ಪಿತೃ ಶ್ರಾದ್ಧ

ಗತಿಸಿದ ನಮ್ಮ ಪಿತೃಗಳ ಸದ್ಗತಿಗಾಗಿ ಆಚರಿಸುವ ಋಣ ವಿಮೋಚನಾ ರೂಪದ ಶ್ರದ್ಧಾಂಜಲಿಯೇ 'ಶ್ರಾದ್ಧ' ವೆನಿಸುತ್ತದೆ. 'ಶ್ರಾದ್ಧಂ ಶ್ರದ್ಧಯಾ ದೇಯಂ. ನಮಗೆ ಭೌತಿಕ ಶರೀರವನ್ನು ನೀಡಿ ನಮ್ಮನ್ನು ರೂಪಿಸಿದವರು ನಮ್ಮ ಮಾತಾ ಪಿತೃಗಳು. ಗತಿಸಿದ ಅವರನ್ನು ಕೃತಜ್ಞತೆಯಿಂದ ನೆನೆದು, ಶ್ರದ್ಧಾ ಭಕ್ತಿ ಗೌರವಗಳಿಂದ ಮಾಡುವ ಕ್ರಿಯೆಯೇ ಶ್ರಾದ್ಧ. ಶ್ರಾದ್ಧದಾಚರಣೆಯಲ್ಲಿ ಶ್ರದ್ಧೆ ಮುಖ್ಯವೇ ಹೊರತು ಆಡಂಬರವಲ್ಲ. ಮೃತರ ಸದ್ಗತಿಗಾಗಿರುವ ಈ ಶ್ರಾದ್ಧದ ಪರಿಕಲ್ಪನೆ ಕೇವಲ ಬ್ರಾಹ್ಮಣ ಸಮುದಾಯ ಅಥವಾ ವೈದಿಕ ಪರಂಪರೆಯಲ್ಲಿ ಮಾತ್ರವಲ್ಲ ಅದು ಈ ಜಗತ್ತಿನ ಎಲ್ಲ ಜನ ಸಮುದಾಯಗಳಲ್ಲೂ ಅವರವರ ಧರ್ಮಾಚರಣೆಯಲ್ಲಿ ನಿರ್ದೇಶಿಸಿದಂತೆ ಇದೆ. 'ನಿತ್ಯಂ ನೈಮಿತ್ತಿಕಂ ಕಾಮ್ಯಂ ವೃದ್ಧಿ ಶ್ರಾದ್ಧಮತಾಪರಮ್ | ಪಾರ್ವಣಂ ಚೇತಿ ವಿಜ್ಞೇಯಂ ಶ್ರಾದ್ಧಂ ಪಂಚ ವಿಧಂ ಬುಧೈ' ಎನ್ನುತ್ತದೆ ಯಮ ಸ್ಮೃತಿ. ನಿತ್ಯ, ನೈಮಿತ್ತಿಕ, ಕಾಮ್ಯ, ವೃದ್ಧಿ, ಮತ್ತು ಪಾರ್ವಣಗಳೆಂದು ಐದು ಬಗೆಯ ಶ್ರಾದ್ಧದಾಚರಣೆಗಳಿವೆ. ಭವಿಷ್ಯ ಪುರಾಣದಲ್ಲಿ ಇನ್ನು ಏಳು ಬಗೆಯ ಶ್ರಾದ್ಧಗಳ ವಿವಿರವಿದೆ.
