ಆಚಾರ - ವಿಚಾರ

ಸಂಧ್ಯೋಪಾಸನೆಯ ಮಹತ್ವ

ಹಿಂದೆ ಓದಿ

ಇಂದು ಯಾಂತ್ರಿಕವಾಗಿ ಜೀವಿಸುತ್ತಿರುವ ನಾವು ವರ್ಣಾಶ್ರಮ ಧರ್ಮಗಳನ್ನಷ್ಟೇ ಅಲ್ಲದೆ ಅವಕ್ಕೆ ಆಧಾರವಾಗಿರುವ ವೇದಗಳ ಅಧ್ಯಯನವನ್ನು ಬಿಟ್ಟು ಬ್ರಾಹ್ಮಣ್ಯದ ಕನಿಷ್ಠ ಅರ್ಹತೆಯಾದ ಸಂಧ್ಯೋಪಾಸನೆಯನ್ನು ತ್ಯಜಿಸಿ ಆತ್ಮೋನ್ನತಿಯ ಬದಲಾಗಿ ಅಧೋಗತಿಯನ್ನು ಹೊಂದುತ್ತಿದ್ದೇವೆ ಎಂದರೆ ಅತಿಶಯೋಕ್ತಿಯಾಗಲಾರದು. ವೇದಗಳಲ್ಲಿ ಮತ್ತು ಸ್ಮೃತಿಗಳಲ್ಲಿ ಸಂಧ್ಯೋಪಾಸನೆಯ ಬಗ್ಗೆ ಮಿಗಿಲಿಲ್ಲದ ಪ್ರಶಂಸೆಗಳನ್ನು ಮಾಡಿದರೂ ' ಈ ನಮ್ಮ ಸಂತತಿಯವರು ಸಂಧ್ಯಾಧಿಗಳನ್ನು, ಧರ್ಮವನ್ನು ಬಿಟ್ಟು ಈ ಪರಿಯಲ್ಲಿ ಹಾಳಾಗುತ್ತಾರೆಂದು ನಾವು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ'ವೆಂದು ನಮ್ಮ ಪೂರ್ವಜರಾದ ಋಷಿ-ಮುನಿಗಳು ಸಂಕಟಪಡಲಾರರೇ? ತಮ್ಮ ಆತ್ಮೋನ್ನತಿಯ ಬಗ್ಗೆ ಚಿಂತಿಸುವ ಯಾರೇ ಆದರೂ ಈ ವಿಷಯದ ಬಗ್ಗೆ ಗಂಭೀರವಾಗಿ ಚಿಂತಿಸಿ ಕಾರ್ಯಪ್ರವೃತ್ತರಾಗಬೇಕು. ಈ ದಿಸೆಯಲ್ಲಿ 'ಸಂಧ್ಯೆ' ಎಂದರೇನು? 'ಸಂಧ್ಯೆ'ಯ ಸ್ವರೂಪ, 'ಸಂಧ್ಯೋಪಾಸನಾ ಫಲ', ಸಂಧ್ಯಾಹೀನನಾದರೆ ಬರುವ ದೋಷಗಳೇನು ಎಂಬುದನ್ನು ತಿಳಿಯೋಣ.

ಪ್ರಕೃತ 'ಸಂಧ್ಯಾ' ಎಂಬ ಪದದ ಅರ್ಥದ ಬಗ್ಗೆ 'ದಕ್ಷಸ್ಮೃತಿ'ಯಲ್ಲಿ ಹೀಗೊಂದು ವಚನವಿದೆ. ಅಹೋರಾತ್ರಸ್ಯ ಯಃ ಸಂಧಿಃ ಸೂರ್ಯನಕ್ಷತ್ರ ವರ್ಜಿತಃ | ಸಾ ತು ಸಂಧ್ಯಾ ಸಮಾಖ್ಯಾತಾ ಮುನಿಭಿಸ್ತತ್ತ್ವದರ್ಶಿಭಿಃ || ಸೂರ್ಯ ನಕ್ಷತ್ರಗಳಿಲ್ಲದ, ಹಗಲು ಮತ್ತು ರಾತ್ರಿಗಳ ಯಾವ ಸಂಧಿಕಾಲವಿದೆಯೋ ಆ ಕಾಲವನ್ನೇ ತತ್ತ್ವದರ್ಶಿಗಳಾದ ಮುನಿಗಳು 'ಸಂಧ್ಯಾ' ಎಂದು ಕರೆಯುತ್ತಾರೆ.

