ಚಿತ್ಪಾವನರ ವೈದಿಕ ಪರಂಪರೆ

ಏತತ್ ದೇಶ ಪ್ರಸೂತಸ್ಯ ಸಕಾಶಾತ್ ಅಗ್ರ ಜನ್ಮನಃ |
ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವ ಮಾನವಾಃ ||
ಭಾರತದಲ್ಲಿ ಜನಿಸಿದ ಅಗ್ರಜನ್ಮನ ದೆಸೆಯಿಂದ ಪೃಥಿವಿಯ ಸಮಸ್ತ ಮಾನವರೂ ತಮ್ಮ ತಮ್ಮ ಚಾರಿತ್ರ್ಯವನ್ನು ಕಲಿತುಕೊಂಡಾರು ಎಂದು ಭಗವಾನ್ ಮನುವು ಸಾವಿರಾರು ವರ್ಷಗಳ ಪೂರ್ವದಲ್ಲಿಯೇ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾನೆ. ಇಲ್ಲಿ 'ಅಗ್ರ ಜನ್ಮನಃ' ಎಂಬುದು ಜನ್ಮದಿಂದಲ್ಲ, ಕರ್ಮದಿಂದ. ಕರ್ಮದಿಂದ ಅಗ್ರಜನ್ಮನಾದವನ ಸಾಹಚರ್ಯದಿಂದ ಜಗತ್ತಿನ ಪ್ರತಿಯೊಬ್ಬನೂ ತನ್ನ ನಡೆನುಡಿಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ ಎಂಬುದು ಇದರ ತಾತ್ಪರ್ಯ.
ಭಾರತವು ಇತರ ವಿಷಯಗಳಲ್ಲಿರುವಂತೆ ಧರ್ಮದ ವಿಷಯದಲ್ಲೂ ವೈಶಾಲ್ಯವೂ, ವೈವಿಧ್ಯಪೂರ್ಣವೂ ಆಗಿದೆ. ವೈದಿಕ ಧರ್ಮವು ಒಂದು ಮಹಾ ವಟವೃಕ್ಷ. ಅದರ ಶಾಖೆ, ಉಪಶಾಖೆಗಳು ಅನೇಕ. ಇವನ್ನು ಅನುಸರಿಸಿ ಅನೇಕ ಮತ, ಪಂಥ, ತತ್ತ್ವಗಳ ಉಗಮವಾಗಿದೆ. ಇವೆಲ್ಲವುಗಳಲ್ಲಿ ಪ್ರಾರಂಭದಲ್ಲಿ ಅಲ್ಪಸ್ವಲ್ಪ ವಿಭಿನ್ನತೆಗಳು ಕಂಡು ಬಂದರೂ ಪರ್ಯವಸಾನದಲ್ಲಿ ಪ್ರತಿಯೊಂದು ಐಕ್ಯತೆ ಮತ್ತು ಪುರೋಭಿವೃದ್ಧಿಯೊಡನೆ ಸಾಮಾಜಿಕ ಪ್ರಗತಿ ಮತ್ತು ನೀತಿನಿಯಮಗಳಿಂದೊಡಗೂಡಿದ ಉದಾತ್ತವಾದ ಜೀವನ ವಿಧಾನಗಳನ್ನು ಪ್ರತಿಪಾದಿಸುತ್ತ ಉಪನಿಷತ್ತು, ವೇದ ಮೊದಲಾದುವುಗಳ ಅಂತಃಸತ್ವಗಳನ್ನು ಪ್ರತಿಪಾದಿಸುತ್ತಾ ಮಾನವರನ್ನು ವಿಶ್ವಧರ್ಮದತ್ತ ಸಾಗಿಸುವ ಸಾರೋಟುಗಳಾಗಿವೆ.
