ಇಚ್ಛಾ ಸಂತತಿ

ಜನಸಂಖ್ಯಾಸ್ಪೋಟ! ಪ್ರಪಂಚವನ್ನು ಇಂದು ಕಾಡುತ್ತಿರುವ ಒಂದು ಜ್ವಲಂತ ಸಮಸ್ಯೆ. ಆಯಾಯಾ ಪ್ರದೇಶಗಳ ಅಭಿವೃದ್ಧಿ ಹಾಗೂ ಜನೋಪಯೋಗಿ ಕೆಲಸಗಳಿಗಾಗಿ ಯಾವುದೇ ಮೂಲಗಳಿಂದ ಎಷ್ಟೇ ಯೋಜನೆಗಳನ್ನು ರೂಪಿಸಿ ನಿರ್ವಹಿಸಿದರೂ ಅಗಾಧವಾಗಿ ಬೆಳೆಯುತ್ತಿರುವ ಜನಸಂಖ್ಯೆ ಇವನ್ನೆಲ್ಲ ನುಂಗುತ್ತ ಸಾಗಿದೆ. ಪರಿಸರದ ಅಸಮತೋಲನ, ಪ್ರಾಥಮಿಕ ಅವಶ್ಯಕತೆಗಳ ಕೊರತೆಯಿಂದ ತೊಡಗಿ ಓಝೋನ್ ಪದರದ ಕ್ಷೀಣತೆ, ಹವಾಮಾನದ ವೈಪರೀತ್ಯತೆಗಳಿಗೂ ಬೆಳೆಯುತ್ತಿರುವ ಜನಸಂಖ್ಯೆ ಸಾಕಷ್ಟು ಕಾಣಿಕೆ ನೀಡುತ್ತ ಮುಂದುವರಿದಿದೆ.
ಹಿಂದಿನ ಕಾಲದಲ್ಲಿ 'ಅಷ್ಟಪುತ್ರೀಭವ' ಎಂದು ಆಶೀರ್ವದಿಸುವುದು ವಾಡಿಕೆಯಾಗಿತ್ತು. ಆಶೀರ್ವಾದ ಪಡೆದವರು ಅದನ್ನು ಸಂತೋಷದಿಂದಲೇ ಸ್ವೀಕರಿಸುತ್ತಿದ್ದರು. ಇಂದು ಈ ರೀತಿ ಆಶೀರ್ವದಿಸುವುದು ಅಪರಾಧವಾದೀತು. ಹಾಗಾಗಿ ಯಾರೂ ಆ ರೀತಿ ಆಶೀರ್ವದಿಸುವ ಧೈರ್ಯ ಮಾಡಲಾರರು. ಆಶೀರ್ವದಿಸಿದರು ಪಡೆಯುವ ಮನಸ್ಸನ್ನೂ ಮಾಡಲಾರರು. ಹೀಗಿದ್ದರೂ ತಾವು ಬಯಸುವ ನಿಗದಿತ ಸಂತಾನದಲ್ಲೇ ನಿರ್ದಿಷ್ಟವಾಗಿ ಗಂಡನ್ನೋ ಯಾ ಹೆಣ್ಣನ್ನೋ ಕುಟುಂಬ ಅಪೇಕ್ಷಿಸುತ್ತದೆ ಎಂಬುದು ನಿರ್ವಿವಾದ.
ಬಡವರು-ಶ್ರೀಮಂತರು, ವಿದ್ಯಾವಂತರು-ಅವಿದ್ಯಾವಂತರು ಎಂಬ ಭೇದವಿಲ್ಲದೇ ಪರಸ್ಪರ ಭೇಟಿಯಾದಾಗ ಬರುವ ಲೋಕಾಭಿರಾಮದ ಮಾತುಗಳಲ್ಲಿ ನಿಮಗೆ ಮಕ್ಕಳೆಷ್ಟು? ಎಂಬುದು ಸರ್ವೇಸಾಮಾನ್ಯವಾಗಿ ಬರುವ ಪ್ರಶ್ನೆ. ಉತ್ತರಿಸುವಾತ ಹೊರಗಡೆ ತೋರಿಸಿಕೊಳ್ಳದಿದ್ದರೂ, ಬರೇ ಹೆಣ್ಣುಮಕ್ಕಳೆಂದು ಉತ್ತರಿಸುವಾಗ ಆಂತರಿಕ ಮುಜುಗುರಕ್ಕೆ ಒಳಗಾಗುತ್ತಾನೆ. ಹೆಣ್ಣು ಮಗುವೊಂದರ ನಿರೀಕ್ಷೆಯಲ್ಲಿ ಮೂರ್ನಾಲ್ಕು ಗಂಡು ಮಕ್ಕಳಾಗುವುದು, ಗಂಡೊಂದರ ನಿರೀಕ್ಷೆಯಲ್ಲಿ ನಾಲ್ಕೈದು ಹೆಣ್ಣು ಮಕ್ಕಳಾಗುವುದು ನಾವು ಸುತ್ತಮುತ್ತ ನೋಡುತ್ತಿರುವ ಸತ್ಯ ಸಂಗತಿ. ಸದ್ಯದ ವರ್ತಮಾನ ಕಾಲದಲ್ಲಂತೂ ಸ್ಕ್ಯಾನಿಂಗ್ ಮೂಲಕ ಮುಂಚಿತವಾಗಿಯೇ ತಿಳಿಯಲು ಪ್ರಯತ್ನಿಸಿ ಆಗಲೇ ಆತುರದ ನಿರ್ಧಾರ ತೆಗೆದುಕೊಳ್ಳುವವರೂ ಇದ್ದಾರೆ.
ಈ ಹಿನ್ನೆಲೆಯಲ್ಲಿ ಕುಟುಂಬವೊಂದು ತನಗಿಷ್ಟದ ಸಂತತಿಯನ್ನು ಪಡೆಯುವಲ್ಲಿ ನಮ್ಮ ಪುರಾತನ ಋಷಿ ಮುನಿಗಳು ಸಂಶೋಧಿಸಿದ ವಿಚಾರಗಳು, ಕುಟುಂಬ ಯೋಜನೆ ಎಲ್ಲರಿಗೂ ಅನಿವಾರ್ಯವಾಗಿರುವ ಈ ದಿನಗಳಲ್ಲಿ ಅತ್ಯಂತ ಪ್ರಸ್ತುತವಾಗಿದೆ. ವ್ಯಕ್ತಿಯೊಬ್ಬ ವಿವಾಹಿತನಾಗುವುದು ಹಿಂದೂ ಧಾರ್ಮಿಕ ನಂಬಿಕೆಗಳಂತೆ ಕೇವಲ ಕಾಮ ಪಿಪಾಸೆ ತಣಿಸುವುದಕ್ಕೆ ಮಾತ್ರವಲ್ಲ. ಗೃಹಸ್ಥಾಶ್ರಮ ಸಮಾಜದ ಎಲ್ಲರಿಗೂ ಆಶ್ರಯ ನೀಡಬೇಕಾದ ಪವಿತ್ರ ಹೊಣೆಗಾರಿಕೆಯಿಂದ ಕೂಡಿದೆ. ಬ್ರಹ್ಮಚರ್ಯ, ಸ್ನಾತಕ, ವಾನಪ್ರಸ್ಥ, ಸನ್ಯಾಸ ಹೀಗೆ ಎಲ್ಲ ಆಶ್ರಮದವರಿಗೂ, ಸಮಾಜದ ಎಲ್ಲ ವಿಭಾಗಗಳಿಗೂ ಉಪಕಾರವೆಸಗಿ ತಾನೂ ಕೃತಾರ್ಥತೆಯ ಧನ್ಯತೆ ಅನುಭವಿಸಬೇಕಾದುದು ಗೃಹಸ್ಥನೋರ್ವನ ಧರ್ಮ. ಇದು ಈ ಆಶ್ರಮದ ಅವಿಭಾಜ್ಯ ಅಂಗವೂ ಹೌದು.
ಶಿವಭಕ್ತ ವೇಮನ ಎಂಬ ಪಂಡಿತರು ಹೇಳುವಂತೆ ವಿವಾಹವಾಗಲು ಐದು ಉದ್ದೇಶ ಯಾ ಕಾರಣಗಳಿರತಕ್ಕದ್ದು. 'ಸಂಯಮೋ ಕುಲರಕ್ಷಾಚ ಸುಪ್ರಜೋತ್ಪಾದನಂ ತಥಾ ಪ್ರೇಮೈಕ್ಯಂ ಭಗವದ್ಭಕ್ತಿರ್ವಿವಾಹೇ ಪಂಚಹೇತವಃ ' ಅರ್ಥ ಸ್ಪಷ್ಟವಿದೆ. ಪರಂಪರಾಗತ ಮರ್ಯಾದೆಗಳನ್ನು ಗೌರವಿಸಿ, ಸಂಯಮದಿಂದ ಇರುವರೇ ಕಾರಣೀಭೂತರಾಗಿ, ಉತ್ತಮ ಪ್ರಜೋತ್ಪಾದನೆಗೆ ಹೇತುವಾಗಿ, ಪರಮಾತ್ಮನಲ್ಲಿ ಅನುರತನಾಗಿ, ಪ್ರೇಮೈಕ್ಯನಾಗಿರುವಲ್ಲಿ ವಿವಾಹದ ಉದ್ದೇಶ ಸಾರ್ಥಕವಾಗಬಹುದು. ಕಾಮವನ್ನು ಗೆಲ್ಲಲು ವಿವಾಹ, ಕ್ರೋಧವನ್ನು ಗೆಲ್ಲಲು ಮಕ್ಕಳು. ವೈವಾಹಿಕ ಜೀವನವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬ ಬಗ್ಗೆ ಭಕ್ತ ಶ್ರೇಷ್ಠರೊಬ್ಬರ ಅಭಿಮತ ಹೀಗೆ ವ್ಯಕ್ತವಾಗಿತ್ತು.
'ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ', 'ಸುಪ್ರಜೋತ್ಪಾದನಾರ್ಥಂ' ಇವೆಲ್ಲ ವಿವಾಹ ಸಂದರ್ಭದಲ್ಲಿ ಉದ್ಘೋಶಿಸಲ್ಪಡಬೇಕಾದ ಸಂಕಲ್ಪಗಳು. ಒಟ್ಟಿನಲ್ಲಿ ಭಾರತೀಯ ಶಾಸ್ತ್ರಕಾರರು, ಮಹಾಮುನಿಗಳು, ಕೂಡ ಸುಪ್ರಜೋತ್ಪಾದನೆಗೆ ಹೆಚ್ಚು ಮಹತ್ವ ಕೊಟ್ಟಿದ್ದರು ಎಂಬುದು ಸ್ಪಷ್ಟ. ಹಾಗೆಯೇ ಧರ್ಮ ಪ್ರಜಾಪ್ರಾಪ್ತಿ ಗೃಹಸ್ಥಾಶ್ರಮದ ಉದ್ದೇಶವೂ ಹೌದು. ಇಲ್ಲಿ ಗಂಡೂ ಬೇಕು, ಹೆಣ್ಣು ಬೇಕು. ತಾವು ಅಪೇಕ್ಷಿಸುವಂತಹುದೇ ಸಂತಾನ ಪಡೆಯುವುದು ಸಾಧ್ಯವೇ ಎಂದು ಚಿಂತಿಸಿದರೆ ಖಂಡಿತವಾಗಿಯೂ ಸಾಧ್ಯವೆಂದು ಹಿಂದೆ ಆಗಿ ಹೋಗಿರುವ ಋಷಿ ಮುನಿಗಳು ಖಡಾಖಂಡಿತವಾಗಿ ಹೇಳಿದ್ದಿದೆ. ಇದು ಕೇವಲ ಅಂಧಶ್ರದ್ಧೆಯ ಮಾತಲ್ಲ, ವೈಜ್ಞಾನಿಕವಾಗಿ ಸ್ವೀಕಾರಾರ್ಹವಾಗಿರುವ ಪುರಾತನ ಸಂಶೋಧನೆ. ಓದಿ ತಿಳಿಯುವ ತಾಳ್ಮೆ, ಎಚ್ಚರಿಕೆಯಿಂದ ವ್ಯವಹರಿಸಬೇಕಾದ ಜಾಗ್ರತೆ ಮಾತ್ರ ನಮ್ಮಲ್ಲಿ ಅವಶ್ಯ ಇರಬೇಕು.
ಸುಭದ್ರೆಯ ಗರ್ಭದಲ್ಲಿ ಅಭಿಮನ್ಯು ಚಕ್ರವ್ಯುಹದ ಕತೆಯನ್ನು ಕೇಳಿದ ಪ್ರಕರಣ ಮಹಾಭಾರತದಲ್ಲಿ ಬರುತ್ತದೆ. ಗರ್ಭಿಣಿ ಸ್ತ್ರೀಯರಿಗಾಗಿ ಅವರು ಹೊತ್ತಿರುವ ಗರ್ಭದ ಮೇಲಿನ ಸಂಸ್ಕಾರಕ್ಕಾಗಿ (ಸೀಮಂತೋನ್ನಯನವಲ್ಲ) ಇದೀಗ ಸಾಮೂಹಿಕ ಕೇಂದ್ರಗಳೇ ತಲೆ ಎತ್ತುತ್ತಿವೆಯಂತೆ. ಹೀಗೆ ನಮ್ಮ ಪುರಾತನ ಸಂಪ್ರದಾಯ, ನಂಬಿಕೆಗಳು ವೈಜ್ಞಾನಿಕವಾಗಿಯೂ ಅತ್ಯಂತ ನಿಖರ ಸತ್ಯವಾಗಿರುವುದನ್ನು ನಾವು ಕಾಣುತ್ತೇವೆ. ಹಿಂದೆ ಕಾಮಶಾಸ್ತ್ರವನ್ನು ಗೌಪ್ಯವಾಗಿಡುತ್ತಿರಲಿಲ್ಲ. ಯಾರೂ ಅದನ್ನು ಕದ್ದು ಮುಚ್ಚಿ ಓದಬೇಕಾದ ಅವಶ್ಯಕತೆಯಿರಲಿಲ್ಲ. ಗುರುಕುಲ ವಿದ್ಯಾಭ್ಯಾಸದ ಕೊನೆಯಲ್ಲಿ ಈ ಬಗ್ಗೆಯೂ ಪರಿಜ್ಞಾನವನ್ನೂ ನೀಡುತ್ತಿದ್ದರೆಂಬುದೇ ಅತ್ಯಂತ ಗಮನಾರ್ಹ ಅಂಶ. ತೈತ್ತಿರೀಯ ಉಪನಿಷತ್ ನಲ್ಲಿ 'ಮಾತಾ ಪೂರ್ವರೂಪಮ್, ಪೀತೋತ್ತರ ರೂಪಮ್ 'ಇತ್ಯಾದಿ ಉಕ್ತಿಗಳು ಇದಕ್ಕೆ ನಿದರ್ಶನವಾಗಿವೆ.
