ಆಚಾರ - ವಿಚಾರ

ಬೊಡ್ಡಣ (ದಧ್ಯುತ್ಸವ)

ಚಿತ್ಪಾವನ ಬ್ರಾಹ್ಮಣ ಸಮುದಾಯದಲ್ಲಿ ಬೋಡಣ, ಬೊಡ್ಡಣ, ಮರಿಗೆ ಪೂಜೆ ಅಥವಾ ದಧ್ಯುತ್ಸವವು ಒಂದು ವಿಶಿಷ್ಠವಾದ ಕುಲಾಚಾರವಾಗಿದೆ. ವಿವಾಹದ ಸಮಯದಲ್ಲಿ ವಧುವು ಗೌರಿಹರದಲ್ಲಿ ಪೂಜಿಸಿದ ಅನ್ನಪೂರ್ಣೆ (ಪಾರ್ವತಿ)ಯನ್ನು ತನ್ನ ಪತಿಗೃಹಕ್ಕೆ ಕೊಂಡೊಯ್ಯುತ್ತಾಳೆ. ಅಲ್ಲಿ ದೇವಿ ಪಾರ್ವತಿ ವಧುವಿನ ವೈವಾಹಿಕ ಜೀವನವನ್ನು ಸುಖಮಯವಾಗಿರಿಸುವುದರ ಜತೆಗೆ ಅವಳ ಕುಲ ಸಂವೃದ್ಧಿಗೈದು ಧನ, ಧಾನ್ಯ, ಪಶು, ಪುತ್ರ ಲಾಭವನ್ನೀಯುತ್ತಾಳೆಂಬ ನಂಬಿಕೆಯೇ ಈ ಆಚರಣೆಯ ಹಿಂದಿರುವ ಶ್ರದ್ಧೆಗೆ ಕಾರಣವಾಗಿದೆ. ಕುಟುಂಬದಲ್ಲಿ ಗೃಹಪ್ರವೇಶ, ವಿವಾಹ, ಉಪನಯನ, ವಂಶವೃದ್ಧಿ ಮೊದಲಾದ ಶುಭ ಸಂದರ್ಭಗಳಲ್ಲಿ 'ಬೊಡ್ಡಣ' ಅಥವಾ ದಧ್ಯುತ್ಸವ ಆಚರಣೆಯ ಮೂಲಕ ಅನ್ನಪೂರ್ಣೆ ಪಾರ್ವತಿಯನ್ನು ಸ್ಮರಿಸಿ ಕೃತಾರ್ಥರಾಗುವುದು ತಲತಲಾಂತರಗಳಿಂದ ಬಂದ ಆಚಾರವಾಗಿದೆ

ಮುಂದೆ ಓದಿ


ಚಿತ್ಪಾವನಿ ಜಾನಪದ

ಚಿತ್ಪಾವನ ಜನಾಂಗಕ್ಕೆ ಸಂಬಂಧಿಸಿದ, ಚಿತ್ಪಾವನ ಸಮಾಜದಲ್ಲಿ ಆಚರಣೆಯಲ್ಲಿದ್ದ ಮತ್ತು ಬಳಕೆಯಲ್ಲಿರುವ ಜನಪದೀಯ ಸಾಂಸ್ಕೃತಿಕ, ಸಾಹಿತ್ಯಿಕ ಅಂಶಗಳನ್ನು 'ಚಿತ್ಪಾವನಿ ಜಾನಪದ' ಎನ್ನುತ್ತೇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು ಹತ್ತು ಜನವಸತಿಗಳಲ್ಲಿ ಹರಡಿಕೊಂಡಿರುವ ಐದಾರು ಸಾವಿರ ಜನರ ಜಾನಪದ ವಿಚಾರಗಳ ಕೆಲ ಅಂಶಗಳನ್ನು, ಅದರ ವೈಶಿಷ್ಠ್ಯಗಳನ್ನು ಸ್ಥೂಲವಾಗಿ ನೋಡೋಣ.ಚಿತ್ಪಾವನ ಸಮುದಾಯದಲ್ಲಿ ರೂಢಿಯಲ್ಲಿರುವ ಜಾನಪದದಲ್ಲಿ ಗೀತೆ (ಗಿತ್ತ), ಗಾದೆ, ಒಗಟು, ಕಥೆಗಳು, ಆಚರಣೆಗಳು, ರಂಗೋಲಿ, ಅಡುಗೆ ವೈಶಿಷ್ಠ್ಯ ಮೊದಲಾದುವು ಸೇರಿವೆ. ಯಾವುದೇ ಜನಾಂಗೀಯ ಜಾನಪದಕ್ಕೆ ಆ ಜನಾಂಗದ ಜೀವನಕ್ರಮ, ಕಸಬುಗಳು ಮೊದಲಾದುವುಗಳಿಗೆ ಇತಿಮಿತಿಗಳಿವೆ. ಉದಾ.: ಚಿತ್ಪಾವನಿ ಜಾನಪದದಲ್ಲಿ ಒನಕೆ ಹಾಡುಗಳಾಗಲಿ, ನೇಜಿ ಹಾಡುಗಳಾಗಲಿ, ಭೂತ ನೃತ್ಯವಾಗಲಿ ಇಲ್ಲ, ಇರಲು ಸಾಧ್ಯವೂ ಇಲ್ಲ. ಕಾರಣ ಅವು ಚಿತ್ಪಾವನ ಜೀವನಕ್ರಮಕ್ಕೆ ಹೊರತಾದ ವಿಷಯಗಳು. ಸುಮಾರು ಮುನ್ನೂರು, ನಾನ್ನೂರು ವರುಷಗಳಿಗೂ ಹಿಂದೆ ಮಹಾರಾಷ್ಟ್ರದ ಕರಾವಳಿಯಿಂದ ಕರ್ನಾಟಕದ ಕರಾವಳಿಗೆ ವಲಸೆ ಬಂದ ಚಿತ್ಪಾವರಲ್ಲಿ ಅಂದು ಇದ್ದ ಅನೇಕ ಜಾನಪದ ಅಂಶಗಳು ರೂಪಾಂತರ ಹೊಂದಿ ಸೇರಿಕೊಂಡಿವೆ. ಜಾನಪದವು ಚಲನಶೀಲವಾದುದರಿಂದ , ಸಂಸ್ಕೃತಿಗಳ ಸಂಪರ್ಕ, ಪ್ರಭಾವ, ಪರಿಣಾಮಗಳಿಂದಲೂ ಇದು ಸಹಜವಾಗಿದೆ.