ಪ್ರತಿಯೊಂದು ಜನಾಂಗಕ್ಕೂ ನಿರ್ದಿಷ್ಟವಾದ ಒಂದು ಆರಾಧ್ಯ ದೇವತೆ, ಧರ್ಮಾಚರಣೆಯಲ್ಲಿ ಒಂದು ನಿಶ್ಚಿತವಾದ ವಿಧಾನ, ಆಚಾರ-ವಿಚಾರಗಳಲ್ಲಿ ಸಾರ್ವತ್ರಿಕವಾದ ಒಂದು ಮಾನದಂಡಗಳಿದ್ದರೆ ಆ ಜನ ಸಮೂಹವನ್ನು ಒಂದು 'ಜನಾಂಗ' ಎಂದು ಪರಿಗಣಿಸುವುದು ಸಮಾಜ ಶಾಸ್ತ್ರದ ಸಿದ್ಧಾಂತಗಳಲ್ಲಿ ಇರುವ ವಿಧಾನ. ಹಿಂದೂ ಧರ್ಮಾನುಯಾಯಿಗಳಾದ 'ಚಿತ್ಪಾವನ' ಎಂಬ ಅಂಕಿತದಿಂದ ಭಾರತದಲ್ಲಿ ಪ್ರಸಿದ್ಧವಾದ ಬ್ರಾಹ್ಮಣ ಸಮುದಾಯಕ್ಕೆ ಮಹಾರಾಷ್ಟ್ರವು ಮೂಲಸ್ಥಾನವಾಗಿದೆ. ಈ ಬ್ರಾಹ್ಮಣರ ಆರಾಧ್ಯ ದೇವತೆ ದಶಾವತಾರಗಳಲ್ಲಿ ಒಂದಾದ 'ಪರಶುರಾಮ'. ಈ ಜನಾಂಗದ ಪ್ರತಿಯೊಂದು ಕುಟುಂಬವು ಶೈವ-ವೈಷ್ಣವ ಮುಂತಾದ ಪರಿಭೇದಗಳನ್ನು ಗಣಿಸದೇ ಸ್ಮಾರ್ತ ಸಂಪ್ರದಾಯಕ್ಕನುಗುಣವಾಗಿ ಶಿವನ ಆರಾಧನೆಯನ್ನು ಮಾಡುತ್ತಿದೆ. ಕುಲಗುರು ಪರಶುರಾಮ, ಸರ್ವ ಸಮಾನ ಆರಾಧನೆ ಪರಶಿವನಿಗೆ, ಇನ್ನು ಆತ್ಮದೇವತೆಯೆಂದು ಪಂಚಾಯತನ ದೇವತೆಗಳಲ್ಲಿ ವೈದಿಕ ಪ್ರತಿಪಾದಿತವಾದ ಒಂದು ದೇವತೆ ಹಾಗೂ ನಿತ್ಯ ಪೂಜಾವಸರದಲ್ಲಿ ಶಿವ, ವಿಷ್ಣು ಮುಂತಾದ ಪಂಚಾಯತನ ದೇವತೆಗಳ ಅರ್ಚನೆಯನ್ನು ಮಾಡುತ್ತಾರೆ. ಶಿವ ಪಂಚಾಯತನ ಮತ್ತು ವಿಷ್ಣು ಪಂಚಾಯತನಗಳೆಂಬ ಪಂಚಾಯತನ ವ್ಯವಸ್ಥೆಯಿದೆ. ಕಶ್ಯಪಾದಿ ಸಪ್ತರ್ಷಿಗಳು ಮತ್ತವರ ಶಿಷ್ಯ ಪರಂಪರೆಯಿಂದ ಬೆಳೆದು ಬಂದ ಗೋತ್ರ ಮತ್ತು ಪ್ರವರಗಳನ್ನು ಇವರು ಹೊಂದಿರುತ್ತಾರೆ.