'ಸತ್ಪ್ರಜಾ ಪ್ರಾಪ್ತಿ' ದಿಸೆಯಲ್ಲಿ ಋಷಿ ಮುನಿಗಳು ಹೇಳಿದ್ದೇನು? ನಮ್ಮ ಹಿರಿಯರು ಈ ಬಗ್ಗೆ ನೀಡಿದ ಮಾರ್ಗದರ್ಶನ ಹೇಗಿದೆ? ವಿಸ್ತೃತವಾಗಿ ತಿಳಿಯಲು ಹೆಚ್ಚಿನ ಪರಿಶ್ರಮ ಅಗತ್ಯವಿದೆ. ಬಹುಶಃ ಅಷ್ಟನ್ನೂ ಓದಿ ತಿಳಿಯುವ ತಾಳ್ಮೆ ನಮ್ಮಲ್ಲಿರಲಾರದು. ಸಂಕ್ಷೇಪವಾಗಿ ಈ ಕೆಳಗಿನವುಗಳನ್ನು ಪಟ್ಟಿ ಮಾಡಬಹುದು. ದಂಪತಿಗಳು ಸ್ವಚ್ಛಂದದಿಂದ ಸ್ವೈರಾಚರಣೆಗೆ ಮನ ಮಾಡದೆ, ವಿಲಾಸಿಗಳಾಗದೆ ಸಂಯಮದಿಂದ ವರ್ತಿಸಿ , 'ವೀರ್ಯ ಸಂಗ್ರಹರೂಪೀ ತಪಸ್ಸಿನಿಂದ'ಅದನ್ನು ಉತ್ಕೃಷ್ಟಗೊಳಿಸಬೇಕಾದುದು ಇಲ್ಲಿ ಒಂದನೆಯ ಕರ್ತವ್ಯ. ಆರೋಗ್ಯವಂತ, ಸುದೃಢ ದೀರ್ಘಾಯುಷೀ ಸಂತತಿಗಾಗಿ ಇದು ಅತ್ಯಾವಶ್ಯಕ ಪೂರ್ವ ಸಿದ್ಧತೆ. ವ್ಯಕ್ತಿಯ ಸ್ವಕೀಯ ಆರೋಗ್ಯಕ್ಕೂ, ದೀರ್ಘಾಯುಷ್ಯಕ್ಕೂ ಇದು ಲಾಭದಾಯಕವೂ ಹೌದು. ತಾವು ಸೇವಿಸುವ ಆಹಾರ, ಯೋಚಿಸುವ ವಿಚಾರ ಹಾಗೂ ತಮ್ಮ ನಡವಳಿಕೆಗಳು ಸಾತ್ವಿಕವಾಗಿರಬೇಕಾದುದು ಎರಡನೆಯ ಪೂರ್ವ ಸಿದ್ಧತೆ. ಉದ್ರೇಕಕಾರಿ ಸಾಹಿತ್ಯ ಸಿನಿಮಾಗಳಿಂದ, ಮಾದಕ ದ್ರವ್ಯಗಳು, ಕೆಟ್ಟ ಚಟಗಳಿಂದ ದೂರವಿರಬೇಕಾದುದು ಅತ್ಯಗತ್ಯ. ಇನ್ನು ಪ್ರಮುಖವಾದ ಸಮಾಗಮದ ಬಗ್ಗೆ ಚಿಂತಿಸೋಣ. ಇದನ್ನು ಮೂರು ನಾಲ್ಕು ದೃಷ್ಟಿಕೋನಗಳಿಂದ ವಿಮರ್ಶಿಸಬೇಕು.
ಪ್ರತಿ ತಿಂಗಳು ಹೆಣ್ಣು ಋತುಮತಿಯಾಗಿ, ಋತುಸ್ನಾತೆಯಾದ ಮೇಲೆಯೇ ಆಕೆ ಗರ್ಭ ಧರಿಸಲು ಸಿದ್ಧಳಾಗುತ್ತಾಳೆ. ಆಗ ಆಕೆ ಆರೋಗ್ಯವಂತಳಾಗಿಯೂ ಇರತಕ್ಕದ್ದು.
ಮಹರ್ಷಿ ವೇದವ್ಯಾಸ ಪ್ರಣೀತವಾದ ಶ್ಲೋಕವೊಂದು ಹೀಗೆ ಆರಂಭವಾಗುತ್ತದೆ.
ಪದ್ಮಸಂಕೋಚಮಾಯಾತಿ ದಿನೇತಿ ತೆ ಯಥಾಯಥಾ | ಋತಾವತೀ ತೆ ಯೋನಿಃ ಸಾ ಶುಕ್ರಂ ನಾನ್ತಃ ಪ್ರತೀಚ್ಛತಿ (ವಾಗ್ಭಟ) ಋತುಮತಿಯಾಗಾವಾಗ ಸಂಪೂರ್ಣ ತೆರೆಯುವ ಗರ್ಭಕೋಶ ದ್ವಾರವು ನಂತರ ದಿನಕಳೆದಂತೆ ಸಣ್ಣದಾಗುತ್ತ ಪುನಃ ಮುಚ್ಚಿಕೊಳ್ಳುತ್ತದೆ. ಹಾಗಾಗಿ ಸರಿ ಸುಮಾರು ಹದಿನಾರು ದಿನಗಳ ನಂತರ ಗರ್ಭಧಾರಣೆಯು ಕಷ್ಟ. (ಋತು ಚಕ್ರಕ್ಕೆ ಹೊಂದಿಕೊಂಡು ಒಂದೆರಡು ದಿನಗಳ ವ್ಯತ್ಯಾಸ ಸಾಧ್ಯ) ನಂತರ ಸಮಾಗಮದ ಫಲಿತಾಂಶದ ಬಗ್ಗೆ ಮನುವಾಣಿ ಹೀಗೆ ಹೇಳುತ್ತದೆ.