ಸಂಧ್ಯೋಪಾಸನೆಯ ಸ್ವರೂಪ :

ವೇದಗಳಲ್ಲಿ ಸೂಕ್ಷ್ಮವಾಗಿ, ಸ್ಮೃತಿ ಮತ್ತು ಪುರಾಣಗಳಲ್ಲಿ, ಇತಿಹಾಸದಲ್ಲಿ ಸ್ಥೂಲ ಹಾಗೂ ಅನೇಕ ಪ್ರಕಾರವಾಗಿ ಸಂಧ್ಯೆಯ ಉಲ್ಲೇಖವಿದೆ. ಯಜುರ್ವೇದದ ತೈತ್ತಿರೀಯ ಶಾಖೆಯ ಆರಣ್ಯಕದಲ್ಲಿ 'ಏತೇ ಬ್ರಹ್ಮವಾದಿನಃ ಪೂರ್ವಾಭಿಮುಖಾಃ ಸಂಧ್ಯಾಯಾಂ ಗಾಯಾತ್ರೀಯಾsಭಿಮಂತ್ರಿತಾ ಆಪ ಊರ್ಧ್ವಂ ವಿಕ್ಷಿಪಂತಿ... ತೇನ ಪಾಪ್ಮಾನಮವಧೂನ್ವಂತಿ, ಉದ್ಯಂತಮ ಸ್ತಂಯನ್ತ ಮಾದಿತ್ಯಮಭಿಧ್ಯಾಯನ್ ಕುರ್ವನ್ ಬ್ರಾಹ್ಮಣೋ ವಿದ್ವಾನ್ ಸಕಲಂ ಭದ್ರಮಶ್ನುತೇ... (ತೈ.ಆ.೩/೩)  ಸಂಧ್ಯಾಕಾಲದಲ್ಲಿ ಪೂರ್ವಾಭಿಮುಖವಾಗಿ ಗಾಯತ್ರಿಯಿಂದ ಅಭಿಮಂತ್ರಿತವಾದ ನೀರನ್ನು ಮೇಲಕ್ಕೆ ಹಾಕುತ್ತಾರೆ(ಅರ್ಘ್ಯಪ್ರದಾನ), ಪ್ರದಕ್ಷಿಣಾಕಾರವಾಗಿ ತಿರುಗುವುದರಿಂದ ಪಾಪಗಳನ್ನು ಕೊಡವುತ್ತಾರೆ. ಉದಯಿಸುತ್ತಿರುವ ಮತ್ತು ಅಸ್ತಮಿಸುತ್ತಿರುವ ಸೂರ್ಯನ ಉಪಾಸನೆಯನ್ನು ಮಾಡುವ ಬ್ರಾಹ್ಮಣನು ಎಲ್ಲ ರೀತಿಯ ಮಂಗಳವನ್ನು ಹೊಂದುತ್ತಾನೆ. ಸಾಮವೇದದಲ್ಲಿ 'ಕಸ್ಮಾತ್ ಬ್ರಾಹ್ಮಣಃ ಸಾಯಮಾಸೀನಃ ಸಂಧ್ಯಾಮುಪಾಸ್ತೇ? ಕಸ್ಮಾತ್ ಪ್ರಾತಸ್ತಿಷ್ಠನ್? ಕಾಶ್ಚ ಸಂಧ್ಯಾಃ ?ಕಶ್ಚ ಸಂಧ್ಯಾಯಾಃ ಕಾಲಃ? ಕಿಂಚ ಸಂಧ್ಯಾಯಾಃ ಸಂಧ್ಯಾತ್ವಮ್" ಎಂಬಿತ್ಯಾದಿಯಾಗಿ ಪ್ರಶ್ನ-ಪ್ರತಿವಚನಗಳಿವೆ.

ಇದೇ ರೀತಿ ಸ್ಮೃತಿಗಳಲ್ಲಿ 'ಅಥಾತಃ ಸಂಧ್ಯೋಪಾಸನಾಂ ವ್ಯಾಖ್ಯಾಸ್ಯಾಮಃ' ಎಂಬಂತಹ ವಾಕ್ಯಗಳಿಂದ ಮೊದಲು ಮಾಡಿ ವಿಸ್ತಾರವಾಗಿ ಹೇಳಲ್ಪಟ್ಟಿದೆ ಹಾಗೂ ಪ್ರತಿ ವೇದದ ಪ್ರತಿ ಶಾಖೆಯ ಪ್ರತಿ ಸೂತ್ರಾನುಸಾರವಾಗಿ ಆಯಾಯಾ ಸೂತ್ರಕಾರರು ತಂತಮ್ಮ ಸ್ಮೃತಿ ಅಥವಾ ಧರ್ಮಸೂತ್ರಗಳಲ್ಲಿ ಹೇಳಿದ್ದಾರೆ.