ಪಿತೃಶ್ರಾದ್ಧವೇಕೆ?:
ಇಲ್ಲಿ ಪಿತೃ ಎಂಬ ಶಬ್ದಕ್ಕೆ ವಿಸ್ತಾರವಾದ ಅರ್ಥವಿದೆ. ಗತಿಸಿದ ನಮ್ಮ ರಕ್ತ ಸಂಬಂಧಿಗಳೆಲ್ಲ ನಮಗೆ ಪಿತೃಗಳೇ ಆದರೂ ನಮ್ಮ ಹುಟ್ಟಿಗೆ ಕಾರಣರಾದ ಗತಿಸಿದ ನಮ್ಮ ತಂದೆ ತಾಯಿಗಳಿಗೆ ಸದ್ಗತಿ ದೊರೆಯಲೆಂದು ಮೃತರಾದಾಗ ಅಸ್ಥಿ ಸಂಚಯನದಿಂದ ಮೊದಲ್ಗೊಂಡು ಹದಿಮೂರು ದಿವಸಗಳವರೆಗೆ ಉತ್ತರ ಕ್ರಿಯೆಗಳನ್ನು ಮಾಡುತ್ತೇವೆ. ಇದರಿಂದ ಮೃತರಾದ ಅವರಿಗೆ ಪಿತೃಲೋಕ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ನಮ್ಮದು. ಅಷ್ಟೇ ಸಾಕೆ? ಪಿತೃಲೋಕದಲ್ಲಿರು ಅವರ ಹಸಿವು ಬಾಯಾರಿಕೆಗಳನ್ನೂ ನೀಗಿಸಲು ಏನಾದರೂ ಮಾಡಬೇಡವೇ? ಅದಕ್ಕೆಂದೇ ವರುಷಕ್ಕೊಂದು ಬಾರಿ ನಾವು ಈ ಶ್ರಾದ್ಧದಾಚರಣೆಯ ಮೂಲಕ ಅವರ ಹಸಿವನ್ನು ನೀಗಿಸುತ್ತೇವೆ. ನಾವು ವಾಸಿಸುವ ಈ ಭೂಲೋಕದ ದಿನಮಾನ ಗಣನೆಯ ೩೬೫ ದಿನಗಳು ಪಿತೃಲೋಕದ ಒಂದು ದಿನವೆಂದು ಲೆಕ್ಕ. ಹಾಗಾಗಿ ನಾವು ವರುಷಕ್ಕೊಮ್ಮೆ ಮಾಡುವ ಶ್ರಾದ್ಧವು ಅವರ ದೈನಂದಿನ ಹಸಿವು ಬಾಯಾರಿಕೆಗಳನ್ನು ನೀಗಿಸುತ್ತದೆ. ಈ ಶ್ರಾದ್ಧವೆಂಬ ವೈದಿಕ ಆಚರಣೆ ಅಗ್ನೌಕರಣ ಹೋಮ, ಪಾಣಿ ಹೋಮ, ಬ್ರಾಹ್ಮಣ ಭೋಜನ, ದಾನ, ದಕ್ಷಿಣೆ, ಪಿಂಡಪ್ರದಾನ, ತಿಲ ತರ್ಪಣವೆಂಬ ವಿಧಿಗಳನ್ನು ಹೊಂದಿದೆ. ದೈವತ್ವವನ್ನು ಹೊಂದಿರುವ ನಮ್ಮ ಪಿತೃಗಳು ನಾವು ಮಾಡುವ ಹೋಮದಿಂದ, ಸ್ವರ್ಗದಲ್ಲಿರುವ ಪಿತೃಗಳು ಬ್ರಾಹ್ಮಣ ಭೋಜನದಿಂದ, ಯಮಲೋಕದಲ್ಲಿರು ಪಿತೃಗಳು ಪಿಂಡ ಪ್ರದಾನದಿಂದ ಹೀಗೆ ಬೇರೆ ಬೇರೆ ಸ್ಥಿತಿಗಳಲ್ಲಿರುವ ಶರೀರ ರಹಿತ ಚೇತನಗಳು ಇಲ್ಲಿ ನಾವು ಮಾಡುವ ಶ್ರಾದ್ಧದಿಂದ ಸಂತೃಪ್ತರಾಗಿ ನಮ್ಮನ್ನು ಆಶೀರ್ವದಿಸುತ್ತಾರೆ ಎನ್ನುತ್ತವೆ ಶಾಸ್ತ್ರಗಳು.
