ಚಿತ್ಪಾವನಿ ಭಾಷೆ
"ಭಾಷಾ ವ್ಯಕ್ತಯಾಂ ವಾಚಿ''. ಭಾಷೆ ಶಬ್ದ, ಲಿಪಿಗಳ ಮೂಲಕ ಸಂವಹನಕ್ಕೊದಗಿ ಬರುವ ಪ್ರಬಲ ಮಾಧ್ಯಮ. ಮಾತು, ಭಾಷಣ, ಸಂಭಾಷಣ, ಸಂಗೀತ, ಸಂವಾದಗಳು ಭಾಷೆಯ ಧ್ವನಿರೂಪದ ಒಂದು ಸ್ವರೂಪವಾದರೆ, ಭಾಷೆಯನ್ನು ವ್ಯಾಕರಣಕ್ಕೊಳಪಡಿಸಿ ಅದರ ಧ್ವನಿರೂಪವನ್ನು ಸಂಕೇತಗಳ ಮೂಲಕ ದಾಖಲಿಸುವ ಪ್ರಯತ್ನವೇ ಭಾಷೆಯ "ಲಿಪಿ'' ರೂಪ. ಮನುಷ್ಯರ ನಡುವಿನ ಭಾವನಾತ್ಮಕ, ವ್ಯಾವಹಾರಿಕ ಇಚ್ಛೆಗಳ ಆದಾನ-ಪ್ರದಾನಗಳನ್ನು ಸಮರ್ಥವಾಗಿ ನಿರ್ವಹಿಸುವುದೇ ಭಾಷೆಯ ಕೆಲಸ. ಹಾಗೆ ನೋಡಿದರೆ ಭಾಷೆಯ ಮೂಲರೂಪ "ಶಬ್ದ'. ಶಬ್ದವೇ ಎಲ್ಲ ಭಾಷೆಗಳ ಜನಕ. ಲಿಪಿ ಶಬ್ದದ ದಾಖಲೀಕರಣಕ್ಕೊದಗಿ ಬರುವ ಸಂಕೇತ ರೂಪವಷ್ಟೆ.
ಭಾರತದಲ್ಲಿ 1652 ಭಾಷೆಗಳಿದ್ದು, ಅವುಗಳ ಪೈಕಿ ಮರಾಠಿ ಭಾಷೆಯಲ್ಲೇ 65 ಉಪ ಭಾಷೆಗಳಿವೆ. ಅವುಗಳಲ್ಲಿ ಕೋಕಣಿ, ಕುದುವಿ, ಹಳಬಿ, ಕಾಮಾರಿ, ಕಟಿಯಾ, ಕಟಕಾರಿ, ಠಾಕರಿ, ಕರಹಂಡಿ, ಮಿರಗಾನಿ, ಭಂಡಾರಿ, ದಕ್ಷಿಣ ಕೋಕಣಿ, ಉತ್ತರ ಕೋಕಣಿ, ಬಾಣಕೋಟಿ, ದಮಣಿ, ಘಾಟಿ, ಮಾವಳಿ, ಸಂಗಮೇಶ್ವರಿ, ಆಗರಿ, ಧನಗರಿ, ಕುಬಣಿ, ಕೋಳಿ, ಕಾತಕರಿ, ವಾರಲಿ, ಭಿಲ್ಲಿ, ಚಿತ್ಪಾವನಿ, ಕುಡಾಳಿ, ವರಹಾಡಿ, ರಾಯಪುರಿ,ಅಹಿರಾಣಿ, ಡಾಂಗಿ ಇತ್ಯಾದಿಗಳು ಪ್ರಮುಖವಾಗಿವೆ. ಭಾರತೀಯರ, ಆರ್ಯರ ಮೂಲ ಭಾಷೆ ಸಂಸ್ಕೃತವಾಗಿತ್ತು. ಬುದ್ಧೋತ್ತರ ಭಾಷೆಗಳಲ್ಲಿ ಸಂಸ್ಕೃತದ ಪ್ರಭಾವ ಹೆಚ್ಚಾಗಿರುವುದು ಕಂಡು ಬರುತ್ತದೆ. ಭಾಷೆಗಳ ಹುಟ್ಟು ಮತ್ತು ಬೆಳವಣಿಗೆಗಳನ್ನು ಗಮನಿಸಿದಾಗ "ಚಿತ್ಪಾವನಿ' ಭಾಷೆಯು