ಪುರಾಣಗಳಲ್ಲೂ ಸಹ 'ಪ್ರಾಕ್ಯೂಲೇಶು ತತಃ ಸ್ಥಿತ್ವಾದರ್ಭೇಷು ಸುಸಮಾಹಿತಃ |ಪ್ರಾಣಾಯಾಮತ್ರಯಂ ಕೃತ್ವಾ ಧ್ಯಾಯೇತ್ ಸಂಧ್ಯಾಮಿತಿ ಶ್ರುತಿಃ || ಯಾ ಸಂಧ್ಯಾಜಗತ್ಸೂತಿಃ ...| ಧ್ಯಾತ್ವಾರ್ಕಮಂಡಲಗತಾಂ ಸಾವಿತ್ರೀಂ ವೈ ಜಪೇದ್ಬುದಃ || (ಕೂರ್ಮ ಪುರಾಣ) ಪೂರ್ವಾಗ್ರದಲ್ಲಿ ದರ್ಭೆಗಳನ್ನು ಹಾಕಿ ಅದರಲ್ಲಿ ಆಸೀನನಾಗಿ ಮೂರು ಪ್ರಾಣಾಯಾಮಗಳನ್ನು ಮಾಡಿ, ಸಂಧ್ಯೆಯನ್ನು ಧ್ಯಾನಿಸಬೇಕು.(ಇಲ್ಲಿ ಧ್ಯಾನವೆಂದರೆ ಜಪವೆಂದು ಅರ್ಥ). ಸಂಧ್ಯೆಯೆಂಬುದು ಜಗತ್ತಿನ ಹುಟ್ಟಿಗೆ ಕಾರಣವಾಗಿದೆ. ಸೂರ್ಯ ಮಂಡಲಾಂತರ್ಗತನಾದ ಸವಿತೃವನ್ನು ಧ್ಯಾನಿಸುತ್ತಾ ಜಪಿಸಬೇಕು. ನರಸಿಂಹ ಪುರಾಣದಲ್ಲಿ 'ಉಪಾಸ್ಯ ಪಶ್ಚಿಮಾಂ ಸಂಧ್ಯಾಂ ಸಾದಿತ್ಯಾಂ ವೈ ಯಥಾವಿಧಿಃ | ಗಾಯತ್ರೀ ಮಭ್ಯಸ್ತೇತ್ತಾವದ್ಯಾವದೃಕ್ಷಾಣಿ ಪಶ್ಯತಿ|| ಆದಿತ್ಯನಿರುವಾಗಲೇ ಸಂಧ್ಯೆಯನ್ನು ಪ್ರಾರಂಭಿಸಿ, ನಕ್ಷತ್ರೋದಯವಾಗುವವರೆಗೂ ಯಥಾ ವಿಧಿಯಾಗಿ ಗಾಯತ್ರಿಯನ್ನು ಜಪಿಸಬೇಕು.

ಇತಿಹಾಸಗಳಾದ ಮಹಾಭಾರತ ಮತ್ತು ರಾಮಾಯಣಗಳಲ್ಲಿ ಸಂಧ್ಯೆಯ ಬಗೆಗೆ ಉಲ್ಲೇಖವಿದೆ. 'ತಥೈವ ತೇ ಮಹಾರಾಜ ದರ್ಶಿತಾ ರಣಮೂರ್ಧನಿ | ಸಂಧ್ಯಾಗತ ಸಹಸ್ರಾಂಶುಮಾದಿತ್ಯಮುಪತಸ್ಥಿರೇ||(ಮಹಾಭಾರತ). ರಾಮಾಯಣದಲ್ಲೂ ಅಸಂಖ್ಯ ವಚನಗಳಿವೆ. ಅವುಗಳ ಪೈಕಿ ಪ್ರಸಿದ್ಧವಾದ ಈ ಶ್ಲೋಕವಿದೆ. ಕೌಸಲ್ಯಾ ಸುಪ್ರಜಾರಾಮಃ ಪೂರ್ವಾ ಸಂಧ್ಯಾ ಪ್ರವರ್ತತೇ | ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ || (ಬಾಲಕಾಂಡ ೨೩/೨)

