ಆಚಾರ - ವಿಚಾರ

ಪುರಾಣಗಳು

ಹಿಂದೆ ಓದಿ

ಭಾರತೀಯ ಸಂಸ್ಕೃತಿಯನ್ನು ಅರಿಯಲು, ಅರಿತು ಆಚರಿಸಲು, ಆಚರಿಸಿ ಸತ್ಪದವನ್ನು ಸಾಧಿಸಲು ಪ್ರಾಚೀನ ವಾಙ್ಮಯಕಾರರು ನಮಗೆ ನೀಡಿದ ಆಸ್ತಿಯ ಬೆಲೆ ಅಪರಿಮಿತ. ಈ ಆಸ್ತಿಯಲ್ಲಿ ವೇದಗಳು, ಬ್ರಾಹ್ಮಣಗಳು, ಆರಣ್ಯಕಗಳು, ಉಪನಿಷತ್ತುಗಳು, ಸ್ಮೃತಿಗಳು, ಪುರಾಣಗಳು ಮತ್ತು ಕಾವ್ಯ ವಾಙ್ಮಯವೂ ಅಮೂಲ್ಯ ರತ್ನಗಳು.

ಯಾಸ್ಕನು ನಿರುಕ್ತದಲ್ಲಿ ಹೇಳಿರುವಂತೆ 'ಪುರಾನವಂ ಭವತಿ' ಎಂಬ ವ್ಯುತ್ಪತ್ತಿಯು ಪುರಾಣಕ್ಕಿದ್ದು ಅದರ ತಾತ್ಪರ್ಯವು ಪ್ರಾಚೀನವಾಗಿದ್ದರೂ ಹೊಸತಾಗಿರುತ್ತದೆ ಎಂದು ಹೇಳಬಹುದು. ಪುರಾಣಗಳ ಕಾಲಮಾನವನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಥರ್ವವೇದದಿಂದ ಆರಂಭಿಸಿ ಪುರಾಣ ಸಾಹಿತ್ಯದ ಯುಗದ ತನಕವೂ ಪುರಾಣ ಶಬ್ದವು ಪ್ರಸಿದ್ಧವಾಗಿದ್ದುದರಿಂದ ಬಹಳ ಪ್ರಾಚೀನವಾದ ಸಂಹಿತೆಯೆಂದು ಹೇಳಬಹುದು. ಯಾಸ್ಕನಂತೆ ಇತರ ಅನೇಕ ಶಾಸ್ತ್ರಕಾರರು ಪುರಾಣಗಳ ಅನೇಕ ವ್ಯುತ್ಪತ್ತಿಯನ್ನು ನಿರೂಪಿಸಿದ್ದಾರೆ. ಗೌತಮ ಸೂತ್ರದಲ್ಲಿ ಇತಿಹಾಸ ಪುರಾಣಗಳನ್ನು ತಿಳಿದವನು ಒಳ್ಳೆಯ ಜ್ಞಾನಿಯಾಗುತ್ತಾನೆ ಎಂಬ ಪೌರಾಣಿಕ ಹೊಗಳಿಕೆ ಇದೆ. ಶುಕ್ರನೀತಿಯಲ್ಲಿ 'ಸಾಹಿತ್ಯ ಶಾಸ್ತ್ರ ನಿಪುಣಃ ಸಂಗೀತಜ್ಞಶ್ಚ ಸುಸ್ವರಃ ಸರ್ಗಾದಿಪಂಚಜ್ಞಾತಾ ಚ ಸ ವೈ ಪೌರಾಣಿಕ ಸ್ಮೃತಃ' (ಶುಕ್ರನೀತಿ ೨-೧೭೮)ಎಂದು ಹೇಳಿದೆ. ಅಂದರೆ ಪುರಾಣಗಳನ್ನು ತಿಳಿದಿರುವವನು, ಸಾಹಿತ್ಯ ಶಾಸ್ತ್ರವನ್ನು ಚೆನ್ನಾಗಿ ಬಲ್ಲವನೂ ಒಳ್ಳೆಯ ಶಾರೀರವಿರುವ ಸಂಗೀತಜ್ಞನೂ ಆಗಿರಬೇಕೆಂದಾಗಿದೆ. ಹೀಗೆಯೇ ಹಲವು ಸ್ಮೃತಿಗಳೂ, ಪುರಾಣಗಳೂ ಕೂಡ ಪುರಾಣ ಸಾಹಿತ್ಯದ ಬಗ್ಗೆ ಹೊಗಳಿ ಅದರ ಪ್ರಾಶಸ್ತ್ಯವನ್ನು ಹೆಚ್ಚಿಸಿವೆ.