ಮುಂದೆ ಓದಿ


ಉಪನಯನ

ಉಪನಯನವೆಂಬುದು ದ್ವಿಜತ್ವವನ್ನು, ವಿಪ್ರತ್ವವನ್ನು, ಶ್ರೋತ್ರೀಯತ್ವವನ್ನು ಗಳಿಸಿಕೊಳ್ಳುವ ಪವಿತ್ರ ಸಂಸ್ಕಾರ. ತ್ರೈವರ್ಣಿಕರಲ್ಲಿ (ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ) ಈ ಸಂಸ್ಕಾರ ಬಹು ಪ್ರಾಧಾನ್ಯತೆಯನ್ನು ಪಡೆದಿದೆ. ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರೈಃ ದ್ವಿಜ ಉಚ್ಯತೇ | ವೇದಜ್ಞಾನೇನ ವಿಪ್ರತ್ವಂ ಬ್ರಹ್ಮಜ್ಞಾನೇನ ಬ್ರಾಹ್ಮಣಃ || ಹುಟ್ಟಿನಿಂದಲೇ ನಾವ್ಯಾರೂ ಬ್ರಾಹ್ಮಣರಾಗಿರುವುದಿಲ್ಲ. ಉಪನಯನ ಸಂಸ್ಕಾರವನ್ನು ಹೊಂದುವುದರಿಂದ ದ್ವಿಜರು, ವೇದಾಧ್ಯಯನದಿಂದ ವಿಪ್ರರು ಮತ್ತು ಬ್ರಹ್ಮಜ್ಞಾನವನ್ನು ಗಳಿಸುವುದರಿಂದ ಬ್ರಾಹ್ಮಣರಾಗುತ್ತೇವೆ. ಏನಿದು ಉಪನಯನ ?: ಉಪ ಸಮೀಪೇ ನಯನಂ = ಉಪನಯನಂ. ಸಮೀಪಕ್ಕೆ ಕೊಂಡೊಯ್ಯು ಎಂದಿದರ ಅರ್ಥ. ಯಾರನ್ನು ಸಮೀಪಕ್ಕೆ ಕೊಂಡೊಯ್ಯುವುದು? ಯಾರ ಸಮೀಪಕ್ಕೆ ಕೊಂಡೊಯ್ಯುವುದು? ಇನ್ನೂ ಬಾಲ್ಯಾವಸ್ಥೆಯನ್ನು ಮೀರದ, ಇದುವರೆಗೂ ಸ್ವತಂತ್ರನಾಗಿದ್ದು, ಯಾರಿಗೂ ಅಧೀನನಾಗಿರದ, ಏನನ್ನೂ ಅರಿಯದ, ನೀತಿನಿಯಮಗಳಿಂದೊಡಗೂಡಿದ ಕ್ರಮಬದ್ಧವಾದ ಜೀವನಕ್ರಮವನ್ನು ಅನುಸರಿಸದ ತನ್ನ ಪುತ್ರನನ್ನು ತಂದೆಯು ವೇದ ವೇದಾಂತಗಳನ್ನು ಬಲ್ಲ, ವ್ಯಕ್ತಿತ್ವ ವಿಕಸನದಲ್ಲಿ ಮಾರ್ಗದರ್ಶನವನ್ನಿತ್ತು ಸತ್ಪ್ರಜೆಯಾಗಿ ರೂಪಿಸಬಲ್ಲ ಶ್ರೋತ್ರೀಯನಾದ ಗುರುವಿನ ಸಮೀಪಕ್ಕೆ ಒಯ್ಯುವ ಸಂಸ್ಕಾರವೇ ಉಪನಯನ. ಹೀಗಾಗಿ ಷೋಡಶ ಸಂಸ್ಕಾರಗಳಲ್ಲಿ ಉಪನಯನಕ್ಕೆ ಬಹು ಪ್ರಾಮುಖ್ಯತೆಯಿದೆ.