ಸಂಧ್ಯಾನುಷ್ಠಾನದ ಸ್ವರೂಪ : ಪ್ರತಿಯೊಂದು ಶಾಖೆಯವರಲ್ಲೂ ಸಂಧ್ಯಾನುಷ್ಠಾನ ಕ್ರಮದಲ್ಲಿ ವ್ಯತ್ಯಾಸವಿದ್ದರೂ ಸ್ಥೂಲರೂಪ ಒಂದೇ ಆಗಿರುತ್ತದೆ. ಅವನ್ನು ಹೀಗೆ ಗುರುತಿಸಬಹುದು : ೧) ಆಚಮನ-ಪ್ರಾಣಾಯಾಮ ೨) ಗಾಯತ್ರಿ ಆವಾಹನೆ ೩) ಮಂತ್ರಜಲ ಪ್ರೋಕ್ಷಣೆ (ಸ್ನಾನ) ೪) ಮಂತ್ರಾಚಮನ ೫) ಅಬ್ದೇವತಾಮಂತ್ರಗಳ ಜಪ ೬) ಅರ್ಘ್ಯ ಪ್ರದಾನ ೭) ನ್ಯಾಸಾದಿಗಳು ೮) ಗಾಯತ್ರೀ ಜಪ ೯) ಸೂರ್ಯೋಪಸ್ಥಾನ ೧೦) ಭಗವದರ್ಪಣೆ.

ಸಂಧ್ಯೋಪಾಸನೆಯ ಫಲ : ಲೋಕದಲ್ಲಿ ಯಾವ ಕೆಲಸವನ್ನು ಯಾರೇ ಮಾಡಿದರು ಅದರಿಂದ ಏನು ಫಲ ? ಎಂದೇ ಎಲ್ಲರ ವಿಚಾರವಿರುತ್ತದೆ. ಫಲವಿಲ್ಲದೆ ಯಾವ ಮನುಷ್ಯನೂ ಯಾವುದೇ ಕೆಲಸದಲ್ಲಿ ಪ್ರವರ್ತಿಸುವುದಿಲ್ಲ. ಫಲವಿಲ್ಲದ ಕರ್ಮವು ಯಾವುದೊಂದು ಇಲ್ಲದಿರುವುದರಿಂದ ಫಲದ ಬಗ್ಗೆ ನಾವು ಆಸಕ್ತಿಯನ್ನು ಬಿಡಲಾರದಾಗಿದ್ದೇವೆ. ಆದರೆ ಪರಮಾರ್ಥವಾಗಿ ಫಲಾಪೇಕ್ಷೆಯನ್ನು ಬಯಸುವ ಮನಸ್ಸು ಫಲರಹಿತವಾದ ತತ್ವವನ್ನು ತಿಳಿಯಲು ಸಮರ್ಥವಾಗುವುದಿಲ್ಲ. ನಾವು ಫಲದಲ್ಲಿಯೇ ಆಸಕ್ತಿಯನ್ನಿಟ್ಟು ಕೊಂಡಿರುವುದರಿಂದ ಪರಮ ಕಾರುಣಿಕರಾದ, ಮೋಸ-ಕಪಟ-ವಂಚನೆಗಳಾವುವೂ ಇಲ್ಲದ ಅನೇಕ ಋಷಿ-ಮಹರ್ಷಿಗಳು ಸಂಧ್ಯಾವಂದನೆಯ ಫಲವನ್ನು ಅನೇಕ ಪ್ರಕಾರಗಳಿಂದ ಪ್ರಶಂಶಿಸಿದ್ದಾರೆ. ಅತಃ ಪರಂ ಪ್ರವಕ್ಷಾಮಿ ಸಂಧ್ಯೋಪಾಸನ ನಿರ್ಣಯಮ್ | ಅಹೋರಾತ್ರಕೃತೈಃ ಪಾಪೈಃ ಯಾಮುಪಾಸ್ಯ ಪ್ರಮುಚ್ಚತೇ ||(ಯಾಜ್ಞವಲ್ಕ್ಯ ಸ್ಮೃತಿ)