ಮರಾಠಿ ಭಾಷೆಯ ಒಂದು ಪ್ರಭೇದವಾದರೂ ಇದು ಲಿಪಿಯಿಲ್ಲದಿರುವ ಒಂದು ಆಡು ಭಾಷೆಯಾಗಿದೆ. ಪ್ರತಿಯೊಂದು ಭಾಷೆಯು ವಲಸೆಯ ಕಾರಣಗಳಿಂದಾಗಿ ವಲಸೆಗೊಂಡ ಪ್ರದೇಶದಲ್ಲಿರುವ ಜನರಾಡುವ ಪ್ರಾದೇಶಿಕ ಭಾಷೆಯ ಹಲವು ಶಬ್ದಗಳನ್ನು ತನ್ನದಾಗಿಸಿಕೊಳ್ಳುತ್ತದೆ. ಲಿಪಿಯಿರುವ ಮೂಲ ಭಾಷೆಗಳ ಪ್ರಭೇದಗಳಾದ ಎಲ್ಲ ಭಾಷೆಗಳು ಲಿಪಿಯನ್ನು ಹೊಂದಿರುವುದಿಲ್ಲ. ವಲಸೆ ಹೋದ ಪ್ರದೇಶದಲ್ಲಿನ ಭಾಷೆಯ ಅನೇಕ ಶಬ್ದಗಳನ್ನು ತನ್ನದಾಗಿಸಿಕೊಳ್ಳುವ ಭಾಷೆಗೆ ಲಿಪಿಯನ್ನು ರೂಪಿಸುವ, ಕಂಡುಹುಡುಕುವ ಪ್ರಯತ್ನಗಳು ನಡ ಎದದ್ದು ವಿರಳವೆಂದೇ ಹೇಳಬಹುದು. ಚಿತ್ಪಾವನಿ ಭಾಷೆಯ ವಿಚಾರ ಬಂದಾಗಲೂ ಈ ಸಂಗತಿ ಮಹತ್ವವನ್ನು ಪಡೆಯುತ್ತದೆ.
ಪರಶುರಾಮ ಚಿತ್ಪಾವನರ ಅಧಿದೈವ. ಮಹಾಭಾರತದಲ್ಲಿ ಪರಶುರಾಮನ ಉಲ್ಲೇಖವಿರುವುದರಿಂದ ಮತ್ತು ಗುಜರಾತದಲ್ಲಿಯ ಶುರ್ಪಾರಕ (ನಾಲಾ ಸೋಪಾರಾ) ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ ಮರಾಠಿಯ ಒಂದು ಪ್ರಭೇದವಾದ ಚಿತ್ಪಾವನಿಯನ್ನು ತಮ್ಮ ಮನೆಮಾತಾಗಿಸಿಕೊಂಡ ವೇದರಕ್ಷಕ ಬ್ರಾಹ್ಮಣರ ಸಮೂಹವೊಂದು ತಮ್ಮನ್ನು ಚಿತ್ಪಾವನರೆಂದು ಗುರುತಿಸಿಕೊಂಡಿತು. ಶುರ್ಪಾರಕದಿಂದ ಪರಶುರಾಮ ಪರ್ವತವಿರುವ ತ್ರಿವೇಂದ್ರಮ್ ವರೆಗಿನ ಭೂಪ್ರದೇಶವು ಪರಶುರಾಮ ಸೃಷ್ಟಿಯೆಂದು ಕರೆಯಲ್ಪಟ್ಟಿದೆ. ಮುಂದೆ ಈ ಚಿತ್ಪಾವನ ಸಮುದಾಯವು ಗುಜರಾತ್ ನಿಂದ ಮಹಾರಾಷ್ಟ್ರದ ರತ್ನಾಗಿರಿ, ಚಿಪಳೂಣಗಳನ್ನು ಬಹು ಸಮಯದವರೆಗೆ ತಮ್ಮ ವಸತಿನೆಲೆಗಳನ್ನಾಗಿಸಿಕೊಂಡರೂ ಅವರಲ್ಲೊಂದಷ್ಟು ಮಂದಿ ಸುಮಾರು ಐದು ಶತಮಾನಗಳ ಹಿಂದೆ ಕರ್ನಾಟಕ್ಕೆ ವಲಸೆ ಬಂದ ಬಗೆಗೆ ಐತಿಹಾಸಿಕ ಆಧಾರಗಳಿವೆ. ಹೀಗೆ ಬಂದವರಲ್ಲಿ ಒಂದಷ್ಟು ಜನ ಬೆಳ್ತಂಗಡಿ ತಾಲೂಕಿನ ಶಿಶಿಲ, ಮುಂಡಾಜೆಗಳಲ್ಲಿಯೂ, ಉಳಿದವರು ಕಾರ್ಕಳ ತಾಲೂಕಿನ ಮಾಳ, ದುರ್ಗ, ನಾರಾವಿ ಮುಂತಾದೆಡೆಯು ತಮ್ಮ ನೆಲೆಗಳನ್ನು ಕೃಷಿಕ್ಷೇತ್ರಗಳಲ್ಲಿ ಕಂಡುಕೊಂಡರು. ಇಂದಿಗೂ ಈ ಪ್ರದೇಶಗಳಲ್ಲಿ ವಾಸಿಸುವ ಚಿತ್ಪಾವನ ಬ್ರಾಹ್ಮಣರು "ಚಿತ್ಪಾವನಿ' ಭಾಷೆಯನ್ನು ಮಾತನಾಡುತ್ತಿದ್ದಾರೆ. ವಲಸೆಯ ಕಾರಣಗಳಿಗಾಗಿ ಪ್ರತಿಯೊಂದು ಭಾಷೆಯ ಮೇಲೆ ಸ್ಥಳಾಂತರಗೊಂಡ ಪ್ರದೇಶದಲ್ಲಿನ ಭಾಷೆಯ ಪ್ರಭಾವವಿರುವುದು ಸಹಜವಾದ ಸಂಗತಿ. ಚಿತ್ಪಾವನಿ ಭಾಷೆಯು ಇದಕ್ಕೆ ಹೊರತಲ್ಲ. ಈ ಭಾಷೆಯನ್ನಾಡುವ ಕುಟುಂಬಗಳು ಜಯಗಡದ ದಕ್ಷಿಣದಿಂದ ಗೋಮಾಂತಕದವರೆಗೆ ಮತ್ತು ಕರ್ನಾಟಕದ ದಕ್ಷಿಣ ಕನ್ನಡಜಿಲ್ಲೆಯಲ್ಲೂ ಇವೆ. ಚಿತ್ಪಾವನಿ ಭಾಷೆಗೆ ಲಿಪಿಯಿಲ್ಲದಿರುವುದರಿಂದ ಇಲ್ಲಿ ಈ ಭಾಷೆಯನ್ನು ಕನ್ನಡ ಲಿಪಿಯಲ್ಲೇ ಬರೆಯಲಾಗುತ್ತಿದೆ.
ಅಚ್ಚರಿಯ ವಿಷಯವೆಂದರೆ ಲಿಪಿಯಿಲ್ಲದ ಚಿತ್ಪಾವನಿ ಭಾಷೆ ವಲಸೆಯ ಐದುನೂರು ವರ್ಷಗಳ ನಂತರವೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿರುವುದು. ಮಧ್ಯಕಾಲೀನ ಮಹಾರಾಷ್ಟ್ರೀಯ ಮರಾಠಿಯ ಪರಿಷ್ಕೃತರೂಪವೇ ಚಿತ್ಪಾವನಿ ಭಾಷೆಯೆಂಬ ಒಂದು ಅಭಿಪ್ರಾಯವೂ ಇದೆ. ಹಿರಿಯ ವಿದ್ವಾಂಸ ಡಾ|| ವಾಸುದೇವ ಕಾಕತ್ಕರ್ ಅವರ ಅಭಿಪ್ರಾಯದಂತೆ ಚಿತ್ಪಾವನಿ ಮತ್ತು ಕೋಕಣಿ ಭಾಷೆಗಳು ಯಾದವಕಾಲೀನ ಮರಾಠಿ ಭಾಷೆಯ ಎರಡು ಪ್ರಭೇದಗಳು.