ಮುಂದೆ ಓದಿ


ತಾಂಬೂಲ

ದೈನಂದಿನ ದೇವಪೂಜೆಯ ಕೊನೆಗೆ ಭಗವಂತನಿಗೆ ನೈವೇದ್ಯ ಸಮರ್ಪಣೆಯ ನಂತರ ಮುಖಶುದ್ಧಿಗಾಗಿ 'ಪೂಗೀ ಫಲ ತಾಂಬೂಲಂ ಸಮರ್ಪಯಾಮಿ' ಎನ್ನುತ್ತೇವೆ. ಹಾಗಾಗಿ ಭಗವಂತನಿಗೂ ತಾಂಬೂಲಕ್ಕೂ ಅನನ್ಯ ಸಂಬಂಧವಿದೆಯೆಂದಾಯಿತು. ಪುರಾಣೋಕ್ತವಾಗಿ ತಾಂಬೂಲದ ಸೃಷ್ಟಿಯ ಕುರಿತಂತೆ ಹೀಗೊಂದು ಕಥೆಯಿದೆ. ಸಮುದ್ರ ಮಥನಾನಂತರ ಸಮುದ್ರದಿಂದ ಉದ್ಭವಿಸಿದ ಅಮೃತವನ್ನು ಮಹಾವಿಷ್ಣು ಮೋಹಿನಿಯ ರೂಪದಲ್ಲಿ ದೇವತೆಗಳಿಗೆ ಹಂಚುತ್ತಾನೆ. ಹಂಚಿ ಮಿಕ್ಕುಳಿದ ಅಮೃತದ ಪಾತ್ರೆಯನ್ನು ಮೋಹಿನಿ ಇಂದ್ರನ ಪಟ್ಟದಾನೆ ಐರಾವತದ ಬಳಿಯಿರಿಸುತ್ತಾಳೆ. ಐರಾವತದ ಸೊಂಡಿಲ ಬೀಸುವಿಕೆಗೆ ಅಮೃತ ಭೂಮಿಯ ಮೇಲೆ ಚೆಲ್ಲಲ್ಪಟ್ಟು ಅಲ್ಲಿ ಅತಿ ದಿವ್ಯವೂ, ಸುಂದರವೂ, ಮನಮೋಹಕವೂ ಆದ ಬಳ್ಳಿಯೊಂದು ಸೃಷ್ಟಿಯಾಗುತ್ತದೆ. ದೇವೇಂದ್ರ ದೇವವೈದ್ಯ ಧನ್ವಂತರಿಯನ್ನು ಆ ಬಳ್ಳಿಯ ಮಹತ್ವವನ್ನು ತಿಳಿಸಬೇಕೆಂದು ಕೇಳಿಕೊಂಡಾಗ ಧನ್ವಂತರಿ ಅದರ ಔಷಧಯುಕ್ತ ಗುಣಗಳು ಮತ್ತು ಮಹತ್ವವನ್ನು ದೇವತೆಗಳಿಗೆ ತಿಳಿಸುತ್ತಾನೆ. ಅದರ ಆಕಾರ, ಬಣ್ಣ ಮತ್ತು ಸುವಾಸನೆಗೆ ಮಹಾವಿಷ್ಣುವು ಮಾರುಹೋಗುತ್ತಾನೆ. ಪೂಗೀಫಲವು ಬ್ರಹ್ಮನಿಗೆ, ತಾಂಬೂಲವು ವಿ‍ಷ್ಣುವಿಗೆ ಮತ್ತು ಸುಣ್ಣವು ಶಿವನಿಗೆ ಪ್ರಿಯವೆಂದು ಬಣ್ಣಿಸಲಾಗಿದೆ.

ಮುಂದೆ ಓದಿ