ಯಾವ ಸಂಧ್ಯಾವಂದನೆಯನ್ನು ಮಾಡುವುದರಿಂದ ಹಗಲು ರಾತ್ರಿಗಳಲ್ಲಿ ಮಾಡಿದ ಪಾಪಗಳಿಂದ ಮನುಷ್ಯನು ವಿಮುಕ್ತನಾಗುತ್ತಾನೋ ಅಂತಹ ಸಂಧ್ಯೋಪಾಸನಾ ಕ್ರಮವನ್ನು ಹೇಳುತ್ತೇನೆ. 'ಸರ್ವಾವಸ್ಥೋಪಿ ಯೋ ವಿಪ್ರಃ ಸಂಧ್ಯೋಪಾಸನ ತತ್ಪರಃ | ಬ್ರಾಹ್ಮಣ್ಯಾಚ್ಚ ನ ಹೀಯೇತ ಅನ್ಯ ಜನ್ಮಗತೋsಪಿಸನ್ ||(ಯೋ.ಯಾ.ಸ್ಮೃತಿ) ಜೀವಿತಕ್ಕೋಸ್ಕರ ನಿಂದಿತವಾದಂತಹ ಸೇವಾದಿ ಕರ್ಮಗಳನ್ನು ಮಾಡುತ್ತಿದ್ದರೂ, ಶೌಚಾಚಾರಗಳನ್ನು ಚೆನ್ನಾಗಿ ಮಾಡಲು ಅಸಮರ್ಥನಾದರೂ ಸಂಧ್ಯೋಪಾಸನೆಯನ್ನು ಮಾಡುವವನು ಬ್ರಾಹ್ಮಣ್ಯದಿಂದ ಚ್ಯುತನಾಗುವುದಿಲ್ಲ. 'ಯಾವಂತೋsಸ್ಯಾಂ ಪೃಥೀವ್ಯಾಂತು ವಿಕರ್ಮಸ್ಥಾ ದ್ವಿಜಾತಯಃ | ತೇಷಾಂ ಹಿ ಪಾವನಾರ್ಥಾಯ ಸಂಧ್ಯಾ ಸೃಷ್ಟಾಸ್ವಯಂಭುವಾ || (ಯೋ.ಯಾ.ಸ್ಮೃತಿ) ಈ ಭೂಮಿಯಲ್ಲಿ ಸ್ವಕರ್ಮಗಳನ್ನು ಬಿಟ್ಟು ನಿಷಿದ್ಧ ಕರ್ಮಗಳನ್ನು ಆಶ್ರಯಿಸಿದ ಬ್ರಾಹ್ಮಣರ ಪವಿತ್ರತೆಗೋಸ್ಕರವೇ ಬ್ರಹ್ಮನು ಸಂಧ್ಯೋಪಾಸನೆಯನ್ನು ಸೃಷ್ಟಿಸಿದ್ದಾನೆ. ಏತದ್ವಿದಿತ್ವಾ ಯೋ ವಿಪ್ರ ಉಪಾಸ್ತೇ ಸಂಶಿತ ವ್ರತಃ  ದೀರ್ಘಮಾಯುಃ ಸ ವಿಂದೇತ ಸರ್ವಪಾಪೈಃ ಪ್ರಮುಚ್ಯತೇ || (ಯೋ.ಯಾ.ಸ್ಮೃತಿ) ಈ ಅರ್ಘ್ಯ ರಹಸ್ಯವನ್ನು ತಿಳಿದು ಯಾವ ಬ್ರಾಹ್ಮಣನು ದೃಢವ್ರತನಾಗಿ ಸಂಧ್ಯೆಯನ್ನು ಉಪಾಸಿಸುತ್ತಾನೋ, ಅವನು ಎಲ್ಲ ಪಾಪಗಳಿಂದ ಮುಕ್ತನಾಗಿ ದೀರ್ಘಾಯುವನ್ನು ಹೊಂದುವನು.

ಮನುಸ್ಮೃತಿಯಲ್ಲಿ 'ಪೂರ್ವಾಂ ಸಂಧ್ಯಾಂ ಜಪಂಸ್ತಿಷ್ಠನ್ ನೈಶಮೇನೋವ್ಯಪೋಹತಿ|ಪಶ್ಚಿಮಾಂ ತು ಸಮಾಸೀನೋ ಮಂ ಹಂತಿ ದಿವಾಕೃತಮ್' ಪ್ರಾತಃ ಕಾಲದ ಹಾಗೂ ಸಾಯಂಕಾಲದ ಸಂಧ್ಯೋಪಾಸನೆಯನ್ನು ಮಾಡುವುದರಿಂದ ಕ್ರಮವಾಗಿ ರಾತ್ರಿಯ ಹಾಗೂ ಹಗಲಿನ ಪಾಪಗಳನ್ನು ಕಳೆದುಕೊಳ್ಳುತ್ತಾನೆ. ಶಾತಾತಪ ಸ್ಮೃತಿಯಲ್ಲಿ 'ಅನೃತಂ ಮದ್ಯಗಂಧಂ ದಿವಾಮೈಥುನಮೇವ ಚ | ಪುನಾತಿ ವೃಷಲಸ್ಯಾನ್ನಂ ಬಹಿಃ ಸಂಧ್ಯಾಹ್ಯುಪಾಸಿತಾ || ಸುಳ್ಳು, ಮದ್ಯಸೇವನೆ, ಹಗಲಿನಲ್ಲಿ ಮೈಥುನ ಮತ್ತು ಅಧಾರ್ಮಿಕ ಅನ್ನ ಸ್ವೀಕಾರ ಇವುಗಳಿಂದ ಬಂದ ದೋಷವುಳ್ಳ ವ್ಯಕ್ತಿಯನ್ನು ಸಂಧ್ಯೋಪಾಸನೆಯು ಪವಿತ್ರಗೊಳಿಸುತ್ತದೆ. ಮೇಲಿನ ಶ್ಲೋಕವು ಸಂಧ್ಯೆಯನ್ನು ಪ್ರಶಂಸಿಸುವುದಕ್ಕಾಗಿ ಹಾಗೆ ಹೇಳಿದೆಯೆ ಹೊರತು ತಿಳಿದೂ ಕೂಡ ಅನೃತಾದಿಗಳನ್ನು ಆಚರಿಸಲು ಕೊಟ್ಟ ಪರವಾನಿಗೆಯೆಂದು ತಿಳಿಯಬಾರದು.