ಆಂಗ್ಲ ಭಾಷೆ ಇಂದು ವಿಶ್ವದ ಸಂಪರ್ಕ ಭಾಷೆಯಾಗಿ ಜಗತ್ತಿನ ಎಲ್ಲ ಭಾಷೆಗಳನ್ನು ಕಬಳಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಲಿಪಿಯಿಲ್ಲದ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿರುವ ಚಿತ್ಪಾವನಿ ಭಾಷೆಯ ಉಳಿವು ಸಾಧ್ಯವೇ ಎಂಬ ಒಂದು ಪ್ರಶ್ನೆ ನಮ್ಮ ಮುಂದಿದೆ. ಮನುಷ್ಯ ಮನುಷ್ಯರ ನಡುವಿನ ಸಂವಹನ ಅವರಾಡುವ, ಅವರಿಗೆ ತಿಳಿದಿರುವ ಭಾಷೆಯ ಶಬ್ದ ಮತ್ತು ಲಿಪಿರೂಪದಲ್ಲಿ ಸಾಧ್ಯ. ಲಿಪಿಯ ಅನ್ವೇಷಣೆಯವರೆಗೆ ಯಾವುದೇ ಭಾಷೆ ಧ್ವನಿರೂಪದಲ್ಲಿಯೇ ಇರಬೇಕಾಗುತ್ತದೆ. ಲಿಪಿರೂಪ ಪಡೆದ ಭಾಷೆಗಳು ಹೆಚ್ಚಿನ ಪ್ರಾದೇಶಿಕ ವಿಸ್ತೃತತೆಯನ್ನು, ಜನಮಾನ್ಯತೆಯನ್ನು ಪಡೆದವು, ಇಂದಿಗೂ ಪಡೆಯುತ್ತಲಿವೆ. ಆದರೆ ಲಿಪಿರೂಪದಲ್ಲಿರದ ಭಾಷೆಗಳು ನಿಧಾನವಾಗಿ ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿವೆ. ಚಿತ್ಪಾವನಿ ಭಾಷೆಯ ವಿಚಾರ ಬಂದಾಗ ಇಂತಹ ಒಂದು ಆಪತ್ತು ಈ ಭಾಷೆಗಿದೆ.
ಪ್ರತಿಯೊಂದು ಜನಸಮುದಾಯಕ್ಕೂ ತನ್ನ ಮಾತೃಭಾಷೆಯ ಮೇಲೆ ಹೆಚ್ಚಿನ ವ್ಯಾಮೋಹವಿರುವುದು ಸಹಜ. ಮಾತೃಭಾಷೆಯ ಮೂಲಕ ನಡೆಯುವ ಸಂವಹನ, ಸಂಭಾಷಣೆ ಹೆಚ್ಚು ಪರಿಣಾಮಕಾರಿ ಮತ್ತು ಆತ್ಮೀಯ ಭಾವವನ್ನು ಸೃಷ್ಟಿಸುವಂತಹದು ಎಂಬುದರಲ್ಲಿ ಸಂಶಯವಿಲ್ಲ. ನಾವು ಚಿತ್ಪಾವನರೂ ಇದಕ್ಕೆ ಹೊರತಲ್ಲ. ಚಿತ್ಪಾವನ ಜನಸಮುದಾಯ ಸಂಖ್ಯಾತ್ಮಕವಾಗಿ ತನ್ನ ಅಸ್ಥಿತ್ವವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಈ ಸಮುದಾಯದ ಭಾಷೆಯಾದ ಚಿತ್ಪಾವನಿಯ ಉಳಿವು ಸಾಧ್ಯವೇ ಎಂಬ ಪ್ರಶ್ನೆ ನಮ್ಮ ಮುಂದಿದೆ.
ಈ ನೆಲೆಯಲ್ಲಿ ಒಂದಿಷ್ಟು ಚಿಂತನೆಗಳು ಹೀಗಿವೆ:
1) ಈ ಭಾಷೆ ಚಿತ್ಪಾವನರ ಮೂಲ ಭಾಷೆ. ಚಿತ್ಪಾವನಿ ಭಾಷೆಯನ್ನು ಅರಿತವರು ಮರಾಠಿಯನ್ನು ಸುಲಭವಾಗಿ ಗ್ರಹಿಸಬಲ್ಲರು, ಅತ್ಯಲ್ಪ ಅವಧಿಯಲ್ಲಿ ಕಲಿಯಬಲ್ಲರು.