ಪುರಾಣಂ ಸರ್ವಶಾಸ್ತ್ರಾಣಾಂ ಪ್ರಥಮಂ ಬ್ರಹ್ಮಣಾ ಸ್ಮೃತಮ್ | ಅನಂತರಂ ಚ ವಕ್ತೇಭ್ಯೋ ವೇದಾಸ್ತಸ್ಯ ವಿನಿರ್ಗತಾಃ (ಮತ್ಸ್ಯ ಪುರಾಣ ೫೩-೩). ಮತ್ಸ್ಯ ಪುರಾಣದ ಈ ಉಕ್ತಿಯಿಂದ ಬ್ರಹ್ಮನು ಪುರಾಣಗಳನ್ನು ವೇದಗಳನ್ನು ಹೇಳುವ ಮೊದಲೇ ಸೃಷ್ಟಿಸಿದನೆಂದು ತಿಳಿಯಬಹುದು. ಭಾಗವತವು ಪುರಾಣಗಳೆಂದರೆ ಐದನೇ ವೇದವೆಂದು ಹೇಳುತ್ತದೆ. ಪುರಾಣಗಳನ್ನು ಮಹಾ ಪುರಾಣ ಮತ್ತು ಉಪಪುರಾಣಗಳಾಗಿ ವಿಂಗಡಿಸಿದ್ದಾರೆ. ಮಹಾಪುರಾಣಗಳು ಹದಿನೆಂಟು ಮತ್ತು ಉಪ ಪುರಾಣಗಳೂ ಹದಿನೆಂಟು.

ಮಹಾಪುರಾಣಗಳನ್ನು ಸುಲಭವಾಗಿ ಗುರುತಿಸುವಂತೆ ಒಂದು ಸೂತ್ರರೂಪದ ಶ್ಲೋಕವು ಸಹಕಾರಿಯಾಗುತ್ತದೆ. 'ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಮ್ |ಅನಾಪಲಿಂಗಕೂಸ್ಕಾನಿ ಪುರಾಣಾನಿ ಪೃಥಕ್ ಪೃಥಕ್ || ಮಕಾರಾದಿಯಾಗಿ ಬರುವ ಪುರಾಣಗಳು ಎರಡು (ಮದ್ವಯ) -ಮತ್ಸ್ಯ, ಮಾರ್ಕಂಡೇಯ. ಬಕಾರಾದಿಯಾಗಿ ಎರಡು -(ಬದ್ವಯ) ಭಾಗವತ, ಭವಿಷ್ಕ.  ಬ್ರಕಾರಾದಿಯಾಗಿ ಮೂರು (ಬ್ರತ್ರಯ) ಬ್ರಹ್ಮ, ಬ್ರಹ್ಮಾಂಡ, ಬ್ರಹ್ಮವೈವರ್ತ. ವಕಾರಾದಿಯಾಗಿ ನಾಲ್ಕು (ವಚತುಷ್ಟಯ)ವಾಮನ, ವಿಷ್ಣು, ವಾಯು, ವರಾಹ.