ಚತುರ್ವೇದಗಳಲ್ಲಿ ಋಗ್ವೇದ ಮತ್ತು ಕೃಷ್ಣಯಜುರ್ವೇದದ ಶಾಖಾಧ್ಯಾಯಿಗಳೇ ವಿಪುಲವಾಗಿ ಇರುವವರು. ಸೂತ್ರಕಾರರಲ್ಲಿ ಆಶ್ವಲಾಯನ ಮತ್ತು ಸತ್ಯಾಷಾಢ (ಹಿರಣ್ಯಕೇಶ) ಎಂಬವರನ್ನು ಅನುಸರಿಸುವವರು. ಇವರು ಸೂತ್ರಿಸಿದ ಶ್ರೌತ ಮತ್ತು ಸ್ಮಾರ್ತ ಸೂತ್ರಗಳ ಅನುಸಾರವಾಗಿ ತಮ್ಮ ಕರ್ಮಾಂಗಗಳನ್ನು ನೆರವೇರಿಸುತ್ತಾರೆ. 'ಅನುಕ್ತಂ ಅನ್ಯತೋಗ್ರಾಹ್ಯಂ' ಎಂಬ ನ್ಯಾಯದಂತೆ ತಮ್ಮ ಸೂತ್ರಕಾರರು ಯಾವುದಾದರೊಂದು ವಿಷಯವನ್ನು ಹೇಳದಿದ್ದು ಅದು ಕರ್ಮಾನುಷ್ಠಾನಕ್ಕೆ ಅವಶ್ಯಕ ಎಂದು ಕಂಡು ಬಂದರೆ ಆಗ ಇತರ ಸೂತ್ರ ಹಾಗೂ ಭಾಷ್ಯಕಾರರಿಂದ ವಿಷಯ ಸಂಗ್ರಹವನ್ನು ಮಾಡುತ್ತಾರೆ.
ಇವರ ವೈದಿಕ ಪರಂಪರೆಯಲ್ಲಿ ಈ ಕೆಳಕಂಡ ಅಂಶಗಳು ವಿಶಿಷ್ಟವಾಗಿವೆ :
ಚಿತ್ಪಾವನ ಬ್ರಾಹ್ಮಣ ಸಮುದಾಯದಲ್ಲಿ ಪ್ರತಿಯೊಂದು ಮನೆತನಕ್ಕೂ ಅದರದೇ ಆದ ಹೆಸರಿದೆ. ಉದಾ.: ಖರೆ, ದೇವಧರ್, ಗೋಡಬೋಲೆ, ಇತ್ಯಾದಿಗಳು. ಈ ಮನೆತನದ ಹೆಸರಿನಿಂದ ಆ ಮನೆತನದವರು ಯಾವ ಗೋತ್ರಕ್ಕೆ ಸಂಬಂಧಪಟ್ಟವರೆಂಬುದನ್ನು ಕಂಡು ಹಿಡಿಯಬಹುದು.
ವೇದದ ಖಿಲಭಾಗದಲ್ಲಿ ಬರುವ "ಭಾಗಸೇಪೈತೃಷ್ಟ ಸೇಯಿವಪಾಮಿವ' ಎಂಬ ಉಕ್ತಿಯಂತೆ ಕೆಲವು ಅಭಿಮತಗಳಲ್ಲಿ ಸೋದರಿಕೆಯ ಸಂಬಂಧವನ್ನು ಮಾಡುವ ವಿಧಾನ ಪ್ರಚಲಿತವಾಗಿದೆ. ಆದರೆ ಚಿತ್ಪಾವನ ಬ್ರಾಹ್ಮಣರಲ್ಲಿ ಈ ಸೋದರಿಕೆಯ ಸಂಬಂಧವು ಪಾಕ್ಷಿಕವಾದುದರಿಂದ ಅದಕ್ಕೆ ಪ್ರಾಶಸ್ತ್ಯವನ್ನು ನೀಡಲಾಗಿಲ್ಲ. ಐದು ಅಥವಾ ಏಳು ತಲೆಮಾರುಗಳು ಕಳೆಯುವವರೆಗೆ ಒಂದು ಸಾರಿ ಆದ ಸಂಬಂಧದಿಂದ ತಿರುಗಿ ವೈವಾಹಿಕ ಸಂಬಂಧವನ್ನು ಬೆಳೆಸಿಕೊಳ್ಳುವಂತಿಲ್ಲ.