2) ಯಾವುದೇ ಭಾಷೆಯಲ್ಲಿ ಅದರ ಧ್ವನಿರೂಪ ಹೆಚ್ಚು ಬಳಕೆಯಲ್ಲಿರುತ್ತದೆ ಮತ್ತು ಸಂವಹನದಲ್ಲಿ ಅದು ಹೆಚ್ಚು ಪರಿಣಾಮಕಾರಿ. ಲಿಪಿ ಭಾಷೆಯ ಧ್ವನಿರೂಪದ ಪರಿಣಾಮವನ್ನು, ಸಂವಹನವನ್ನು ದಾಖಲಿಸುವಲ್ಲಿ ಸಹಾಯಕಾರಿ. ಲಿಪಿಯಿಲ್ಲದ ಅನೇಕ ಭಾಷೆಗಳು ಜಗತ್ತಿನಲ್ಲಿ ಇಂದೂ ಕೂಡಸಮರ್ಥವಾಗಿ ಸಂವಹನದಲ್ಲಿ ಸಹಕಾರಿಯಾಗಿವೆ. ಹಾಗಾಗಿ ಚಿತ್ಪಾವನಿ ಭಾಷೆಗೆ ಲಿಪಿಯಿಲ್ಲವೆಂಬ ಕಾರಣಕ್ಕಾಗಿ ಅದರ ಅವಗಣನೆ ಖಂಡಿತ ಸಲ್ಲ.
3) ಈ ಭಾಷೆಗೆ ಲಿಪಿಯಿಲ್ಲದೇ ಇರುವುದರಿಂದ ಚಿತ್ಪಾವನ ಜಾನಪದ ಸಾಹಿತ್ಯ (ಉದಾ.: ಕಾಹೆಣ್ಯೊ (ಪ್ರಮುಖವಾಗಿ ವ್ರತ ಕಥೆಗಳು) ಉಖ್ಖಾಣೆ (ಒಗಟುಗಳು) ಮ್ಹಣ್ಯೊ (ಗಾದೆಗಳು) ಗಿತ್ತ (ಶಿಶುಗಳನ್ನು ರಮಿಸುವ ಗೀತೆಗಳು, ಭಕ್ತಿಗೀತೆಗಳು, ಆರತಿ ಹಾಡುಗಳು, ಹಸೆಮಣೆಗೆ ಕರೆಯುವ ಹಾಡುಗಳು ಇತ್ಯಾದಿತ್ಯಾದಿ) ಮುಂತಾದುವುಗಳು ತಲತಲಾಂತರವಾಗಿ ಕೇವಲ ಧ್ವನಿರೂಪದಲ್ಲಿ ದಾಖಲಾಗಿವೆಯೇ ಹೊರತು ಲಿಪಿರೂಪಗಳಲ್ಲಿಲ್ಲ. ಚಿತ್ಪಾವನಿ ಭಾಷೆಯ ಎಲ್ಲ ಜಾನಪದದ ಅಧ್ಯಯನವನ್ನು ಮಾಡುತ್ತ ಅದರ ಪ್ರಕಟಣೆಯನ್ನು ಕನ್ನಡ ಲಿಪಿಯಲ್ಲಿ ದಾಖಲಿಸುತ್ತಿರುವ ಮಂಗಳೂರಿನ ಶ್ರೀಮತಿ ಸುಚೇತಾ ಜೋಶಿಯವರು ಈ ದಿಸೆಯಲ್ಲಿ ಅಭಿನಂದನಾರ್ಹರು.