ಅನಾಪಲಿಂಗಕೂಸ್ಕ - ಅಗ್ನಿ, ನಾರದ, ಪದ್ಮ, ಲಿಂಗ, ಗರುಡ, ಕೂರ್ಮ, ಸ್ಕಂದ. ಹೀಗೆ ಈ ಶ್ಲೋಕದಲ್ಲಿ ಹದಿನೆಂಟು ಪುರಾಣಗಳು ನಿರೂಪಿತವಾಗಿವೆ. ಆದರೆ ಇದು ಪುರಾಣಗಳ ಕ್ರಮವಾದ ನಿರೂಪಣೆ ಅಲ್ಲ. ಅನುಕ್ರಮವಾಗಿ ಅವುಗಳನ್ನು ಬ್ರಾಹ್ಮ, ಪಾದ್ಮ, ವಿಷ್ಣು, ಶಿವ, (ವಾಯು) ಬಾಗವತ, ನಾರದ, ಮಾರ್ಕಂಡೇಯ ಅಗ್ನಿ, ಭವಿಷ್ಯ, ಬ್ರಹ್ಮವೈವರ್ತ, ಲಿಂಗ, ವರಾಹ, ಸ್ಕಾಂದ, ವಾಮನ, ಕೂರ್ಮ, ಮತ್ಸ್ಯ, ಗರುಡ, ಬ್ರಹ್ಮಾಂಡ ಈ ರೀತಿಯಾಗಿ ಹೆಸರಿಸಿದ್ದಾರೆ. ನಾಲ್ಕನೆಯ ಶಿವಪುರಾಣದ ಬದಲು ಕೆಲವರು ವಾಯುಪುರಾಣವನ್ನು, ಭಾಗವತವನ್ನು ದೇವಿಭಾಗವತವೆಂದೂ ಪರಿಗಣಿಸುವುದಿದೆ. ಎಲ್ಲ ಪುರಾಣಗಳು ವಿಷಯದ ಆಧಾರದಿಂದ ಮತ್ತು ಗುಣಗಳ ದೃಷ್ಟಿಯಿಂದ ಭಿನ್ನವಾಗಿರುತ್ತವೆ. ಅವುಗಳಲ್ಲಿ ಶಿವ, ಭವಿಷ್ಯ, ಮಾರ್ಕಂಡೇಯ, ಲಿಂಗ, ವರಾಹ, ಸ್ಕಂಧ, ಮತ್ಸ್ಯ, ಕೂರ್ಮ, ವಾಮನ ಮತ್ತು ಬ್ರಹ್ಮಾಂಡ ಈ ಹತ್ತು ಶೈವ ಪುರಾಣಗಳು. ವಿಷ್ಣು, ಭಾಗವತ, ನಾರದ, ಮತ್ತು ಗರುಡ ಈ ನಾಲ್ಕು ವೈಷ್ಣವ ಪುರಾಣಗಳು. ಬ್ರಹ್ಮ ಮತ್ತು ಪದ್ಮ ಇವೆರಡು ಬ್ರಾಹ್ಮ ಪುರಾಣಗಳು. ಅಗ್ನಿ ಪುರಾಣ ಆಗ್ನೇಯವೆಂತಲೂ, ಬ್ರಹ್ಮ ವೈವರ್ತ ಪುರಾಣವು ಸಾವಿತ್ರವೆಂತಲೂ ಗಣಿಸಲ್ಪಟ್ಟಿವೆ. ಇದಲ್ಲದೆ ಸಾತ್ವಿಕ, ರಾಜಸ ಮತ್ತು ತಾಮಸ ಎಂಬ ಗುಣಭೇದದಿಂದ ಪುರಾಣಗಳು ನಿರೂಪಿಸಲ್ಪಟ್ಟಿವೆ.

 ಮಹಾ ಪುರಾಣಗಳಲ್ಲಿ ಅತಿ ದೊಡ್ಡ ಪುರಾಣವು ಸ್ಕಾಂದ ಮತ್ತು ಅತಿ ಚಿಕ್ಕದು ಮಾರ್ಕಂಡೇಯ ಪುರಾಣ. ಕ್ರಮವಾಗಿ ಇವುಗಳ ಶ್ಲೋಕ ಸಂಖ್ಯೆ ೮೧ಸಾವಿರ ಮತ್ತು ೯ ಸಾವಿರ. .ಎಲ್ಲ ಪುರಾಣಗಳ ಒಟ್ಟು ಶ್ಲೋಕ ಸಂಖ್ಯೆ ನಾಲ್ಕು ಲಕ್ಷ. ವರ್ಣನೆಯ ವಿಷಯವನ್ನು ಅನುಸರಿಸಿ ಪುರಾಣಗಳಿಗೆ ಕೆಲವು ಆಂತರಿಕ ಭೇದಗಳಿವೆ. ಸ್ಕಾಂದ ಪುರಾಣವು ಸಂಹಿತಾರೂಪವಾಗಿಯೂ, ಖಂಡಗಳ ರೂಪದಲ್ಲೂ ಇದೆ. ಇದರಲ್ಲಿ ಸನತ್ಕುಮಾರ, ಸೂತ, ಶಂಕರ, ವೈಷ್ಣವೀ, ಬ್ರಾಹ್ಮೀ, ಸೌರಿ ಎಂಬ ಆರು ಸಂಹಿತೆ ಅಥವಾ ಮಾಹೇಶ್ವರ, ವೈಷ್ಣವ, ಬ್ರಾಹ್ಮ, ಕಾಶೀ, ಅವಂತಿ, ನಾಗರ, ಪ್ರಭಾಸಗಳೆಂಬ ಏಳು ಖಂಡಗಳಿರುತ್ತವೆ. ತೀರ್ಥ ಮಹಾತ್ಮ್ಯೆಗಳನ್ನು ತಿಳಿಸಲು ಸ್ಕಾಂದವು ಹೆಸರುವಾಸಿಯಾಗಿದೆ. ಪದ್ಮ ಪುರಾಣವನ್ನು ಸೃಷ್ಟಿ ಖಂಡ, ಭೂಮಿ ಖಂಡ, ಸ್ವರ್ಗಖಂಡ, ಪಾತಾಳ ಖಂಡ ಮತ್ತು ಉತ್ತರ ಖಂಡವೆಂದು ಐದು ವಿಧವಾಗಿಯೂ, ವಿಷ್ಣು ಪುರಾಣವನ್ನು ಆರು ಅಂಶಗಳನ್ನಾಗಿಯೂ, ವಾಯು ಪುರಾಣವನ್ನು ಪ್ರಕ್ರಿಯಾ ಪಾದ, ಅನುಷ್ಟಾಂಗ ಪಾದ, ಉಪೋದ್ಘಾತಪಾದ ಮತ್ತು ಉಪಸಂಹಾರ ಪಾದವೆಂದು ನಾಲ್ಕು ಭಾಗಗಳಾಗಿಯೂ, ಭಾಗವತವನ್ನು ಹನ್ನೆರಡು ಸ್ಕಂಧಗಳ ರೂಪವಾಗಿಯೂ, ಬ್ರಹ್ಮವೈವರ್ತ ಪುರಾಣವನ್ನು ಬ್ರಹ್ಮ ಖಂಡ, ಪ್ರಕೃತಿ ಖಂಡ, ಗಣೇಶ ಖಂಡ ಮತ್ತು ಕೃಷ್ಣಜನ್ಮ ಖಂಡವೆಂದು ನಾಲ್ಕು ವಿಧವಾಗಿ ವಿಭಾಜಿಸಿದ್ದಾರೆ.