ಏಕೆಂದರೆ ಗೊತ್ತಿಲ್ಲದೆ ಮಾಡಿದಂತಹ ಅನೇಕ ಪಾಪಗಳನ್ನು ಸಂಧ್ಯೋಪಾಸನೆಯು ನಿವಾರಿಸುತ್ತದೆಯೆಂಬುದನ್ನು ಮುಂದಿನ ಯಾಜ್ಞವಲ್ಕ್ಯ ಸ್ಮೃತಿಯ ವಾಕ್ಯವು ಸ್ಪಷ್ಟಪಡಿಸುತ್ತದೆ. ದಿವಾ ವಾ ಯದಿ ವಾ ರಾತ್ರೌ ಯದಜ್ಞಾನಕೃತಂ ಭವೇತ್ | ತ್ರಿಕಾಲ ಸಂಧ್ಯಾ ಕರಣಾತ್ ತತ್ಸರ್ವಂ ವಿಪ್ರಣಶ್ಯತಿ || (ಯಾಜ್ಞವಲ್ಕ್ಯ ಸ್ಮೃತಿ) ಹಗಲಿನಲ್ಲಾಗಲಿ ರಾತ್ರಿಯಲ್ಲಾಗಲಿ ಗೊತ್ತಿಲ್ಲದೇ ಮಾಡಿದ ಪಾಪಗಳು ತ್ರಿಕಾಲ ಸಂಧ್ಯಾವಂದನೆಯನ್ನು ಮಾಡುವುದರಿಂದ ನಾಶವಾಗುತ್ತವೆ. ಯಮ ಸ್ಮೃತಿಯಇಂದು ಯಾಂತ್ರಿಕವಾಗಿ ಜೀವಿಸುತ್ತಿರುವ ನಾವು ವರ್ಣಾಶ್ರಮ ಧರ್ಮಗಳನ್ನಷ್ಟೇ ಅಲ್ಲದೆ ಅವಕ್ಕೆ ಆಧಾರವಾಗಿರುವ ವೇದಗಳ ಅಧ್ಯಯನವನ್ನು ಬಿಟ್ಟು ಬ್ರಾಹ್ಮಣ್ಯದ ಕನಿಷ್ಠ ಅರ್ಹತೆಯಾದ ಸಂಧ್ಯೋಪಾಸನೆಯನ್ನು ತ್ಯಜಿಸಿ ಆತ್ಮೋನ್ನತಿಯ ಬದಲಾಗಿ ಅಧೋಗತಿಯನ್ನು ಹೊಂದುತ್ತಿದ್ದೇವೆ ಎಂದರೆ ಅತಿಶಯೋಕ್ತಿಯಾಗಲಾರದು.'ಸಂಧ್ಯಾಮುಪಾಸತೇ ಯೇ ತು ಸತತಂ ಸಂಶಿತವ್ರತಾಂ | ವಿಧೂತ ಪಾಪಾಸ್ತೇ ಯಾಂತಿ ಬ್ರಹ್ಮಲೋಕಂ ಸನಾತನಮ್ || ಯಾರು ದೃಢವ್ರತರಾಗಿ ಸತತವಾಗಿ ಸಂಧ್ಯೆಯನ್ನು ಉಪಾಸಿಸುತ್ತಾರೋ ಅವರು ಪಾಪಗಳನ್ನೆಲ್ಲಾ ಕೊಡವಿಕೊಂಡವರಾಗಿ ಸನಾತನವಾದ ಬ್ರಹ್ಮಲೋಕವನ್ನು ಹೊಂದುತ್ತಾರೆ. ಈ ಮುಂದಿನ ಸ್ಮೃತಿ ವಾಕ್ಯವು ಸಂಧ್ಯೆಯಿಂದ ಬ್ರಾಹ್ಮಣನು ವಿಶೇಷ ಸಿದ್ಧಿಯನ್ನು ಹೊಂದುತ್ತಾನೆಂದು ತಿಳಿಸುತ್ತದೆ.' ಬ್ರಹ್ಮಣೋಪಾಸಿತಾ ಸಂಧ್ಯಾ ವಿಷ್ಣುನಾ ಶಂಕರೇಣ ಚ | ಕಸ್ತಾಂ ನೋಪಾಸಯತೇದೇವಿಂ ಸಿದ್ಧಿ ಕಾಮೋ ದ್ವಿಜೋತ್ತಮಃ || (ಯೋ.ಯಾ.ಸ್ಮೃತಿ)