ಯುಗ್ಮಾಸು ಪುತ್ರಾ ಜಾಯಂತೇ ಸ್ತ್ರೀಯೋ ಯುಗ್ಮಾಸು ರಾತ್ರಿಷು | ತಸ್ಮಾದ್ಯುಗ್ಮಾಸು ಪುತ್ರಾರ್ಥೀ ಸಂವಿಶೇತ್ ನಿಯತೇ ದಿನೆ ||
ಸರಿ ದಿನಗಳಲ್ಲಿ ಪುತ್ರ ಪ್ರಾಪ್ತಿಯೂ, ವಿಷಮ ದಿನಗಳಲ್ಲಿ ಕನ್ಯಾ ಪ್ರಾಪ್ತಿಯೂ ಸಾಧ್ಯ. ಗರ್ಭದಾರಣೆಗೆ ಮೇಲೆ ಹೇಳಿದಂತೆ ಋತುಮತಿಯಾದ ದಿನದಿಂದ ಸುಮಾರು ಹದಿನಾರು ರಾತ್ರಿಗಳವರೆಗೆ ಮಾತ್ರ ಪ್ರಶಸ್ತ ಕಾಲ. ವೈದ್ಯ ಶಾಸ್ತ್ರದಲ್ಲೂ ಇದೇ ಹೇಳಲ್ಪಟ್ಟಿದೆ. ಇದರಲ್ಲಿ ಮೊದಲ ನಾಲ್ಕೈದು ದಿನಗಳವರೆಗೆ ರಕ್ತಸ್ರಾವದ ಸಂಭವವಿರುವುದರಿಂದ ಗರ್ಭಧಾರಣೆಗೆ ಅನುಕೂಲ ಕಡಿಮೆ. ಶಾಸ್ತ್ರೀಯವಾಗಿಯೂ, ಸಂಪ್ರದಾಯದ ಆಚರಣೆಗಳಂತೆಯೂ ಹೆಣ್ಣಿಗೆ ವಿಶ್ರಾಂತಿ ಸಿಗಬೇಕಾದುದು ಅಗತ್ಯ.
ರಜೋದರ್ಶನದ ನಂತರ ಹೆಚ್ಚೆಚ್ಚು ದಿನ ಕಳೆದಂತೆ ಸ್ತ್ರೀಯ 'ರಜ'(ಬೀಜ) ಹೆಚ್ಚೆಚ್ಚು ಪರಿಪಕ್ವ, ಪುಷ್ಟ ಹಾಗೂ ಶುದ್ಧವಾಗುತ್ತ ಹೋಗುತ್ತದೆ. ಹಾಗಾಗಿ ನಂತರದ ರಾತ್ರಿಗಳಲ್ಲಿ ಉತ್ಪನ್ನವಾಗುವ ಗರ್ಭ ಅತ್ಯಂತ ಪರಿಪೂರ್ಣ, ಹೃಷ್ಟ, ಪುಷ್ಟ, ಬಲಿಷ್ಟ ಹಾಗೂ ದೀರ್ಘಾಯುವಾಗಿರುತ್ತದೆಂದು ಶಾಸ್ತ್ರಗಳು ತಿಳಿಸುತ್ತವೆ. ಮುಂದಿನ ದಿನಗಳ ಬಗ್ಗೆ 'ವ್ಯಾಸವಾಣಿ' ಮತ್ತಷ್ಟು ನಿರ್ದಿಷ್ಟವಾಗಿ ಹೇಳುತ್ತದೆ.
ರಾತ್ರೌ ಚತುರ್ಥ್ಯಾಂ ಪುತ್ರಃ ಸ್ಯಾತ್ ಅಲ್ಪಾಯುರ್ಬಲವರ್ಜಿತಃ | ಪಂಚಮ್ಯಾಂ ಪುತ್ರಿಣೀ ನಾರೀ ಷಷ್ಠ್ಯಾಂ ಪುತ್ರಸ್ತು ಮಧ್ಯಮಃ||೧||
ಸಪ್ತಮ್ಯಾಂ ಸುಪ್ರಜಾಯೋಷಿತ್ ಅಷ್ಠಮ್ಯಾಂ ಈಶ್ವರಃ ಪುಮಾನ್ | ನವಮ್ಯಾಂ ಸುಭಗಾ ನಾರೀ ದಶಮ್ಯಾಂ ಪ್ರವರಃ ಸುತಃ ||೨||
ಏಕಾದಶ್ಯಾಂ ಅಧರ್ಮಾ ಸ್ತ್ರೀ ದ್ವಾದಶ್ಯಾಂ ಪುರುಷೋತ್ತಮಃ | ತ್ರಯೋದಶ್ಯಾಂ ಸುತಾ ಪಾಪಾ ವರ್ಣಸಂಕರಕಾರಿಣೀ ||೩||
ದರ್ಮಜ್ಞಶ್ಚ ಕೃತಜ್ಞಶ್ಚ ಆತ್ಮವೇದೀ ದೃಢವ್ರತಃ | ಪ್ರಜಾಯತೇ ಚತುರ್ದಶ್ಯಾಂ ಪಂಚದಶ್ಯಾಂ ಪತಿವ್ರತಾ ||೪||
ಆಶ್ರಯಃ ಸರ್ವ ಭೂತಾನಾಂ ಷೋಡಶ್ಯಾಂ ಜಾಯತೇ ಪುಮಾನ್ ||
ಸರಳ ಸಂಸ್ಕೃತದಲ್ಲೇ ಈ ಶ್ಲೋಕವಿರುವುದರಿಂಧ ಹೆಚ್ಚಿನ ವಿವರಣೆ ಅನಗತ್ಯ. ೪ನೇ ರಾತ್ರಿ ಗರ್ಭ ನಿಂತರ ಅಲ್ಪಾಯುಷಿ ದುರ್ಬಲ ಸಂತಾನವಾಗಬಹುದು. ಹಾಗಾಗಿ ಇದು ನಿಷಿದ್ಧ. ಅಲ್ಲದೆ ೧೧ ಹಾಗೂ ೧೩ನೇ ರಾತ್ರಿಗಳಲ್ಲಿ ಅನಿಷ್ಟ ಪಿಂಡೋತ್ಪತ್ತಿಯ ಸಂಭವವೆನ್ನುತ್ತದೆ ಈ ಋಷಿವಾಣಿ. ಒಟ್ಟಿನಲ್ಲಿ ಗಂಡು ಮಕ್ಕಳನ್ನು ಪಡೆಯಲು ೮,೧೦,೧೨,೧೪, ೧೬ನೇಯ ರಾತ್ರಿಗಳು ಕನ್ಯಾ ಪ್ರಜೆಗಾಗಿ ೫,೭,೯, ೧೫ನೆಯ ರಾತ್ರಿಗಳು ಪ್ರಶಸ್ತವಾಗಿವೆ. ಆದರೂ ಈಗಿನ ಜನಾಂಗಕ್ಕೆ ದೊರೆಯುವ ಆಹಾರ, ಅವರ ವಿಹಾರಗಳನ್ನು ಗಮನಿಸಿದರೆ ಪುತ್ರ ಸಂತಾನಕ್ಕಾಗಿ ೮ ಹಾಗೂ ೧೦ನೇಯ ರಾತ್ರಿಗಳನ್ನೂ, ಕನ್ಯಾ ಸಂತಾನಕ್ಕಾಗಿ ೭ ಹಾಗೂ ೯ನೆಯ ರಾತ್ರಿಗಳನ್ನು ಆರಿಸಿಕೊಳ್ಳುವುದು ಹೆಚ್ಚು ಫಲಪ್ರದವಾದೀತು. ಆದರೂ ಈರ್ವರೂ ಸೂರ್ಯ ನಮಸ್ಕಾರ, ಯೋಗ, ಆಸನ, ಪ್ರಾಣಾಯಾಮಗಳನ್ನು ಮಾಡುತ್ತ, ತಮ್ಮ ಬ್ರಹ್ಮಚರ್ಯವನ್ನು ಗಮನಿಸಿಕೊಂಡು ಮಾತ್ರ ೧೫ ಹಾಗೂ ೧೬ನೇ ರಾತ್ರಿಗಳನ್ನು ಮೇಲೆ ಹೇಳಿದಂತೆ ವಿಸ್ತರಿಸಿಕೊಳ್ಳಬಹುದು.