ಉಪ ಪುರಾಣಗಳು ಹದಿನೆಂಟು. ಅವು ಕ್ರಮವಾಗಿ ಸನತ್ಕುಮಾರ, ನಾರಸಿಂಹ, ಸ್ಕಂದ, ಶಿವಧರ್ಮ, ಆಶ್ಚರ್ಯ, ನಾರದೀಯ, ಕಪಿಲ, ವಾಮನ, ಉಶನಸ್, ಬ್ರಹ್ಮಾಂಡ, ವಾರುಣ, ಕಾಲೀ, ಮಾಹೇಶ್ವರ, ಸಾಂಬ, ಸೌರ, ಪರಾಶರ, ಮಾರೀಚ, ಭಾರ್ಗವ ಎಂಬ ಹೆಸರಿನಲ್ಲಿವೆ. ಅಲ್ಲಿ ಕೆಲವು ಮಹಾಪುರಾಣಗಳ ಹೆಸರೂ ಮತ್ತು ಮಹಾಪುರಾಣಗಳ ಹೆಸರೂ ಒಂದೇ ಆಗಿವೆ. ಆದರೆ ಉಪಪುರಾಣಗಳ ಕುರಿತು ಹೆಚ್ಚಿನ ವಿಮರ್ಶೆ ಮತ್ತು ನಿಷ್ಕರ್ಶೆ ಆಗಿಲ್ಲ. ಎಲ್ಲವೂ ದೊರೆಯುವುದೂ ಇಲ್ಲ. ಆದ್ದರಿಂದ ಹೆಸರುಗಳು ಬೇರೆಯಾದಂತೆ ಪುರಾಣಗಳು ಬೇರೆ ಬೇರೆಯಾಗಿರಬೇಕು.

ವರ್ಣನೆಯ ಮತ್ತು ವಿಷಯ ನಿರೂಪಣೆಯ ಆಧಾರಗಳಿಂದ ಪುರಾಣಗಳಿಗೆ ಐದು ಲಕ್ಷಣಗಳಿವೆ. ಸರ್ಗಶ್ಚ ಪ್ರತಿಸರ್ಗಶ್ಚ ವಂಶೋ ಮನ್ವವಂತರಾಣಿ ಚ | ವಂಶಾನುಚರಿತಂ ಚೈವ ಪುರಾಣಂ ಪಂಚಲಕ್ಷಣಮ್ || ಈ ಲಕ್ಷಣದಂತೆ ಪುರಾಣಗಳಲ್ಲಿ ಸೃಷ್ಟಿಯ ವರ್ಣನೆ, ವಂಶಾನುಚರಿತ (ಮೂಲವಂಶದ ಪೀಳಿಗೆಗಳು), ಇವುಗಳ ವಿಸ್ತಾರವಾದ ನಿರೂಪಣೆಯು ಇರುತ್ತದೆ. ಭಾಗವತ ಪುರಾಣಗಳಿಗೆ ಹತ್ತು ಲಕ್ಷಣಗಳನ್ನು ಹೇಳಿದೆ.