ಚಿತ್ಪಾವನರಿಗೆ ಗುರುಪೀಠವುಳ್ಳ ಮಠ ಪರಂಪರೆಯಿಲ್ಲ. ಕುಲಗುರುವಾದ ಪರಶುರಾಮರಿಗೆ ಈ ಆದರ ಗೌರವ, ಆದ್ಯತೆಗಳನ್ನು ನೀಡುತ್ತಾರೆ. ಹೀಗಿದ್ದರೂ ಜಗದ್ಗುರು ಪೀಠವಾದ ಶೃಂಗೇರಿಗೆ ಅನನ್ಯ ಭಕ್ತಿಭಾವಗಳಿಂದ ನಡೆದುಕೊಳ್ಳುತ್ತಾರೆ. ವರ್ಷಾವಧಿಯಲ್ಲಿ ಆಚರಿಸುವ ಅನೇಕ ವ್ರತ ವೈಕಲ್ಯಗಳನ್ನು ಸ್ತ್ರೀಯರು ತಮ್ಮ ದೇಶಭಾಷೆ (ಮರಾಠಿ ಅಥವಾ ಚಿತ್ಪಾವನಿ) ಯಲ್ಲಿಯೇ ವ್ರತಗಳ ಪೂಜಾ ವಿಧಾನ, ಫಲಶ್ರುತಿ, ವ್ರತ ಕಥಾದಿ ಆಚರಣೆಗಳನ್ನು ಪುರೋಹಿತರ ನೆರವಿಲ್ಲದೆ ಸಾಂಗವಾಗಿ ನಡೆಸಿಕೊಂಡು ಹೋಗುವಷ್ಟು ಸ್ವತಂತ್ರರಾಗಿರುವರು. ಇದು ಇವರ ಪ್ರಾಂತೀಯ ದೇಶಾಭಿಮಾನವನ್ನು ಮತ್ತು ಸ್ವಾತಂತ್ರ್ಯ ಪ್ರಿಯತೆಗೆ ಉದಾಹರಣೆಯಾಗಿದೆ. ವೇದ ಪ್ರತಿಪಾದ್ಯವಾದ ಕರ್ಮಾನುಷ್ಠಾನಗಳಲ್ಲಿ ವಿಶಿಷ್ಟವಾದ ಆದರವಿದ್ದು ತಂತ್ರಶಾಸ್ತ್ರಾದಿಗಳನ್ನು ಮಾನ್ಯ ಮಾಡುವುದಿಲ್ಲ. ಆದರೇ ದೇವ ಪ್ರತಿಷ್ಠಾಪನಾದಿಗಳಲ್ಲಿ ಆಗಮ ಮತ್ತು ತಂತ್ರಶಾಸ್ತ್ರದ ಅಂಶಗಳನ್ನು ಸ್ವೀಕರಿಸುತ್ತಾರೆ. ನಿತ್ಯ ಪೂಜಾ ವಿಧಾನದಲ್ಲಿ ಕಲ್ಪೋಕ್ತ ರೀತಿಯಿಂದ ಅರ್ಚನೆಯನ್ನು ಮಾಡುವುದಿಲ್ಲ. ಕೇವಲ ಪುರುಷಸೂಕ್ತ ಮುಖೇನ ಷೋಡಶ ಉಪಚಾರಗಳಿಂದ ಪೂಜೆಯನ್ನು ಮಾಡುತ್ತಾರೆ. ನಿತ್ಯ ದೇವತಾ ಪೂಜೆಯಲ್ಲಿ ಪ್ರಾಣ ಪ್ರತಿಷ್ಠೆ ಮತ್ತು ಪೂಜಾಂತ್ಯದಲ್ಲಿ ವಿಸರ್ಜನೆ, ದ್ವಾರಪೂಜೆ, ಪೀಠಪೂಜೆ, ನವಶಕ್ತಿ ಕಲಾವಾಹನಗಳಿರುವುದಿಲ್ಲ. ನಿತ್ಯ ಕರ್ಮಗಳಾದ ಸಂಧ್ಯಾವಂದನಾದಿಗಳಲ್ಲಿ ನಿತ್ಯವೂ ವಿಸ್ತಾರವಾದ ಸಂಕಲ್ಪವಿಲ್ಲ. ನೇರವಾಗಿ ವಿಷಯ ಪ್ರವೇಶ ಮಾಡುತ್ತಾರೆ.