ಇಷ್ಟಕ್ಕೆ ಮಾರ್ಗದರ್ಶನ ನಿಲ್ಲುವುದಿಲ್ಲ. ಸ್ವರೋದಯ ಶಾಸ್ತ್ರಜ್ಞರ ಅಭಿಮತದಂತೆ ನಮ್ಮ ಉಸಿರಾಟದ ಸಮಯದಲ್ಲಿ ಮೂಗಿನ ಎರಡೂ ಹೊಳ್ಳೆಗಳಲ್ಲಿ ಶ್ವಾಸೋಚ್ಛ್ವಾಸ ಪ್ರಕ್ರಿಯೆ ಯಾವಾಗಲೂ ಒಂದೇ ತರಹ ಇರುವುದಿಲ್ಲ. ಬಲಭಾಗದಲ್ಲಿ ಈ ಪ್ರಕ್ರಿಯೆ ಪ್ರಬಲವಾಗಿರುವುದನ್ನು ಸೂರ್ಯನಾಡಿಯೆಂದೂ, ಎಡ ಭಾಗದಲ್ಲಿ ಪ್ರಬಲವಾಗಿರುವುದನ್ನು ಚಂದ್ರನಾಡಿಯೆಂದೂ ಕರೆಯುತ್ತಾರೆ. ಸಮಾಗಮದ ಸಮಯದಲ್ಲಿ ಸೂರ್ಯ ನಾಡಿಯ ಉಸಿರಾಟ ಪುತ್ರ ಸಂತಾನಕ್ಕೂ, ಚಂದ್ರನಾಡಿಯ ಉಸಿರಾಟ ಕನ್ಯಾ ಸಂತಾನಕ್ಕೂ ಕಾರಣವಾಗುತ್ತದೆಂದು ಹೇಳಲಾಗಿದೆ. ಹಾಗಾಗಿ ಇದನ್ನು ಗಮನಿಸಿಕೊಳ್ಳುವು ಅವಶ್ಯ. ಸಹಜವಾದ ಉಸಿರಾಟದ ಗತಿ ಹೇಗೇ ಇದ್ದರೂ ಸ್ವಪ್ರಯತ್ನದಿಂದ ಇದನ್ನು ಬೇಕಾದಂತೆ ಬದಲಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ದಂಪತಿಗಳಿಬ್ಬರೂ ಸುಮಾರು ೧೦-೧೫ ನಿಮಿಷಗಳಷ್ಟು ಶಾಂತತೆ ಸಂಯಮಗಳಿಂದ ಎಡ ಮಗ್ಗುಲಲ್ಲಿ ಮಲಗಿದರೆ ಆಗ ಬಲಭಾಗದ ಉಸಿರಾಟ ಪ್ರಬಲವಾಗಿ ಸೂರ್ಯನಾಡಿಯ ಅರ್ಥಾತ್ ಪುತ್ರ ಸಂತಾನದ ಪೂರ್ವ ತಯಾರಿಯನ್ನು, ಬಲಮಗ್ಗುಲಲ್ಲಿ ಇದೇ ರೀತಿ ಮಲಗಿದರೆ ಚಂದ್ರನಾಡಿಯ ಅರ್ಥಾತ್ ಕನ್ಯಾ ಸಂತಾನದ ಪೂರ್ವ ತಯಾರಿಯನ್ನು ಸಾಧಿಸಿಕೊಳ್ಳಬಹುದಾಗಿದೆ.
ಹಾಗೆಯೇ ಸಮಾಗಮದ ಅಂತಿಮ ಹಂತವಾದ 'ರಜಸ್ಖಲನ'. ಗಂಡಸು ಶ್ವಾಸವನ್ನು ಒಳಗೆ ಸೆಳೆದುಕೊಂಡು 'ಕುಂಭಕ'ದಲ್ಲಿ ಒಂದು ಕ್ಷಣ ಇಟ್ಟುಕೊಂಡರೆ ಪುತ್ರ ಸಂತಾನಕ್ಕೆ ಯೋಗ್ಯವೆಂದು ಶಾಸ್ತಜ್ಞರ ಅಭಿಮತವಿದೆ. ಅದೇ ಹೊತ್ತಿಗೆ ಹೆಂಡತಿಯೂ ಶ್ವಾಸವನ್ನು 'ಕುಂಭಕ'ದಲ್ಲಿ ಇಟ್ಟುಕೊಂಡಿದ್ದರೆ ಕನ್ಯಾ ಸಂತಾನಕ್ಕೆ ಕಾರಣವಾಗುತ್ತದೆಂಬ ಎಚ್ಚರಿಕೆಯೂ ಅಗತ್ಯವಾಗಿ ಇರಬೇಕಾಗುತ್ತದೆ.
ಮೇಲಿನ ಮೂರು ವಿಭಿನ್ನ ಮಾರ್ಗದರ್ಶನಗಳೊಂದಿಗೆ ಸಮಾಗಮದ ಸಮಯದಲ್ಲಿ ಪ್ರಬಲವಾದ ಮನೋಬುದ್ಧಿಗಳಿಂದ ಕೂಡಿದ ಸಂಕಲ್ಪ ಶಕ್ತಿಯು ಎಲ್ಲಕ್ಕೂ ಪೂರಕವಾಗಿ ಜಾಗೃತವಾಗಿರಬೇಕು. ಪರಮಾತ್ಮನಲ್ಲಿ ಪ್ರಾರ್ಥನೆಯ ಧಾಟಿಯ ಇಚ್ಛಾಶಕ್ತಿ ರೂಪದಲ್ಲಿ ಇದು ಪ್ರವಹಿಸುತ್ತಿರಬೇಕು. ವೀರ, ಶೂರ, ಆರೋಗ್ಯವಂತ ಸಾತ್ವಿಕ ಯಶಸ್ವೀ ಗಂಡು ಯಾ ಹೆಣ್ಣಿನ ಅಪೇಕ್ಷೆ ಆಗ ಈರ್ವರ ಮನದಲ್ಲೂ ಮೂಡಿರಬೇಕು. ಅತ್ಯಂತ ತಾಳ್ಮೆಯಿಂದ ಜಾಗೃತರಾಗಿ ಈ ಎಲ್ಲ ಅಂಶಗಳನ್ನು ಗಮನಿಸಿ ಅದರಂತೆ ಪ್ರವೃತ್ತರಾದಾಗ 'ಇಚ್ಛಾಸಂತತಿ' ಶತಸ್ಸಿದ್ಧವೆಂಬುದು ಋಷಿವಾಣಿ. ಪಾಶ್ಚಾತ್ಯ ರಾಷ್ಟ್ರಗಳ ಪ್ರಜಾಕಾಮನೆಗೂ, ಭಾರತೀಯರ ಪ್ರಜಾಕಾಮನೆಗೂ ಬಹಳಷ್ಟು ಭೇದವಿದೆ. ಇಲ್ಲಿ ಸತ್ಪ್ರಜಾ ಪ್ರಾಪ್ತಿಗೆ ಹೆಚ್ಚು ಮಹತ್ವ.