4) ಕನ್ನಡ ಲಿಪಿಯಲ್ಲಾದರೂ ಚಿತ್ಫಾವನಿ ಭಾಷೆಯಲ್ಲಿ ಕತೆ, ಕಾವ್ಯ, ಪ್ರಬಂಧ, ಹಾಸ್ಯ, ನಾಟಕ ಮುಂತಾದ ಪ್ರಕಾರಗಳನ್ನು ಬರೆಯುವ, ಮುದ್ರಿಸುವಕೆಲಸವಾಗದೇ ಇರುವುದು. (ದಿವಾಕರ ಡೋಂಗ್ರೆಯವರು ಬರೆದು ಪ್ರಕಟಿಸಿದ ಚಿತ್ಪಾವನಿ ಹಾಸ್ಯ ಸಂಕಲನ 'ದಿಬ್ಬಣ' ಅವರೇ ಬರೆದು ರಂಗದ ಮೇಲೆತಂದ ಹಾಸ್ಯನಾಟಕಗಳ ಹೊರತಾಗಿ. ಇಂತಹ ಪ್ರಯತ್ನಗಳು ಈ ಮೊದಲೇ ನಡೆದಿದ್ದರೆ, ಈಗಲೂ ನಡೆಯುತ್ತಿದ್ದರೆ ಅದು ಖುಷಿ ಪಡುವ ವಿಚಾರ.)
5) ಚಿತ್ಪಾವನಿ ಭಾಷೆಯನ್ನು ಅರಿಯದ ಚಿತ್ಪಾವನರಿಗಾಗಿ ಚಿತ್ಪಾವನಿ ಭಾಷೆಯ ಕಲಿಕಾ ತರಗತಿಗಳು, ಕನ್ನಡ ಲಿಪಿಯಲ್ಲಾದರೂ ವ್ಯಾಕರಣ,ಶಬ್ದಾರ್ಥಗಳನ್ನೊಳಗೊಂಡ ಕಲಿಕಾ ಕೈಪಿಡಿಯ ರಚನೆ ಇಂದಿನ ತೀವ್ರ ಅವಶ್ಯಕತೆ.
6) ಮಹಾರಾಷ್ಟ ಮೂಲದ ಮರಾಠಿ ಭಾಷಿಕರಾದ ಚಿತ್ಪಾವನರು ಮತ್ತು ಕರ್ನಾಟದಲ್ಲಿರುವ ಚಿತ್ಪಾವನಿ ಭಾಷೆಯನ್ನರಿತಿರುವ ಮತ್ತು ಅರಿಯದಿರುವಚಿತ್ಫಾವನರನ್ನು ಒಂದೇ ಸೂರಿನಡಿ ತಂದು ಮರಾಠಿ, ಚಿತ್ಪಾವನಿ ಭಾಷೆಗಳನ್ನು ಪರಸ್ಪರ ಕಲಿಯುವ, ಕಲಿಸುವ ಪ್ರಯತ್ನ. ಭಾಷೆಯ ಎಲ್ಲೆಯನ್ನು ಮೀರಿ ನಾವು ಚಿತ್ಪಾವನರು /ಆಮ್ಹಿ ಚಿತ್ಫಾವನ್ ಎಂಬ ನೆಲೆಯಲ್ಲಿ ಸಂಘಟಿತರಾಗುವ ಪ್ರಯತ್ನ.
7) ನಶಿಸಿಹೋಗುತ್ತಿರುವ ಭಾಷೆಗಳನ್ನು ಅಭಿವೃದ್ಧಿಗೊಳಿಸಿ. ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸರಕಾರದಿಂದ ಅನುದಾನವನ್ನು ಪಡೆಯುವ ಪ್ರಯತ್ನ.
8) ವೈವಾಹಿಕ ಸಂಬಂಧಗಳಲ್ಲಿ ಚಿತ್ಪಾವನೇತರ ಕನ್ಯೆಯರು ಕುಲವಧುಗಳಾಗಿ ಬಂದಾಗ ಅವರ ಮನವೊಲಿಸಿ ಚಿತ್ಪಾವನಿ ಭಾಷೆಯನ್ನು ಕಲಿಸುವ ಪ್ರಯತ್ನ. (ಕಲಿಕೆಯ ಹಂತದಲ್ಲಿ ಆಗಬಹುದಾದ ಉಚ್ಚಾರ, ವ್ಯಾಕರಣ, ಶಬ್ದಾರ್ಥಗಳ ಕುರಿತಾದ ತಪ್ಪುಗಳನ್ನು ತಾಳ್ಮೆಯಿಂದ ಸರಿಪಡಿಸುತ್ತ ಅವರಲ್ಲಿ ಕಲಿಕೆಯ ಬಗೆಗೆ ಆತ್ಮವಿಶ್ವಾಸವನ್ನು ತುಂಬುವ ಪ್ರಯತ್ನಗಳಾಗಬೇಕು. ಮನೆಗೆ ವಧುವಾಗಿ ಬಂದ ಹೆಣ್ಣು ಚಿತ್ಪಾವನಿಯನ್ನು ಕಲಿತಳೆಂದರೆ ಅವಳಿಗೆ ಜನಿಸುವ ಮಗು ಸಹಜವಚಾಗಿಯೇ ಚಿತ್ಪಾವನಿಯನ್ನು ಕಲಿಯುತ್ತದೆ. ಇದು ಸಾದ್ಯವೇ?)