ಏಕೇಶ್ವರವಾದದಿಂದ ಇತರ ದೇವತಾ ವಿರೋಧಿಗಳನ್ನು ಪುರಾಣಗಳು ಪ್ರಬಲವಾಗಿ ಪ್ರತಿಭಟಿಸುತ್ತವೆ. ಬ್ರಹ್ಮ, ವಿಷ್ಣು ಶಿವ ಇವರ ನಡುವೆ ಭೇದಭಾವ ಸಲ್ಲದು. ಅದನ್ನು ಮಾಡಿದರೆ ಹಾನಿಯೇ ಹೊರತು ಒಳಿತಲ್ಲವೆಂದು ಪುರಾಣಗಳ ವಾದ. ಶ್ರುತಿ ಸ್ಮೃತಿಗಳಲಿಲ್ಲದ ವಿಷಯಗಳನ್ನು ಪುರಾಣಗಳು ಪ್ರತಿಪಾದಿಸುತ್ತವೆ ಎಂದು ಸ್ಕಾಂದ ಪುರಾಣದ ಪ್ರಭಾಸ ಖಂಡದಲ್ಲಿ ಹೇಳಿದುದು ಅತಿಶಯದ ಮಾತಲ್ಲ. ಪುರಾಣಗಳ ಒಡಲು, ಸಮುದ್ರದ ಒಡಲೂ ಒಂದೇ ತೆರನಾಗಿರುತ್ತದೆ. ಅಲ್ಲಿಲ್ಲದ ವಿಷಯಗಳು ಇನ್ನೆಲ್ಲಿರಬೇಕು? ಅವು ಸೂಕ್ಷ್ಮರೂಪವಾಗಿಯೋ, ಪ್ರಕಾರಾಂತರದಿಂದಲೋ ಅಥವಾ ಅದೃಷ್ಟವಾಗಿಯೋ ಅಲ್ಲಿರುತ್ತವೆ. ಸ್ಥೂಲರೂಪವಾಗಿ ಪುರಾಣಗಳ ಪ್ರತಿಪಾದ್ಯವಾದ ವಿಷಯಗಳನ್ನು ಅವಲೋಕಿಸಿದಾಗ ಅಲ್ಲಿ ಅವತಾರಗಳ ಕುರಿತು ವಿವೇಚನೆ, ಆಖ್ಯಾನಗಳ ವಿಸ್ತೃತ ರೂಪಗಳು, ಸೃಷ್ಟಿತತ್ತ್ವಗಳು, ಮನ್ವಂತರಾದಿ ಕಾಲಮಾನ ವಿವೇಚನೆ, ಧರ್ಮಶಾಸ್ತ್ರೀಯ ಆಚಾರ ವಿಚಾರಗಳ ರಹಸ್ಯಗಳು, ಅಶ್ವ ಗಜಾದಿ ಶಾಸ್ತ್ರಗಳ ರೂಪರೇಖೆ, ಚಿತ್ರಶಿಲ್ಪ ವಿಚಾರಗಳು, ಗೃಹನಿರ್ಮಾಣ ಕಲೆಯ ವಿಚಾರಗಳು, ಜೌತಿಷ್ಯ ಸಾಮುದ್ರಿಕ ಶಾಸ್ತ್ರಗಳ ಪರ್ಯಾಲೋಚನೆ, ಪೃಥ್ವಿಯ ಸ್ವರೂಪ, ದ್ವೀಪ, ವನ, ನದಿ, ಪರ್ವತಗಳು, ಭರತ ಖಂಡದ ಸಮಗ್ರ ವರ್ಣನೆಯಿದೆ. ಭೂರ್ಭುವಾದಿ ಲೋಕಗಳು, ಜ್ಯೋತಿಶ್ಚಕ್ರದ ವಿವರಣೆ, ಪಾತಾಳ ಸ್ವರೂಪ, ಇಹ ಪರಗಳ ಸಕಲ ವಿವರಗಳು, ನರಕಗಳು, ಯಮಪುರಿ, ಪಾಪ ಪುಣ್ಯಗಳ, ಫಲಾಫಲಗಳ ವಿವರಗಳು ಮತ್ತು ಇನ್ನೂ ಹಲವಾರು ವಿಷಯಗಳ ಸ್ಥೂ ಮತ್ತು ಸೂಕ್ಷ್ಮರೂಪದ ವಿವರಣೆ ಪುರಾಣಗಳಲ್ಲಿದೆ.