ಪಿತೃಶ್ರಾದ್ಧವನ್ನು ಸ್ವಗೃಹದಲ್ಲಿ ಮಾಡುವುದರಿಂದ ಪಿತೃಗಳು ವಿಶೇಷವಾಗಿ ಸಂತೋಷ ಪಡುತ್ತಾರೆ.ಅನಿವಾರ್ಯವಾದಲ್ಲಿ ನದಿ, ಕೊಳ, ಸರೋವರ ಮುಂತಾದ ಜಲತಾಣಗಳಲ್ಲಿ ಅಥವಾ ಪುಣ್ಯ ತೀರ್ಥ ಕ್ಷೇತ್ರಗಳಲ್ಲಿ ಮಾಡುವುದು ಶ್ರೇಯಸ್ಕರ. ಬೇರೆಯವರ ಮನೆಯಲ್ಲಿ ತನ್ನ ಪಿತೃಗಳ ಶ್ರಾದ್ಧ ಮಾಡಿದರೆ ಆ ಮನೆಯ ಯಜಮಾನನ ಪಿತೃಗಳು ಶ್ರಾದ್ಧದ ಕವ್ಯವನ್ನು (ಹವಿಸ್ಸನ್ನು) ಸೇವಿಸುವರು ಎಂಬುದೊಂದು ನಂಬಿಕೆ.
ಪಿತೃ ಶ್ರಾದ್ಧದಲ್ಲಿ 'ತರ್ಪಣ'ವೆಂಬ ವಿಧಿಯಿದೆ. ಸಂಸ್ಕೃತ ಶಬ್ದ 'ತೃಪ್' ಧಾತುವಿನಿಂದ 'ತರ್ಪಣ' ಎಂಬ ಶಬ್ದವಿದೆ. ದೇವತೆಗಳು, ಋಷಿಗಳು ಮತ್ತು ಪಿತೃಗಳನ್ನು ತೃಪ್ತಿ ಪಡಿಸುವುದೇ ಈ ತರ್ಪಣ ಕಾರ್ಯದ ಉದ್ದೇಶ. ತರ್ಪಣವನ್ನು ಮೃತ ಆತ್ಮಗಳಿಗೆ ನೀಡಬೇಕೇ ಹೊರತು ಜೀವಂತರಾಗಿರುವವರಿಗಲ್ಲ. ದೇವತೆಗಳು ಮತ್ತು ಋಷಿಗಳಿಗೆ ನೀರಿನಿಂದಲೂ, ಪಿತೃಗಳಿಗೆ ಎಳ್ಳು ಮತ್ತು ನೀರಿನಿಂದಲೂ ತರ್ಪಣ ನೀಡುವುದು ವಾಡಿಕೆ. ಪಿತೃ ಶ್ರಾದ್ಧದಲ್ಲೂ ಉಪನಯನ ಸಂಸ್ಕಾರ ಹೊಂದಿದವರು ಮಾತ್ರ ತರ್ಪಣ ನೀಡುವುದಕ್ಕೆ ಅರ್ಹರು. ತರ್ಪಣ ನೀಡುವಾಗ 'ಸವ್ಯಂ... ಅಪಸವ್ಯಂ..ನಿವೀತಿ ಎಂಬ ಪುರೋಹಿತರ ನಿರ್ದೇಶನವನ್ನು ನಾವು ಪಡೆಯುತ್ತೇವೆ. ಏನಿದು ಸವ್ಯ, ಅಪಸವ್ಯ ಮತ್ತು ನಿವೀತಿ? ಸವ್ಯವೆಂದರೆ ಜನಿವಾರವು ಬಲ ಹೆಗಲನ್ನು ಬಳಸಿರುವಂತೆ (ಜನಿವಾರವನ್ನು ಯಾವಾಗಲೂ ಬಲಬದಿಗೆ ಬರುವಂತೆಯೇ ಧರಿಸಿರಬೇಕು) ಆ ಸ್ಥಿತಿಯಲ್ಲಿ ದೇವರಿಗೆ ತರ್ಪಣ ನೀಡಬೇಕು. ನಿವೀತಿ ಯೆಂದರೆ ಜನಿವಾರವನ್ನು ಹಾರದಂತೆ ಧರಿಸಿ ಋಷಿಗಳಿಗೆ ತರ್ಪಣವನ್ನು ನೀಡಬೇಕು. ಇನ್ನು ಅಪಸವ್ಯವೆಂದರೆ ಜನಿವಾರವು ಎಡ ಹೆಗಲನ್ನು ಬಳಸಿರುವಂತೆ ಪಿತೃಗಳಿಗೆ ತರ್ಪಣವನ್ನು ಬಿಡಬೇಕು.ಅಮಾವಾಸ್ಯೆ, ಗ್ರಹಣ, ಆಯನ, ಸಂಕ್ರಮಣ, ಮಹೋದಯ ಪುಣ್ಯ ಕಾಲಗಳಲ್ಲೂ ದ್ವಾದಶ ಪಿತೃಗಳಿಗೆ ಅವರ ಮತ್ತು ನಮ್ಮ ಸಂಬಂಧ, ಹೆಸರು, ಗೋತ್ರ, ಮತ್ತು ರೂಪಗಳನ್ನು ಉಲ್ಲೇಖಿಸಿ ಮೂರು ಬಾರಿ ತರ್ಪಣವನ್ನು ನೀಡಬೇಕು.