9) ನಮ್ಮ ಪೂರ್ವಜರು ನಡೆಸುತ್ತಿದ್ದ ಖಬ್ರಿಗಳನ್ನು (ನಾಲ್ಕೈದು ಮಂದಿ ಸೇರಿ ಹರಟೆ ಹೊಡೆಯುವುದು) ಮುಂದುವರಿಸುವುದು.
10) ಈ ಭಾಷೆಯನ್ನು ಉಳಿಸುವ, ಬೆಳೆಸುವ ಕೆಲಸ ನಮ್ಮ ಮನೆ-ಮನಗಳಿಂದ ಮೊದಲು ಪ್ರಾರಂಭವಾಗಬೇಕು.
ಭಾಷೆ ಸಂವಹನಕ್ಕಿರುವ ಒಂದು ಪ್ರಬಲ ಸಾಧನವಾದರೆ ಅದು ಒಂದು ರಾಷ್ಟ್ರ, ರಾಜ್ಯ, ಪ್ರದೇಶ, ಸಮುದಾಯಗಳನ್ನು ಗುರುತಿಸುವ ಸಾಧನವೂ ಹೌದು. "ಚಿತ್ಪಾವನ'' ಸಮುದಾಯ ಇಂದು ಸಂಖ್ಯಾತ್ಮಕವಾಗಿ ಕ್ಷೀಣಿಸುತ್ತಿದೆ. ಅದರ ವಲಸೆ ಕ್ಷಿಪ್ರಗತಿಯಲ್ಲಿ ನಗರಗಳೆಡೆಗೆ ಆಗುತ್ತಿರುವ ಪರಿಣಾಮವಾಗಿ ಅದು ಔದ್ಯೋಗಿಕ ನೆಲೆಯಲ್ಲಿ ಆಂಗ್ಲ ಭಾಷೆಯನ್ನು, ಪ್ರಾದೇಶಿಕವಾಗಿ ಕನ್ನಡವನ್ನು ಒಪ್ಪಿಕೊಂಡಿದೆ. ಚಿತ್ಪಾವನ ಸಮುದಾಯ ಇಂದು ಕನ್ನಡ-ಮರಾಠಿ-ಚಿತ್ಪಾವನಿ ಎಂಬ ತ್ರಿಭಾಷಾ ಸೂತ್ರದಡಿಯಲ್ಲಿ ತನ್ನನ್ನು ಗುರುತಿಸಿಕೊಂಡಿದೆಯಾದರೂ, ಮೂಲನೆಲೆಗಳಿಂದಾದ ವಲಸೆಯ ಪರಿಣಾಮವಾಗಿ ಲಿಪಿಯಿಲ್ಲದ ಚಿತ್ಪಾವನಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವುದರಲ್ಲಿ ಸೋಲುತ್ತಿದೆ. ಭಾಷೆ ಒಂದು ಸಮುದಾಯವನ್ನು ಗುರುತಿಸುವಂತೆ, ಅದು ಆ ಸಮುದಾಯದ ಆತ್ಮಾಭಿಮಾನದ ಸಂಕೇತವೂ ಹೌದು. ಈ ನೆಲೆಯಲ್ಲಿ ಚಿತ್ಪಾವನಿ ಸಮಗ್ರ ಚಿತ್ಪಾವನ ಜನಸಮುದಾಯದ ಆಡುಭಾಷೆಯಾಗಬೇಕು. ಅದನ್ನುಳಿಸುವ, ಬೆಳೆಸುವ ತೀವ್ರ ಪ್ರಯತ್ನಗಳು ಇಂದಿನ ಅಗತ್ಯ.