ಹಾಗಾಗಿ ಗರ್ಭೋತ್ಪತ್ತಿ ಆದ ಮೇಲೆ ಗರ್ಭಿಣಿ ಸ್ತ್ರೀ ಹಾಗೂ ಆಕೆಯ ಮನೆಯವರ ಹೊಣೆಗಾರಿಕೆ ಮಹತ್ತರವಾದುದು.ತಾಯಿಯ ಶ್ವಾಸ ಹಾಗು ಆಹಾರಗಳೇ ಗರ್ಭಸ್ಥ ಶಿಶುವಿನ ಶ್ವಾಸ ಹಾಗೂ ಅದರ ಆಹಾರ. ಮಗುವಿನ ಮನೋಬುದ್ಧಿಗಳ ಮೇಲೆ ಸಂಸ್ಕಾರಗಳು ತಾಯಿಯ ಮಾನಸಿಕ ಸ್ಥಿತಿಯನ್ನು ಅವಲಂಬಿಸಿವೆ. ಆದುದರಿಂದ ತಾಯಿಯಾದವಳು ಈ ಸಮಯದಲ್ಲಿ ಸಾತ್ವಿಕ, ಹಿತ ಮಿತವಾದ ಆಹಾರ ಸೇವಿಸುತ್ತಿರಬೇಕು. ಸತ್ಪುರುಷರ, ದೇಶಭಕ್ರ ಜೀವನ ಚರಿತ್ರೆಗಳನ್ನು ಮನನ ಮಾಡುತ್ತಿರಬೇಕು. ಶ್ರೀರಾಮಕೃಷ್ಣ, ವಿವೇಕಾನಂದ, ಶಿವಾಜಿ, ಸೀತೆ, ಸಾವಿತ್ರಿ, ಝಾನ್ಸಿ ಲಕ್ಷ್ಮೀಬಾಯಿ, ಕಿತ್ತೂರ ಚನ್ನಮ್ಮ ಮುಂತಾದವರ ಜೀವನ ಚರಿತ್ರೆಗಳನ್ನು ಓದಬೇಕು.
ಮನಸ್ಸನ್ನುಉದ್ರೇಕಿಸುವಂತಹ ಸಾಹಿತ್ಯ, ಸಿನಿಮಾ, ಟಿ.ವಿ.ಗಳಿಂದ ದೂರವಿರಬೇಕು. ಅಗತ್ಯವಾದ ವಿಶ್ರಾಂತಿಯಲ್ಲಿ ಸಮಯವನ್ನು ಕಳೆಯಬೇಕು. ಮನೆಯವರೂ ಪ್ರೋತ್ಸಾಹಿಸಿ ನೆರವಾಗಬೇಕು.ಸತ್ ಚಿಂತನೆ, ಸತ್ಸಂಗಗಳಲ್ಲಿ ಸಮಯವನ್ನು ಕಳೆಯಬೇಕು. ಮನೆಯವರೂ ಪ್ರೋತ್ಸಾಹಿಸಬೇಕು. ನಕ್ಷತ್ರ ಮಾನದಂತೆ ಸಮಾಗಮದ ದಿನದ ನಕ್ಷತ್ರದ ನವಮಾಸಗಳ ನಂತರ ಹತ್ತನೇ ನಕ್ಷತ್ರದಂದು ಮಗುವಿನ ಜನನವಾಗುತ್ತದೆನ್ನುವ ಶಾಸ್ತ್ರೋಕ್ತಿಯೂ ಇದೆ. ದೂರಾಲೋಚನೆಯಿಂದ ಇದನ್ನು ಗಮನಿಸಿಕೊಳ್ಳಬಹುದು. ಸ್ತೂಲವಾಗಿ ಹೇಳಲಾದ ಈ ವಿಚಾರಗಳಿಗೆ ಇನ್ನಷ್ಟು ಸೂಕ್ತ ಜ್ಞಾನವನ್ನು ಸೇರಿಸಿಕೊಂಡು ಮುಂದಕ್ಕಾದರೂ ನಮ್ಮ ದೇಶ ಸತ್ಪ್ರಜೆಗಳಿಂದ ತುಂಬಿರುವಂತೆ ಸಂಬಂಧಪಡುವವರೆಲ್ಲರೂ ನೋಡಿಕೊಳ್ಳಲಿ ಎಂಬ ಸದಾಶಯ ನಮ್ಮದು. ಸಂಖ್ಯಾ ಬಲಕ್ಕಿಂತಲೂ ಸತ್ಪ್ರಜಾ ಬಲವೇ ಹೆಚ್ಚಿನದೆಂದು ನಾವೆಲ್ಲ ತಿಳಿಯೋಣ. ಅಂತೆಯೇ ನಮ್ಮ ಆಚರಣೆಗಳನ್ನು ವಿಹಿತವಾಗಿಸೋಣ.
ಆಚಾರಾಲ್ಲಭತೇಹ್ಯಾಯುಃ ಆಚಾರಾತ್ ಈಪ್ಸಿತಾ ಪ್ರಜಾಃ | ಆಚಾರಾದ್ಧನಮಕ್ಷಯ್ಯಂ ಆಚಾರೋಹಂತ್ಯ ಲಕ್ಷಣಮ್ ||
ಆಚರಣೆಯು ಒಳ್ಳೆಯದಿದ್ದರೆ ದೀರ್ಘಾಯಸ್ಸು ದೊರೆಯುತ್ತದೆ. ಒಳ್ಳೆ ಆಚಾರದಿಂದ ತಾನು ಇಚ್ಛಿಸಿದಂತೆ ಒಳ್ಳೆಯ ಮಕ್ಕಳು ಹುಟ್ಟುತ್ತವೆ.ಸದಾಚಾರದಿಂದ ಸಂಪತ್ತು ಒದಗಿ ಬರುತ್ತದೆ ಮತ್ತು ಅದು ಕ್ಷಯವಾಗುವುದಿಲ್ಲ. ಆಚಾರವು ಒಳ್ಳೆಎಯದಿದ್ದರೆ ಅವಲಕ್ಷಣಗಳು ನಾಶವಾಗುತ್ತವೆ. ಧರ್ಮ ಸಂತತಿ ಮತ್ತು ಸತ್ಸಂತಾನ ಪ್ರಾಪ್ತಿಗಾಗಿಯೇ ವಿವಾಹ ವ್ಯವಸ್ಥೆ.
ನಮ್ಮ ಭಾರತಿಯ ಸಂಸ್ಕೃತಿಯಲ್ಲಿ ಗೃಹಸ್ಥಾಶ್ರಮದ ಸ್ಥಾನ ಬಲು ದೊಡ್ಡದು ಮತ್ತು ಜವಾಬ್ದಾರಿಯುಳ್ಳದ್ದು. ಧರ್ಮಾಚರಣೆಯ ಆಧಾರದಲ್ಲಿ ಸಂಪತ್ತನ್ನು (ಅರ್ಥವನ್ನು) ಸಂಪಾದಿಸಿ, ಧರ್ಮಾಚರಣೆಯಿಂದಲೇ ಕಾಮನೆಗಳನ್ನು ಸೇವಿಸಿ ತೃಪ್ತನಾಗಿ ಕೊನೆಗೆ ಮೋಕ್ಷ ಹೊಂದಲು ಗೃಹಸ್ಥಾಶ್ರಮ ಒಂದು ತಾಣ. ಬಾಲ್ಯದಲ್ಲಿ ತಿಳುವಳಿಕೆ ಬರಲಾರಂಭಿಸಿದಲ್ಲಿಂದ ತನ್ನನ್ನು ತಾನೇ ವಿವೇಕದಿಂದ ತಿದ್ದಿಕೊಳ್ಳುತ್ತಾ ವಿದ್ಯಾರ್ಜನೆ ಮತ್ತು ಬಲ ಸಂವರ್ಧನೆಗಳನ್ನು ಮಾಡಿಕೊಂಡು ಬ್ರಹ್ಮಚರ್ಯದಿಂದಿರುವುದು ಮುಂದಿನ ಜೀವನ ಆರೋಗ್ಯಯುತವಾಗಿ, ಸುಖಮಯವಾಗಿ ಮತ್ತು ಹಿತಕರವಾಗಿರಲು ಅವಶ್ಯ.
