ್ತು ತುಳು ಭಾಷೆಯಿಂದ ಬಂದವುಗಳು. "ಅತಿ ಆಸ ಗತಿ ಕೇಡು" (ಅತಿ ಆಸೆ ಗತಿ ಕೇಡು - ಕನ್ನಡ), "ನತ್ಲೆಲೆಲಾ ಎಕ್ಕೀಚಿ ಚಿಂತಾ, ತ್ಸಲ್ಲೆಲಾ ನಾನಾ ಚಿಂತಾ" (ಇಲ್ಲದವನಿಗೆ ಒಂದೇ ಚಿಂತೆ, ಇದ್ದವನಿಗೆ ನೂರಾರು ಚಿಂತೆ - ಕನ್ನಡ), "ಖಾಲ್ಲ ತ್ಸಲ್ಲೆ ಇತ್ಲಚಿ ಪಾಯಿ ತ್ಸೋಡವೆ" (ಹಾಸಿಗೆಯಿದ್ದಷ್ಟೇ ಕಾಲು ಚಾಚಬೇಕು - ಕನ್ನಡ), "ಮುತ್ತಾಂತು ಗಾಳೊಘಾಲ್ತೆಲೊ" (ಮೂತ್ರದಲ್ಲಿ ಗಾಳ ಹಾಕುವವನು - ಕನ್ನಡ, ತುಳು), ಮುಟ್ಟಾಳೆಚೊ ಹನ್ನಾಹಿ, ಮುಂಡಾಸಾಚೊ ಯೇನ್ನಾಹಿ" (ಮುಟ್ಟಾಳೆ (ಅಡಿಕೆ ಹಾಳೆಯಿಂದ ಮಾಡಿದ ಶಿರಸ್ತ್ರಾಣ) ಆಗುವುದಿಲ್ಲ, ಮುಂಡಾಸಿನವ ಬರುವುದಿಲ್ಲ - ತುಳು), "ಮೆಲ್ಲ ವಾದ್ಯ ವಾಜ್ಜವ್ವೆ ಹನ್ನಾಹಿ" (ಮೆಲ್ಲನೆ ವಾದ್ಯ ಬಾರಿಸಲಾಗುವುದಿಲ್ಲ- ತುಳು), "ಖಾಳಾಲಾ ಆಯಿಲೆಲೊ ಬಡ್ಡು ಬೊಳ್ಳೆಲಾಯಿ ಯೇರ" (ಕಾಳಿನಿಗೆ ಬಂಧ ಛಡಿ ಏಟು ಬೊಳ್ಳನಿಗೂ ಬರಬಹುದು - ತುಳು).
ಸ್ಥಳೀಯವಾದ ಗಾದೆಗಳು ಭಾಷಾಂತರಗೊಂಡು ಚಿತ್ಪಾವನಿ ಭಾಷೆಯನ್ನು ಪ್ರವೇಶಿಸಿವೆ. ಪೂರ್ತಿಯಾಗಿ ಅಲ್ಲದಿದ್ದರೂ ಒಂದು ಅಂಶ ಅಥವಾ ಸ್ಥಳೀಯವಾದ ಒಂದು ಶಬ್ದವಾದರೂ ಸೇರಿಕೊಂಡಿರುವುದನ್ನು ಮೇಲಿನ ಗಾದೆಗಳಲ್ಲಿ ಕಾಣಬಹುದು.

ಇಂತಹ ಭಾಷಿಕ ಪ್ರಕಾರಗಳನ್ನು, ಆಕೃತಿಗಳನ್ನು ಸರಿಯಾಗಿ ಪರಿಭಾವಿಸಿ, ಅದರ ಸ್ವರೂಪವನ್ನು, ಅಂದವನ್ನು, ಆಶಯವನ್ನು ಅರ್ಥೈಸಬೇಕಾದರೆ ಅವುಗಳನ್ನು ಆಯಾ ಭಾಷೆಯಲ್ಲಿ, ಪ್ರಯೋಗ ಸಂದರ್ಭದಲ್ಲಿ ಕೇಳಿ-ನೋಡಿ ಅನುಭವಿಸಬೇಕು. ಉಳಿದಂತೆ ಸಂಗ್ರಹ ಮತ್ತು ಅನುವಾದಗಳ ಪ್ರಯೋಜನವು ಸೀಮಿತವಾದುದು.