ಏನಿದು ರೂಪ?
ಶ್ರಾದ್ಧದಾಚರಣೆಯಲ್ಲಿ ಪಿಂಡ ಪ್ರದಾನ ಮಾಡುವಾಗ ಮೂರು ಪಿಂಡಗಳಿದ್ದು ಅವುಗಳು ಕ್ರಮವಾಗಿ ತಂದೆ, ಅಜ್ಜ ಮತ್ತು ಮುತ್ತಜ್ಜ ಅಥವಾ ತಾಯಿ, ಅಜ್ಜಿ (ತಂದೆಯ ತಾಯಿ) ಮತ್ತು ಮತ್ತಜ್ಜಿ (ತಂದೆಯ ಅಜ್ಜಿ) ಇವರದಾಗಿರುತ್ತದೆ. ಇಲ್ಲಿ ತಂದೆಯು 'ವಸು' ರೂಪನಾಗಿಯೂ,(ಉದಾ) ಅಸ್ಮದ್ಪಿತರಂ............ಶರ್ಮಾಣಂ..........ಗೋತ್ರಂ, ವಸುರೂಪಂ ಸ್ವಧಾನಮಸ್ತರ್ಪಯಾಮಿ, ತರ್ಪಯಾಮಿ, ತರ್ಪಯಾಮಿ ಎಂತಲೂ, ಅಜ್ಜನಿಗೆ ಅಸ್ಮದ್ಪಿತಾಮಹಂ ............ಶರ್ಮಾಣಂ..........ಗೋತ್ರಂ, ರುದ್ರರೂಪಂ ಸ್ವಧಾನಮಸ್ತರ್ಪಯಾಮಿ, ತರ್ಪಯಾಮಿ, ತರ್ಪಯಾಮಿ ಎಂತಲೂ, ಮುತ್ತಜ್ಜನಿಗೆ ಅಸ್ಮದ್ಪ್ರಪಿತಾಮಹಂ ............ಶರ್ಮಾಣಂ..........ಗೋತ್ರಂ, ಆದಿತ್ಯರೂಪಂ ಸ್ವಧಾನಮಸ್ತರ್ಪಯಾಮಿ, ತರ್ಪಯಾಮಿ, ತರ್ಪಯಾಮಿ ಎಂತಲೂ, ತರ್ಪಣವನ್ನು ಬಿಡಬೇಕು. ಶ್ರಾದ್ಧದಾಚರಣೆ ಮನೆಯಲ್ಲಾದರೂ ತರ್ಪಣಗಳನ್ನು ಮನೆಯ ಒಳಗೆ ಬಿಡುವಂತಿಲ್ಲ. ತುಲಸಿ ಕಟ್ಟೆಯ ಬಳಿಯೋ, ಬಾವಿಯ ಬಳಿಯೋ ಹೋಗಿ ಬಿಡತಕ್ಕದ್ದು.