ಈ ಕಾಲದಲ್ಲಿ ಸತ್ಸಹವಾಸ, ಸದ್ಗ್ರಂಥ ವಾಚನ, ಹಿರಿಯರ ಹಿತನುಡಿಗಳು ಲಭ್ಯವಾಗಿ ದುಷ್ಟರ ಸಹವಾಸ ತಪ್ಪಿದರೆ ವಿದ್ಯೆ, ವಿನಯ, ದೇವರು, ಗುರುಹಿರಿಯರಲ್ಲಿ ಭಕ್ತಿ, ಕಿರಿಯರಲ್ಲಿ ವಾತ್ಸಲ್ಯ ಇತ್ಯಾದಿ ಶುದ್ಧಾಚರಣೆಯಿಂದ ಶೀಲ ಸಂವರ್ಧಿಸಿ ಉತ್ತಮರಾಗಲು ಪ್ರಯತ್ನಿಸಬೇಕು. ಇಂತಹ ಸದಾಚಾರ ಸಂಪನ್ನರು ದಂಪತಿಗಳಾದಾಗ ಸತ್ಸಂತಾನ ಪ್ರಾಪ್ತವಾದೀತು. ಇದರಲ್ಲೂ ದಂಪತಿಗಳಲ್ಲಿ ಅನ್ಯೋನ್ಯ ಪ್ರೇಮ, ದೇವರಲ್ಲಿ ಭಕ್ತಿ, ನಾಮ ಸ್ಮರಣೆ, ಭಜನೆ ಇತ್ಯಾದಿ ಉಪಾಸನೆಗಳು ಇದ್ದರೆ ದೇವರ ದಯೆಯೂ ಪ್ರಾಪ್ತವಾಗುತ್ತದೆ. ಪ್ರಾರಬ್ಧವೂ ಪ್ರತಿಕೂಲವಿಲ್ಲದಿದ್ದರೆ ಈ ಕೆಳಗಿನ ಪ್ರಯತ್ನಗಳು ಸಫಲವಾಗುತ್ತದೆಂದು ಆ ಗ್ರಂಥದಲ್ಲಿ ತಿಳಿಸಲಾಗಿದೆ.
ಋತುವೃತಾಸು ದಾರೇಷು ಸಂಗತಿರ್ಯಾವಿಧಾನತಃ | ಬ್ರಹ್ಮಚರ್ಯಂ ತದೇವೋಕ್ತಂ ಗೃಹಸ್ಥಾಶ್ರಮವಾಸಿನಾಮ್ ||೧||
ಋತುಮತಿಯಾದ ಹೆಂಡಿರೊಂದಿಗೆ ನಿಯಮಿತವಾದ ಸಂಗಮವು ಗೃಹಸ್ಥಾಶ್ರಮವಾಸಿಗಳಿಗೆ ಬ್ರಹ್ಮಚರ್ಯವೆಂದು ಹೇಳಲ್ಪಟ್ಟಿದೆ.
ಋತೌ ಗಚ್ಛತಿ ಯೋ ಭಾರ್ಯಾಂ ಅನೃತೌ ನೈವ ಗಚ್ಛತಿ | ಯಾವಜ್ಜೀವಂ ಬ್ರಹ್ಮಚಾರೀ ಇತಿ ವೇದವಿದೋವಿದುಃ ||೨||
ಋತುಕಾಲದಲ್ಲಿ ಮಾತ್ರ ಪತ್ನಿಯನ್ನು ಸೇರಿ ಬೇರೆ ಕಾಲಗಳಲ್ಲಿ ಸೇರದೇ ಇರುವವನನ್ನು ಆಜೀವ ಬ್ರಹ್ಮಚಾರಿ ಎಂದು ವೇದವನ್ನು ತಿಳಿದವರು ತಿಳಿದಿದ್ದಾರೆ.
ಸ್ವದಾರನಿರತಾ ಯೇ ಚ ಋತುಕಾಲಾಭಿಗಾಮಿನಃ | ಅಗ್ರಾಮ್ಯಸುಖಭೋಗಾಶ್ಚ ತೇ ನರಾಃ ಸ್ವರ್ಗಗಾಮಿನಃ ||೩||
ತನ್ನ ಹೆಂಡಿರಲ್ಲಿ ಮಾತ್ರ ಅನುರಕ್ತರಾಗಿ ಋತುಕಾಲದಲ್ಲಿ ಮಾತ್ರ ಅವಳನ್ನು ಸೇರಿ, ಇತರರ ಸುಖವನ್ನು ತೊರೆಯುವ ನರರು ಸ್ವರ್ಗವನ್ನು ಸೇರುತ್ತಾರೆ.
ಋತುಃ ಸ್ವಾಭಾವಿಕಃ ಸ್ತ್ರೀಣಾಂ ರಾತ್ರಯಃ ಷೋಡಶಃ ಸ್ಮೃತಾಃ | ಚತುರ್ಭಿರಿತರೈಃ ಸಾರ್ಧಂ ಅಹೋಭಿಃ ಸದ್ವಿಗರ್ಹಿತೈಃ ||೪||
ಹದಿನಾರು ರಾತ್ರಿಗಳು ಸ್ತ್ರೀಯರ ಋತುಕಾಲವು ಸ್ವಾಭಾವಿಕವಾಗಿದೆ. ಸ್ರಾವದ ನಾಲ್ಕು ರಾತ್ರಿಗಳು ಮತ್ತು ಹಗಲು ಸಂಗಮಕ್ಕೆ ನಿಷಿದ್ಧವಾಗಿವೆ.
ತಾಸಾಂ ಆದ್ಯಾಶ್ಚತಸ್ರಸ್ತು ನಿಂದಿತೈಕಾದಶೀಚ ಯಾ | ತ್ರಯೋದಶೀ ಚ ಶೇಷಾಸ್ತು ಪ್ರಶಸ್ತಾ ದಶರಾತ್ರಯಃ ||೫||
ಹದಿನಾರರ ಪೈಕಿ ಮೊದಲ ನಾಲ್ಕು ರಾತ್ರಿಗಳು, ಏಕಾದಶಿ ಮತ್ತು ತ್ರಯೋದಶಿಗಳು ವರ್ಜ್ಯವಾಗಿವೆ. ಉಳಿದ ಹತ್ತು ರಾತ್ರಿಗಳು ಸಂಗಮಕ್ಕೆ ಪ್ರಶಸ್ತ.