ಚಿತ್ಪಾವನಿ ಗಾದೆಗಳಲ್ಲಿ ಸ್ವಾಭಾವಿಕವಾಗಿ ಚಿತ್ಪಾವನಿ ಜನ ಜೀವನದ ಪರಿಸರವು ಚಿತ್ರಿತವಾಗಿರುವುದನ್ನು ಕಾಣುತ್ತೇವೆ. "ಅಳ್ವಾಲಾ ಘೋಡೊ ಬಾಂಧವೆಚೊ" (ಕೆಸುವಿಗೆ ಕುದುರೆಯನ್ನು ಕಟ್ಟುವುದು), "ಉಂತ್ಸಾವರಿ ಮೋಹು ಪಿಕ್ಕಸ್ಸ^" (ಕಬ್ಬಿನ ಮೇಲೆ ಹೆಜ್ಜೇನು ತಟ್ಟಿ ಬೆಳೆದಂತೆ), "ಎಕ್ಕಾ ಗೊಠ್ಠೆಚಿಗೋರ್ವ^" (ಒಂದೇ ಹಟ್ಟಿಯ ಜಾನುವಾರು),"ಕಾರತ^ ಗೋಡ ಹವ್ನಿ ಕೆತ್ತಿ ಹಯಿರ" (ಹಾಗಲಕಾಯಿ ಸಿಹಿಯಾದರೆ ಎಷ್ಟು ಸಿಹಿಯಾದೀತು), "ಖೋರ^ಆಪ್ಲೆಹಾರಿ ಒಡ್ಢವೆಚ"(ಹಾರೆ ನಮ್ಮ ಕಡೆಗೇ ಎಳೆಯುವುದು), "ಚಾಂಪ ಫುಲ್ಲಲತೆ ಸಾಂಘವ^ ಮ್ಹಣಿ ನಾಹಿ" (ಸಂಪಿಗೆ ಅರಳಿದರೆ ಹೇಳಬೇಕೆಂದಿಲ್ಲ), "ತಾಕ್ಕಾಲಾ ಆಯ್ಲೆಲೆಲಾ ಮ್ಹೆಶ್ಶಿಚ^ ಕ್ರಯ ಕಿಲ್ಹಾ?" (ಮಜ್ಜಿಗೆಗೆ ಬಂದವನಿಗೆ ಎಮ್ಮೆಯ ಕ್ರಯ ಯಾಕೆ?),"ತೂಪ ಪೋಳಿ ಏಕ ಜಾಲಿ, ದೋಣೊ ಘಾಳಿಲಾ ಗೆಲ್ಲೊ" (ತುಪ್ಪ ಹೋಳಿಗೆ ಒಂದಾಯ್ತು, ದೊನ್ನೆ ಹೋಯಿತು ತಿಪ್ಪೆಗೆ),"ತೂಸು ಕಾಂಡ್ಯೆಲೊತೆ ತಾಂದುಳ ಮಿಳತ ನಾಹಿ"( ಹೊಟ್ಟು ಕುಟ್ಟಿದರೆ ಅಕ್ಕಿ ಸಿಗುವುದಿಲ್ಲ), " ದೂರ್ಚೆ ಆಂಬೆ ಪಕ್ಷಾ ಗೊಟ್ಟಾಸ್ಚೊ ಆಂಬಾಡೊ ಹಯಿರ" (ದೂರದ ಮಾವಿಗಿಂತ ಹತ್ತಿರದ ಅಮ್ಟೆ ಕಾಯಿಯಾದೀತು), "ಭರ್ಲೆ ಪೊಟ್ಟಾ ಉಂಬರ ಕsಡು" (ತುಂಬಿದ ಹೊಟ್ಟೆಗೆ ಗಾರಿಗೆ ಕಹಿ) ಇತ್ಯಾದಿ.

