ಆಚಾರ - ವಿಚಾರ

ಪಿತೃ ಶ್ರಾದ್ಧ

ಪಿತೃಶ್ರಾದ್ಧವೇಕೆ?: ಇಲ್ಲಿ ಪಿತೃ ಎಂಬ ಶಬ್ದಕ್ಕೆ ವಿಸ್ತಾರವಾದ ಅರ್ಥವಿದೆ. ಗತಿಸಿದ ನಮ್ಮ ರಕ್ತ ಸಂಬಂಧಿಗಳೆಲ್ಲ ನಮಗೆ ಪಿತೃಗಳೇ ಆದರೂ ನಮ್ಮ ಹುಟ್ಟಿಗೆ ಕಾರಣರಾದ ಗತಿಸಿದ ನಮ್ಮ ತಂದೆ ತಾಯಿಗಳಿಗೆ ಸದ್ಗತಿ ದೊರೆಯಲೆಂದು ಮೃತರಾದಾಗ ಅಸ್ಥಿ ಸಂಚಯನದಿಂದ ಮೊದಲ್ಗೊಂಡು ಹದಿಮೂರು ದಿವಸಗಳವರೆಗೆ ಉತ್ತರ ಕ್ರಿಯೆಗಳನ್ನು ಮಾಡುತ್ತೇವೆ. ಇದರಿಂದ ಮೃತರಾದ ಅವರಿಗೆ ಪಿತೃಲೋಕ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ನಮ್ಮದು. ಅಷ್ಟೇ ಸಾಕೆ? ಪಿತೃಲೋಕದಲ್ಲಿರು ಅವರ ಹಸಿವು ಬಾಯಾರಿಕೆಗಳನ್ನೂ ನೀಗಿಸಲು ಏನಾದರೂ ಮಾಡಬೇಡವೇ? ಅದಕ್ಕೆಂದೇ ವರುಷಕ್ಕೊಂದು ಬಾರಿ ನಾವು ಈ ಶ್ರಾದ್ಧದಾಚರಣೆಯ ಮೂಲಕ ಅವರ ಹಸಿವನ್ನು ನೀಗಿಸುತ್ತೇವೆ. ನಾವು ವಾಸಿಸುವ ಈ ಭೂಲೋಕದ ದಿನಮಾನ ಗಣನೆಯ ೩೬೫ ದಿನಗಳು ಪಿತೃಲೋಕದ ಒಂದು ದಿನವೆಂದು ಲೆಕ್ಕ. ಹಾಗಾಗಿ ನಾವು ವರುಷಕ್ಕೊಮ್ಮೆ ಮಾಡುವ ಶ್ರಾದ್ಧವು ಅವರ ದೈನಂದಿನ ಹಸಿವು ಬಾಯಾರಿಕೆಗಳನ್ನು ನೀಗಿಸುತ್ತದೆ.