ನಿಂದ್ಯಾಸ್ಪಷ್ಟಾಸು ಚಾನ್ಯಾಸು ಸ್ತ್ರಿಯೋ ರಾತ್ರಿಷು ವರ್ಜಯನ್ | ಬ್ರಹ್ಮಚಾರ್ಯೆವ ಭವತಿ ಯತ್ರ ತತ್ರಾಶ್ರಮೇ ವಸನ್ ||೬||
ನಿಂದ್ಯವಾದ ಉಳಿದ ಎಂಟು ರಾತ್ರಿಗಳಲ್ಲಿ ಸಮಾಗಮವನ್ನು ವರ್ಜಿಸಿದರೆ ಗೃಹಸ್ಥನಾಗಿದ್ದರೂ ಬ್ರಹ್ಮಚಾರಿಯೇ ಆಗಿರುತ್ತಾನೆ.
ಧರ್ಮಾರ್ಥೌ ಯಃ ಪರಿತ್ಯಜ್ಯ ಸ್ಯಾದಿಂದ್ರಿಯವಶಾನುಗಃ | ಶ್ರೀ ಪ್ರಾಣ ಧನ ದಾರೇಭ್ಯಃ ಕ್ಷಿಪ್ರಂ ಸಂಪರಿಹೀಯತೇ||೭||
ಸರಿಯಾದ ನಡವಳಿಕೆ ಮತ್ತು ಸಂಪತ್ತನ್ನು ಒತ್ತೆಯಿಟ್ಟು ಯಾರು ಇಂದ್ರಿಯಗಳ ವಶನಾಗುತ್ತಾನೋ ಅವನು ತನ್ನ ಕೀರ್ತಿ, ಪ್ರಾಣ, ಹಣ, ಹೆಂಡಿರೊಂದಿಗೆ ಬೇಗನೇ ನಾಶಹೊಂದುತ್ತಾನೆ.
ಅನೇಕ ಚಿತ್ತ ವಿಭ್ರಾಂತಾಃ ಮೋಹ ಜಾಲ ಸಮಾವೃತಾಃ | ಪ್ರಸಕ್ತಾಃ ಕಾಮ ಭೋಗೇಷು ಪತಂತಿ ನರಕೇಷು ಚ ||೮||
ವಿವಿಧವಾದ ಮಾನಸಿಕ ಭ್ರಮೆಗೊಳಪಟ್ಟವರು, ಮೋಹಜಾಲದಿಂದ ಬಂಧಿತರಾಗಿ ಕಾಮಭೋಗಗಳಲ್ಲಿ ನಿರತರಾದವರು ನರಕದಲ್ಲಿ ಬೀಳುತ್ತಾರೆ.
ಅತಿವ್ಯಯಾಸ್ತು ಜಾಯಂತೇ ರೋಗಾಶ್ಚಾತೀವದುರ್ಜಯಾಃ | ಅಪರ್ವಮರಣಂ ಹಿ ಸ್ಯಾತ್ ಅನ್ಯಥಾ ಗಚ್ಛತಃ ಸ್ತ್ರಿಯಮ್ ||೯||
ದುಂದುವೆಚ್ಚ, ಮದ್ದಿಲ್ಲದ ರೋಗಗಳು, ಅಕಾಲದಲ್ಲಿ ಮರಣ ಇವು ಅನ್ಯ ಸ್ತ್ರೀಯರನ್ನು ಸೇರುವವರಿಗೆ ಉಂಟಾಗುತ್ತವೆ.
ದುರಾಚಾರೋ ಹಿ ಪುರುಷೋ ಲೋಕೇ ಭವತಿ ನಿಂದಿತಃ | ಸಂತಾನಘಾತಕಶ್ಚೈವ ವಿಶ್ವವೈರೀ ನ ಸಂಶಯಃ ||೧೦||
ದುರಾಚಾರಿಯಾದ ಪುರುಷನು ತನ್ನ ಮಕ್ಕಳಿಗೇ ಯಮನಾಗುತ್ತಾನೆ. ಸಮುದಾಯದ ವೈರಿಯಾಗಿ ಲೋಕದಲ್ಲಿ ನಿಂದಿಸಲ್ಪಡುತ್ತಾನೆ.
ಆಚಾರಾಲ್ಲಭತೇಹ್ಯಾಯುಃ ಆಚಾರಾತ್ ಈಪ್ಸಿತಾ ಪ್ರಜಾ | ಆಚಾರಾದ್ಧನಮಕ್ಷಯ್ಯಂ ಆಚಾರೋ ಹಂತ್ಯಲಕ್ಷಣಂ ||೧೧||
ಸದಾಚಾರದಿಂದ ಆಯುಷ್ಯ ವೃದ್ಧಿಯಾಗುತ್ತದೆ. ಉತ್ತಮ ಸಂತತಿ ದೊರೆಯುತ್ತದೆ. ಅಕ್ಷಯವಾದ ದನವು ಲಭಿಸುತ್ತದೆ. ಸದಾಚಾರಿಯು ಕುರೂಪಿಯಾಗಿದ್ದಾದರೂ ಶೋಭಿಸುತ್ತಾನೆ.
ಇಚ್ಛೇತಾಂ ಯಾದೃಶಂ ಪುತ್ರಂ ತದ್ರೂಪ ಚರಿತಾಂಶ್ಚ ತೌ | ಚಿಂತಯೇತಾಂ ಜನಪದಾಂಸ್ತದಾಚಾರಪರಿಚ್ಛದೌ ||೧೨||
ಯಾವ ರೀತಿಯ ಮಗು ಬೇಕೆಂದು ಚಿಂತಿಸುವ ದಂಪತಿಗಳು ಅದೇ ರೀತಿಯ ಲೋಕವಾರ್ತೆಗಳಲ್ಲಿ ಮಗ್ನರಾಗಬೇಕು ಮತ್ತು ಅದೇ ರೀತಿಯ ಚಿಂತನೆ ಮತ್ತು ಆಚಾರವುಳ್ಳವರಾಗಿರಬೇಕು.
ಕಾಯಸ್ಯ ತೇಜಃ ಪರಮಂ ಹಿ ಶುಕ್ರಂ ಆಹಾರ ಸಾರಾದಪಿ ಸಾರಭೂತಮ್ | ಜಿತಾತ್ಮನಾ ತತ್ಪರಿರಕ್ಷಣೀಯಂ ತತೋವಪುಃ ಸಂತತಿರಪ್ಯುದಾರಾ ||೧೩||
ವೀರ್ಯವು ದೇಹಕ್ಕೆ ತೇಜಸ್ಸನ್ನು ಕೊಡುತ್ತದೆ. ಅದು ಆಹಾರದ ಎಲ್ಲ ಪೋಷಕಾಂಶಗಳಿಗಿಂತಲೂ ಮಿಗಿಲು. ಸಂಯಮವುಳ್ಳವನಾಗಿ ಅದನ್ನು ದೇಹದ ಒಳಿತಿಗಾಗಿ ಮತ್ತು ಉತ್ತಮ ಸಂತಾನಕ್ಕಾಗಿ ರಕ್ಷಿಸಬೇಕು.
ಲೇಖನ ಕೃಪೆ : ದಿ|| ಸುಬ್ರಾಯ ಅನಂತ ಗೋಖಲೆ, ಮುಂಡಾಜೆ.