ವೇದಗಳ ಭಾಷೆಯು ಅತ್ಯಂತ ಪ್ರಾಚೀನ ಹಾಗೂ ಜಟಿಲವಾದುದರಿಂದ ಕರ್ಮಾನುಷ್ಠಾನಗಳಲ್ಲಿ ಮಂತ್ರಾರ್ಥ ಜ್ಞಾನವು ಅವಶ್ಯಕವೆಂದು ಮನಗಂಡು ತಮ್ಮ ಪ್ರಯೋಗ ಪುಸ್ತಕಗಳಲ್ಲಿ ತಮ್ಮ ಮಾತೃಭಾಷೆ ಮರಾಠಿಯಲ್ಲಿ ಮಂತ್ರಗಳ ತಾತ್ಪರ್ಯ ಸಂಗ್ರಹವನ್ನು ಮಾಡಿರುತ್ತಾರೆ.ತಾವು ವಾಸಿಸುವ ಪ್ರದೇಶದ ಪ್ರಾದೇಶಿಕತೆಗನುಸಾರವಾಗಿ ತಮ್ಮ ಜೀವನ ಶೈಲಿಯನ್ನು ಮಾರ್ಪಡಿಸಿ ಎಲ್ಲರೊಳಗೊಂದಾಗಿ ಬದುಕುವ ಕಲೆ ಇವರಿಗೆ ತಿಳಿದಿದೆ. ವೈದಿಕ ಪರಂಪರೆಯಲ್ಲಿ ಹಲವೊಂದು ಸರಳ ವಿಚಾರಗಳನ್ನು ಹೊಂದಿದ್ದಾರೆ. ಶೈವ-ವೈಷ್ಣವ ಭೇದವಿರದಿರುವುದರಿಂದ ಏಕಾದಶಿ ಮತ್ತು ಶಿವರಾತ್ರಿಗಳನ್ನು ಯಾವುದೇ ತಾರತಮ್ಯವಿಲ್ಲದೆ ಆಚರಿಸುತ್ತಾರೆ. ಪಂಚಾಂಗ ನಿಷ್ಕರ್ಶೆಗೆ ಚಾಂದ್ರಮಾನ ಪದ್ಧತಿಯನ್ನು ಮಾನ್ಯಮಾಡುತ್ತಾರೆ.
ಚಿತ್ಪಾವನ ಬ್ರಾಹ್ಮಣ ಸಮುದಾಯದ ವೈದಿಕ ಪರಂಪರೆಗೆ ಅದರದ್ದೇ ಆದ ಮಹತ್ವವಿದೆ.ಚಿತ್ಪಾವನ ಸಮುದಾಯದಲ್ಲಿ ವೈದಿಕ ಕ್ಷೇತ್ರದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಸಿದ್ದೀಯನ್ನು ಪಡೆದ ವೇದ ವಿದ್ವಾಂಸರು ಹೋಗಿದ್ದಾರೆ. ಸಂಸ್ಕೃತ, ವೇದವೇದಾಂಗ, ಉಪನಿಷತ್ತು ಹೀಗೆ ವಿವಿಧ ಶಾಖೆಗಳಲ್ಲಿ ತಮ್ಮ ಪಾಂಡಿತ್ಯದ ಮೂಲಕ ಚಿತ್ಪಾವನ ವೈದಿಕ ಪರಂಪರೆಯಲ್ಲಿ ಶೋಭಿಸುತ್ತಿರುವ ಅನೇಕ ಯುವಕರು ಇಂದಿನ ಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ.
- ಲೇಖಕರು : ಅಗ್ನಿಮಾನ್ ಶ್ರೀ ಟಿ. ವಾಮನ ಭಟ್, ಸಂಸ್ಕೃತ, ಕನ್ನಡ, ಹಿಂದಿ ವಿದ್ವಾನ್