ಶಂರೋಹತೀಷುಣಾ ವಿದ್ಧಂ ವನಂ ಪರಶುಣಾಹತಂ | ವಾಚಾ ದುರುಕ್ತಂ ಭೀಭತ್ಸಂ ನ ಪ್ರರೋಹತಿ ವಾಕ್ ಕ್ಷತಮ್ || (ವಾಮನ ಪುರಾಣ ೫೪-೭) ಬಾಣದಿಂದ ಚುಚ್ಚಲ್ಪಟ್ಟರೆ ಗುಣವಾಗುವುದು. ಕೊಡಲಿಯಿಂದ ಕಡಿದ ಕಾಡು ಮತ್ತೆ ಬೆಳೆಯುವುದು. ಆದರೆ ಕೆಟ್ಟ ಮಾತುಗಳಿಂದ ನಿಂದಿಸಿ ಉಂಟುಮಾಡಿದ ಹೃದಯದ ಗಾಯವು ಪುನಃ ತುಂಬಲಾರದು. ಇಂತಹ ಅನೇಕ ಸೂಕ್ಷ್ಮವಾದ ನೀತಿಪರ ಶ್ಲೋಕಗಳು ಪುರಾಣಗಳಲ್ಲಿ ಕಾಣುತ್ತವೆ.

ಪುರಾಣಗಳು ಕೇವಲ ನೀರಸ ನಿರೂಪಣೆ ಅಲ್ಲ. ಅವುಗಳಲ್ಲಿ ಕಾವ್ಯ ತತ್ತ್ವಗಳಾದ ರಸಾಲಂಕಾರಗಳು, ಧ್ವನಿ ವ್ಯಂಗ್ಯಗಳು ಹೇರಳವಾಗಿವೆ. ಸುಂದರವಾದ ಶೈಲಿಯೂ ಅಲ್ಲಿದೆ. ಬಾಗವತವೊಂದೇ ಇದಕ್ಕೆ ನಿದರ್ಶನವಾಗಿದೆ. ಅಲ್ಲಿನ ಶೈಲಿಯ ಗಡಸುತನ, ಅಲಂಕಾರ ವೈವಿಧ್ಯ, ನಿರೂಪಣೆಯ ಗಾಢತೆ ಇವು ಕಾವ್ಯಗಳಿಗಿಂತಲೂ ಹೆಚ್ಚು ಹೃದ್ಯವಾಗಿವೆ ಎನ್ನಬಹುದು. ಹೀಗೆ ಪುರಾಣಗಳು ಹಿಂದೂಧರ್ಮಕ್ಕೆ, ಸಾಹಿತ್ಯಕ್ಕೆ ನೀಡಿದ ಕಾಣ್ಕೆ ಅನಲ್ಪ. ಮುಂದಿನ ಸಹಸ್ರಾರು ಕವಿಗಳು, ಲೇಖಕರು ಇವುಗಳಿಗೆ ಋಣಿಯಾಗಿದ್ದಾರೆ. ಕಲ್ಪನಾತ್ಮಕ ಕಾವ್ಯಗಳನ್ನು ಬಿಟ್ಟು ಉಳಿದ ಎಲ್ಲ ಕವಿವಾಙ್ಮಯವೂ ಪುರಾಣಗಳಿಂದ ಉಪಕೃತವಾಗಿದೆ.

ಹೀಗೆ ಪುರಾಣಗಳೆಂದರೆ ಸಾಗರ ಸದೃಶ್ಯವಾದ ಸಾಹಿತ್ಯ. ಅದರ ಆಳದಲ್ಲಿ ಅದೆಷ್ಟು ರತ್ನಗಳು! ಅದೆಷ್ಟು ನಿಧಿಗಳು! ಹುಡುಕಿದವರಾರು? ಕಂಡವರಾರು? ಪಡೆದ ಭಾಗ್ಯಶಾಲಿಗಳಾರು?

- ಲೇಖಕರು : ದಿ. ಹೈಪಾಜೆ ಶಂಕರ ಗಣಪತಿ ಫಾಟಕ್