ಮಾತಾ ಪಿತೃಗಳ ಸಾಂವತ್ಸರಿಕ ಶ್ರಾದ್ಧವನ್ನು ಮಾಡಿದ್ದರೂ ಪಿತೃ ಪಕಷದಲ್ಲಿ ತಂದೆ ತಾಯಿಗಳು ಮೃತರಾದ ತಿಥಿಯಂದು ಪ್ರತ್ಯೇಕವಾಗಿ ಶ್ರಾದ್ಧವನ್ನು ಮಾಡುವ ಪದ್ಧತಿಯಿದೆ. ಆ ತಿಥಿಗೆ ಸಾಧ್ಯವಾಗದೇ ಹೋದಲ್ಲಿ ಮಹಾಲಯ ಅಮಾವಾಸ್ಯೆಯಂದಾದರೂ ಪಿತೃ ಶ್ರಾದ್ಧ ಮಾಡಬೇಕೆಂದು ಶಾಸ್ತ್ರಗಳು ತಿಳಿಸುತ್ತವೆ. ಪಿತೃ ಮೃತರಾದ ವರ್ಷ ಮಹಾಲಯ ಶ್ರಾದ್ಧ ಆಚರಣೆ ನಿಷಿದ್ಧವಾಗಿದೆ. ಶ್ರಾದ್ಧದಾಚರಣೆಯಲ್ಲಿ ಪಿಂಡ ಪ್ರದಾನ ತರ್ಪಣಾದಿಗಳು ನಿಜವಾಗಿಯೂ ಪಿತೃಗಳಿಗೆ ಸೇರುತ್ತವೆಯೇ ಎಂಬೊಂದು ತಾರ್ಕಿಕ ಪ್ರಶ್ನೆ. ವೈಜ್ಞಾನಿಕ ಯುಗದಲ್ಲಿ ತರಂಗಗಳನ್ನು ರೇಡಿಯೊ, ಮೊಬೈಲ್ ಇತ್ಯಾದಿಗಳು ಸ್ವೀಕರಿಸಿ ಧ್ವನಿಯನ್ನು ಬಿತ್ತರಿಸುವುದನ್ನು ನೋಡಿದ್ದೇವೆ. ಇದೇ ತತ್ತ್ವ ಶ್ರಾದ್ಧದಲ್ಲಿ ನಾವು ಮಾಡುವ ಪಿಂಡ ಪ್ರದಾನ ಮತ್ತು ತರ್ಪಣಗಳನ್ನು ಅದೃಶ್ಯರಾದ ನಮ್ಮ ಪಿತೃಗಳು ಸ್ವೀಕರಿಸುತ್ತಾರೆ ಎಂಬ ನಂಬಿಕೆ ಸುಳ್ಳಾಗಲಾರದು.
ಹೌದು, ಪಿತೃಶ್ರಾದ್ಧದಾಚರಣೆಯಿಂದ ಸಿಗುವ ಫಲವೇನು?
ಪಿತಾ ದದಾತಿ ಸತ್ಪುತ್ರಾನ್ ಗೋಧನಾನಿ ಪಿತಾಮಹಃ | ಧನದಾತಾ ಭವೇತ್ಸೋಪಿ ಯಸ್ತಸ್ಯ ಪ್ರಪಿತಾಮಹಃ ||
ದದ್ಯಾದ್ವಿಪುಲಮನ್ನಾದ್ಯಂ ವೃದ್ಧಸ್ತು ಪ್ರಪಿತಾಮಹಃ | ತೃಪ್ತಾಃ ಶ್ರಾದ್ಧೇನ ತೇ ಸರ್ವೇ ದತ್ವಾ ಪುತ್ರಸ್ಯ ವಾಂಛಿತಂ ||
ಪಿತೃಕಾರ್ಯಕ್ಕೆ ಆಹ್ವಾನಿಸುವ ಬ್ರಾಹ್ಮಣರೇ ನಮ್ಮ ಪಿತೃ ದೇವತೆಗಳು ಎಂಬ ಭಾವನೆ ನಮ್ಮದಾಗಿರಬೇಕು. ಶ್ರಾದ್ಧ/ಪಕ್ಷ ಆಚರಿಸುವುದರಿಂದ ಗತಿಸಿದ ತಂದೆಯು ಕರ್ತೃವಿಗೆ ಸತ್ಪುತ್ರನು ಲಭಿಸಲಿ ಎಂದು ಆಶೀರ್ವದಿಸಿದರೆ, ಪಿತಾಮಹನ(ತಾತ)ನು ಗೋಧನ ಸಿಗಲೆಂದು , ಪ್ರಪಿತಾಮಹ (ಮುತ್ತಾತ) ನು ಅನ್ನ ಆಹಾರಾದಿಗಳು, ಬದುಕಿಗೊಂದು ನೆಲೆ, ಸಂಪತ್ತು, ಯಶಸ್ಸುಗಳು ಲಭಿಸಲೆಂದು ಹರಸುತ್ತಾರೆ.