ಬ್ರಹ್ಮ ವಿಷ್ಣು ಮಹೇಶ್ವರರಿಂದಲೂ ಉಪಾಸಿಸಲ್ಪಡುವ ಈ ಸಂಧ್ಯೆಯನ್ನು ಸಿದ್ಧಿಯನ್ನು ಬಯಸುವ ಯಾವ ಬ್ರಾಹ್ಮಣನು ತಾನೇ ಉಪಾಸಿಸದೆ ಇರಲು ಸಾಧ್ಯ? ಸಂಧ್ಯಾಲೋಪವನ್ನು ಮಾಡದೇ ಇರುವವನ ಹತ್ತಿರಕೆ ಯಾವ ದೋಷಗಳು ಬರಲಾರವೆಂದು ಈ ಮುಂದಿನ ಸ್ಮೃತಿವಾಕ್ಯ ಹೇಳುತ್ತಿದೆ.

ಸಂಧ್ಯಾಲೋಪಸ್ಯ ಚಾ ಕರ್ತಾ ಸ್ನಾನ ಶೀಲಶ್ಚ ಯಃ ಸದಾ | ತಂ ದೋಷಾ ನೋಪಸರ್ಪಂತಿ ಗರುತ್ಮಂತ ಮಿವೋರುಗಾ || ((ಛಾಂದೋಗ್ಯ ಪರಿಶಿಷ್ಟಃ)ಸ್ನಾನಶೀಲನೂ, ಸಂಧ್ಯಾಲೋಪವನ್ನು ಮಾಡದಿರುವವನೂ ಆದ ಮನುಷ್ಯನ ಹತ್ತಿರ ' ಗರುಡನ ಹತ್ತಿರ ಹಾವುಗಳು ಹೇಗೆ ಸುಳಿಯುವುದಿಲ್ಲವೋ' ಹಾಗೆ ದೋಷಗಳು ಸುಳಿಯುವುದಿಲ್ಲ.

ಇಲ್ಲಿಯವರೆಗೂ ಸಂಧ್ಯಾನುಷ್ಠಾನದ ಫಲವನ್ನು ತಿಳಿದೆವು. ಮುಂದೆ ಸಂಧ್ಯಾವಂದನೆಯನ್ನು ಮಾಡದಿದ್ದರೆ ಏನೇನು ದೋಷಗಳು ಹೇಳಲ್ಪಟ್ಟಿವೆ ಎಂಬುದನ್ನು ನೋಡೋಣ.