ಮುಂದೆ ಓದಿ


ಇಚ್ಛಾ ಸಂತತಿ

ಬಡವರು-ಶ್ರೀಮಂತರು, ವಿದ್ಯಾವಂತರು-ಅವಿದ್ಯಾವಂತರು ಎಂಬ ಭೇದವಿಲ್ಲದೇ ಪರಸ್ಪರ ಭೇಟಿಯಾದಾಗ ಬರುವ ಲೋಕಾಭಿರಾಮದ ಮಾತುಗಳಲ್ಲಿ ನಿಮಗೆ ಮಕ್ಕಳೆಷ್ಟು? ಎಂಬುದು ಸರ್ವೇಸಾಮಾನ್ಯವಾಗಿ ಬರುವ ಪ್ರಶ್ನೆ. ಉತ್ತರಿಸುವಾತ ಹೊರಗಡೆ ತೋರಿಸಿಕೊಳ್ಳದಿದ್ದರೂ, ಬರೇ ಹೆಣ್ಣುಮಕ್ಕಳೆಂದು ಉತ್ತರಿಸುವಾಗ ಆಂತರಿಕ ಮುಜುಗುರಕ್ಕೆ ಒಳಗಾಗುತ್ತಾನೆ. ಹೆಣ್ಣು ಮಗುವೊಂದರ ನಿರೀಕ್ಷೆಯಲ್ಲಿ ಮೂರ್ನಾಲ್ಕು ಗಂಡು ಮಕ್ಕಳಾಗುವುದು, ಗಂಡೊಂದರ ನಿರೀಕ್ಷೆಯಲ್ಲಿ ನಾಲ್ಕೈದು ಹೆಣ್ಣು ಮಕ್ಕಳಾಗುವುದು ನಾವು ಸುತ್ತಮುತ್ತ ನೋಡುತ್ತಿರುವ ಸತ್ಯ ಸಂಗತಿ. ಸದ್ಯದ ವರ್ತಮಾನ ಕಾಲದಲ್ಲಂತೂ ಸ್ಕ್ಯಾನಿಂಗ್ ಮೂಲಕ ಮುಂಚಿತವಾಗಿಯೇ ತಿಳಿಯಲು ಪ್ರಯತ್ನಿಸಿ ಆಗಲೇ ಆತುರದ ನಿರ್ಧಾರ ತೆಗೆದುಕೊಳ್ಳುವವರೂ ಇದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬವೊಂದು ತನಗಿಷ್ಟದ ಸಂತತಿಯನ್ನು ಪಡೆಯುವಲ್ಲಿ ನಮ್ಮ ಪುರಾತನ ಋಷಿ ಮುನಿಗಳು ಸಂಶೋಧಿಸಿದ ವಿಚಾರಗಳು, ಕುಟುಂಬ ಯೋಜನೆ ಎಲ್ಲರಿಗೂ ಅನಿವಾರ್ಯವಾಗಿರುವ ಈ ದಿನಗಳಲ್ಲಿ ಅತ್ಯಂತ ಪ್ರಸ್ತುತವಾಗಿದೆ. ವ್ಯಕ್ತಿಯೊಬ್ಬ ವಿವಾಹಿತನಾಗುವುದು ಹಿಂದೂ ಧಾರ್ಮಿಕ ನಂಬಿಕೆಗಳಂತೆ ಕೇವಲ ಕಾಮ ಪಿಪಾಸೆ ತಣಿಸುವುದಕ್ಕೆ ಮಾತ್ರವಲ್ಲ. ಗೃಹಸ್ಥಾಶ್ರಮ ಸಮಾಜದ ಎಲ್ಲರಿಗೂ ಆಶ್ರಯ ನೀಡಬೇಕಾದ ಪವಿತ್ರ ಹೊಣೆಗಾರಿಕೆಯಿಂದ ಕೂಡಿದೆ. ಬ್ರಹ್ಮಚರ್ಯ, ಸ್ನಾತಕ, ವಾನಪ್ರಸ್ಥ, ಸನ್ಯಾಸ ಹೀಗೆ ಎಲ್ಲ ಆಶ್ರಮದವರಿಗೂ, ಸಮಾಜದ ಎಲ್ಲ ವಿಭಾಗಗಳಿಗೂ ಉಪಕಾರವೆಸಗಿ ತಾನೂ ಕೃತಾರ್ಥತೆಯ ಧನ್ಯತೆ ಅನುಭವಿಸಬೇಕಾದುದು ಗೃಹಸ್ಥನೋರ್ವನ ಧರ್ಮ. ಇದು ಈ ಆಶ್ರಮದ ಅವಿಭಾಜ್ಯ ಅಂಗವೂ ಹೌದು.

ಮುಂದೆ ಓದಿ


ಸಂಧ್ಯೋಪಾಸನೆಯ ಮಹತ್ವ

ಇಂದು ಯಾಂತ್ರಿಕವಾಗಿ ಜೀವಿಸುತ್ತಿರುವ ನಾವು ವರ್ಣಾಶ್ರಮ ಧರ್ಮಗಳನ್ನಷ್ಟೇ ಅಲ್ಲದೆ ಅವಕ್ಕೆ ಆಧಾರವಾಗಿರುವ ವೇದಗಳ ಅಧ್ಯಯನವನ್ನು ಬಿಟ್ಟು ಬ್ರಾಹ್ಮಣ್ಯದ ಕನಿಷ್ಠ ಅರ್ಹತೆಯಾದ ಸಂಧ್ಯೋಪಾಸನೆಯನ್ನು ತ್ಯಜಿಸಿ ಆತ್ಮೋನ್ನತಿಯ ಬದಲಾಗಿ ಅಧೋಗತಿಯನ್ನು ಹೊಂದುತ್ತಿದ್ದೇವೆ ಎಂದರೆ ಅತಿಶಯೋಕ್ತಿಯಾಗಲಾರದು. ವೇದಗಳಲ್ಲಿ ಮತ್ತು ಸ್ಮೃತಿಗಳಲ್ಲಿ ಸಂಧ್ಯೋಪಾಸನೆಯ ಬಗ್ಗೆ ಮಿಗಿಲಿಲ್ಲದ ಪ್ರಶಂಸೆಗಳನ್ನು ಮಾಡಿದರೂ ' ಈ ನಮ್ಮ ಸಂತತಿಯವರು ಸಂಧ್ಯಾಧಿಗಳನ್ನು, ಧರ್ಮವನ್ನು ಬಿಟ್ಟು ಈ ಪರಿಯಲ್ಲಿ ಹಾಳಾಗುತ್ತಾರೆಂದು ನಾವು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ'ವೆಂದು ನಮ್ಮ ಪೂರ್ವಜರಾದ ಋಷಿ-ಮುನಿಗಳು ಸಂಕಟಪಡಲಾರರೇ? ತಮ್ಮ ಆತ್ಮೋನ್ನತಿಯ ಬಗ್ಗೆ ಚಿಂತಿಸುವ ಯಾರೇ ಆದರೂ ಈ ವಿಷಯದ ಬಗ್ಗೆ ಗಂಭೀರವಾಗಿ ಚಿಂತಿಸಿ ಕಾರ್ಯಪ್ರವೃತ್ತರಾಗಬೇಕು. ಈ ದಿಸೆಯಲ್ಲಿ 'ಸಂಧ್ಯೆ' ಎಂದರೇನು? 'ಸಂಧ್ಯೆ'ಯ ಸ್ವರೂಪ, 'ಸಂಧ್ಯೋಪಾಸನಾ ಫಲ', ಸಂಧ್ಯಾಹೀನನಾದರೆ ಬರುವ ದೋಷಗಳೇನು ಎಂಬುದನ್ನು ತಿಳಿಯೋಣ.