ಶ್ರಾದ್ಧ ಆಚರಿಸದಿದ್ದರೆ ಏನಾಗುತ್ತದೆ?
ವೇದಪುರಾಣಶಾಸ್ತ್ರಗಳ ಅವಗಣನೆಯನ್ನು ಮಾಡುವವರಿಗೆ, ಜೀವಂತ ತಂದೆ ತಾಯಿಗಳನ್ನು ಪೋಷಿಸದೆ ಆದರಿಸದವರಿಗೆ ಏನು ಹೇಳಿದರೂ ಒಂದೆ. ನಮ್ಮ ಜನ್ಮಕ್ಕೆ ಕಾರಣರಾದ ಪಿತೃಗಳನ್ನು ಅವರು ಸದ್ಗತಿಯನ್ನು ಪಡೆಯಲೆಂದು ಮಾಡುವ ಈ ಶ್ರಾದ್ಧದಾಚರಣೆ ಶ್ರದ್ದೇ ಮತ್ತು ಬಾವುಕತೆಗೆ ಸಂಬಂಧಪಟ್ಟ ವಿಷಯ. ಈ ವಿಚಾರದಲ್ಲಿ ಶಾಸ್ತ್ರಗಳು ಸ್ಪಷ್ಟವಾಗಿ ಈ ರೀತಿ ಹೇಳಿವೆ :
ಪಿತೃ ಯಜ್ಷದಿನೇ ಪ್ರಾಪ್ತೇ ಗೃಹದ್ವಾರಂ ಸಮಾಶ್ರಿತಾಃ | ವಾಯುಭೂತಾಃ ಪ್ರವಾಂಛಂತಿ ಶ್ರಾದ್ಧಂ ಪಿತೃಗಣಾಃ ನೃಣಾಂ ||
ಯವದಸ್ತಮಯಂ ಭಾನೋಃ ಕ್ಷುತಿಪಾಸಾ ಸಮಾಕುಲಾಃ | ನಿಶ್ಚಸ್ವ ಸುಚಿರಂ ಯಾಂತಿ ಗರ್ಹಯಂತಿ ಸ್ವವಂಶಜಃ ||
ಪಿತೃ ಅಂತರ್ಗತರಾದ ವಸು, ರುದ್ರ, ಆದಿತ್ಯ ಪ್ರದ್ಯುಮ್ನ, ಸಂಕರ್ಷಣ, ವಾಸುದೇವರೂಪಿ ಪರಮಾತಮಾತ್ಮನು ವಾಯುತೂಪದಲ್ಲಿ ತನ್ನ ತಿಥಿಯಂದು ಕರ್ತೃವಿನ ಮನೆಯನ್ನು ಪ್ರವೇಶಿಸಿ ಅಲ್ಲಿ ತನಗೆ ನಡೆಸುತ್ತಿರುವ ಶ್ರಾದ್ಧ ಕರ್ಮವನ್ನು ವೀಕ್ಷಿಸಿ, ತನ್ನ ವಂಶಜನು ಶ್ರದ್ಧಾಭಕ್ತಿಗಳಿಂದ ಆಚರಿಸುವ ಶ್ರಾದ್ಧದಲ್ಲಿ ಅವನು ನಿಡುವ ಉದಕಾಹಾರಾದಿಗಳನ್ನು ಸೇವಿಸಿ ಸಂತೃಪ್ತನಾಗುತ್ತಾನೆ. ಶ್ರಾದ್ಧದಾಚರಣೆಯಿಲ್ಲದಿದ್ದಲ್ಲಿ ಹಸಿವು ಬಾಯಾರಿಕೆಗಳಿಂದ ಬಾಧಿತರಾದ ಪಿತೃಗಳು ಅ ಕರ್ತೃವನ್ನು, ಅವನ ಕುಟುಂವನ್ನು ಶಪಿಸಿ ಆ ಗೃಹದಿಂದ ನಿರ್ಗಮಿಸುತ್ತಾರೆ.