ಸಂಧ್ಯಾ ಯೇನ ನವಿಜ್ಞಾತಾ ಸಂಧ್ಯಾನೈವಾಪ್ಯುಪಾಸಿತಾ | ಜೀವಮಾನೋ ಭವೇಚ್ಛೂದ್ರೋ ಮೃತಃ ಶ್ವಾಚೋಪಜಾಯತೇ || (ಯೋ.ಯಾ.ಸ್ಮೃತಿ) ಸಂಧ್ಯೋಪಾಸನೆಯನ್ನು ಯಾರು ತಿಳಿದಿಲ್ಲವೋ, ಸಂಧ್ಯೆಯನ್ನು ಯಾರು ಉಪಾಸಿಸುವುದಿಲ್ಲವೋ ಅವನು ಜೀವಿಸಿರುವಾಗಲೇ ಶೂದ್ರನಾಗಿ, ಮರಣಾನಂತರ ನಾಯಿಯಾಗಿ ಹುಟ್ಟುವನು. ಮನುಸ್ಮೃತಿಯಲ್ಲಿ ' ನೋಪತಿಷ್ಠತಿ ಯಃ ಪೂರ್ವಾಂ ನೋಪಾಸ್ತೇ ಯಶ್ಚ ಪಶ್ಚಿಮಾಮ್ | ಸ ಶೂದ್ರವದ್ ಬಹಿಷ್ಕಾರ್ಯಃ ಸರ್ವಸ್ಮಾದ್ ದ್ವಿಜಕರ್ಮಣಃ || ಯಾರು ಸಾಯಂ-ಪ್ರಾತಃಕಾಲಗಳಲ್ಲಿ ಸಂಧ್ಯಾವಂದನೆಯನ್ನು ಮಾಡುವುದಿಲ್ಲವೋ, ಅಂತಹವನನ್ನು ಅಧ್ಯಯನ, ಜಪ ಮುಂತಾದ ಎಲ್ಲ ದ್ವಿಜಕರ್ಮಗಳಿಂದ ಬಹಿಷ್ಕರಿಸಬೇಕು.

ದಕ್ಷಸ್ಮೃತಿಯಲ್ಲಿ' ಸಂಧ್ಯಾಹೀನೋಶುಚಿರ್ನಿತ್ಯ ಮನರ್ಹಃಸರ್ವಕರ್ಮಶು |ಯದನ್ಯತ್ಕುರುತೇ ಕರ್ಮ ನ ತಸ್ಯ ಫಲಭಾಗ್ಭವೇತ್ || ಸಂಧ್ಯಾವಂದನೆಯನ್ನು ಮಾಡದೇ ಬೇರೆ ಕರ್ಮಗಳಲ್ಲಿ ಪ್ರವೃತ್ತನಾದರೂ ಆ ಕರ್ಮಗಳು ಅವನಿಗೆ ಫಲವನ್ನು ಕೊಡಲಾರವು. ಅಷ್ಟೇ ಅಲ್ಲ ಅವನು ಎಲ್ಲ ಕರ್ಮಗಳಿಗೂ ಅನರ್ಹ ಮತ್ತು ಅಶುಚಿಯಾಗಿರುತ್ತಾನೆ. ಛಾಂದೋಗ್ಯ ಪರಿಶಿಷ್ಟದಲ್ಲಿ 'ಏತತ್ ಸಂಧ್ಯಾತ್ರಯಂ ಪ್ರೋಕ್ತಂ ಬ್ರಾಹ್ಮಣ್ಯಂ ಯದಧಿಷ್ಠಿತಮ್ |ಯಸ್ಯ ನಾಸ್ತ್ಯಾದರಸ್ತತ್ರ ನ ಸ ಬ್ರಾಹ್ಮಣ ಉಚ್ಚತೇ || ಬ್ರಾಹ್ಮಣ್ಯವು ಯಾವುದರ ಮೇಲೆ ನಿಂತಿದೆಯೋ ಅಂತಹ ಈಗ ಹೇಳಲ್ಪಟ್ಟ ತ್ರಿಕಾಲ ಸಂಧ್ಯೋಪಾಸನೆಯಲ್ಲಿ ಯಾವ ಬ್ರಾಹ್ಮಣನಿಗೆ ಆದರವಿಲ್ಲವೋ ಅಂತಹವನು ಬ್ರಾಹ್ಮಣನೆನಬಿಸಿಕೊಳ್ಳಲಾರನು. ಎಂದು ಕಾತ್ಯಾಯನ ಮಹರ್ಷಿಗಳು ತಿಳಿಸಿದ್ದಾರೆ.

ಬ್ರಾಹ್ಮಣರಾದ ನಾವು ನಮ್ಮ ಬದುಕಿನ ಔನ್ನತ್ಯಕ್ಕೆ, ಉತ್ತಮವಾದ ಬುದ್ಧಿ-ಮೇಧಾ-ಧಾರಣಾದಿಗಳನ್ನು ಹೊಂದುವುದಕ್ಕೂ, ಉತ್ತಮವಾದ ಸಂತತಿಗೂ, ಬ್ರಾಹ್ಮಣ್ಯಕ್ಕೂ ಕಾರಣವಾದ ಸಂಧ್ಯೋಪಾಸನೆಯನ್ನು ನಾವು ನಿಯಮಿತವಾಗಿ ಮಾಡೋಣ. ಅದರಲ್ಲೇ ನಮ್ಮ ಶ್ರೇಯಸ್ಸಿದೆ.