ಮುಂದೆ ಓದಿ


ಚಿತ್ಪಾವನರ ವೈದಿಕ ಪರಂಪರೆ

ಪ್ರತಿಯೊಂದು ಜನಾಂಗಕ್ಕೂ ನಿರ್ದಿಷ್ಟವಾದ ಒಂದು ಆರಾಧ್ಯ ದೇವತೆ, ಧರ್ಮಾಚರಣೆಯಲ್ಲಿ ಒಂದು ನಿಶ್ಚಿತವಾದ ವಿಧಾನ, ಆಚಾರ-ವಿಚಾರಗಳಲ್ಲಿ ಸಾರ್ವತ್ರಿಕವಾದ ಒಂದು ಮಾನದಂಡಗಳಿದ್ದರೆ ಆ ಜನ ಸಮೂಹವನ್ನು ಒಂದು 'ಜನಾಂಗ' ಎಂದು ಪರಿಗಣಿಸುವುದು ಸಮಾಜ ಶಾಸ್ತ್ರದ ಸಿದ್ಧಾಂತಗಳಲ್ಲಿ ಇರುವ ವಿಧಾನ. ಹಿಂದೂ ಧರ್ಮಾನುಯಾಯಿಗಳಾದ 'ಚಿತ್ಪಾವನ' ಎಂಬ ಅಂಕಿತದಿಂದ ಭಾರತದಲ್ಲಿ ಪ್ರಸಿದ್ಧವಾದ ಬ್ರಾಹ್ಮಣ ಸಮುದಾಯಕ್ಕೆ ಮಹಾರಾಷ್ಟ್ರವು ಮೂಲಸ್ಥಾನವಾಗಿದೆ. ಈ ಬ್ರಾಹ್ಮಣರ ಆರಾಧ್ಯ ದೇವತೆ ದಶಾವತಾರಗಳಲ್ಲಿ ಒಂದಾದ 'ಪರಶುರಾಮ'.

ಮುಂದೆ ಓದಿ


ಪುರಾಣಗಳು

ಭಾರತೀಯ ಸಂಸ್ಕೃತಿಯನ್ನು ಅರಿಯಲು, ಅರಿತು ಆಚರಿಸಲು, ಆಚರಿಸಿ ಸತ್ಪದವನ್ನು ಸಾಧಿಸಲು ಪ್ರಾಚೀನ ವಾಙ್ಮಯಕಾರರು ನಮಗೆ ನೀಡಿದ ಆಸ್ತಿಯ ಬೆಲೆ ಅಪರಿಮಿತ. ಈ ಆಸ್ತಿಯಲ್ಲಿ ವೇದಗಳು, ಬ್ರಾಹ್ಮಣಗಳು, ಆರಣ್ಯಕಗಳು, ಉಪನಿಷತ್ತುಗಳು, ಸ್ಮೃತಿಗಳು, ಪುರಾಣಗಳು ಮತ್ತು ಕಾವ್ಯ ವಾಙ್ಮಯವೂ ಅಮೂಲ್ಯ ರತ್ನಗಳು. ಯಾಸ್ಕನು ನಿರುಕ್ತದಲ್ಲಿ ಹೇಳಿರುವಂತೆ 'ಪುರಾನವಂ ಭವತಿ' ಎಂಬ ವ್ಯುತ್ಪತ್ತಿಯು ಪುರಾಣಕ್ಕಿದ್ದು ಅದರ ತಾತ್ಪರ್ಯವು ಪ್ರಾಚೀನವಾಗಿದ್ದರೂ ಹೊಸತಾಗಿರುತ್ತದೆ ಎಂದು ಹೇಳಬಹುದು. ಪುರಾಣಗಳ ಕಾಲಮಾನವನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಥರ್ವವೇದದಿಂದ ಆರಂಭಿಸಿ ಪುರಾಣ ಸಾಹಿತ್ಯದ ಯುಗದ ತನಕವೂ ಪುರಾಣ ಶಬ್ದವು ಪ್ರಸಿದ್ಧವಾಗಿದ್ದುದರಿಂದ ಬಹಳ ಪ್ರಾಚೀನವಾದ ಸಂಹಿತೆಯೆಂದು ಹೇಳಬಹುದು.

ಮುಂದೆ ಓದಿ