ಶ್ರಾದ್ಧ ಮಾಡದೇ ಇದ್ದರೆ 'ನ ಕುರ್ಯಾದ್ಯೋ ನರಃ ಶ್ರಾದ್ಧಂ ಮಾತಾಪಿತ್ರೋರ್ಮೃತೇಹನಿ |
ವೇತಾಲತ್ವಮವಾಪ್ಯಾಶು ಪಶ್ಚಾನ್ನರಕ ಮಶ್ನುತೇ | (ಸ್ಕಾಂದ ಪುರಾಣ) ತನ್ನ ಪಿತೃಗಳ ಶ್ರಾದ್ಧವನ್ನು ಆಚರಿಸದವನಿಗೆ ಬೇತಾಳ ಜನ್ಮ, ನರಕ ಪ್ರಾಪ್ತಿ ಎಂಬ ಉಲ್ಲೇಖವಿದೆ. ಪ್ರಸ್ತುತ ಕಾಲ ಪರಿಸ್ಥಿತಿಯಲ್ಲಿ ಗೃಹಶಾಂತಿ ಭಂಗ, ನಾನಾ ರೋಗ ಭಯ, ದಾರಿದ್ರ್ಯ, ಅಪಮೃತ್ಯುಗಳು ಸಂಭವಿಸಿ ಬದುಕು ದುಸ್ತರವೆಂದೆನಿಸಬಹುದು. ಶ್ರಾದ್ಧದಾಚರಣೆಯೆಂದರೆ ಗತಿಸಿದ ನಮ್ಮ ಪಿತೃಗಳ ಬಗ್ಗೆ ಇರುವ ಪ್ರೀತಿಯನ್ನು, ಗೌರವವನ್ನು ನೆನಪಿಸಿಕೊಂಡು ಅವರ ಅನುಗ್ರಹವನ್ನು ಪಡೆಯುವ ಕೃತಜ್ಞತಾಪೂರ್ವಕವಾಗಿ ಮಾಡುವ ಕರ್ಮ.
ಕೊನೆಯದಾಗಿ ಜೀವಿತ ಕಾಲದಲ್ಲಿ ಹೆತ್ತವರ ಮನಸ್ಸಿಗೆ ನೋವಾಗದಂತೆ ಅವರನ್ನು ಪ್ರೀತಿ ವಾತ್ಸಲ್ಯಗಳಿಂದ ಕಂಡು, ಅವರ ವೃದ್ಧಾಪ್ಯದ ಶಾರೀರಿಕ, ಮಾನಸಿಕ ನೋವುಗಳಿಗೆ ಸಾಂತ್ವನ ಹೇಳುತ್ತ ಅವರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಹೆತ್ತವರನ್ನು ವೃದ್ಧಾಶ್ರಮಗಳಿಗೆ ಅಟ್ಟಿ ಅವರು ಕಾಲವಾದ ನಂತರ ಅವರ ಶ್ರಾದ್ಧವನ್ನು ವಿಜ್ರಂಭಣೆಯಿಂದ ಮಾಡುವವರಿಗೆ ಪಿತೃಗಳ ಆಶೀರ್ವಾದ ಸಿಕ್ಕೀತೆ ಎನ್ನುವುದು ನಾವೆಲ್ಲರೂ ತಿಳಿದುಕೊಳ್ಳಬೇಕಾದ ವಿಚಾರ.