ಗಾದೆಗಳಲ್ಲಿ ಹಾಸ್ಯಪ್ರಜ್ಞೆ ಸಶಕ್ತವಾಗಿರುವುದನ್ನು ನಾವು ಕಾಣಬಹುದಾಗಿದೆ. ಉದಾ: ರಾಜಾ ಯೇತ್ಸೆ ಮ್ಹಣಿ ಕುಯಿರಿ ಪಿಕ್ಕವ್ವೆ ಹನ್ನಾಹಿ^" (ರಾಜ ಬರುತ್ತಾನೆಂದು ಎಳೆ ಹಲಸನ್ನು ಹಣ್ಣಾಗಿಸಲು ಸಾಧ್ಯವಿಲ್ಲ), " ಲಾಜ್ಜಾಲಾನಿ ಪೆಜ್ಜಾಲಾ ದೂರಿ" (ಲಜ್ಜೆಗೂ ಗಂಜಿಗೂ ದೂರ), ಸೂಣೆಲಾ ಸೊವೆಳ ನೆಸ್ಸವ್ವೆಚ ಕಿಲ್ಹಾ?"( ನಾಯಿಗೆ ಮಡಿಬಟ್ಟೆ ಉಡಿಸುವುದೇಕೆ?) ಇತ್ಯಾದಿ.
ಗಾದೆಗಳಲ್ಲಿ ನಮ್ಮ ದೈನಂದಿನ ವ್ಯವಸಾಯ, ವ್ಯವಹಾರ, ಸುಖ-ದುಃಖ,ಕಷ್ಟ ಕಾರ್ಪಣ್ಯಗಳು ಎದ್ದು ತೋರುತ್ತವೆ. ಅವು ಅರ್ಥಪೂರ್ಣ, ಧ್ವನಿಪೂರ್ಣವಾಗಿದ್ದು ಅವು ಸ್ವಯಂಪೂರ್ಣವಾಗಿವೆ.ಅವುಗಳಿಗೆ ವಿವರಣೆಯ ಅಗತ್ಯವಿಲ್ಲ. "ವಾಢ್ಯಾಂತು ಖಣ, ಘರಾಂತು ಘಡ" (ತೋಟದಲ್ಲಿ ಅಗೆ, ಮನೆಯಲ್ಲಿ ಬಾಳೆಗೊನೆಗಳು), "ಫುಗ್ಗಿಲಾ ಘಾಲ್ಲ^ತೆಪಾಣಿ ಫುಗ್ಗೆ ನಾಹಿ^" (ನೀರಿಗೆ ಅಡ್ಡ ಹಾಕಿದರೆ ನೀರೂ ಮೇಲೆರದು),"ದೇವಾಚಿ ಕರ್ಣಿ, ಶಾಳೇಂತು ಪಾಣಿ" (ದೇವರ ಸೃಷ್ಟಿ, ಸಿಯಾಳದಲ್ಲಿ ನೀರು)


ಕೌಟುಂಬಿಕ ಚಿತ್ರಣವನ್ನು ನಾವು ಗಾದೆಮಾತುಗಳಲ್ಲಿ ಕಾಣಬಹುದು. ತಂದೆ-ಮಗ, ತಾಯಿ, ಮಗಳು ಮತ್ತು ಸೊಸೆ, ಮಾವ-ಅಳಿಯ ಮೊದಲಾದ ಸಂಬಂಧಗಳಿಗೆ ಸಂಬಂಧಿಸಿದ ಗಾದೆಗಳು ಹೀಗಿವೆ: "ಆಯಿ ಮರೊ ಪಣ ಮಾವ್ಶಿ ಉರೊ" (ಅಮ್ಮ ತೀರಿದರೂ ಚಿಕ್ಕಮ್ಮ ಉಳಿಯಲಿ), "ಆಣ್ಣಾ ಪಕ್ಷಾ ವೊಹೊನಿ ಮೊಟ್ಟಿ" (ಅಣ್ಣನಿಗಿಂತ ಅತ್ತಿಗೆ ದೊಡ್ಡವಳು), "ಬೊಲ್ಲೆ ಧೂವೆ ಲಾಗ್ಗೆ ಸುನ್ಹೇ" (ಹೇಳುವುದು ಮಗಳಿಗೆ ತಾಕಬೇಕು ಸೊಸೆಗೆ), " ಹಸ್ತ್ಯಾ ಬಾಯ್ಯಾಕಾಲಾ ಪಾತ್ಯೊನಾಕಾ, ರಡ್ವೆ ಪುರುಷಾಲಾ ಪಾತ್ಯೊನಾಕಾ" (ನಗುವ ಹೆಂಗಸು ಮತ್ತು ಅಳುವ ಗಂಡಸನ್ನು ನಂಬಬಾರದು), "ಆಯ್ಯೆಲಾಶಿ ನಾಕಾಸ್ಸಲ್ಲೊ ಜಗತ್ಯಾಲಾ ನಾಕಾ" (ತಾಯಿಗೆ ಬೇಡದವನು ಜಗತ್ತಿಗೆ ಬೇಡ).

ಭೂತಾರಾಧನೆ ಹಾಗೂ ಇತರ ಸಂಪ್ರದಾಯ, ನಂಬಿಕೆಗಳು, ಗಾದೆಗಳ ಮೂಲಕ ಪ್ರತಿಬಿಂಬಿಸಲ್ಪಟ್ಟಿವೆ. ಆಯಾ ಕಾಲದ ಜನರ ಜೀವನದ ಉಸಿರೇ ಆಯಾ ಕಾಲದ ನಂಬಿಕೆಗಳು. ಉದಾಹರಣೆಗೆ " ಆಂಗಾವರಿ ಆಯಿಲತ್ಸೆ" (ಮೈಮೇಲೆ ಬಂದಿದೆ),ಮನ್ ಚಾಂಗ್ಲ್ಯಾ ತ್ಯಾಹಾ ಕಾತ್ಥೊಟ್ಳ್ಯಾಂತು ಗಂಗಾ" (ಮನ ಶುದ್ಧವಾಗಿದ್ದರೆ ಗಡಿಗೆಯಲ್ಲಿ ನೀರು) , "ಎಖಾದಶಿ ತ್ಯಾಹಾ ಶಿವರಾತ್ರಿ"( ಏಕಾದಶಿಯ ಬಳಿ ಶಿವರಾತ್ರಿ), "ಬೇತಾಳಾಲಾ ಬಾಯ್ಯಾಕೊ ನಾಹಿ ಸಂಕ್ರಾಂತಿಲಾ ನವರೊ ನಾಹಿ" (ಬೇತಾಳನಿಗೆ ಹೆಂಡತಿ ಇಲ್ಲ, ಸಂಕ್ರಾಂತಿಗೆ ಗಂಡನಿಲ್ಲ).

ಹೀಗೆ ಚಿತ್ಪಾವನಿ ಭಾಷೆ, ಸಂಸ್ಕೃತಿಗಳನ್ನು ವಿವಿಧ ಕೋನಗಳಿಂದ ಅಭ್ಯಾಸ ಮಾಡಿದಾಗ ನಮಗೆ ಅನೇಕ ಗಾದೆಗಳು ಲಭ್ಯವಾಗುತ್ತವೆ. 

                 _  ಶ್ರೀಮತಿ ಸುಚೇತಾ ಜೋಶಿ, ಮಂಗಳೂರು.